ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಾಜ್ಯೋತ್ಸವ 2021: ತಮಿಳುನಾಡು ಗಡಿಭಾಗದಲ್ಲಿ ಹೆಚ್ಚಿದ ಕನ್ನಡದ ಒಲವು

ಹನೂರು: ತಮಿಳು ಭಾಷಿಕರೇ ಹೆಚ್ಚು, ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸುತ್ತಿರುವ ಪೋಷಕರು
Last Updated 31 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಗಡಿ ಭಾಗದಲ್ಲಿರುವ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ತಮಿಳು. ಆದರೆ ಅಲ್ಲಿನ ನಿವಾಸಿಗಳು ಈಗ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನ ಹೂಗ್ಯಂ, ಮಾರ್ಟಳ್ಳಿ, ಗೋಪಿನಾಥಂ ಭಾಗದಲ್ಲಿ ತಮಿಳು ಭಾಷಿಕರೇ ಹೆಚ್ಚಿದ್ದಾರೆ. ಪ್ರಾರಂಭದಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದ ಪೋಷಕರು, ಈಚೆಗೆ ಕನ್ನಡ ಮಾಧ್ಯಮದತ್ತ ವಾಲುತ್ತಿದ್ದಾರೆ. ಇದರಿಂದಾಗಿ ತಮಿಳು ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಒಂದೊಂದೇ ಶಾಲೆ ಮುಚ್ಚುತ್ತಿವೆ.

ತಮಿಳುನಾಡಿನ ಮೆಟ್ಟೂರು ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಕೆಲವು ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಿದ ಪರಿಣಾಮ ಅಲ್ಲಿನ ಜನರು ಮಾರ್ಟಳ್ಳಿ, ಜಲ್ಲಿಪಾಳ್ಯ, ತೋಮಿಯಾರ್ ಪಾಳ್ಯ ಮುಂತಾದ ಕಡೆ ಬಂದು ನೆಲೆಸಿದರು. ಅವರ ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಅಂದಿನ ಕ್ರೈಸ್ತ ಮಿಷನರಿಗಳು ಸ್ಥಳೀಯವಾಗಿ ತಮಿಳು ಮಾಧ್ಯಮದ ಶಾಲೆಗಳನ್ನು ತೆರೆದವು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಗಳಲ್ಲಿ ಈಗೀಗ ಮಕ್ಕಳ ಸಂಖ್ಯೆ ವಿರಳವಾಗತೊಡಗಿದೆ.

ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ್ಲಿಪಾಳ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ತಮಿಳು ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಲ್ಲದೇ ಮುಚ್ಚಿದೆ. ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನೆಲ್ಲೂರು ಗ್ರಾಮದಲ್ಲಿ ಮೊದಲು ತಮಿಳು ಹಿರಿಯ ಪ್ರಾಥಮಿಕ ಶಾಲೆಯಿತ್ತು. ಆದರೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚಿದೆ. ಕಿರಿಯ ಪ್ರಾಥಮಿಕ ಶಾಲೆಯಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅದು ಮುಚ್ಚುವ ಹಂತಕ್ಕೆ ತಲುಪಿದೆ.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯದಲ್ಲಿ ತಮಿಳು ಮಾಧ್ಯಮದ ಪ್ರಾಥಮಿಕ ಶಾಲೆಯಿದೆ. ವಡ್ಡರದೊಡ್ಡಿಯಲ್ಲಿ ತಮಿಳು ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಮುಚ್ಚಿದ್ದು, ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಮಾರ್ಟಳ್ಳಿಯಲ್ಲೂ ತಮಿಳು ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಯಿದೆ. ಬಿದರಳ್ಳಿ ಗ್ರಾಮದಲ್ಲಿದ್ದ ತಮಿಳು ಮಾಧ್ಯಮ ಶಾಲೆಯನ್ನು ಕನ್ನಡ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲಾಗಿದೆ.

‘ಇಲ್ಲಿನ ಬಹುತೇಕ ಕುಟುಂಬಗಳ ಮಾತೃಭಾಷೆ ತಮಿಳು. ಆದರೆ ಈ ಭಾಗಕ್ಕೆ ಬಂದು ನೆಲೆಸಿದ ಮೇಲೆ ಅವರು ಕನ್ನಡದ ಮೇಲೆ ಪ್ರೀತಿ ಪಟ್ಟು ಕನ್ನಡ ಶಾಲೆಗಳಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ, ಭವಿಷ್ಯದಲ್ಲಿ ರಾಜ್ಯದಲ್ಲೇ ಉನ್ನತ ಶಿಕ್ಷಣ ಪಡೆಯುವುದಾದರೆ ಅಥವಾ ಉದ್ಯೋಗ ಮಾಡಬೇಕಾಗಿ ಬಂದರೆ ಕನ್ನಡ ಗೊತ್ತಿರಲೇಬೇಕು. ಹಾಗಾಗಿ, ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರಿಗೆ ಅನಿವಾರ್ಯವಾಗಿದೆ. ಈ ಕಾರಣದಿಂದ ಈ ಭಾಗದಲ್ಲಿ ತಲೆಯೆತ್ತಿದ್ದ ತಮಿಳು ಮಾಧ್ಯಮದ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಬಂದಿವೆ. ನಿಜಕ್ಕೂ ಇದೊಂದು ಆಶಾದಾಯಕ ಬೆಳವಣಿಗೆ’ ಎಂದು ಮಾರ್ಟಳ್ಳಿ ಗ್ರಾಮದ ಜಾನ್ ಡಾನ್ ಬೋಸ್ಕೊ ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ಮಾಧ್ಯಮಗಳಿಗೆ ಮಕ್ಕಳನ್ನು ಸೇರಿಸುತ್ತಿರುವ ಸಂಖ್ಯೆಯು ಹೆಚ್ಚುತ್ತಿರುವಂತೆಯೇ, ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೂ ಪೋಷಕರು ಮಕ್ಕಳನ್ನು ಸೇರಿಸುತ್ತಿದ್ದಾರೆ. ಈ ಕಾರಣಕ್ಕೂ ತಮಿಳು ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ಸ್ಥಳೀಯರು.

ಗೋಪಿನಾಥಂ: ಮೊದಲ ವರ್ಷವೇ 36 ಮಕ್ಕಳು

ರಾಜ್ಯದ ಗಡಿಯಲ್ಲಿರುವ ಗೋಪಿನಾಥಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕಿರಿಯ ಪ್ರಾಥಮಿಕ ತರಗತಿಗಳು ಕನ್ನಡ ಮಾಧ್ಯಮದಲ್ಲಿ ಆರಂಭವಾಗುತ್ತಿದ್ದಂತೆ ತಮಿಳು ಮಾಧ್ಯಮದ ಶಾಲೆ ಮುಚ್ಚುವ ಹಂತ ತಲುಪಿದೆ.

ಗೋಪಿನಾಥಂನಲ್ಲಿ 1954ರಲ್ಲಿ ತಮಿಳು ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಗಿತ್ತು. 1994ರಲ್ಲಿ ಕನ್ನಡ ಮಾಧ್ಯಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ಕಿರಿಯ ಪ್ರಾಥಮಿಕ ತರಗತಿಗಳನ್ನು ತಮಿಳು ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮುಂದಿನ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಷ್ಟವಾಗುತ್ತಿತ್ತು. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಬೇಕು ಎಂಬ ಕೂಗು ಎರಡು ದಶಕಗಳಿಂದಲೂ ಕೇಳಿ ಬರುತ್ತಿತ್ತು.

ಹಿಂದಿನ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಸುರೇಶ್‌ ಕುಮಾರ್‌ 2019ರಲ್ಲಿ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದಾಗ ಗ್ರಾಮಸ್ಥರು, ಕಿರಿಯ ಪ್ರಾಥಮಿಕ ಶಾಲೆಯನ್ನೂ ಕನ್ನಡ ಮಾಧ್ಯಮದಲ್ಲಿ ಆರಂಭಿಸುವಂತೆ ಒತ್ತಾಯಿಸಿದ್ದರು. ಸಚಿವರು ಮುಂದಿನ ವರ್ಷದಿಂದಲೇ ಆರಂಭಿಸುವ ಭರವಸೆ ನೀಡಿದ್ದರು.

‘2020-21ರ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಮೊದಲ ವರ್ಷದಲ್ಲಿ 36 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ತಮಿಳು ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆಗೆ ಯಾರೂ ದಾಖಲಾಗಿಲ್ಲ’ ಎಂದು ಮುಖ್ಯ ಶಿಕ್ಷಕ ವೀರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾತೃಭಾಷೆ ತಮಿಳಾಗಿದ್ದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಅಗತ್ಯ ಮತ್ತು ಅನಿವಾರ್ಯವಾಗಿದೆ
- ಜಾನ್ ಡಾನ್ ಬೋಸ್ಕೊ, ಮಾರ್ಟಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT