ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಾವಯವ ರೈತರ ‘ನಮ್ದು’ ಬ್ರ್ಯಾಂಡ್‌

ರೈತರಿಂದಲೇ ನೇರ ಮಾರುಕಟ್ಟೆ ವ್ಯವಸ್ಥೆ, ಪ್ರೊ.ನಂಜುಂಡಸ್ವಾಮಿ ಕನಸು ಸಾಕಾರ
Last Updated 1 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಧ್ಯವರ್ತಿಗಳ ಕಾಟವಿಲ್ಲದೇ ರೈತರೇ ತಮ್ಮ ಉತ್ಪನ್ನಗಳನ್ನುನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಪ್ರತ್ಯೇಕ ಬ್ರ್ಯಾಂಡಿನ ಅಡಿಯಲ್ಲಿ ಅದನ್ನು ಗ್ರಾಹಕರಿಗೆ ತಲುಪಿಸಬೇಕು’ ಎಂಬುದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಆಶಯವಾಗಿತ್ತು. ಬ್ರ್ಯಾಂಡ್‌ಗೆ ‘ನಮ್ದು’ ಎಂಬ ಹೆಸರನ್ನೂ ಅವರು ನೀಡಿದ್ದರು. ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತ ಗುಂಪುಗಳು ಅವರ ಕನಸನ್ನು ಸಾಕಾರ ಮಾಡಲು ಈಗ ಮುಂದಾಗಿವೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ, ಮೈಸೂರಿನ ನಿಸರ್ಗ ಟ್ರಸ್ಟ್‌, ಯಳಂದೂರು ತಾಲ್ಲೂಕಿನ ಹೊನ್ನೂರಿನ ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಮೇಲಾಜಿಪುರದ ಗುರುಮಲ್ಲೇಶ್ವರ ಸಾವಯವ ಕೃಷಿಕರ ಸಂಘ, ಹನೂರು ತಾಲ್ಲೂಕಿನ ವಡಕೆಹಳ್ಳದ ಮಹದೇಶ್ವರ ಜಿಲ್ಲಾ ಸಾವಯವ ಕೃಷಿಕರ ಸಂಘಗಳು ಒಟ್ಟಾಗಿ‘ನಮ್ದು’ ಹೆಸರಿನ ಬ್ರ್ಯಾಂಡ್‌ ಸೃಷ್ಟಿಸಿದ್ದು, ಗಾಂಧಿ ಜಯಂತಿಯಂದು (ಶುಕ್ರವಾರ) ಲೋಕಾರ್ಪಣೆಗೊಳ್ಳಲಿದೆ.

ಅದರ ಜೊತೆಗೆ, ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ವಿಷಮುಕ್ತ ಆಹಾರೋತ್ಪನ್ನಗಳ ನೇರ ಮಾರಾಟ ಮಳಿಗೆಯ ಉದ್ಘಾಟನೆಯೂ ನೆರವೇರಲಿದೆ.

ರಾಜ್ಯ ಮಟ್ಟದ ವೇದಿಕೆ: ಹೊಸ ಪ್ರಯತ್ನದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅಮೃತಭೂಮಿಯ ಕಾರ್ಯನಿರ್ವಾಹಕ ಧರ್ಮದರ್ಶಿ ಚುಕ್ಕಿ ನಂಜುಂಡಸ್ವಾಮಿ ಅವರು, ‘ಸರ್ಕಾರಗಳು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ , ಎಪಿಎಂಸಿ ತಿದ್ದುಪಡಿ ಕಾಯ್ದೆಯಂತಹ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ದೇಶದ ರೈತರ ಅಸ್ತಿತ್ವಕ್ಕೆ ಪೆಟ್ಟು ನೀಡಿದೆ. ಕೇವಲ ಹೋರಾಟ, ಚಳವಳಿಗಳ ಮೂಲಕ ಇದಕ್ಕೆ ಪ್ರತಿರೋಧ ಒಡ್ಡಿದರೆ ಸಾಕಾಗುವುದಿಲ್ಲ. ಪರ್ಯಾಯ ಕೆಲಸಗಳ ಬಗ್ಗೆ ಯೋಚನೆ ಮಾಡಬೇಕು. ‘ನಮ್ದು’ ಬ್ರ್ಯಾಂಡ್‌ ಹಾಗೂ ಆಹಾರೋತ್ಪನ್ನ ಮಾರಾಟ ಮಳಿಗೆಯು ಆ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ’ ಎಂದು ಹೇಳಿದರು.

‘ಅರ್ಥ ವ್ಯವಸ್ಥೆ ನಮ್ಮ ಕೈಯಲ್ಲಿ ಇರಬೇಕು. ಅದು ನಮ್ಮ ಕೈಯಲ್ಲಿ ಇದ್ದರೆ ಏನು ಬೇಕಾದರೂ ಮಾಡಬಹುದು. ಸಂಪನ್ಮೂಲಗಳು ನಮ್ಮ ನಿಯಂತ್ರಣದಲ್ಲೇ ಇರಬೇಕು. ಈ ಮೂಲಕ ನಾವು ಸರ್ಕಾರಗಳಿಗೆ ಪ್ರತಿರೋಧ ತೋರಬಹುದು’ ಎಂದು ಅವರು ಹೇಳಿದರು.

‘ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ 15 ಜಿಲ್ಲೆಗಳ ರೈತರ ಗುಂಪುಗಳು ಈ ಕಾರ್ಯದಲ್ಲಿ ಭಾಗಿಯಾಗಿವೆ. ಕೆಲವು ಸಾವಯವ ಕೃಷಿಕರೂ ಕೈಜೋಡಿಸಿದ್ದಾರೆ. ಉತ್ಪಾದಕರ ಕಂಪನಿಯನ್ನು ರಚಿಸಿ ‘ನಮ್ದು’ ಬ್ರ್ಯಾಂಡ್‌ ರೂಪಿಸಲಾಗಿದೆ. ರಾಜ್ಯ ಮಟ್ಟದ ವೇದಿಕೆ ಇದಾಗಿದ್ದು, ಆರಂಭದಲ್ಲಿ ಚಾಮರಾಜನಗರದಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಹಂತ ಹಂತವಾಗಿ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಉಳಿದ ಜಿಲ್ಲೆಗಳ ರೈತರೊಂದಿಗೆ ಹಾಗೂ ಸಂಘಗಳೊಂದಿಗೂ ಮಾತುಕತೆ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಸಾವಯವ ಕೃಷಿ ಉತ್ಪನ್ನಗಳು ಲಭ್ಯ

‘ಮಧ್ಯವರ್ತಿಗಳ ಹಾವಳಿ ಇಲ್ಲದೇ ಕೃಷಿ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪಬೇಕು ಎಂಬುದುನಮ್ಮ ನಾಯಕರಾಗಿದ್ದ ಪ್ರೊ.ನಂಜುಂಡಸ್ವಾಮಿ ಅವರ ಕನಸಾಗಿತ್ತು. ಈ ವ್ಯವಸ್ಥೆ ಸಹಕಾರ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಆಶಯವನ್ನು ಈಡೇರಿಸುವ ಪ್ರಯತ್ನ ಇದು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿರಿಧಾನ್ಯಗಳು, ಬೆಲ್ಲ, ಅಕ್ಕಿ, ಎಣ್ಣೆ, ಬೇಳೆಕಾಳುಗಳು, ತರಕಾರಿ ಸೊಪ್ಪು... ಹೀಗೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಎಲ್ಲ ಉತ್ಪನ್ನಗಳೂ ಮಳಿಗೆಯಲ್ಲಿ ಲಭ್ಯವಿರಲಿವೆ’ ಎಂದು ಅವರು ವಿವರಿಸಿದರು.

ಚಾಮರಾಜನಗರದ ಹೌಸಿಂಗ್‌ಬೋರ್ಡ್‌ ಕಾಲೊನಿಯಲ್ಲಿರುವ ಕೃಷಿಕ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ತೆರೆಯಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಳಿಗೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಬೋಯರ್‌ ಹರ್ಷಲ್‌ ನಾರಾಯಣರಾವ್‌ ಅವರು ನಮ್ದು ಬ್ರ್ಯಾಂಡ್‌ ಅನಾವರಣ ಮಾಡಲಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT