ಹನೂರು ತಾಲ್ಲೂಕಿನ ಪ್ರದೇಶಗಳಲ್ಲಿ ಜನರು ಡೋಲಿಯಲ್ಲಿ ರೋಗಿಗಳನ್ನು ಹೊತ್ತೊಯ್ಯುತ್ತಿರುವುದು
‘ಕನ್ನಡ ಸಂಸ್ಕೃತಿ ಇಲಾಖೆಗೆ ಒತ್ತು ಕೊಡಿ’ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಚಾಮರಾಜನಗರದಲ್ಲಿ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ ನಿರ್ಮಾಣವಾಗಿದ್ದರೂ ರಂಗಕಲೆಗಳ ಪ್ರದರ್ಶನಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿಲ್ಲ. ನಾಟಕಗಳ ಪ್ರದರ್ಶನಕ್ಕೆ ಅಗತ್ಯವಾಗಿ ಒಳಾಂಗಣಕ್ಕೆ ಬೇಕಾದ ಲೈಟ್‌ಗಳು ಗ್ರೀನ್ ರೂಂನಲ್ಲಿರಬೇಕಾದ ತಾಂತ್ರಿಕ ಪರಿಕರಗಳು ಧ್ವನಿವರ್ಧಕ ವ್ಯವಸ್ಥೆ ರಿಹರ್ಸಲ್ ಕೊಠಡಿ ಬಯಲು ರಂಗಮಂದಿರ ನಿರ್ಮಾಣವಾಗಬೇಕಿದ್ದು ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು.
ಕೆ.ವೆಂಕಟರಾಜು ರಂಗಕರ್ಮಿ
‘ಸಾಂಸ್ಕೃತಿಕ ಆಪತ್ತು ನಿಧಿ ಘೋಷಿಸಿ’ ಜನಪದ ಕಲಾವಿದರು ತೀರಾ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿದ್ದು ಕೊನೆಯ ಕಾಲದಲ್ಲಿ ಚಿಕಿತ್ಸೆ ಹಾಗೂ ಅಂತ್ಯಕ್ರಿಯೆಗೂ ಹಣ ಹೊಂದಿಸಲು ಪರದಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕಲಾವಿದರ ಕೊನೆಗಾಲದಲ್ಲಿ ಆರ್ಥಿಕ ನೆರವು ನೀಡಲು ಸಾಂಸ್ಕೃತಿಕ ಆಪತ್ತು ನಿಧಿ ಸ್ಥಾಪಿಸಬೇಕು. ಸಾಹಿತಿ ಬರಗೂರು ರಾಮಚಂದ್ರಪ್ಪನವರು ನಿಧಿ ಸ್ಥಾಪನೆಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಬಜೆಟ್‌ನಲ್ಲಿ ಅನುಷ್ಠಾನ ಮಾಡಬೇಕು. ಚಾಮರಾಜನಗರದಲ್ಲಿ ಪ್ರತಿವರ್ಷ ರಾಜ್ಯಮಟ್ಟದ ಜನಪದ ಉತ್ಸವ ಆಯೋಜಿಸಲು ಅನುದಾನ ಬಿಡುಗಡೆ ಮಾಡಬೇಕು. ಬುಡಕಟ್ಟು ಸಮುದಾಯ ದಲಿತರು ಹಿಂದುಳಿದ ವರ್ಗಳು ಹೆಚ್ಚಾಗಿ ವಾಸವಾಗಿರುವ ಜಿಲ್ಲೆಯಲ್ಲಿ ಬುಡಕಟ್ಟು ಜಾನಪದ ರಂಗಾಯಣ ಸ್ಥಾಪನೆಯಾಗಬೇಕು.
ಸಿ.ಎಂ.ನರಸಿಂಹ ಮೂರ್ತಿ ಜಾನಪದ ಕಲಾವಿದ
‘ಆದಿವಾಸಿಗಳಿಗೆ ಬೇಕು ಸೂರು’ ಜಿಲ್ಲೆಯ 148 ಹಾಡಿಗಳಲ್ಲಿ ವಾಸವಾಗಿರುವ ಹೆಚ್ಚಿನವರು ಸ್ವಂತ ಸೂರು ಹೊಂದಿಲ್ಲ. ಶೆಡ್‌ಗಳ ಮೇಲೆ ಟಾರ್ಪಾಲ್ ಹೊದಿಸಿ ಜೀವನ ಮಾಡುತ್ತಿದ್ದಾರೆ. 2995 ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದರೂ ಅನುಷ್ಠಾನ ಹಂತದಲ್ಲಿ ವಿಳಂಬವಾಗುತ್ತಿದ್ದು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಸೂರು ನೀಡಬೇಕು. ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು ಶೀಘ್ರ ಅನುಷ್ಠಾನಗೊಳಿಸಬೇಕು.