ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಾಮುಲ್‌ ನೇಮಕಾತಿ ಅವ್ಯವಹಾರ, ಎರಡು ದಿನದಲ್ಲಿ ಸರ್ಕಾರಕ್ಕೆ ವರದಿ

ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕರಾದ ಎನ್‌.ಮಹೇಶ್‌, ನಿರಂಜನ್‌ ಕುಮಾರ್‌
Last Updated 11 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್‌) 72 ವಿವಿಧ ಹುದ್ದೆಗಳಿಗೆ ನಡೆದಿರುವ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದಂತೆ ನಡೆಸಲಾಗಿರುವ ಜಂಟಿ ತನಿಖಾ ವರದಿಯು ಕೈಸೇರಿದ್ದು, ಇನ್ನು ಎರಡು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಂಗಳವಾರ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಾಮುಲ್‌ ನೇಮಕಾತಿ ಅವ್ಯವಹಾರದ ಬಗ್ಗೆ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಪ್ರಸ್ತಾಪಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ತನಿಖೆಯ ವರದಿ ಬಗ್ಗೆ ಪ್ರಸ್ತಾಪಿಸಿದರು.

‘ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಂಘ ಸಂಸ್ಥೆಗಳು ಆರೋಪ ಮಾಡಿದ್ದರಿಂದ ಹಿಂದಿನ ಜಿಲ್ಲಾಧಿಕಾರಿ ಅವರು ಜಂಟಿ ತನಿಖೆಗಾಗಿ ನಾಲ್ವರು ಅಧಿಕಾರಿಗಳನ್ನು ನೇಮಿಸಿದ್ದರು. ಅವರು ವರದಿಯನ್ನು ನೀಡಿದ್ದಾರೆ. ಅದರಲ್ಲಿರುವ ಅಂಶಗಳನ್ನು ನಾನು ಪರಿಶೀಲಿಸಬೇಕಾಗಿದೆ. ಪರಿಶೀಲನೆ ನಂತರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ’ ಎಂದರು.

ಸಭೆಯಲ್ಲಿ ಚಾಮುಲ್‌ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಶಾಸಕ ಎನ್‌.ಮಹೇಶ್‌ ಅವರು ಅವ್ಯವಹಾರದ ಆರೋಪಗಳು ಹಾಗೂ ತನಿಖೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದರು.

‘ಯಾವುದೇ ಹುದ್ದೆಗೆ ಅಭ್ಯರ್ಥಿಗಳು ಆಯ್ಕೆಯಾಗಿ, ಕೆಲಸಕ್ಕೆ ಸೇರುವ ಮೊದಲೇ ಸಿಂಧುತ್ವ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಆದರೆ, ಇಲ್ಲಿ ಪ್ರಮಾಣಪತ್ರ ಸಲ್ಲಿಸುವುದಕ್ಕೂ ಮೊದಲೇ ಸೇರಿದ್ದಾರೆ. ನೇಮಕಾತಿಯಲ್ಲಿ ಇಷ್ಟೊಂದು ತರಾತುರಿ ಯಾಕೆ ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ, ನೇಮಕಾತಿಯಲ್ಲಿ ಏನೋ ನಡೆದಿದೆ ಎಂಬ ಅನುಮಾನ ಬರುತ್ತದೆ’ ಎಂದು ಹೇಳಿದರು.

‘ತನಿಖೆಗೆ ಅಧಿಕಾರಿಗಳನ್ನು ನೇಮಿಸುವಾಗ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ.. ಮುಂತಾದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ನೇಮಿಸಬೇಕಿತ್ತು’ ಎಂದೂ ಹೇಳಿದರು.

ಗುಂಡ್ಲುಪೇಟೆ ಶಾಸಕ ಸಿ.ಎನ್‌.ನಿರಂಜನ್‌ ಕುಮಾರ್‌ ಅವರು ಮಾತನಾಡಿ, ‘ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳುವುದಕ್ಕೂ ಮೊದಲೇ‌, ಯಾರ‍್ಯಾರು ನೇಮಕವಾಗಿದ್ದಾರೆ ಎಂಬುದು ತಿಳಿದಿತ್ತು. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಕಂಡು ಬಂದಿದೆ. ಹಾಗಾಗಿ, ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಮತ್ತು ನೇಮಕಾತಿಯನ್ನು ರದ್ದುಪ‍ಡಿಸಬೇಕು’ ಎಂದು ಒತ್ತಾಯಿಸಿದರು.

ಭಿನ್ನ ಹೇಳಿಕೆ ತಂದ ಗೊಂದಲ
ಈ ಮಧ್ಯೆ, ಸಚಿವ ಎಸ್‌.ಸುರೇಶ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿ ಅವರು ನೀಡಿದ ಭಿನ್ನ ಹೇಳಿಕೆ ಗೊಂದಲ ಮೂಡಿಸಿತು.

ಶಾಸಕರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸುರೇಶ್‌ ಕುಮಾರ್‌ ಅವರು, ‘ಈಗಿನ ವರದಿ ಜಿಲ್ಲಾಧಿಕಾರಿ ಅವರಿಗೆ ತೃಪ್ತಿ ತಂದಿಲ್ಲಂತೆ. ಅವರು ಮತ್ತೊಮ್ಮೆ ತನಿಖೆ ನಡೆಸುತ್ತಾರೆ’ ಎಂದು ಹೇಳಿದರು. ಇದರ ನಂತರ ಜಿಲ್ಲಾಧಿಕಾರಿ ಅವರು ‘ಇನ್ನು ಎರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ’ ಎಂದು ಪುನರುಚ್ಚರಿಸಿದರು.

ಸಭೆ ಮುಗಿದು ಹೊರ ಬರುತ್ತಿದ್ದ ಸಚಿವರನ್ನು ಪತ್ರಕರ್ತರು, ಇನ್ನೊಂದು ತನಿಖಾ ಸಮಿತಿಯ ಅಗತ್ಯವಿದೆಯೇ ಎಂದು ಕೇಳಿದಾಗ, ‘ಯಾರು ಹಾಗೆ ಹೇಳಿದ್ದು? ಎರಡು ದಿನಗಳಲ್ಲಿ ವರದಿ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT