ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಂರಕ್ಷಿತ ಪ್ರದೇಶ: ಘೋಷಣೆಗೆ ಮೀನ–ಮೇಷ

ಮಲೆ ಮಹದೇಶ್ವರ ವನ್ಯಧಾಮ; ಮುಖ್ಯಮಂತ್ರಿ ಅಂಗಳದಲ್ಲಿ ಚೆಂಡು
Last Updated 6 ಮೇ 2022, 23:30 IST
ಅಕ್ಷರ ಗಾತ್ರ

ಹನೂರು: ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು; ಕೆಲವು ಸಚಿವರ ವಿರೋಧದಿಂದಾಗಿ, ಈ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವೇಚನೆಗೆ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘೋಷಣೆಗೆ ಸಂಬಂಧಿಸಿದ ಕಡತ ಮುಖ್ಯಮಂತ್ರಿ ಕಚೇರಿಯಲ್ಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ 906 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಪ್ರಸ್ತಾವವನ್ನು 2017-18ರಲ್ಲಿ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿಪ್ರಿಯಾ ಕಳುಹಿಸಿದ್ದರು. ಇಲಾಖೆಯು ಇದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ಕಳುಹಿಸಿತ್ತು.

ವನ್ಯಧಾಮದ ಭೂಪ್ರದೇಶ, ವಾತಾವರಣವನ್ನು ಅಧ್ಯಯನ ಮಾಡಿದ್ದ ಪ್ರಾಧಿಕಾರವು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು 2020-21ರಲ್ಲಿ ಒಪ್ಪಿಗೆ ಸೂಚಿಸಿತ್ತು. ಅಧಿಕೃತವಾಗಿ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಹಿ ಬೀಳುವುದೊಂದೇ ಬಾಕಿ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಈ ವಿಚಾರ ಎರಡು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ‌ಬಂದಿದೆ. ಒಂದು ಸಭೆಯಲ್ಲಿ ವಿಷಯವನ್ನು ಮುಂದಕ್ಕೆ ಹಾಕಲಾಗಿತ್ತು. ಎರಡನೇ ಬಾರಿ ಇಬ್ಬರು ಸಚಿವರು ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ತಿಳಿದು ಬಂದಿದೆ.

ಘೋಷಣೆ ಮಾಡಿದರೆ ಸ್ಥಳೀಯರಿಗೆ ಹಾಗೂ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ, ಬೆಟ್ಟದ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ವಾದಿಸಿದ್ದರು. ಹಾಗಾಗಿ ಸಂಪುಟದಲ್ಲಿ ತೀರ್ಮಾನವಾಗಿಲ್ಲ. ಆ ಬಳಿಕ, ಈ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

20ಕ್ಕೂ ಹೆಚ್ಚು ಹುಲಿಗಳು: ವನ್ಯಧಾಮವು ಸತ್ಯಮಂಗಲ, ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬರಗೂರು ಮೀಸಲು ಅರಣ್ಯದ ಜತೆ ಸಖ್ಯ ಬೆಳೆಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮೀಸಲು ಅರಣ್ಯವನ್ನು ವನ್ಯಧಾಮವೆಂದು ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಈ ಕಾಡಿನಲ್ಲಿ ಐದರಿಂದ ಆರು ಹುಲಿಗಳಿರಬಹುದು ಎಂದು ಅಂದಾಜಿಸಲಾಗಿತ್ತು. 2018ರಲ್ಲಿ ನಡೆದ ಹುಲಿಗಣತಿ ಸಂದರ್ಭದಲ್ಲಿ 12 ಹುಲಿಗಳಿರುವುದು ಖಚಿತವಾಗಿತ್ತು.

‘ಈಗ 20ಕ್ಕೂ ಹೆಚ್ಚು ಹುಲಿಗಳಿರಬಹುದು. ಈ ಹಿಂದೆ ಗೋಚರಿಸದ ಸ್ಥಳಗಳಲ್ಲಿ ಹುಲಿಗಳು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ವಿಳಂಬ ಏಕೆ?

ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಬೇಕು ಎಂಬ ಪ್ರಸ್ತಾವವನ್ನು ಅಧಿಕಾರಿಗಳು ಕಳುಹಿಸಿದ್ದ ಸಂದರ್ಭದಲ್ಲಿ ಸೋಲಿಗ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು. ಆ ಬಳಿಕ ಅವರಿಂದ ವಿರೋಧ ಕಂಡು ಬಂದಿಲ್ಲ.

ವನ್ಯಧಾಮದ ವ್ಯಾಪ್ತಿಯಲ್ಲಿ ಮಹದೇಶ್ವರ ಬೆಟ್ಟ ಇದೆ. ಜೊತೆಗೆ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಹಾದು ಹೋಗಿರುವುದರಿಂದ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದ ನಂತರ ನಿಯಮಗಳು ಇನ್ನಷ್ಟು ಬಿಗಿಯಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಬಹುದೇ (ರಾತ್ರಿ ಸಂಚಾರ ನಿಷೇಧದಂತಹ ಕ್ರಮಗಳಿಂದ) ಎಂಬ ಆತಂಕ ಭಕ್ತರಲ್ಲಿ ಹಾಗೂ ಕೆಲವು ಅಧಿಕಾರಿಗಳಲ್ಲೂ ಇದೆ. ಹೀಗಾಗಿ, ಈಗಿನ ವ್ಯವಸ್ಥೆಯೇ ಮುಂದುವರಿಯಲಿ ಎಂದು ಸರ್ಕಾರದ ಮೇಲೆ ಒತ್ತಡವನ್ನೂ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗುವುದರಿಂದ ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ಬದಲಿಗೆ, ಅರಣ್ಯ, ಹುಲಿಗಳ ಸಂರಕ್ಷಣಾ ಕಾರ್ಯಕ್ಕೆ ಇನ್ನಷ್ಟು ಬಲ ಸಿಗಲಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಘೋಷಣೆಗೆ ಸಂಬಂಧಿಸಿದ ಕಡತ ಮುಖ್ಯಮಂತ್ರಿ ಕಚೇರಿಯಲ್ಲಿದೆ. ಇನ್ನೊಂದು ತಿಂಗಳಲ್ಲಿ ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶ ಆಗುವ ವಿಶ್ವಾಸವಿದೆ.
ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT