ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಜಗವಷ್ಟೇ ಅಲ್ಲ, ಯುಗದ ಕವಿ: ಪುಟ್ಟರಂಗಶೆಟ್ಟಿ

ರಾಷ್ಟ್ರಕವಿಯ ಕಾವ್ಯ, ಚಿಂತನೆಗಳ ಸ್ಮರಣೆ
Published 30 ಡಿಸೆಂಬರ್ 2023, 7:31 IST
Last Updated 30 ಡಿಸೆಂಬರ್ 2023, 7:31 IST
ಅಕ್ಷರ ಗಾತ್ರ

ಚಾಮರಾಜನಗರ: ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು ಜಗದ ಕವಿಯಷ್ಟೇ ಅಲ್ಲ, ಯುಗದ ಕವಿಯೂ ಆಗಿದ್ದಾರೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ಪ್ರತಿಪಾದಿಸಿದರು. 

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕುವೆಂಪುರವರು ರಚಿಸಿರುವ ಎಲ್ಲ ಪ್ರಕಾರಗಳ ಕಾವ್ಯಗಳಲ್ಲಿ ಮಾನವೀಯತೆಯ ಸಂದೇಶವಿದೆ. ಅವರ ಸಂದೇಶಗಳನ್ನು ನಾವೆಲ್ಲರೂ ಅರಿಯಬೇಕು. ಭಾರತಮಾತೆಯ ಮಗನಾಗಿ ಹುಟ್ಟಿ ಇಡೀ ಮನುಕುಲಕ್ಕೆ ವಿಶ್ವಮಾನವ ಸಂದೇಶಗಳನ್ನು ಸಾರಿದ ಕುವೆಂಪು ಅವರ ಸ್ಮರಣೆ ಇಂದಿಗೂ ಪ್ರಸ್ತುತ’ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ‘ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಕುವೆಂಪು ಅವರದ್ದು. ನವ್ಯ ಸಾಹಿತ್ಯದಲ್ಲಿ ಕಾವ್ಯ ರಚಿಸಿದ ಕುವೆಂಪು ನಮಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಸಾಹಿತ್ಯ ಎಂದೆಂದಿಗೂ ಅನಂತ, ಅನಂತವಾಗಿರಲಿದೆ. ಸಮಾನತೆಯಡಿ ವಿಶ್ವವನ್ನೇ ಒಂದು ಕುಟುಂಬವಾಗಿ ನೋಡಿದ ಕುವೆಂಪು ಚಿರಸ್ಮರಣೀಯರಾಗಿದ್ದಾರೆ’ ಎಂದರು.

ನಗರಸಭಾ ಸದಸ್ಯೆ ಎಚ್.ಎಸ್.ಮಮತ ಮಾತನಾಡಿದರು.  ಇದೇ ವೇಳೆ ರಾಷ್ಟ್ರಕವಿ ಕುವೆಂಪು ಜಯಂತಿ ಅಂಗವಾಗಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ತಹಶೀಲ್ದಾರ್ ಬಸವರಾಜು, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಕನ್ನಡ ಪರ ಸಂಘಟನೆಯ ಮುಖಂಡ ಶ್ರೀನಿವಾಸಗೌಡ ಇತರರು ಇದ್ದರು.

‘ಮಾನವತೆಯ ಮುಖ’:

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ ‘10ನೇ ಶತಮಾನದಲ್ಲಿ ಕನ್ನಡದ ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ತತ್ವದ ಆಧಾರದಲ್ಲಿ ವಿಶ್ವಮಾನವ ಸಂದೇಶ ನೀಡಿದರು. ಮನುಷ್ಯತ್ವ ನಮ್ಮೊಳಗಿದ್ದರೆ ಮಾತ್ರ ಎಲ್ಲರೂ ಮನುಷ್ಯರಾಗಲು ಸಾಧ್ಯ. ಪಂಪ ಹಾಗೂ ಕುವೆಂಪು ಮಾನವತೆಯ ಎರಡು ಮುಖಗಳಾಗಿದ್ದಾರೆ. ಕುವೆಂಪು ಅವರು ಬುದ್ಧ ಬಸವ ಅಂಬೇಡ್ಕರ್ ಮಹಾವೀರ ಅವರ ಅದರ್ಶಗಳನ್ನು ಮೈಗೂಡಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು’ ಎಂದರು. ‘ಕುವೆಂಪು ಅವರು ವಿದ್ಯಾರ್ಥಿಯಾಗಿದ್ದಾಗ ಇಂಗ್ಲಿಷ್‌ ಭಾಷೆಯ ಸಾಕಷ್ಟು ಕವಿತೆಗಳನ್ನು ಮನನ ಮಾಡಿಕೊಂಡು ಸಾಹಿತ್ಯ ರಚನೆಯನ್ನು ಇಂಗ್ಲಿಷ್‍ನಲ್ಲಿ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಕುವೆಂಪು ಗುರುಗಳಾದ ಐರಿಸ್ ಕವಿ ಜೇಮ್ಸ್ ಕಸೀನ್ ಅವರು ಮಾತೃ ಭಾಷೆಗೆ ಅಗಾಧ ಶಕ್ತಿ ಇದೆ. ಮಾತೃಭಾಷೆ ಕನ್ನಡದಲ್ಲಿಯೇ ಕಾವ್ಯ ರಚಿಸುವಂತೆ ಸಲಹೆ ಮಾಡಿದರು. ಅಂದಿನಿಂದ ಕುವೆಂಪು ಬರೆದ ಸಾಹಿತ್ಯವೆಲ್ಲಾ ಅಮೃತವೇ. ಅಮೃತ ಎಂದರೇ ಸಾವಿಲ್ಲದ್ದು ಎಂದರ್ಥ. ಜನರಲ್ಲಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಅಕ್ಷರಗಳ ಮೂಲಕ ಮಾನವೀಯ ಸಮಾಜ ಕಟ್ಟಿದ ಕುವೆಂಪು ವೈಚಾರಿಕ ವೈಜ್ಞಾನಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT