ಗುರುವಾರ , ಮೇ 19, 2022
22 °C
ರಸ್ತೆ, ಆರೋಗ್ಯ, ಉನ್ನತ ಶಿಕ್ಷಣ ಸೌಕರ್ಯ ಮರೀಚಿಕೆ, ವನ್ಯಪ್ರಾಣಿಗಳ ಹಾವಳಿಗೆ ತತ್ತರ

ಹನೂರು: ಮೂಲಸೌಕರ್ಯಗಳ ಕೊರತೆಗೆ ನಲುಗಿದ ಗ್ರಾಮಸ್ಥರು

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಪವಾಡ ಪುರುಷ ಮಹದೇಶ್ವರಸ್ವಾಮಿ ಓಡಾಡಿದ ಕಾಡೊಳಗೆ ಇರುವ ಚಂಗಡಿ ಗ್ರಾಮದಲ್ಲಿ 21ನೇ ಶತಮಾನದಲ್ಲೂ ಜನರು ಗೌರವಯುತವಾಗಿ ಬದುಕಲು ಬೇಕಾದಂತಹ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. 

ಇಡೀ ಗ್ರಾಮವನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿಲು ಪ್ರಮುಖ ಕಾರಣವಾಗಿದ್ದೇ ಮೂಲಸೌಕರ್ಯಗಳ ಕೊರತೆ. 

ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಚಂಗಡಿ ಗ್ರಾಮದಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ರಸ್ತೆ ಸಂಪರ್ಕದಂತಹ ಕನಿಷ್ಠ ಸೌಲಭ್ಯಗಳು ಇಲ್ಲ. ಸಂರಕ್ಷಿತಾರಣ್ಯದ ಒಳಗೆ ಗ್ರಾಮ ಇರುವ ಕಾರಣಕ್ಕೆ ಎಲ್ಲ ಸೌಕರ್ಯಗಳು ಮರೀಚಿಕೆಯಾಗಿವೆ. 

‘ಗ್ರಾಮ ಪಂಚಾಯಿತಿಯಿಂದಲೂ ನಮಗೆ ಮೂಲ ಸೌಕರ್ಯ ಸಿಗುತ್ತಿಲ್ಲ. ಗ್ರಾಮ ಅರಣ್ಯದೊಳಗಿರುವುದರಿಂದ ನಮಗೆ ಸೌಲಭ್ಯ ಕಲ್ಪಿಸಲು ಸರ್ಕಾರವೂ ಹಿಂದೇಟು ಹಾಕುತ್ತಿದೆ’ ಎಂಬುದು ಇಲ್ಲಿನ ನಿವಾಸಿಗಳ ಅಳಲು. 

4ನೇ ತರಗತಿಗೆ ಶಿಕ್ಷಣ ಮೊಟಕು: ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹಾಗೂ ನಾಲ್ಕನೇ ತರಗತಿಯವರೆಗೆ ಕಿರಿಯ ಪ್ರಾಥಮಿಕ ಶಾಲೆ ಇದೆ. ಮುಂದಿನ ಶಿಕ್ಷಣ ಪಡೆಯಬೇಕಾದರೆ ಮಕ್ಕಳನ್ನು ಬೇರೆ ಗ್ರಾಮಗಳಿಗೆ ಕಳುಹಿಸಬೇಕು. ಬೇರೆ ಗ್ರಾಮಗಳಿಗೆ ಹೋಗಬೇಕೆಂದರೂ ಕನಿಷ್ಠ ಏಳೆಂಟು ಕಿ.ಮೀ ಕಾಡಿನ ದಾರಿಯಲ್ಲಿ ನಡೆದುಕೊಂಡು ಸಾಗಬೇಕು. ಮಕ್ಕಳನ್ನು ಅರಣ್ಯದಲ್ಲಿ ಕಳುಹಿಸಲು ಸಾಧ್ಯವಿಲ್ಲ. ವನ್ಯಪ್ರಾಣಿಗಳ ಭಯದಿಂದ ಇಲ್ಲಿನ ಬಹುತೇಕ ಮಕ್ಕಳ ಶಿಕ್ಷಣ ನಾಲ್ಕನೇ ತರಗತಿಗೆ ಮೊಟಕುಗೊಳ್ಳುತ್ತಿದೆ. 

ಕೆಲವು ಪೋಷಕರು ಧೈರ್ಯ ಮಾಡಿ ಮಕ್ಕಳನ್ನು ಕೌದಳ್ಳಿಯಲ್ಲಿರುವ ವಸತಿ ನಿಲಯಗಳಿಗೆ ಸೇರಿಸಿ, ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ.  

ಆರೋಗ್ಯ ಸೇವೆ ಇಲ್ಲ: ಗ್ರಾಮದ ಜನರಿಗೆ ಆರೋಗ್ಯ ಸಭೆ ಸರಿಯಾಗಿ ಲಭ್ಯವಾಗುತ್ತಿಲ್ಲ. ಗ್ರಾಮದಲ್ಲಿ ಆರೋಗ್ಯ ಕೇಂದ್ರವಿಲ್ಲ. ತುರ್ತು ಸಂದರ್ಭಗಳಲ್ಲಿ ಕೌದಳ್ಳಿ ಅಥವಾ ಪೊನ್ನಾಚಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಬೇಕು. ಅಲ್ಲೂ ಚಿಕಿತ್ಸೆ ದೊರೆಯದಿದ್ದರೆ ಹನೂರಿಗೆ ಬರಬೇಕು. ಇಲ್ಲಿ ಹಾವುಗಳ ಕಾಟ ವಿಪರೀತವಾಗಿದೆ. ಹಾಗಾಗಿ ಹಾವು ಕಡಿತ ಪ್ರಕರಣಗಳು ಹೆಚ್ಚು. ಈ ಪ್ರಕರಣದಲ್ಲಿ ಶೀಘ್ರ ಚಿಕಿತ್ಸೆ ಅಗತ್ಯ. ಆರಂಭದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ ಜನ ಮೃತಪಟ್ಟಿರುವ ನಿದರ್ಶನಗಳೂ ಇವೆ. 

‘ಅನಾರೋಗ್ಯದ ತುರ್ತು ಸಂದರ್ಭಗಳು ಬಂದರೆ ಏನು ಮಾಡಬೇಕೆಂಬುದೇ ತೋಚುವುದಿಲ್ಲ. ರಾತ್ರಿ ವೇಳೆ ಗರ್ಭಿಣಿಯರನ್ನು ಡೋಲಿ ಕಟ್ಟಿಕೊಂಡು ಹೋಗಿ ಆಸ್ಪತ್ರೆಗೆ ಸಾಗಿಸಿದ್ದೇವೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉದ್ಭವವಾದರೆ ನಮಗೆ ಸಾವೇ ಗತಿ. ಗ್ರಾಮಕ್ಕೆ ಆಂಬುಲೆನ್ಸ್ ಬರುತ್ತದೆ. ಆದರೆ, ರಾತ್ರಿ ವೇಳೆ ರಸ್ತೆಯಲ್ಲೇ ವನ್ಯಪ್ರಾಣಿಗಳು ಇರುವುದರಿಂದ ಅವರು ಬರಲು ಹಿಂದೇಟು ಹಾಕುತ್ತಾರೆ’ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ ಗ್ರಾಮಸ್ಥರು.

ಕುಡಿಯುವ ನೀರಿನ ಪೂರೈಕೆಗೆ ತೊಂಬೆ ನೀರಿನ ವ್ಯವಸ್ಥೆ ಇದೆ. ಆದರೆ, ಅದರ ನಿರ್ವಹಣೆ ಸರಿಯಾಗಿಲ್ಲ. ಹಾಗಾಗಿ, ಗ್ರಾಮಸ್ಥರಿಗೆ ಶುದ್ಧನೀರು ಸಿಗುತ್ತಿಲ್ಲ. 

ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ. ಅರಣ್ಯ ಇಲಾಖೆಯ ಕಚ್ಚಾ ರಸ್ತೆಯಲ್ಲೇ ಗ್ರಾಮದ ಜನರು ಓಡಾಡಬೇಕಾಗಿದೆ. ಆಟೊ, ಕಾರುಗಳು ಬರುವುದಕ್ಕೆ ಸಾಧ್ಯವೇ ಇಲ್ಲ. ದ್ವಿಚಕ್ರ ವಾಹನದಲ್ಲಿ ಓಡಾಡಬಹುದಾದರೂ ಪ್ರಾಣಿಗಳ ಭಯ ಕಾಡುತ್ತದೆ. ಜೀಪು, ಟ್ರ್ಯಾಕ್ಟರ್‌ಗಳಂತಹ ದೊಡ್ಡ ವಾಹನಗಳಲ್ಲಿ ಮಾತ್ರ ಗ್ರಾಮ ತಲುಪಬಹುದು. 

ಗ್ರಾಮ ತೊರೆಯುವ ಜನರು

ಸಮಸ್ಯೆಗಳಿಂದ ಬೇಸತ್ತಿರುವ ಇಲ್ಲಿನ ಕುಟುಂಬಗಳ ಬಹುತೇಕ ಯುವಜನರು ಈಗಾಗಲೇ ಗ್ರಾಮ ತೊರೆದು ಬೆಂಗಳೂರು, ಮೈಸೂರು ಹಾಗೂ ತಮಿಳುನಾಡಿಗೆ ಹೋಗಿ ನೆಲೆಸಿದ್ದಾರೆ. ಯಾವುದಾದರೂ ಹಬ್ಬ, ವಿಶೇಷ ದಿನಗಳಿದ್ದರೆ ಮಾತ್ರ ಗ್ರಾಮಕ್ಕೆ ಬರುತ್ತಾರೆ. ಗ್ರಾಮದಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಹೆಣ್ಣು ಕೊಡುವುವರಿಲ್ಲ: ಗ್ರಾಮ ಕಾಡಿನಲ್ಲಿರುವುದು ಮತ್ತು ಮೂಲಸೌಕರ್ಯಗಳ ಕೊರೆಯು ಇಲ್ಲಿನ ಯುವಕ ಯುವತಿಯರಿಗೆ ಮದುವೆಯಾಗುವ ಸೌಭಾಗ್ಯವನ್ನೇ ಕಸಿದುಕೊಂಡಿವೆ. 

ಇಲ್ಲಿನ ಯುವಕರನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದಾಗುವುದಿಲ್ಲ. ಅದೇ ರೀತಿ ಇಲ್ಲಿನ ಯುವತಿಯನ್ನು ವರಿಸಲು ಬೇರೆ ಊರಿನ ಯುವಕರು ಮನಸ್ಸು ಮಾಡುತ್ತಿಲ್ಲ. ಇದು ಇಲ್ಲಿನ ಪೋಷಕರ ಆತಂಕಕ್ಕೆ ಕಾರಣವಾಗಿದೆ.

ವನ್ಯಪ್ರಾಣಿಗಳ ಹಾವಳಿ

ಮೂಲಸೌಕರ್ಯಗಳ ಕೊರತೆ ಒಂದೆಡೆಯಾದರೆ, ವನ್ಯಪ್ರಾಣಿಗಳ ಹಾವಳಿ ಇಲ್ಲಿನ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.  

ಗ್ರಾಮಸ್ಥರಿಗೆ ಕೃಷಿಯೇ ಜೀವನಾಧಾರ. ಕೊಳವೆ ಬಾವಿ ವ್ಯವಸ್ಥೆ ಇಲ್ಲಿಲ್ಲ. ಹಾಗಾಗಿ, ಮಳೆಯಾಶ್ರಿತ ಕೃಷಿಯನ್ನು ಗ್ರಾಮಸ್ಥರು ನೆಚ್ಚಿಕೊಂಡಿದ್ದಾರೆ. ಗ್ರಾಮವು ಕಾಡಿಗೆ ಹೊಂದಿಕೊಂಡಿರುವುದರಿಂದ ವರ್ಷಕ್ಕೊಮ್ಮೆ ಬೆಳೆಯುವ ಫಸಲು ವನ್ಯಪ್ರಾಣಿಗಳ ಪಾಲಾಗುತ್ತಿವೆ. 

ಪ್ರಾಣಿಗಳಿಗೆ ಕಾಡಿನಲ್ಲಿ ಕುಡಿಯುವ ನೀರು, ಆಹಾರ ಸಿಗದೇ ಇದ್ದ ಸಂದರ್ಭದಲ್ಲಿ ಗ್ರಾಮಕ್ಕೆ ನುಗ್ಗಿ ಜನರ ಮೇಲೂ ದಾಳಿ ಮಾಡುತ್ತವೆ. ಹಾಗಾಗಿ, ಇಲ್ಲಿನ ಗ್ರಾಮಸ್ಥರು ಜೀವಭಯದಲ್ಲೇ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

----

5 ವರ್ಷಗಳ ಹಿಂದೆ ಗರ್ಭಿಣಿಯನ್ನು ಡೋಲಿಯಲ್ಲಿ ಕರೆದೊಯ್ಯುವಾಗ ಹೆರಿಗೆಯಾಗಿ ಶಿಶು ಸತ್ತಿತು. ಕಾಡಿನಲ್ಲೇ ಶಿಶುವನ್ನು ಮಣ್ಣು ಮಾಡಿದ್ದೆವು
–ದೊಡ್ಡೇಗೌಡ, ಚಗಂಡಿ ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು