ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಹರ್ಷೋದ್ಘಾರದ ನಡುವೆ ಮಾದಪ್ಪನ ರಥೋತ್ಸವ

ಮಹದೇಶ್ವರ ಬೆಟ್ಟ: ಕೊಂಡೋತ್ಸವದೊಂದಿಗೆ ಮಹಾಶಿವ ರಾತ್ರಿ ಜಾತ್ರೋತ್ಸವಕ್ಕೆ ವಿಜೃಂಭಣೆಯ ತೆರೆ
Last Updated 25 ಫೆಬ್ರುವರಿ 2020, 10:05 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ/ಹನೂರು: ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಏಳು ಬೆಟ್ಟದ ಒಡೆಯ ಮಲೆಮಹದೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಸೋಮವಾರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ತೇರು ಎಳೆಯವುದಕ್ಕೂ ಮುನ್ನ ಬೆಳಿಗ್ಗೆ 9:50ಕ್ಕೆ ಬೇಡಗಂಪಣ ಸಮುದಾಯದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಯಿತು. ನಂತರದ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಪೂಜೆಸಲ್ಲಿಸಿ ದೇವಾಲಯದಸುತ್ತಲೂ ಪ್ರದಕ್ಷಿಣೆಹಾಕಲಾಯಿತು.

ನಂತರಬೇಡಗಂಪಣ ಸಮುದಾಯದ ನೂರೊಂದು ಹೆಣ್ಣು ಮಕ್ಕಳು ಬೆಲ್ಲದ ಆರತಿಯೊಂದಿಗೆ ಸಾಲೂರು ಬೃಹನ್ಮಠದ ಮಠಾಧೀಶರಾದ ಗುರುಸ್ವಾಮಿಗಳ ನೇತೃತ್ವದಲ್ಲಿ ಬಗೆಬಗೆಯಹೂ, ಬಾಳೆದಿಂಡುಗಳಿಂದ ಸಿಂಗರಿಸಿದ್ದ ಮಹಾರಥಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವಮೂರ್ತಿಯನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಾಲೂರು ಮಠದ ಗುರುಸ್ವಾಮಿ ಅವರು ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ತೇರು ಎಳೆಯಲು ಪ್ರಾರಂಭಿಸುತ್ತಿದ್ದಂತೆ ‘ಮಹಾದೇಶ್ವರಗೇ ಉಘೇ, ಎಪ್ಪತ್ತೇಳು ಮಲೆಯಲಿ ನಲಿದು ನಾಟ್ಯವಾಡುತ್ತಿರುವ ಮುದ್ದು ಮಾದಪ್ಪನಿಗೆ ಉಘೇ, ಉಘೇ ಉಘೇ ಮಾದಪ್ಪ’ ಎಂಬ ಘೋಷಣೆಗಳು ಕ್ಷೇತ್ರದಾದ್ಯಂತ ಮಾರ್ದನಿಸಿತು.

ದೇವಾಲಯದ ದಕ್ಷಿಣ ದಿಕ್ಕಿನಿಂದ ಪ್ರಾರಂಭವಾದ ರಥವು ದೇವಾಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿತು.ದೇವಾಲಯದ ಮುಂಭಾಗ ನೆರೆದಿದ್ದ ಭಕ್ತರು ರಥವನ್ನು ಉತ್ಸಾಹದಿಂದ ಎಳೆಯುವ ಮೂಲಕ ಸಂಭ್ರಮಿಸಿದರು.ತೇರು ಸಾಗುರುವಾಗ ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು, ಜವನ, ಧವಸ ಧಾನ್ಯ ಕಾಳುಗಳನ್ನು ಎಸೆಯುವ ಮೂಲಕ ತಮ್ಮ ತಮ್ಮ ಹರಕೆ ತೀರಿಸಿದರು.

ಬಿಳಿ ಆನೆ ದೇವರ ಉತ್ಸವ: ಇದಕ್ಕೂ ಮೊದಲು ಮಲೆ ಮಹದೇಶ್ವರ ಸ್ವಾಮಿಯ ಬೇಡಗಂಪಣ ಅರ್ಚಕರು ಸಾಂಪ್ರದಾಯಿಕವಾಗಿ ಬಿಳಿ ಆನೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟು, ಹೆಗಲ ಮೇಲೆ ಹೊತ್ತು ದೇವಸ್ಥಾನದ ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಹಾಕಿದರು.

ಗಮನ ಸೆಳೆದ ಕಲಾತಂಡಗಳು:ಇದೇ ಮೊದಲ ಬಾರಿಗೆ ಪ್ರಾಧಿಕಾರದ ವತಿಯಿಂದ ಕಲಾತಂಡಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ವಾದ್ಯ ಮೇಳ, ತಮಟೆ, ನಗಾರಿ ಸದ್ದಿನೊಂದಿಗೆ ಮಹಾರಥೋತ್ಸವ ಕಳೆಕಟ್ಟಿದ್ದರೆ,ವಿವಿಧ ಜಿಲ್ಲೆಗಳಿಂದ ಬಂದಿದ್ದರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಕಲಾತಂಡಗಳು ಡೊಳ್ಳುಕುಣಿತ, ನಂದಿಧ್ವಜ, ಬೀಸುಕಂಸಾಳೆ, ವೀರಗಾಸೆ ನೃತ್ಯ, ಮಾರಿ ಕುಣಿತ, ಕಂಸಾಳೆ ಕುಣಿತ, ಕೀಲುಗೊಂಬೆ ಹಾಗೂ ಇನ್ನಿತರ ನೃತ್ಯಗಳನ್ನು ಪ್ರದರ್ಶಿಸಿ ಉತ್ಸವಕ್ಕೆ ಇನ್ನಷ್ಟು ಮೆರುಗು ತಂದವು.

ಸೋಮವಾರ ರಾತ್ರಿ ದೇವಸ್ಥಾನದ ರಾಜಗೋಪುರ ಮುಂಭಾಗ ಕೊಂಡೋತ್ಸವವನ್ನು ನೆರೆವೇರುವ ಮೂಲಕ ಐದು ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

ಐದು ದಿನಗಳಲ್ಲಿ ₹ 3 ಕೋಟಿ ಆದಾಯ

ಹುಂಡಿಯ ಆದಾಯ, ದಾಸೋಹಕ್ಕೆ ಭಕ್ತರು ನೀಡಿರುವ ಧವಸ ಧಾನ್ಯಗಳು ಹಾಗೂ ತರಕಾರಿಗಳ ಮೌಲ್ಯಗಳನ್ನು ಬಿಟ್ಟು, ಜಾತ್ರೋತ್ಸವದ ಐದು ದಿನಗಳಲ್ಲಿ ಒಟ್ಟು 3.06 ಕೋಟಿ ಆದಾಯ ಬಂದಿದೆ.ಕಳೆದ ವರ್ಷದ ಶಿವರಾತ್ರಿ ಜಾತ್ರೆಯಲ್ಲಿ ₹ 2.57 ಕೋಟಿ ಆದಾಯ ಬಂದಿತ್ತು.

ಜಾತ್ರೆ ಮುಗಿದಿದ್ದರೂ ಇನ್ನೂ ಎರಡು ದಿನಗಳ ಜಾತ್ರೆಯ ಅಂಗವಾಗಿ ಹೆಚ್ಚು ಬರಲಿದ್ದು, ಒಟ್ಟು ಆದಾಯ ಇನ್ನಷ್ಟು ಹೆಚ್ಚಾಗಲಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ7 ರಿಂದ 8 ಲಕ್ಷದಷ್ಟು ಮಂದಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು, ‘ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಪ್ರಾಧಿಕಾರದ ವತಿಯಿಂದ ಎಲ್ಲ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

‘ಈ ಬಾರಿ ಮಹಾರಥೋತ್ಸವ ಹೊಸ ರೂಪದೊಂದಿಗೆ ನಡೆದಿದೆ. ಈ ಹಿಂದೆ, ಇದ್ದ ರಥವನ್ನೇ ಸಿಂಗರಿಸಿ ರಥೋತ್ಸವ ನಡೆಸಲಾಗುತ್ತಿತ್ತು. ರಥವನ್ನು ಪರಿಶೀಲಿಸಿದಾಗ ಕೆಲವು ದೋಷಗಳು ಕಂಡು ಬಂದಿತ್ತು. ಇದನ್ನು ಮನಗಂಡು ಸತತ ಒಂದು ವಾರ ರಥದ ದುರಸ್ತಿ ಕಾರ್ಯ ಮುಗಿಸಿ ರಥವನ್ನು ಪುನರುಜ್ಜೀವನಗೊಳಿಸಿ ಈ ಬಾರಿ ಉತ್ಸವ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT