ಭಾನುವಾರ, ಅಕ್ಟೋಬರ್ 17, 2021
23 °C
ಕಂಪೆನಿಯಿಂದ ಕಳಪೆ ಬಿತ್ತನೆ ಬೀಜ ವಿತರಣೆ, ಖರೀದಿಗೆ ರಸೀದಿ ನೀಡದ ದಲ್ಲಾಳಿ

ಹನೂರು: ಆಲೂಗಡ್ಡೆ ಇಳುವರಿ ಕುಸಿತ: ರೈತ ಕಂಗಾಲು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯಲ್ಲಿ ಪ್ರತಿ ಬಾರಿ ಆಲೂಗಡ್ಡೆ ಬೆಳೆದು ಲಕ್ಷಾಂತರ ರುಪಾಯಿ ಲಾಭ ಕಾಣುತ್ತಿದ್ದ ರೈತರು, ಈ ಬಾರಿ ಹಾಕಿದ ಬಂಡವಾಳವೂ ಕೈಸೇರದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಬೀಜ. 

ಪಿ.ಜಿ.ಪಾಳ್ಯ, ಬೈಲೂರು, ಒಡೆಯರಪಾಳ್ಯ ಹಾಗೂ ಹುತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಹಾಸನದ ಎನ್.ಎ.ಎ.ಎಫ್ ಕಂಪನಿ ವಿತರಿಸಿದ್ದ ಬಿತ್ತನೆ ಆಲೂಗಡ್ಡೆಯನ್ನು ಬಿತ್ತನೆ ಮಾಡಿದ್ದರು. ನಾಲ್ಕು ತಿಂಗಳಲ್ಲಿ ಬೆಳೆ ಹುಲುಸಾಗಿ ಬೆಳೆದಿತ್ತು. ಈಗ ಕಟಾವು ಮಾಡುವ ಸಂದರ್ಭದಲ್ಲಿ ಚಿಕ್ಕ ಚಿಕ್ಕ ಗೋಲಿ ಗಾತ್ರದ ಆಲೂಗಡ್ಡೆಗಳು ಬೆಳೆದಿವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ. ಬಿತ್ತನೆ ಬೀಜ ವಿತರಿಸಿದ ಕಂಪನಿ ಹಾಗೂ ದಲ್ಲಾಳಿ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

ನಾಲ್ಕು ತಿಂಗಳ ಬೆಳೆಯಾಗಿರುವ ಆಲೂಗಡ್ಡೆ ಬೆಲೆ ಕುಸಿತದ ಸಂದರ್ಭ ಬಹಳ ಕಡಿಮೆ. ಹೀಗಾಗಿ ನೂರಾರು ಕುಟುಂಬಗಳು ಹಲವು ವರ್ಷಗಳಿಂದ ಆಲೂಗಡ್ಡೆಯನ್ನೇ ಬೆಳೆದು ಆದಾಯ ಗಳಿಸುತ್ತಿವೆ. ಆಲೂಗಡ್ಡೆ ಬೆಳೆದು ಕೈಸುಟ್ಟುಕೊಂಡ ರೈತರ ಸಂಖ್ಯೆ ಕಡಿಮೆ. ಇದೇ ನಂಬಿಕೆಯಲ್ಲಿ ಈ ಭಾಗದ ರೈತರು ನೂರಾರು ಎಕರೆಯಲ್ಲಿ ಎನ್‌ಎಎಎಫ್ ತಳಿಯ ಆಲೂಗಡ್ಡೆಯನ್ನು ಬಿತ್ತನೆ ಮಾಡಿದ್ದರು. 

‘ಪ್ರತಿ ಎಕರೆಯಲ್ಲಿ ಆಲೂಗಡ್ಡೆ ಬೆಳೆಯಲು ಲಕ್ಷಾಂತರ ರೂಪಾಯಿ ವ್ಯಯ ಮಾಡಲಾಗಿದೆ. ಆಲೂಗಡ್ಡೆ ಎಂದಿನಂತೆ ಇಳುವರಿ ಮತ್ತು ಗಾತ್ರ ಇದ್ದಿದ್ದರೆ ಲಕ್ಷಾಂತರ ರುಪಾಯಿ ಲಾಭ ಕಾಣುತ್ತಿದ್ದೆವು. ಆದರೆ ಎನ್ಎಎಎಫ್ ತಳಿ ಪೂರೈಕೆ ಮಾಡಿದ, ಹಾಸನ ಮೂಲದ ವ್ಯಕ್ತಿಯಿಂದ ಆಲೂಗಡ್ಡೆ ಖರೀದಿಸಿದ್ದ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ. ಮಾರಾಟ ಮಾಡಿದ ವ್ಯಕ್ತಿಯು ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವೇಳೆ ರೈತರಿಗೆ ಬಿಲ್ ಕೂಡ ನೀಡಿಲ್ಲ. ಈಗಾಗಲೇ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದು, ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಎನ್‌ಎಎಎಫ್ ಕಂಪನಿಯಿಂದ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಕೊಡಿಸಬೇಕು ಮತ್ತು ಆಲೂಗಡ್ಡೆ ಪೂರೈಕೆ ಮಾಡಿದ ವ್ಯಕ್ತಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ರೈತ ಮನೋಜ್ ಅವರು ಒತ್ತಾಯಿಸಿದರು. 

ದೂರು ನೀಡಲು ನಿರ್ಧಾರ: ನಾಲ್ಕು ಎಕರೆಯಲ್ಲಿ ಬಿತ್ತನೆ ಮಾಡಿದ ಬೀಜ ಕಳಪೆ ಗುಣಮಟ್ಟದಿಂದ ಕೂಡಿದೆ. ಪ್ರತಿವರ್ಷ ಇಳುವರಿ ಚೆನ್ನಾಗಿ ಬರುತ್ತಿತ್ತು. 50 ಕೆಜಿ ಬಿತ್ತನೆ ಮಾಡಿದರೆ 500 ಕೆಜಿ ಬೆಳೆಯಬಹುದು. ಪ್ರತಿ 45 ಕೆಜಿ‌ ಮೂಟೆಗೆ ₹800ರಿಂದ ₹1000ದವರೆಗೂ ಮಾರಾಟವಾಗುತ್ತದೆ. ಆದರೆ, ಈಗ ಬಿತ್ತನೆ ಮಾಡಿರುವ ಆಲೂಗೆಡ್ಡೆಯನ್ನು ಮಾರಾಟ ಮಾಡಲೂ ಆಗುತ್ತಿಲ್ಲ. ಆದ್ದರಿಂದ ಬಿತ್ತನೆ ಬೀಜ ವಿತರಣೆ ಮಾಡಿರುವ ಹಾಸನದ ಎನ್ಎಎಎಫ್ ಕಂಪನಿ‌ ವಿರುದ್ದ ದೂರು ನೀಡಲು ಮುಂದಾಗಿದ್ದೇವೆ’ ಎಂದು ಒಡೆಯರಪಾಳ್ಯ ಗ್ರಾಮದ ಶಿವಣ್ಣ ಅವರು ‘ಪ್ರಜಾವಾಣಿ' ತಿಳಿಸಿದರು.

‘ಬಿತ್ತನೆ ಬೀಜದಿಂದ ಸಮಸ್ಯೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌ ಅವರು, ‘ಒಡೆಯರಪಾಳ್ಯ ಭಾಗದಲ್ಲಿ ಆಲೂಗೆಡ್ಡೆ ಇಳುವರಿ ಕುಸಿತಗೊಂಡಿರುವ ಬಗ್ಗೆ ರೈತರಿಂದ ಆರೋಪ ಕೇಳಿ ಬಂದಿದ್ದರಿಂದ ಅ.7 ರಂದು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ರೈತರು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಬಿತ್ತನೆ ಮಾಡಿರುವುದರಿಂದ ಇಳುವರಿ ಕುಸಿತವಾಗಿದೆ’ ಎಂದರು.

ರೈತರು ಖರೀದಿಸಿರುವ ಬಿತ್ತನೆ ಬೀಜಕ್ಕೆ ಯಾವುದೇ ರೀತಿಯ ರಸೀದಿ ನೀಡಿಲ್ಲ. ರೈತರ ಜಮೀನುಗಳಿಗೆ ಭೇಟಿ ನೀಡಿ ಇಳುವರಿ ಕುಸಿತಗೊಂಡಿರುವ ಬಗ್ಗೆ ಪರೀಕ್ಷೆ ನಡೆಸಿ ವರದಿ ನೋಡುವಂತೆ ಹಾಸನದ ಕೃಷಿ ವಿಜ್ಞಾನಿಗಳಿಗೆ ಪತ್ರ ಬರೆಯಲಾಗಿದೆ. ನಾಲ್ಕೈದು ದಿನಗಳಲ್ಲಿ ವಿಜ್ಞಾನಿಗಳು ಜಮೀನಿಗೆ ಭೇಟಿ ನೀಡಲಿದ್ದಾರೆ. ದಲ್ಲಾಳಿಗಳು‌ ವಿತರಿಸಿದ ಮೂರು ಲೋಡ್ ಬಿತ್ತನೆ ಬೀಜಗಳಿಂದ ಈ ಸಮಸ್ಯೆ ಉದ್ಭವವಾಗಿದೆ’ ಎಂದು ಅವರು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು