ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮೀಣ ಜ್ಞಾನದಿಂದ ವಿಜ್ಞಾನಕ್ಕೆ ಹೊಸ ನೋಟ‘-ನಾಗೇಶ ಹೆಗಡೆ

ಮಾಧ್ಯಮ ಕಾರ್ಯಾಗಾರದಲ್ಲಿ ಪತ್ರಕರ್ತ ನಾಗೇಶ ಹೆಗಡೆ ಅಭಿಮತ
Last Updated 20 ಮಾರ್ಚ್ 2022, 4:55 IST
ಅಕ್ಷರ ಗಾತ್ರ

ಚಾಮರಾಜನಗರ: ‘ದೇಶದ ಗ್ರಾಮೀಣ ಭಾಗಗಳಲ್ಲಿ ಚಾಲ್ತಿಯಲ್ಲಿರುವ ವೈಜ್ಞಾನಿಕ ಮನೋಭಾವದ ಅಭ್ಯಾಸಗಳು, ಸುಸ್ಥಿರ ಅಭಿವೃದ್ಧಿಯ ಪ್ರಯತ್ನಗಳು ಹೊರಜಗತ್ತಿಗೆ ತಲುಪಿಸುವ ಕೆಲಸಗಳನ್ನು ಮಾಧ್ಯಮಗಳು ಮಾಡಬೇಕು’ ಎಂದು ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರು ಶನಿವಾರ ಅಭಿಪ್ರಾಯಪಟ್ಟರು.

ಕುತೂಹಲಿ ವಿಜ್ಞಾನ ಸಂವಹನ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ನವದೆಹಲಿಯ ವಿಜ್ಞಾನ್ ಪ್ರಸಾರ್‌ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಜ್ಞಾನ ಸಂವಹನ ಮತ್ತು ವಿಜ್ಞಾನ ಪತ್ರಿಕೋದ್ಯಮ‘ದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಜ್ಞಾನವು ವಿಜ್ಞಾನಕ್ಕೆ ಹೊಸ ನೋಟ ಕೊಟ್ಟಿದೆ. ಗ್ರಾಮೀಣ ಜನರು ನಿಸರ್ಗದ ಬಗ್ಗೆ ಸೂಕ್ಷ್ಮತೆ ಹೊಂದಿದ್ದಾರೆ. ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೇ ಸಹಜವಾಗಿ ಅವರು ಕೃಷಿ, ನಿಸರ್ಗವನ್ನು ರಕ್ಷಿಸುತ್ತಾರೆ. ನಮೀಬಿಯಾದ ಜನರು ಆನೆ ಹಾವಳಿಯನ್ನು ತಡೆಯಲು ಜೇನ್ನೊಣಗಳನ್ನು ಬಳಸುತ್ತಾರೆ. ನಮ್ಮಲ್ಲಿ ಆನೆ ಹಾವಳಿ ತಡೆಯಲು ಸೋಲಾರ್‌ ಬೇಲಿ, ‌ಕಂದಕ, ಇತರ ಬೇಲಿಗಳನ್ನು ಬಳಸಲಾಗುತ್ತದೆ‘ ಎಂದರು.

‘ನಿಸರ್ಗದಲ್ಲಿ ವೈಜ್ಞಾನಿಕವಾದ ಸಾಕಷ್ಟು ಪಾಠಗಳಿವೆ. ನಿಸರ್ಗದೊಂದಿಗೆ ಇರುವವರಿಗೆ ಅದು ಗೊತ್ತೇ ವಿನಾ, ಬೆಂಗಳೂರು, ದೆಹಲಿಯಲ್ಲಿ ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತಿರುವವರಿಗಲ್ಲ. ಸ್ಥಳೀಯ ಮಾಧ್ಯಮಗಳು ಇವುಗಳನ್ನು ಹೊರ ಜಗತ್ತಿಗೆ ತಲುಪಿಸುವ ಕೆಲಸ ಮಾಡಬೇಕು‘ ಎಂದು ಹೇಳಿದರು.

ಮತ್ತೊಬ್ಬ ವಿಜ್ಞಾನ ಲೇಖಕ ಟಿ.ಜಿ.ಶ್ರೀನಿಧಿ ಅವರು ಮಾತನಾಡಿ, ‘ತಂತ್ರಜ್ಞಾನ ದಾಪುಗಾಲು ಇಡಲು ಆರಂಭಿಸಿದ ಮೇಲೆ ಭೌಗೋಳಿಕ ಮಿತಿ ಎಂಬುದು ಹೋಗಿದೆ. ಡಿಜಿಟಲ್‌ ಎನ್ನುವುದು ಈಗ ಟ್ರೆಂಡ್‌. ಎಲ್ಲ ಕಂಪನಿಗಳು ಈಗ ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗಿವೆ. ಕೋವಿಡ್‌ ಬಂದ ಮೇಲೆ ಇದರ ಬಳಕೆ ಹೆಚ್ಚಾಗಿದ್ದು, ಈಗ ಕೆಲಸ ಮಾಡಲು ಕಚೇರಿಯ ಅಗತ್ಯವಿದೆಯೇ ಎಂಬ ಚರ್ಚೆಯೂ ಆರಂಭವಾಗಿದೆ‘ ಎಂದರು.

‘ಡಿಜಿಟಲ್‌ ಕಾರಣಕ್ಕೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಜೊತೆಗೆ ಹಲವು ಅನನುಕೂಲಗಳು ಆಗಿವೆ. ಡಿಜಿಟಲ್‌ ಚಟ ಹತ್ತಿಸಿಕೊಂಡವರಿದ್ದಾರೆ. ಮಕ್ಕಳು ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಹಣಕಾಸಿನ ವಂಚನೆ ಪ್ರಕರಣಗಳು ಹೆಚ್ಚಾಗಿವೆ‘ ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಮಾಹಿತಿಗಳು ಹರಿದಾಡುತ್ತಿವೆ. ಮಾಧ್ಯಮಗಳು ಕೂಡ ಅಂತಹ ಮಾಹಿತಿಗಳನ್ನು ಆಧರಿಸಿ ಸುದ್ದಿಗಳನ್ನು ಮಾಡುತ್ತಿವೆ. ಇದನ್ನು ತಪ್ಪಿಸಬೇಕು‘ ಎಂದು ಶ್ರೀನಿಧಿ ಹೇಳಿದರು.

ಕುತೂಹಲಿ ಯೋಜನೆಯ ಸಂಚಾಲಕ, ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಅವರು ಮಾತನಾಡಿ, ‘ಕೇಂದ್ರ ಸರ್ಕಾರದ ಸಹಕಾರದಲ್ಲಿ ನಡೆಯುತ್ತಿರುವ ಕುತೂಹಲಿ ಯೋಜನೆಯ ಉದ್ದೇಶ ವಿಜ್ಞಾನವನ್ನು ಜನಸಾಮಾನ್ಯರಿಗೆ ತಪಿಸುವುದು. ನಮ್ಮ ಮನೆಯ ಹಿತ್ತಿಲಿನಲ್ಲೇ ಸಾಕಷ್ಟು ವಿಜ್ಞಾನ ಕಲಿಯಲು ಸಿಗುತ್ತದೆ.ಜನ ವಿಜ್ಞಾನ ಪರಿಕಲ್ಪನೆಯ ಅಡಿಯಲ್ಲಿ ಜನ ಸಾಮಾನ್ಯರು ವಿಜ್ಞಾನಿಗಳ ಜೊತೆ ಸೇರಿ ಚರ್ಚಿಸಿ ನಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲು ಸಾಧ್ಯವಿದೆ‘ ಎಂದರು.

‘ವಿಜ್ಞಾನ ಎಂದರೆ ಬದುಕಿನ ಅಂಗ. ಅದು ಮಕ್ಕಳಿಗೆ ಮಾತ್ರ ಮಾಡುವ ಪಾಠ ಅಲ್ಲ. ಹಿರಿಯರಿಗೂ ಬೇಕು. ಕುತೂಹಲಿ ಯೋಜನೆ ಮೂಲಕ ದೊಡ್ಡವರಿಗೂ ವಿಜ್ಞಾನವನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ‘ ಎಂದರು.

‘ಅಣೆಕಟ್ಟು ನಿರ್ಮಾಣವೇ ವಿಧ್ವಂಸಕಾರಿ’

ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿದ ನಾಗೇಶ ಹೆಗಡೆ ಅವರು, ‘ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲಿ 1000 ಟನ್‌ಗೂ ಹೆಚ್ಚು ಡೈನಮೈಟ್‌ ಸ್ಫೋಟಿಸಬೇಕಾಗಬಹುದು. ಅಣೆಕಟ್ಟು ನಿರ್ಮಿಸಿದ ನಂತರದ ಅಧ್ವಾನ ಏನೇ ಇರಲಿ, ಅದು ನಿರ್ಮಿಸುವಾಗಲೇ ಪರಿಸರ ಧ್ವಂಸವಾಗುತ್ತದೆ’ ಎಂದರು.

‘ರಾಮನಗರದ ಮೂಲಕ ಹರಿಯುವ ನೀರನ್ನು ಮೇಕೆ‌ದಾಟುವಿನಲ್ಲಿ ಸಂಗ್ರಹಿಸಿ ಮತ್ತೆ ಅದನ್ನು ರಾಮನಗರಕ್ಕೆ ತರುವುದು ಅವೈಜ್ಞಾನಿಕ. ಅಲ್ಲೇ ಬೀಳುವ ಮಳೆ ನೀರನ್ನು ಸಂಗ್ರಹಿಸಿದರೆ ಅಣೆಕಟ್ಟಿನ ಅವಶ್ಯಕತೆಯೇ ಇರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT