ಭಾನುವಾರ, ಮಾರ್ಚ್ 7, 2021
22 °C
ಕಾವೇರಿ ವನ್ಯಧಾಮ, ನದಿಯಲ್ಲೇ ಬಲೆ ಬಿಟ್ಟು ಹೋಗುತ್ತಿರುವ ಮೀನುಗಾರರು

ಅಕ್ರಮ ಮೀನುಗಾರಿಕೆ: ಜಲಚರಗಳಿಗೆ ಕುತ್ತು

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಕಾವೇರಿ ವನ್ಯಧಾಮದೊಳಗೆ ಹರಿಯುತ್ತಿರುವ ಕಾವೇರಿ ನದಿಯಲ್ಲಿ, ಅರಣ್ಯ ಸಿಬ್ಬಂದಿಯ ಕಣ್ತಪ್ಪಿಸಿ ರಾತ್ರಿ ವೇಳೆ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಯಿಂದಾಗಿ ನದಿಯಲ್ಲಿರುವ ಜಲಚರಗಳಿಗೆ ಕಂಟಕ ಎದುರಾಗುತ್ತಿದೆ.

ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗುವ ಬೇಟೆಗಾರರು ಕಿತ್ತು ಹೋದ ಬಲೆಗಳನ್ನು ನದಿಯಲ್ಲೇ ಬಿಡುವುದರಿಂದ ಬಲೆಗೆ ಸಿಲುಕಿ ಸಾಕಷ್ಟು ಜಲಚರಗಳು ಮೃತಪಟ್ಟಿವೆ. ಅಧಿಕಾರಿಗಳು ಎರಡು ವಾರಗಳ ಹಿಂದೆ ಅಕ್ರಮ ಮೀನುಗಾರಿಕೆ ಅಡ್ಡೆ ಮೇಲೆ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ.  

ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಅಕ್ರಮ ಮೀನುಗಾರಿಕೆ ಈಗ ಎಗ್ಗಿಲ್ಲದೇ ಸಾಗಿದೆ. 10 ದಿನಗಳ ಹಿಂದೆ ಮೂರು ದಿನದ ಅವಧಿಯಲ್ಲಿ ಅರಣ್ಯಾಧಿಕಾರಿಗಳು ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ಸೇರಿದಂತೆ ಅಪಾರ ಪ್ರಮಾಣದ ಪರಿಕರಗಳನ್ನು ವಶಪಡಿಸಿಕೊಂಡಿದ್ದರು.

ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆ ಚಟುವಟಿಕೆಯಿಂದ ಕಾವೇರಿ ವನ್ಯಧಾಮದಲ್ಲಿ ಜೌಗು‌ ಮೊಸಳೆಯಂತಹ ವಿಶಿಷ್ಟ ಪ್ರಾಣಿಗಳಿಗೆ ಕುತ್ತು ಉಂಟಾಗಿದೆ.  

ಜೌಗು ಮೊಸಳೆಯನ್ನು

ವನ್ಯಜೀವಿ ಸಂರಕ್ಷಣಾ ಕಾಯ್ದೆ 1979ರ ಶೆಡ್ಯೂಲ್ 1ರ ಅಡಿಯಲ್ಲಿ ರಕ್ಷಿಸಲಾಗಿದ್ದು,ಅಂತರರಾಷ್ಟ್ರೀಯ  ಸಂಸ್ಥೆ  ಐಯುಸಿಎನ್ ಇದನ್ನು ಅಳವಿನಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಿದೆ.

2016ರಲ್ಲಿ ಇದೇ ವನ್ಯಧಾಮದಲ್ಲಿ

ಅಕ್ರಮ ಮೀನುಗಾರಿಕೆಗೆ ಅಳವಡಿಸಿದ್ದ ಬಲೆಗೆ ಸಿಲುಕಿ ಜವುಗು ಮೊಸಳೆಯೊಂದು ಸತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ತಮಿಳುನಾಡಿನ ಇಬ್ಬರು ಹಾಗೂ ಒಬ್ಬ ಕರ್ನಾಟಕದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಈಚೆಗೆ ಅರಣ್ಯಾಧಿಕಾರಿಗಳು ಅಕ್ರಮ ಮೀನುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಬಲೆಗೆ ಸಿಕ್ಕಿ ಆಮೆಯೊಂದು ಸತ್ತಿತ್ತು.

ತಮಿಳುನಾಡು ಗಡಿಯಲ್ಲಿ ಯಾವುದೇ ನಿಯಂತ್ರಣ ಅಥವಾ ಸಂರಕ್ಷಣಾ ಕ್ರಮಗಳಿಲ್ಲದಿರುವುದು ವನ್ಯಜೀವಿಗಳಿಗೆ ಸಂಕಷ್ಟ ತಂದೊಡ್ಡಿದೆ. ತಮಿಳುನಾಡಿನ ಮೀನುಗಾರಿಕಾ ಇಲಾಖೆ ಕಾವೇರಿ ನದಿಯಲ್ಲಿ ಮೀನುಗಾರಿಕೆಗೆ ಪರವಾನಿಗೆ ನೀಡಿದೆ.

‘ಮೀನುಗಾರರು ರಾತ್ರಿ ವೇಳೆ ಅಕ್ರಮವಾಗಿ ಕರ್ನಾಟಕದ ಗಡಿಯೊಳಗೆ ನುಗ್ಗಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಾರೆ. ನಮ್ಮ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ವಾಪಸ್ಸಾಗುತ್ತಾರೆ’ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ನದಿಯಲ್ಲಿ ಗಸ್ತು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌.ರಮೇಶ್‌ ಅವರು, ’ಅಕ್ರಮ ಮೀನುಗಾರಿಕೆ ಚಟುವಟಿಕೆಗಳು ಬೆಳಕಿಗೆ ಬಂದ ಮೇಲೆ ಕಾವೇರಿ ನದಿ ತೀರದಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಪ್ರತಿದಿನ ಗಸ್ತು ತಿರುಗುತ್ತಿದ್ದಾರೆ. ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಕಂಡು ಬಂದರೆ, ಮೀನುಗಾರರನ್ನು ತಕ್ಷಣ ಬಂಧಿಸಲಾಗುವುದು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು