ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಲ್ಲರ ವಿಶ್ವಾಸದೊಂದಿಗೆ ಕನ್ನಡ ತೇರು ಎಳೆಯುವೆ: ಎಂ.ಶೈಲಕುಮಾರ್

‘ಪ್ರಜಾವಾಣಿ’ಯೊಂದಿಗೆ ಮುಕ್ತ ಅಭಿಪ್ರಾಯ ಹಂಚಿಕೊಂಡ ಕಸಾಪ ನೂತನ ಅಧ್ಯಕ್ಷ ಶೈಲಕುಮಾರ್‌
Last Updated 22 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗುಂಡ್ಲುಪೇಟೆಯ ಎಂ.ಶೈಲಕುಮಾರ್ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ತೇರು ಎಳೆಯಲು ಸಜ್ಜಾಗಿರುವ ಅವರು, 'ಪ್ರಜಾವಾಣಿ'ಯ ಜೊತೆ ತಮ್ಮ ಯೋಜನೆ, ಕನಸು ಹಂಚಿಕೊಂಡಿದ್ದಾರೆ.

* ಜಿಲ್ಲಾ ಕಸಾಪದ ಅಧ್ಯಕ್ಷರಾಗಿ ಗೆದ್ದಿದ್ದೀರಿ. ಫಲಿತಾಂಶದ ಬಗ್ಗೆ ಏನು ಹೇಳುತ್ತೀರಿ?

ಜಿಲ್ಲೆಯಲ್ಲಿ ಕನ್ನಡದ ತೇರು ಎಳೆಯಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೆ. ದೊಡ್ಡ ಸಂಖ್ಯೆಯಲ್ಲಿ ಮತದಾರರು ಬೆಂಬಲಿಸಿ, ಕನ್ನಡ ಸೇವೆಗೆ ಅವಕಾಶ ಕೊಟ್ಟಿದ್ದಾರೆ. ನನ್ನ ಮೇಲಿನ ನಂಬಿಕೆಯಿಂದ ಅವರು ಮತ ಹಾಕಿರಬಹುದು. ಇಲ್ಲವೇ ಅಧ್ಯಕ್ಷನಾಗಿ ಏನು ಮಾಡುತ್ತಾನೆ ನೋಡೋಣ ಎಂದು ಬೆಂಬಲಿಸಿರಬಹುದು. ಕೊಟ್ಟ ಭರವಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಅದರಿಂದ ಪಲಾಯನ ಮಾಡುವುದಿಲ್ಲ.

* ತಕ್ಷಣ ನೀವು ಕೈಗೆತ್ತಿಕೊಳ್ಳುವ ಕೆಲಸ ಯಾವುದು?

ಕನ್ನಡದ ರಥವನ್ನು ಯಶಸ್ವಿಯಾಗಿ ಎಳೆಯಬೇಕಾದರೆ ಒಂದು ತಂಡ ಬೇಕು. ಕಸಾಪದ ಹಿಂದಿನ ಎಲ್ಲ ಅಧ್ಯಕ್ಷರು, ಹಿರಿಯರನ್ನು ಸೇರಿದಂತೆ ಪರಿಷತ್ತಿನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡವನ್ನು ರಚನೆ ಮಾಡಲು ತೀರ್ಮಾನಿಸಿದ್ದೇನೆ.

ಎರಡನೇಯದಾಗಿ ತಾಲ್ಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ಬಳಿಕತಂಡದ ಸದಸ್ಯರೆಲ್ಲ ಕುಳಿತು ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ.

* ಚುನಾವಣೆಗೂ ಮುನ್ನ ನೀಡಿದ ಭರವಸೆ ಅಲ್ಲದೇ ಬೇರೆ ಯೋಜನೆಗಳಿವೆಯೇ...?

ಮೂರು ತಿಂಗಳು, ಆರು ತಿಂಗಳು, 12 ತಿಂಗಳಿಗೊಂದರಂತೆ ಜಿಲ್ಲೆಯಲ್ಲಿ ಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಯೋಚನೆಯಿದೆ.

ಮೂರು ತಿಂಗಳಿಗೊಂದರಂತೆ ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯಿಕ ಕಾರ್ಯಕ್ರಮ‌, ಆರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ, ವರ್ಷಕ್ಕೊಂದು ಜಿಲ್ಲಾ ಮಟ್ಟದ ಸಮ್ಮೇಳನ ನಡೆಸುವ ಯೋಜನೆ ಹಾಕಿಕೊಂಡಿದ್ದೇನೆ. ಐದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಮಿತಿ ಮೀರಿ ಶ್ರಮಿಸುವೆ.

ಜಿಲ್ಲಾ ಕೇಂದ್ರದಲ್ಲಿ ಪರಿಷತ್ತಿನ ಹೆಸರಿನಲ್ಲಿರುವ ಜಾಗದಲ್ಲಿ ಪರಿಷನ್ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ. ಕಸಾಪದ ರಾಜ್ಯ ಅಧ್ಯಕ್ಷರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ಅವರನ್ನು ಭೇಟಿ ಮಾಡಿ, ಅನುದಾನ ತಂದು, ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗುವುದು. ಬಹುಶಃ ಯುಗಾದಿಗಿಂತಲೂ ಮೊದಲೇ ಈ ಕೆಲಸ ಆಗಲಿದೆ.

* ಸಾಹಿತ್ಯ, ಕಸಾಪದತ್ತ ಜನರನ್ನು, ಯುವಕರನ್ನು ಸೆಳೆಯಲು ಏನಾದರೂ ಕಾರ್ಯಕ್ರಮ ರೂಪಿಸಿದ್ದೀರಾ?

ಸಾಹಿತ್ಯ ಕ್ಷೇತ್ರದತ್ತ ಯುವಕರನ್ನು ಸೆಳೆಯಲು ಪ್ರಯತ್ನ ನಡೆಯಲಿದೆ. ಈ ಉದ್ದೇಶದಿಂದ ಕಾಲೇಜುಗಳಲ್ಲಿ ಆರು ತಿಂಗಳು ಇಲ್ಲವೇ ವರ್ಷಕ್ಕೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

* ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಸುಭದ್ರಗೊಳಿಸಲು ಏನು ಮಾಡಬೇಕೆಂದಿದ್ದೀರಿ ?

ಕಸಾಪದಲ್ಲಿ ಗಡಿನಾಡು ಅಧ್ಯಕ್ಷರಿದ್ದಾರೆ. ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿ, ನಂತರ ಕಾರ್ಯಕ್ರಮ ರೂಪಿಸಲಾಗುವುದು.

* ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗಳ ಬಗ್ಗೆ ನಿಮ್ಮ ಅಭಿಪ್ರಾಯ...

ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಬಳಕೆ ಆರಂಭವಾಗಬೇಕಿದೆ. ಈ ವಿಚಾರದಲ್ಲಿ ನನಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. 100 ದಿನ ಕಾಲಾವಕಾಶ ಕೊಡಿ.

* ನೀವು ಮೂಲತಃ ಚಿತ್ರ ಕಲಾವಿದರು. ಸಾಹಿತ್ಯ ರಚನೆಯ ಉದ್ದೇಶ ಇದೆಯೇ?

ನಾನು ಈಗಾಗಲೇ ಕೆಲವು ಕವನಗಳನ್ನು ಬರೆದಿದ್ದೇನೆ. ಅವುಗಳನ್ನು ಪ್ರಕಟಿಸಲು ಅವಕಾಶ ಇದೆ. ಸಾಹಿತ್ಯ ಬರೆಯಬಾರದು ಎಂದೇನಿಲ್ಲ. ಯಾವುದೇ ಸಾಹಿತ್ಯದಲ್ಲಿ ಜೀವನದ ದರ್ಶನ ಇರಬೇಕು ಎಂಬುದು ನನ್ನ ನಿಲುವು.

* ಕೊನೆಯದಾಗಿ ಏನು ಹೇಳುತ್ತೀರಿ?

ಬಟ್ಟೆ ಚೆನ್ನಾಗಿರಬೇಕಾದರೆ ಅದರಲ್ಲಿರುವ ಎಲ್ಲ ದಾರಗಳೂ ಒಂದೇ ರೀತಿಯಾಗಿ ಬೆಸೆಯಬೇಕು. ಕೆಲವು ದಾರಗಳು ಎದ್ದು ಕಂಡರೆ, ಬಟ್ಟೆ ಸರಿ ಇರುವುದಿಲ್ಲ. ಹಾಗೆಯೇ ಸಾಹಿತ್ಯ ಪರಿಷತ್ ಕೂಡ. ಇಲ್ಲಿ ಜಾತಿ, ಮತ, ಧರ್ಮ, ಪಂಗಡ, ಸಂಘ ಯಾವುದೂ ಇರುವುದಿಲ್ಲ. ಯಾವುದನ್ನೂ ಹಳದಿ ಕಣ್ಣಿನಿಂದ ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ. ನಾನು ತಪ್ಪು ಹೆಜ್ಜೆ ಇಟ್ಟರೆ, ಅದನ್ನು ಹೇಳುವುದಕ್ಕೆ, ತಿದ್ದಿ ತೀಡುವುದಕ್ಕೆ ಮುಕ್ತ ಅವಕಾಶವಿದೆ.

ಮುಂದಿನ ವರ್ಷ ರಜತ ಸಂಭ್ರಮ

ಮುಂದಿನ ವರ್ಷ ಜಿಲ್ಲೆ, ಕಸಾಪ‍ ಸ್ಥಾಪನೆಯಾಗಿ 25 ವರ್ಷಗಳಾಗುತ್ತವೆ. ಇದರ ಅಂಗವಾಗಿ ಕಸಾಪದ ವತಿಯಿಂದ ರಜತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ.

***

ಇದಲ್ಲದೇ, ಹೊನ್ನುಹೊಳೆ, ಸಾಹಿತ್ಯ ಸುವರ್ಣಾವಧಿ, ಕೌಂಡಿನ್ಯ ಸೇರಿದಂತೆ ಹಲವು ಪುಸ್ತಕರಗಳ ಪ್ರತಿಗಳೇ ಲಭ್ಯವಿಲ್ಲ. ಇವುಗಳನ್ನೆಲ್ಲ ಮರು ಮುದ್ರಣಗೊಳಿಸಬೇಕು ಎಂಬ ಆಸೆ ಇದೆ.

- ಎಂ.ಶೈಲಕುಮಾರ್‌, ಜಿಲ್ಲಾ ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT