ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಆರೋಗ್ಯಕರ ಹಣ್ಣು ಬೆಳೆವ ಕೃಷಿ ಸಾಧಕಿ

ಒಂದು ಎಕರೆಯಲ್ಲಿ ರಾಗಿ, ಬಟನ್‌ ಗುಲಾಬಿ ಕೃಷಿ ಮಾಡುವ ಜಯಮ್ಮ
Last Updated 7 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಈ ರೈತ ಮಹಿಳೆಗೆ ಕೃಷಿ ಎಂದರೆ ಆರ್ಥಿಕವಾಗಿ ಲಾಭಗಳಿಸುವ ದಾರಿ ಅಲ್ಲ. ಹಾಗಾಗಿ, ರಾಸಾಯನಿಕ ವಸ್ತುಗಳಿಗೆ ಇವರ ಜಮೀನಿನಲ್ಲಿ ಜಾಗ ಇಲ್ಲ. ಭೂಮಿಯ ಫಲವತ್ತತೆ ಹಾಳು ಮಾಡದೆ, ನೈಸರ್ಗಿಕವಾಗಿ ಆರೋಗ್ಯಕರ ಹಣ್ಣುಗಳನ್ನು ಬೆಳೆದು ತಕ್ಕಮಟ್ಟಿಗೆ ಆದಾಯ ಗಳಿಸುತ್ತಿದ್ದಾರೆ ಜಯಮ್ಮ.

ಸಂತೇಮರಹಳ್ಳಿಯ ಕುದೇರು ರಸ್ತೆಯ ತೋಟದಲ್ಲಿರುವ ಜಯಮ್ಮ ಐದು ವರ್ಷಗಳಿಂದ ನೈಸರ್ಗಿಕ ವಿಧಾನದಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.ಒಂದು ಎಕರೆಯಲ್ಲಿ ಬೆಣ್ಣೆಹಣ್ಣು, ವಾಟರ್ ಆ್ಯಪಲ್, ಪಪ್ಪಾಯ, ನಿಂಬೆ, ದಾಳಿಂಬೆ, ಸೀಬೆ ಬೆಳೆಯುತ್ತಿದ್ದಾರೆ. ಸಾವಯವ ಬೇಸಾಯದಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಬಟನ್‌ ಗುಲಾಬಿಯ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.

ಜಯಮ್ಮ ಬೆಳೆಯುವ ಎಲ್ಲ ಬೆಳೆಗಳಿಗೂ ತುಂಬಾ ಬೇಡಿಕೆ ಇದೆ. ಹಣ್ಣುಗಳನ್ನು ಕಷ್ಟದಲ್ಲಿರುವವರಿಗೆ ಅರ್ಧ ಬೆಲೆಗೆ ಅಥವಾ ಉದಾರವಾಗಿ ನೀಡುತ್ತಾ ಬಂದಿದ್ದಾರೆ.

ಬೆಣ್ಣೆ ಹಣ್ಣನ್ನು ಪ್ರತಿ ಕೆಜಿಗೆ ₹ 150 ರಂತೆ ಮಾರಾಟ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಫಲ ಬಿಡುವ ಈ ಹಣ್ಣಿನಿಂದ ಪ್ರತಿ ವರ್ಷ ₹ 50 ಸಾವಿರ ಆದಾಯ ಗಳಿಸುತ್ತಾರೆ. ವಾಟರ್ ಆ್ಯಪಲ್‌ಗೂ ಬೇಡಿಕೆ ಇದ್ದು, ಇದರಿಂದಲೂ ₹50 ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಾರೆ.

ಪಪ್ಪಾಯ, ನಿಂಬೆ, ದಾಳಿಂಬೆ ಹಣ್ಣುಗಳನ್ನು ಜಯಮ್ಮ ಅವರು ಹೊರಗಡೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಿಲ್ಲ. ತಮ್ಮ ತೋಟದಲ್ಲಿಯೇ ಮಾರಾಟ ಮಾಡುತ್ತಾರೆ.

ಅರ್ಧ ಎಕರೆಯಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಹಣ್ಣುಗಳು ಮತ್ತು ರಾಗಿ ಬೆಳೆಗೆ ಯಾವುದೇ ರಾಸಯನಿಕ ಗೊಬ್ಬರ ಬಳಸುವುದಿಲ್ಲ. ಇದಕ್ಕಾಗಿಯೇ ಎರಡು ಹಸುಗಳನ್ನು ಸಾಕಿಕೊಂಡಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿಕರಾಗಿದ್ದಾರೆ.

10 ಗುಂಟೆ ಪ್ರದೇಶದಲ್ಲಿ ಬಟನ್‌ ಗುಲಾಬಿ ಬೆಳೆಯುತ್ತಿದ್ದಾರೆ. ವಾರಕ್ಕೊಮ್ಮೆ ಕಟಾವಿಗೆ ಬರುವ ಈ ಗುಲಾಬಿ, ಕೆಜಿಗೆ ₹100ರಂತೆ ಮಾರಾಟ ಮಾಡುತ್ತಾರೆ. ಪ್ರತಿವಾರ 5ರಿಂದ 10 ಕೆಜಿವರೆಗೆ ಗುಲಾಬಿ ಸಿಗುತ್ತದೆ.

ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಕೃಷಿ ವಿಶ್ವ ವಿದ್ಯಾಲಯದ ತರಬೇತಿ ವಿದ್ಯಾರ್ಥಿಗಳು ಹಾಗೂ ವ್ಯವಸಾಯ ತಜ್ಞರು ಇವರ ಜಮೀನಿಗೆ ಭೇಟಿ ನೀಡಿ ಕೃಷಿ ವಿಧಾನಗಳನ್ನು ಅಧ್ಯಯನ ನಡೆಸುತ್ತಾರೆ. ವ್ಯವಸಾಯಕ್ಕೆ ಮೆಚ್ಚುಗೆ ಸೂಚಿಸಿ ಜತೆಗೆ ಅನುಭವ ಪಡೆದು ಹೋಗುತ್ತಾರೆ.

‘ವ್ಯವಸಾಯದಲ್ಲಿ ಹಣ ಗಳಿಸುವುದರ ಜೊತೆಗೆ ಆರೋಗ್ಯವು ಮುಖ್ಯ. ಹೀಗಾಗಿ ಮಕ್ಕಳಿಗಾಗಿ ಸಪೋಟ, ನೇರಳೆ, ಬೇಲ ಹಾಗೂ ನಿಂಬೆಗಳನ್ನು ಬೆಳೆಯುತ್ತಿದ್ದೇವೆ. ಹೆಚ್ಚು ವ್ಯಾಪಾರವನ್ನು ನಾವು ಇಷ್ಟ ಪಡುವುದಿಲ್ಲ’ ಎಂದು ಹೇಳುತ್ತಾರೆ ಜಯಮ್ಮ.

ಜಯಮ್ಮ ಅವರ ಕೃಷಿ ಕಾಯಕಕ್ಕೆ ಅವರ ಪತಿ ನಿವೃತ್ತ ಸರ್ಕಾರಿ ನೌಕರ ಪಪ್ಪಣ್ಣಶೆಟ್ಟಿ ಅವರು ಕೈಜೋಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT