ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಸರಳ ಯುಗಾದಿ ಜಾತ್ರೆ

ಧಾರ್ಮಿಕ ವಿಧಿ ವಿಧಾನಗಳು ಅಬಾಧಿತ, ಸ್ಥಳೀಯರಿಗಷ್ಟೇ ಭಾಗವಹಿಸಲು ಅವಕಾಶ, ದಶಕಗಳಲ್ಲಿ ಇದೇ ಮೊದಲು
Last Updated 16 ಮಾರ್ಚ್ 2020, 15:40 IST
ಅಕ್ಷರ ಗಾತ್ರ

ಹನೂರು: ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮಹದೇಶ್ವರ ಬೆಟ್ಟದಲ್ಲಿ ಈ ಬಾರಿಯ ಯುಗಾದಿ ಜಾತ್ರೆಯನ್ನು ಸ್ಥಳೀಯವಾಗಿ, ಸರಳವಾಗಿ ಮತ್ತು ಸಂಪ್ರದಾಯ ಬದ್ಧವಾಗಿ ನಡೆಸಲು ನಿರ್ಧರಿಸಲಾಗಿದೆ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುವ ಜಾತ್ರೆ, ರಥೋತ್ಸವಗಳನ್ನು ಸರಳವಾಗಿ ಆಚರಿಸುತ್ತಿರುವುದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು ಎಂದು ಸ್ಥಳೀಯ ಅರ್ಚಕರು ಹೇಳುತ್ತಾರೆ.

ಇದೇ 21ರಂದು ಜಾತ್ರೆ ಆರಂಭವಾಗಲಿದ್ದು, ವೇಳಾಪಟ್ಟಿ ಪ್ರಕಾರ 25ರ ವರೆಗೂ ನಡೆಯಲಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸರಳವಾಗಿ, ಸ್ಥಳೀಯವಾಗಿ, ಸಂಪ್ರದಾಯಿಕವಾಗಿ ನಡೆಸಲಾಗುವುದು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ಮಾಡುವ ಎಲ್ಲ ಧಾರ್ಮಿಕ ವಿಧಿ ವಿಧಾನಗಳೂ ನಡೆಯಲಿವೆ. ರಥೋತ್ಸವವೂ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಹೊರಗಡೆಯಿಂದ ಭಕ್ತರು ಭಾಗವಹಿಸುವುದಕ್ಕೆ ಅವಕಾಶವಿಲ್ಲ.

‘ಜಾತ್ರೆಯಲ್ಲಿ ಹೆಚ್ಚಿನ ಜನರು ಸೇರುವುದರಿಂದ ಕೊರೊನಾ ಸೋಂಕು ಹರಡುವ ಸಂಭವವಿದೆ. ಇದನ್ನು ತಡೆಗಟ್ಟುವ ಸಲುವಾಗಿ ಹಾಗೂ ಭಕ್ತರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ವಹಿಸಲಾಗಿದೆ. ಮಹಾರಥೋತ್ಸವ, ಚಿನ್ನದ ತೇರು ಹಾಗೂ ಇನ್ನಿತರ ಉತ್ಸವಗಳು ಯಥಾಸ್ಥಿತಿ ನಡೆಯಲಿವೆ. ಮಹಾರಥಾ ಹಾಗೂ ಚಿನ್ನದ ತೇರನ್ನು ಎಳೆಯುವ ಜವಾಬ್ದಾರಿಯನ್ನು ಸ್ಥಳೀಯರಿಗೆ ವಹಿಸುವ ಮೂಲಕ, ಸ್ಥಳೀಯವಾಗಿ ಸರಳವಾಗಿ ಈ ಜಾತ್ರೆ ನಡೆಯಲಿದೆ’ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಕ್ಷಾಂತರ ಜನರು ಭಾಗಿ:ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ಕ್ಷೇತ್ರಕ್ಕೆ ವರ್ಷವಿಡೀ ಆಗಮಿಸುತ್ತಾರೆ. ಜಾತ್ರೆಗಳ ಸಮಯದಲ್ಲಿ ಲಕ್ಷಾಂತರ ಜನರು ಬರುತ್ತಾರೆ. ಫೆಬ್ರುವರಿ ತಿಂಗಳಲ್ಲಿ ನಡೆದ ಶಿವರಾತ್ರಿ ಜಾತ್ರೆಯಲ್ಲಿ ಏಳು ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದರು. ಆರು ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಿತ್ತು.

ಯುಗಾದಿಗೆ ತಮಿಳರೇ ಅಧಿಕ: ವರ್ಷದಲ್ಲಿ ನಡೆಯುವ ನಾಲ್ಕು ಜಾತ್ರೆಗಳ ಪೈಕಿ ಯುಗಾದಿ ಜಾತ್ರೆಯಲ್ಲಿ ತಮಿಳರದೇ ಸಿಂಹಪಾಲು. ಯುಗಾದಿ ಮುಗಿದ ಬಳಿಕ ತಮಿಳುನಾಡಿನಲ್ಲಿ ಚಿತ್ರಮಾಸ ಬರುವವರೆಗೂ ತಿಂಗಳು ಪೂರ್ತಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಬಾರಿ ಅವರು ಕೂಡ ಮಾದಪ್ಪನ ದರ್ಶನಕ್ಕೆ ಬರುವಂತಿಲ್ಲ.

ಆದಾಯಕ್ಕೆ ಕತ್ತರಿ: ಸರಳ ಜಾತ್ರೆ ನಡೆಸುವ ಕಾರಣಕ್ಕೆಬೆಟ್ಟದಲ್ಲಿ ವಸತಿ ಗೃಹಗಳು, ಡಾರ್ಮೆಟರಿ ಸೌಲಭ್ಯ, ರಂಗಮಂದಿರ ಸಮೀಪ ಹಾಗೂ ದೇವಸ್ಥಾನ ಮುಂಭಾಗ ಟೆಂಟ್ ಹಾಕುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ದೇವಾಲಯದ ಆದಾಯಕ್ಕೂ ಕತ್ತರಿ ಬೀಳಲಿದೆ.

ವಾರಾಂತ್ಯ, ವಾರದ ದಿನಗಳಲ್ಲಿ ಭಕ್ತರಿಂದ ಗಿಜಿಗುಡುತ್ತಿದ್ದ ಬೆಟ್ಟ ಮೂರ್ನಾಲ್ಕು ದಿನಗಳಿಂದ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಸೋಮವಾರವಂತು ಬೆರಳೆಣಿಕೆಯಷ್ಟೇ ಜನರಿದ್ದರು.

‘ಭಕ್ತರ ಹಿತದೃಷ್ಟಿಯಿಂದ ಜಾತ್ರೆ ನಡೆಸದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ನಾವು ಗೌರವಿಸುತ್ತೇವೆ. ಮಹದೇಶ್ವರ ಬೆಟ್ಟದಲ್ಲಿ ಇದುವರೆಗೂ ಒಮ್ಮೆಯೂ ಧಾರ್ಮಿಕ ಕಾರ್ಯಗಳು ನಿಂತಿಲ್ಲ. ಈ ಬಾರಿಯ ಜಾತ್ರೆಯಲ್ಲೂ ದೇವಾಲಯದೊಳಗೆ ಯಥಾಸ್ಥಿತಿ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ನಡೆಯಲಿವೆ’ ಎಂದು ಆರ್ಚಕ ಪುಟ್ಟಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಕರಿಸಿ: ಭಕ್ತರಿಗೆ ಸಚಿವರ ಮನವಿ

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಹದೇಶ್ವರ ಬೆಟ್ಟದಲ್ಲಿ ಸರಳವಾಗಿ ಯುಗಾದಿ ಜಾತ್ರೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದ್ದು,ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತ ಸಮೂಹ ದೇವಾಲಯದ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಮನವಿ ಮಾಡಿದ್ದಾರೆ.

‘ಈಗಾಗಲೇ ಜಾತ್ರೆ, ಪರಿಷೆ, ಉತ್ಸವ ಹಾಗೂ ಹೆಚ್ಚು ಜನ ಸೇರುವ ಮದುವೆಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆ ನೂರಾರು ವರ್ಷಗಳಿಂದಲೂ ನಡೆಯುತ್ತಿರುವುದರಿಂದ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಶ್ರೀ ಕ್ಷೇತ್ರದಲ್ಲಿ ಆರೋಗ್ಯಕರ ಪರಿಸರ ನಿರ್ಮಾಣ ಮತ್ತು ಸೋಂಕು ಹರಡುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಭಕ್ತರ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯ, ಹೊರರಾಜ್ಯಗಳಿಂದ ಬರುವ ಭಕ್ತರು ಜಾತ್ರೆಯಲ್ಲಿ ಒಂದೇ ಕಡೆ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಜಾತ್ರೆಯನ್ನು ವೈಭವಯುತವಾಗಿ ನಡೆಸದಂತೆ ಜಿಲ್ಲಾಡಳಿತ ನೀಡಿರುವ ಆದೇಶ ಸ್ವಾಗತಾರ್ಹ. ಆದೇಶವನ್ನು ಎಲ್ಲರೂ ಗೌರವಿಸುವುದರ ಜೊತೆಗೆ ತಮ್ಮ ತಮ್ಮ ಊರುಗಳಲ್ಲೇ ಮಾದೇಶ್ವರರನ್ನು ಪೂಜಿಸುವ ಮೂಲಕ ಇದಕ್ಕೆ ಸಹಕರಿಸಬೇಕು’ ಎಂದು ಬೆಟ್ಟದಲ್ಲಿರುವ ಸಾಲೂರು ಮಠದ ಗುರುಸ್ವಾಮಿ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT