ಸೋಮವಾರ, ಆಗಸ್ಟ್ 2, 2021
28 °C
ಕಳೆದ ವರ್ಷ 22 ಮದುವೆಗಳಿಗೆ ತಡೆ, ಮೂರು ಪ್ರಕರಣಗಳಲ್ಲಿ ಎಫ್‌ಐಆರ್‌

ಚಾಮರಾಜನಗರ | ಲಾಕ್‌ಡೌನ್‌: ಮೂರು ಬಾಲ್ಯವಿವಾಹಕ್ಕೆ ತಡೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕವು ಮೂರು ಬಾಲ್ಯವಿವಾಹಗಳಿಗೆ ತಡೆವೊಡ್ಡಿದೆ. ಈ ಮೂರು ಪ್ರಕರಣಗಳು ಕೂಡ ಮೇ ತಿಂಗಳಲ್ಲಿ ನಡೆದಿವೆ. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ನಡೆದಿಲ್ಲ. 

ಲಾಕ್‌ಡೌನ್‌ ಅವಧಿಯಲ್ಲಿ ಅಂದರೆ, ಮಾರ್ಚ್‌ 24ರಿಂದ ಮೇ 31ರವರೆಗೆ ಮಕ್ಕಳ ಸಹಾಯವಾಣಿ ‘1098’ಕ್ಕೆ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 10 ದೂರುಗಳು ಬಂದಿವೆ. 

‘ಸಾಮಾನ್ಯವಾಗಿ ಬೇಸಿಗೆ ರಜಾ ಸಮಯದಲ್ಲಿ, ಅಕ್ಷಯ ತೃತೀಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ನಡೆಯುತ್ತವೆ. ಆದರೆ, ಈ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ನಮ್ಮಲ್ಲಿ ಬಾಲ್ಯವಿವಾಹಗಳು ನಡೆದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಹಿಂದೆ ಜಿಲ್ಲೆಯಲ್ಲಿ ಬಾಲಕಿಯರಿಗೆ ಮದುವೆ ಮಾಡುವ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದವು. ಇತ್ತೀಚಿಗೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ ವರ್ಷ ನಾವು 22 ಬಾಲ್ಯ ವಿವಾಹವನ್ನು ತಡೆದಿದ್ದೇವೆ. ಮೂರು ಮದುವೆಗಳು ನಡೆದಿತ್ತು. ಈ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಿದ್ದೇವೆ’ ಎಂದು ಅವರು ಹೇಳಿದರು. 

‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಾಲ್ಯ ವಿವಾಹ ಹೆಚ್ಚಿರುವ ಸಮುದಾಯಗಳ ಮುಖಂಡರ ಸಭೆ ಕರೆದು ಅವರಿಗೆ ತಿಳಿ ಹೇಳಿದ್ದೇವೆ. ಮನೆ ಮನೆಗಳಿಗೆ ಭೇಟಿ ನೀಡಿ ತಿಳಿವಳಿಕೆ ಮೂಡಿಸುವುದು, ಕಾರ್ಯಾಗಾರಗಳನ್ನು ನಡೆಸುವುದು, ಸಂತೆಗಳು, ಜಾತ್ರೆಗಳಲ್ಲಿ ಜನರಲ್ಲಿ ಅರಿವು ಮೂಡಿಸುವುದೂ ಸೇರಿದಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ’ ಎಂದು ಬಸವರಾಜು ಅವರು ವಿವರಿಸಿದರು. 

ಮೂರು ಎಫ್ಐಆರ್‌: ‘ಕಳೆದ ವರ್ಷ ನಡೆದಿದ್ದ ಮೂರು ಪ್ರಕರಣಗಳಲ್ಲಿ ಪೋಷಕರು ಹಾಗೂ ವರನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಇದರಿಂದಲೂ ಕೆಲವು ಪೋಷಕರಲ್ಲಿ ಭಯ ಮೂಡಿದೆ. ಪೊಲೀಸ್‌ ಠಾಣೆ, ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ ಎಂಬ ಭಯದಿಂದಲೂ ‍ಪೋಷಕರು ಬಾಲಕಿಯರಿಗೆ ಮದುವೆ ಮಾಡಿಸಲು ಯತ್ನಿಸುತ್ತಿಲ್ಲ’ ಎಂಬುದು ಅವರ ವಾದ.

ಎಫ್‌ಐಆರ್‌ ಹಾಕುವುದಕ್ಕೆ ಹಿಂದೇಟು

ಜಿಲ್ಲೆಯು ಒಂದು ಕಾಲದಲ್ಲಿ ಬಾಲ್ಯವಿವಾಹಕ್ಕೆ ಕುಖ್ಯಾತಿ ಪಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಸಮುದಾಯಗಳಲ್ಲಿ ಜಾಗೃತಿ ಮೂಡುತ್ತಿದೆ. ಆದರೆ, ಬೆಳಕಿಗೆ ಬರುತ್ತಿರುವ ಪ್ರಕರಣಗಳಲ್ಲಿ ಪೋಷಕರ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಾರೆ. 

‘ಮಕ್ಕಳ ಸಹಾಯವಾಣಿಗೆ ಬಂದ ಕರೆ ಆಧಾರದಲ್ಲಿ ಮಕ್ಕಳ ರಕ್ಷಣಾ ಘಟಕ, ಸಹಾಯವಾಣಿ, ಪೊಲೀಸ್‌, ಪಿಡಿಒ, ಶಿಕ್ಷರನ್ನೊಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ನಿಶ್ಚಿತಾರ್ಥವನ್ನೋ ಅಥವಾ ಮದುವೆಯನ್ನೋ ತಪ್ಪಿಸುತ್ತದೆ. ಪೋಷಕರ ಮೇಲೆ ಎಫ್‌ಐಆರ್‌ ದಾಖಲಿಸುವುದಕ್ಕೆ ಅವಕಾಶ ಇರುತ್ತದೆ. ಅಧಿಕಾರಿಗಳು ಈ ಕೆಲಸ ಮಾಡುವುದಿಲ್ಲ’ ಎಂದು ಸ್ವಯಂ ಸೇವಾ ಸಂಸ್ಥೆಯೊಂದರ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅಧಿಕಾರಿಗಳ ನಡುವೆ ಸಮಯನ್ವಯದ ಕೊರತೆ ಇದೆ. ಪ್ರಕರಣಗಳು ದಾಖಲಾದರೆ ಎಲ್ಲಿ ಇಲಾಖೆಗೆ ಕೆಟ್ಟ ಹೆಸರು ಬರುತ್ತದೋ ಎಂಬ ಭಯ ಅವರದ್ದು. ಕದ್ದು ಮುಚ್ಚಿ ಮದುವೆ ನಡೆದ ನಂತರವೂ ಕ್ರಮ ತೆಗೆದುಕೊಳ್ಳುವುದಕ್ಕೂ ಅವಕಾಶ ಇದೆ. ಅದೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಠಾಣೆಗಳಲ್ಲಿ ಪ್ರಕರಣ ದಾಖಲಾದರೆ, ಆ ಭಯದಿಂದಲಾದರೂ ಪೋಷಕರು ಬಾಲಕಿಯರಿಗೆ ಮದುವೆ ಮಾಡುವುದಕ್ಕೆ ಹಿಂಜರಿಯಬಹುದು’ ಎಂದು ಅವರು ಹೇಳಿದರು.

‘ಹೆಚ್ಚು ಸಭೆ ನಡೆಯಲಿ’

ಬಾಲ್ಯವಿವಾಹಗಳಿಗೆ ಸಂಬಂಧಿಸಿದಂತೆ ಆರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂಬ ನಿಯಮ ಇದೆ. ಆ ಸಭೆ ಜಿಲ್ಲೆಯಲ್ಲಿ ನಡೆಯುತ್ತದೆ. ಆದರೆ, ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕಾದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರತಿ ತಿಂಗಳು ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ಬಾಲ್ಯವಿವಾಹದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಸಂಸ್ಥೆಗಳು, ಸಿಬ್ಬಂದಿಯೊಂದಿಗೆ ಸಭೆ ನಡೆಸಬೇಕು. ಆಗ ಇಡೀ ಜಿಲ್ಲೆಯ ಚಿತ್ರಣ ಸಿಗುತ್ತದೆ. ಈ ಸಾಮಾಜಿಕ ಪಿಡುಗನ್ನು ಸಂಪೂರ್ಣ ಹತ್ತಿಕಲು ಸಹಾಯವಾಗುತ್ತದೆ’ ಎಂದು ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು