ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಕಸ್ತೂರು ಬಂಡಿ ಜಾತ್ರೆ

ಸಂಭ್ರಮದಿಂದ ಹಬ್ಬ ಆಚರಿಸಿದ 23 ಹಳ್ಳಿಗಳ ಜನ; ದೇವಿಗೆ ವಿಶೇಷ ಪೂಜೆ ಸಲ್ಲಿಕೆ
Last Updated 1 ಜನವರಿ 2023, 15:44 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಇಲ್ಲಿನ ಕಸ್ತೂರು ಗ್ರಾಮದ ಹೊರ ವಲಯದಲ್ಲಿರುವ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ಬಂಡಿ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಜಾತ್ರಾ ಮಹೋತ್ಸವ ರದ್ದಾಗಿತ್ತು. ಈ ಬಾರಿ ನಡೆದ ಜಾತ್ರಾ ಮಹೋತ್ಸವಕ್ಕೆ ವಿವಿಧ ತಾಲ್ಲೂಕುಗಳು ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ದೊಡ್ಡಮ್ಮ ತಾಯಿಯ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಧನ್ಯತಾಭಾವ ಮೆರೆದರು.

ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಸಾವಿರಾರು ಜನರು ಆಗಮಿಸಿ 16 ಗ್ರಾಮಗಳಿಂದ ಆಗಮಿಸುವ ಬಂಡಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಮೊದಲನೇ ಬಂಡಿ ಕಸ್ತೂರು ಗ್ರಾಮದ ಬಂಡಿ ದೊಡ್ಡಮ್ಮ ತಾಯಿ ವಿಗ್ರಹ ಹೊತ್ತು ಜಾತ್ರೆಯ ಅಂಗಳಕ್ಕೆ ಆಗಮಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನಿಂತಿತು.

ಬಂಡಿಗೆ ದೇವಸ್ಥಾನದ ಅರ್ಚಕ ಪೂಜೆ ಸಲ್ಲಿಸಿ ತೀರ್ಥ ಪ್ರೋಕ್ಷಣೆ ಮಾಡುತ್ತಿದ್ದಂತೆಯೇ, ಸುತ್ತಲೂ ಕಾಯಿ ಹಿಡಿದು ನಿಂತಿದ್ದ ಭಕ್ತರು ಬಂಡಿಗೆ ಈಡುಗಾಯಿ ಒಡೆದು ಸಂಭ್ರಮಿಸಿದರು. ಈ ವೇಳೆಗೆ ದೊಡ್ಡಮ್ಮ ತಾಯಿ ದೇವಿಯ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಯಿತು.

ಜಾತ್ರೆಗೆ ಚಾಮರಾಜನಗರ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿಗೆ ಸೇರಿದ ಗ್ರಾಮಗಳಲ್ಲಿ ಹಬ್ಬ ಆಚರಿಸುವುದರ ಜತೆಗೆ ಬಂಡಿ ಕಟ್ಟಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ವಿಧ ವಿಧ ಅಲಂಕಾರ: ಕಸ್ತೂರು, ಭೋಗಾಪುರ, ಮರಿಯಾಲ, ಕಿರಗಸೂರು, ಸಪ್ಪಯ್ಯನಪುರ, ಕೆಲ್ಲಂಬಳ್ಳಿ, ಮೂಕಹಳ್ಳಿ, ಆನಹಳ್ಳಿ, ತೊರವಳ್ಳಿ,ಪುಟ್ಟೇಗೌಡನ ಹುಂಡಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನ ಹುಂಡಿ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಹಾಗೂ ಹೆಗ್ಗವಾಡಿ ಗ್ರಾಮಸ್ಥರು ತಮ್ಮ ಬಂಡಿಗಳನ್ನು ವಿವಿಧ ಬಗೆಯಲ್ಲಿ ಅಲಂಕರಿಸಿದ್ದರು.

ಎತ್ತುಗಳನ್ನು ಸಿಂಗರಿಸಿ ಬಂಡಿಗಳಿಗೆ ಬಾಳೆಗೊನೆ, ಎಳನೀರು, ರಂಗು ರಂಗಿನ ಬಣ್ಣದ ಪಟ್ಟಿ, ಹೂವಿನ ಹಾರಗಳು ಮತ್ತು ತಾವು ಬೆಳೆದಿದ್ದ ಫಸಲುಗಳನ್ನು ಕಟ್ಟಿದ್ದರು. ದೊಡ್ಡಮ್ಮ ತಾಯಿ ವಿಗ್ರಹವನ್ನು ಬಂಡಿಯಲ್ಲಿ ಕೂರಿಸಿ ಗ್ರಾಮಗಳಿಂದ ವಾದ್ಯ ಮೇಳಗಳೊಂದಿಗೆ ಜಾತ್ರೆಗೆ ಆಗಮಿಸಿದ್ದರು.

ಕಸ್ತೂರು ಬಂಡಿ ಮೊದಲಿಗೆ ಪೂಜೆ ಸಲ್ಲಿಸಿದ ನಂತರ ಒಂದರ ಹಿಂದೆ ಮತ್ತೊಂದು ಗ್ರಾಮಗಳ ಬಂಡಿಗಳು ಸಾಲು ಸಾಲಾಗಿ ಆಗಮಿಸಿ ಜಾತ್ರೆಗೆ ಮೆರುಗು ನೀಡಿದವು. ಸುತ್ತಮುತ್ತಲಿನ ಗ್ರಾಮಗಳಿಂದ ಕಾಲ್ನಡಿಗೆಯಲ್ಲಿ ಬಂದ ಭಕ್ತರು ಬಂಡಿಗಳು ಬಂದಾಗ ಕೇಕೆ ಹಾಕಿ ಹುರಿದುಂಬಿಸಿದರು.

ಬಂಡಿಗಳು ಜಾತ್ರೆಗೆ ಆಗಮಿಸುತ್ತಿದ್ದಂತೆ ಭಕ್ತಾದಿಗಳು ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು. ಮಹಿಳೆಯರು ದೀವಟಿಗೆ ಸೇವೆ (ಪಂಜು) ಉರಿಸಿ ದೊಡ್ಡಮ್ಮ ತಾಯಿಗೆ ಪೂಜೆ ಸಲ್ಲಿಸಿದರು. ಪಕ್ಕದಲ್ಲಿರುವ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲೂ ಭಕ್ತರು ಪೂಜೆ ಸಲ್ಲಿಸಿದರು.

ಬಿಗಿ ಬಂದೋಬಸ್ತ್‌

ಜಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ನಡೆಸಿತ್ತು. ದೇವಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಜಾತ್ರೆಗೆ ಆಗಮಿಸುವ ಮುಖ್ಯ ರಸ್ತೆಯ ಎರಡು ಕಡೆಗಳಲ್ಲಿ ಪೊಲೀಸರು ಕಾವಲಿದ್ದರು. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳನ್ನು ಮುಂದಕ್ಕೆ ಬಿಡದೇ ದೂರದಲ್ಲಿ ನಿಲ್ಲುವಂತೆ ವ್ಯವಸ್ಥೆ ಮಾಡಿದ್ದರು.

ಗ್ರಾಮಗಳಲ್ಲಿ ಸಂಭ್ರಮಾಚರಣೆ

ಜಾತ್ರೆಗೆ ಬಂಡಿ ಕಟ್ಟುವ 16 ಗ್ರಾಮಗಳಲ್ಲದೆ, 23 ಗ್ರಾಮಗಳಲ್ಲಿ ಹಬ್ಬ ಆಚರಿಸಲಾಯಿತು. ಪ್ರತಿ ವರ್ಷ ಪುಷ್ಯ ಮಾಸ ಎರಡನೇ ಭಾನುವಾರ ಬಂಡಿ ಜತ್ರಾ ಮಹೋತ್ಸವ ನಡೆಯುತ್ತದೆ. ಹಬ್ಬ ಆಚರಿಸುವ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಬೀದಿಗಳನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT