ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಜೇಬಿಗೆ ಹೊರೆಯಾದ ‘ಬಿಸಿಯೂಟ’

ಅನುದಾನ ಕೊರತೆ; ಪೂರೈಕೆಯಾಗದ ಬೇಳೆ, ಎಣ್ಣೆ: ಬೆಲೆ ಏರಿಕೆಯ ಹೊಡೆತ
Last Updated 1 ಡಿಸೆಂಬರ್ 2021, 20:53 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನರಾರಂಭಗೊಂಡು ಅಕ್ಷರ ದಾಸೋಹ ಯೋಜನೆ ಆರಂಭಗೊಂಡ ನಂತರ ಶಿಕ್ಷಣ ಇಲಾಖೆಯು ಅಕ್ಕಿ, ಗೋಧಿ ಬಿಟ್ಟು ಇತರ ಆಹಾರ ಪದಾರ್ಥಗಳನ್ನು ಪೂರೈಸದಿರುವುದರಿಂದ ಮುಖ್ಯ ಶಿಕ್ಷಕರು, ಶಿಕ್ಷಕರ ಮೇಲೆ ಆರ್ಥಿಕವಾಗಿ ಹೊರೆ ಬಿದ್ದಿದೆ.

ಶಿಕ್ಷಣ ಇಲಾಖೆಯು ಅಕ್ಕಿ, ಗೋಧಿಯೊಂದಿಗೆ ಬಿಸಿಯೂಟಕ್ಕೆ ಬೇಕಾದ ಬೇಳೆ, ಎಣ್ಣೆ, ಉಪ್ಪನ್ನು‌ಶಾಲೆಗಳಿಗೆ ಮುಂಚಿತವಾಗಿಯೇ ಪೂರೈಸುತ್ತದೆ. ತರಕಾರಿ, ಸಾಂಬಾರು ಪುಡಿ, ಸಕ್ಕರೆ, ಅಡುಗೆ ಅನಿಲ ಮುಂತಾದ ವಸ್ತುಗಳ ಖರೀದಿಗೆ ಮುಖ್ಯಶಿಕ್ಷಕರ ಖಾತೆಗೆ ಹಣ ಜಮೆ ಮಾಡುತ್ತದೆ.

ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅ.21ರಿಂದ 6ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತಿದೆ. ನ.2ರಿಂದ 1ರಿಂದ 5ನೇ ತರಗತಿಯ ಮಕ್ಕಳಿಗೂ ಬಿಸಿಯೂಟ ನೀಡಲಾಗುತ್ತಿದೆ.

ಅನುದಾನದ ಕೊರತೆ ಎದುರಿಸುತ್ತಿರುವ ಶಿಕ್ಷಣ ಇಲಾಖೆ, ಬಿಸಿಯೂಟಕ್ಕಾಗಿ ಅಕ್ಕಿ, ಗೋಧಿ ಮಾತ್ರ ಪೂರೈಸಿದೆ. ತೊಗರಿಬೇಳೆ, ಎಣ್ಣೆ, ಉಪ್ಪು, ತರಕಾರಿ, ಸಾಂಬಾರು ಪುಡಿ ಸೇರಿದಂತೆ ಇತರೆ ವಸ್ತುಗಳನ್ನು ಲಭ್ಯವಿರುವ ಅನುದಾನದಲ್ಲಿ ಖರೀದಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದೆ. ಅನುದಾನ ಲಭ್ಯವಿರದ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ತಿಂಗಳಿಗೂ ಹೆಚ್ಚು ಸಮಯದಿಂದ ತಮ್ಮ ಕೈಯಿಂದ ದುಡ್ಡು ಹಾಕಿ ದಿನಸಿ ಸಾಮಗ್ರಿ, ತರಕಾರಿ ಖರೀದಿಸುತ್ತಿದ್ದಾರೆ.

ಇಲಾಖೆಯು ಹಣ ಪಾವತಿಸುವ ಖಾತರಿ ಇದ್ದರೂ, ಖರೀದಿಗೆ ಹಣ ಹೊಂದಿಸಲು ಶಿಕ್ಷಕರು ಪ್ರಯಾಸ ಪಡುತ್ತಿದ್ದಾರೆ. ‍ಅಡುಗೆ ಎಣ್ಣೆ, ಟೊಮೆಟೊ, ಬೀನ್ಸ್‌ ಸೇರಿದಂತೆ ತರಕಾರಿಗಳ ಬೆಲೆ ಹೆಚ್ಚಿರುವುದು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

‘ಪ್ರತಿ ವಿದ್ಯಾರ್ಥಿಗೆ ನಿಗದಿ ಪಡಿಸಿದ ಖರ್ಚಿನ ಲೆಕ್ಕಾಚಾರದಲ್ಲಿ ಸಾಕಷ್ಟು ತರಕಾರಿ, ಎಣ್ಣೆ ಖರೀದಿಸಲು ಸಾಧ್ಯವಾಗದಿರುವುದರಿಂದ ಬಿಸಿಯೂಟದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಹೇಳುತ್ತಾರೆ ಶಿಕ್ಷಕರು.

‘ಟೊಮೆಟೊ, ಬೀನ್ಸ್‌ ಇಲ್ಲದೆ ತರಕಾರಿ ಸಾಂಬಾರ್‌ ಮಾಡಲಾಗದು. ವಾರದ ಹಿಂದೆ ಟೊಮೆಟೊ ಬೆಲೆ ಕೆ.ಜಿಗೆ ₹ 100 ಆಗಿತ್ತು. ಬೀನ್ಸ್‌ ಬೆಲೆಯೂ ₹ 70ರಿಂದ ₹ 80 ಇದೆ. ಬೇಳೆ, ಎಣ್ಣೆಯೂ ದುಬಾರಿ. ಶಾಲೆಯಲ್ಲಿ ಕಡಿಮೆಮಕ್ಕಳಿದ್ದರೆ ತೊಂದರೆ ಇಲ್ಲ. ಪ್ರೌಢಶಾಲೆಗಳಲ್ಲಿ ಹೆಚ್ಚು ಮಕ್ಕಳಿರುತ್ತಾರೆ. 400ಕ್ಕಿಂತ ಹೆಚ್ಚಿದ್ದರೆ ಈಗಿನ ಬೆಲೆಯಲ್ಲಿ, ವಸ್ತುಗಳ ಖರೀದಿಗೆ ದಿನಕ್ಕೆ ₹ 1 ಸಾವಿರದಿಂದ ₹ 1,500 ಬೇಕು’ ಎಂದು ಮುಖ್ಯ ಶಿಕ್ಷಕರೊಬ್ಬರು ತಿಳಿಸಿದರು.

ಪ್ರತಿ ವಿದ್ಯಾರ್ಥಿಯ ಖರ್ಚಿನ ಲೆಕ್ಕ

ಬಿಸಿಯೂಟಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಮಾಡುವ ಖರ್ಚನ್ನು ಇಲಾಖೆ ನಿಗದಿ ಪಡಿಸಿದೆ.

1ರಿಂದ 5ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ ತೊಗರಿ ಬೇಳೆಗೆ ₹ 2, ಅಡುಗೆ ಎಣ್ಣೆಗೆ 48 ಪೈಸೆ, ತರಕಾರಿಗೆ ₹ 1.36, ಉಪ್ಪಿಗೆ 3 ಪೈಸೆ, ಸಾಂಬಾರು ಪುಡಿಗೆ 35 ಪೈಸೆ ನಿಗದಿಪಡಿಸಲಾಗಿದೆ.

6ರಿಂದ 10ನೇ ತರಗತಿಗಳಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಗೆ ತೊಗರಿಬೇಳೆಗೆ ₹ 2.95, ಅಡುಗೆ ಎಣ್ಣೆಗೆ 67 ಪೈಸೆ, ತರಕಾರಿಗಳಿಗೆ ₹ 2.04, ಉಪ್ಪಿಗೆ 6 ಪೈಸೆ ಮತ್ತು ಸಾಂಬಾರು ಪುಡಿಗೆ 54 ಪೈಸೆ ಖರ್ಚು ಮಾಡಬಹುದು.

* ಲಭ್ಯವಿರುವ ಅನುದಾನದಲ್ಲಿ ಪದಾರ್ಥಗಳನ್ನು ಖರೀದಿಸುವಂತೆ ಸೂಚಿಸಲಾಗಿತ್ತು. ಈಗ ಬೇಳೆ, ಎಣ್ಣೆ, ಉಪ್ಪು ಬಂದಿವೆ. ಶಾಲೆಗಳಿಗೆ ಕಳುಹಿಸಲಾಗುತ್ತಿದೆ.

–ಗುರುಲಿಂಗಯ್ಯ, ಅಕ್ಷರ ದಾಸೋಹ ಅಧಿಕಾರಿ, ಚಾಮರಾಜನಗರ

* ಮಧ್ಯಾಹ್ನದ ಬಿಸಿಯೂಟಕ್ಕಾಗಿ ಇಲಾಖೆ ಈಗ ಬೇಳೆ, ಎಣ್ಣೆ, ಉಪ್ಪು ಪೂರೈಸಿದೆ. ಎಲ್ಲ ಶಾಲೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ

–ಎಸ್‌.ಎನ್‌.ಮಂಜುನಾಥ್‌, ಡಿಡಿಪಿಐ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT