ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ತೋರಬೇಕಿದೆ ಕಾಳಜಿ, ಸಿಗಬೇಕಿದೆ ಸೌಲಭ್ಯ

ಕೋವಿಡ್‌ ಸಮಯದಲ್ಲೂ ಕಾಯಕ ಬಿಡದ ಮುಂಚೂಣಿ ಯೋಧರು, ಸರಿಯಾಗಿ ಸಿಗದ ಸೌಲಭ್ಯ
Last Updated 20 ಜೂನ್ 2021, 15:55 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಇರಲಿ, ಇಲ್ಲದಿರಲಿ; ಪ್ರತಿ ದಿನ ಇವರ ದಿನಚರಿ ಮುಂಜಾನೆ 5 ಗಂಟೆಗೆ ಆರಂಭವಾಗುತ್ತದೆ. ಕಣ್ಣಿಗೆ ಕಾಣದ ಕೊರೊನಾ ವೈರಸ್‌ಗೆ ಹೆದರಿ ಜನರು ಮನೆಯೊಳಗೆ ಕುಳಿತಿದ್ದರೆ ಇವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ದಿನಂಪ್ರತಿ ಊರನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾಲಾಳುಗಳಾಗಿರುವಸರ್ಕಾರ ತಮ್ಮನ್ನು ಗೌರವಯುತವಾಗಿ ನಡೆಸಿಲ್ಲ, ಸಾಕಷ್ಟು ಸೌಲಭ್ಯ ಕೊಡುತ್ತಿಲ್ಲ ಎಂಬುದು ಪೌರ ಕಾರ್ಮಿಕರ ಅಳಲು.

ಗಾಳಿ, ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಪ್ರತಿ ದಿನ‌ ಕಸ ಸಂಗ್ರಹಿಸುವ, ಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಕೆಲಸ ಕೋವಿಡ್ ಸಮಯದಲ್ಲಿ ದುಪ್ಪಟ್ಟಾಗಿದೆ.ಕೋವಿಡ್ ಸಮಯದಲ್ಲಿ ಸ್ವಚ್ಛಗೊಳಿಸುವ ಕಾರ್ಯ ಎಂದಿನಂತೆ ಮಾಡುವುದರ ಜೊತೆಗೆ ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ ಮಾಡುವುದು, ಕೋವಿಡ್ ಸೋಂಕಿತರ ಮನೆಗಳ ಆವರಣ ಸ್ಯಾನಿಟೈಸ್ ಮಾಡುವುದು ಹೀಗೆ ಕೆಲಸದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕೋವಿಡ್‌ ಸಮಯದಲ್ಲಿ ಮಾತ್ರ ಇವರ ಮೇಲೆ ಸರ್ಕಾರ ಸ್ವಲ್ಪ ಮುತುವರ್ಜಿ ತೋರಿದೆ. ಇವರನ್ನು ಮುಂಚೂಣಿ ಕೋವಿಡ್ ಸೇನಾನಿಗಳು ಎಂದು ಘೋಷಿಸಿದೆ. ಉಳಿದ ಸಮಯದಲ್ಲಿ ಸರ್ಕಾರದ್ದು ಇವರ ಬಗ್ಗೆ ದಿವ್ಯ ನಿರ್ಲಕ್ಷ್ಯ. ಎಲ್ಲ ಪೌರಕಾರ್ಮಿಕರ ಕೆಲಸ ಕಾಯಂ ಆಗಿಲ್ಲ. ಕಾಯಂ ಆದವರಿಗೂ ಸರಿಯಾಗಿ ನಿವೇಶನ, ಮನೆಗಳ ಸೌಲಭ್ಯ ಕಲ್ಪಿಸಿಲ್ಲ. ವೇತನವೂ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಆರೋಗ್ಯ ಸೇವೆ ಸೇರಿದಂತೆ ಸೌಲಭ್ಯಗಳ ಪ್ರಯೋಜನಗಳು ಸರಿಯಾಗಿ ಇವರನ್ನು ತಲುಪುವುದಿಲ್ಲ.

ಕೋವಿಡ್‌ ಸಮಯದಲ್ಲಿ ಇವರು ಮಾನಸಿಕವಾಗಿ, ಸಾಮಾಜಿಕವಾಗಿ ನೋವು ಅನುಭವಿಸುತ್ತಿದ್ದಾರೆ.

‘ಕೊರೊನಾ ಸೋಂಕು ಯಾವ ಕ್ಷಣದಲ್ಲಿ ನಮಗೆ ತಗುಲುತ್ತದೆ ಗೊತ್ತಿಲ್ಲ. ಆದರೂ, ಮನೆಗಳ ಮುಂಭಾಗ ಸ್ವಚ್ಛಗೊಳಿಸಬೇಕು. ಕಸ ಸಂಗ್ರಹಕ್ಕೆ ಮನೆ ಮುಂದೆ ಹೋದಾಗ ಕೆಲವರು ನಮ್ಮಹತ್ತಿರ ಸುಳಿಯದೇ ಕಸ ಕಟ್ಟಿ ಬಿಸಾಡುತ್ತಾರೆ. ನಮ್ಮನ್ನು ಸೋಂಕು ಹಬ್ಬಿಸುವವರಂತೆಕಾಣುತ್ತಾರೆ’ ಎಂದು ಹೇಳುತ್ತಾರೆ ಪೌರಕಾರ್ಮಿಕರು.

ತಿಂಗಳ ವೇತನ ಬಾಕಿ:ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 122 ಮಂದಿ ಪೌರಕಾರ್ಮಿಕರಿದ್ದಾರೆ. ಈ ಪೈಕಿ 45 ಮಂದಿಯ ಕೆಲಸ ಕಾಯಂ ಆಗಿದೆ. ಉಳಿದವರೆಲ್ಲ ಗುತ್ತಿಗೆ ಆಧಾರದವರು. ಕಾಯಂ ಆಗಿರುವವರ ಪೈಕಿ 35 ಮಂದಿಗೆ ನಿವೇಶನ ಕಲ್ಪಿಸಿ, ಮನೆಯನ್ನೂ ಕಟ್ಟಲಾಗಿದೆ. ಆದರೆ, ಅಲ್ಲಿಗೆ ಇನ್ನೂ ವಿದ್ಯುತ್‌, ನೀರು ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ.

ಗುತ್ತಿಗೆ ಆಧಾರದಲ್ಲಿರವ ಪೌರಕಾರ್ಮಿಕರಿಗೆ ಉತ್ತುವಳ್ಳಿ ಬಳಿ ನಿವೇಶನ ಗುರುತಿಸಲಾಗಿದೆ. ಅದು ವ್ಯಾಜ್ಯದಲ್ಲಿದೆ. ತಮ್ಮ ಕೆಲಸ ಕಾಯಂ ಮಾಡುವುದರ ಜೊತೆಗೆ, ನಿವೇಶನ, ಮನೆ ಸೌಲಭ್ಯ ಕಲ್ಪಿಸಬೇಕು ಎಂಬುದು ಅವರ ಒತ್ತಾಯ.

122 ಪೌರ ಕಾರ್ಮಿಕರ ಪೈಕಿ ಐವರಿಗೆ ಕೋವಿಡ್‌ ಬಂದಿತ್ತು. ಎಲ್ಲರೂ ಚೇತರಿಸಿಕೊಂಡಿದ್ದಾರೆ. ನಗರಸಭೆ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸಿದೆ. ಇತ್ತೀಚಿನವರೆಗೂ ಎರಡು ತಿಂಗಳ ವೇತನ ನೀಡಿರಲಿಲ್ಲ. ಈಗ ಪಾವತಿಸಿದೆ. ಇನ್ನೂ ಒಂದು ತಿಂಗಳಿನದ್ದು ಬಾಕಿ ಇದೆ.

ಕೊಳ್ಳೇಗಾಲ ನಗರಸಭೆಯಲ್ಲಿ77 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರು 6 ಹಾಗೂ ಪುರುಷರು 71 ಮಂದಿ ಇದ್ದಾರೆ. 44 ಮಂದಿಯ ಕೆಲಸ ಕಾಯಂ ಆಗಿದೆ. ನಿವೇಶನ ಇದ್ದವರಿಗೆ ಮನೆ ಕಟ್ಟಲು ಹಣ ಬಿಡುಗಡೆಯಾಗಿದೆ.

ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ 41 ಮಂದಿ ಪೌರಕಾರ್ಮಿಕರು ಇದ್ದಾರೆ. ಈ ಪೈಕಿ 28 ಮಂದಿಯ ಕೆಲಸ ಕಾಯಂ ಆಗಿದೆ. ಕಾಯಂ ನೌಕರರಿಗೆ ಮನೆ ಸೌಲಭ್ಯವನ್ನು ಪುರಸಭೆ ಕಲ್ಪಿಸಿದೆ.

ಸೂರಿನ ವ್ಯವಸ್ಥೆ ಇಲ್ಲ:ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಪೌರಕಾರ್ಮಿಕರಿದ್ದಾರೆ. 11 ಮಂದಿ ಕಾಯಂ, 9 ಮಂದಿ ದಿನಗೂಲಿ ಕಾರ್ಮಿಕರಿದ್ದಾರೆ. ಇವರ ಬಹುತೇಕ ಕುಟುಂಬಗಳಿಗೆ ಇಂದಿಗೂ ಸಮರ್ಪಕ ವಸತಿ ಸೌಲಭ್ಯ ಸಿಕ್ಕಿಲ್ಲ. ಒಂದು ಮನೆಯಲ್ಲಿ ಎರಡು, ಮೂರು ಕುಟುಂಬಗಳು ವಾಸ ಮಾಡುತ್ತಿವೆ. ವಸತಿ ಸೌಲಭ್ಯ ಕಲ್ಪಿಸಿಕೊಡಿ ಎಂಬುದು ಇವರ ಬಹು ವರ್ಷಗಳ ಬೇಡಿಕೆ.

ಪೌರ ಕಾರ್ಮಿಕರು ಏನಂತಾರೆ?

ಮನುಷ್ಯರಂತೆ ಕಾಣಿ

ನಾವು ಮನುಷ್ಯರೇ. ನಮ್ಮನ್ನು ಮನುಷ್ಯರಂತೆ ಕಾಣಬೇಕು. ನಗರದ ಸ್ವಚ್ಛತೆಯನ್ನು ಕಾಪಾಡುತ್ತೇವೆ. ಜೀವದ ಹಂಗು ತೊರೆದು ಕೋವಿಡ್ ಬಂದವರ ಮನೆಗಳಿಗೆ ತೆರಳಿ ಮನೆಯನ್ನು ಸ್ಯಾನಿಟೈಜ್ ಮಾಡುತ್ತೇವೆ

–ಶಿವ, ಕೊಳ್ಳೇಗಾಲ

ನಿತ್ಯವೂ ಕೆಲಸ

ಲಾಕ್‌ಡೌನ್‌ನಿಂದ ಬೆಳಿಗ್ಗೆ 10ರ ಬಳಿಕ ಓಡಾಡಲು ಜನರಿಗೆ ಅವಕಾಶ ಇಲ್ಲ. ಆದರೆ, ಪೌರ
ಕಾರ್ಮಿಕರಿಗೆ ನಿತ್ಯದಂತೆ ಪ್ರತಿ ಮನೆ, ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಿ,
ಹೊರಭಾಗಕ್ಕೆ ಸಾಗಿಸಬೇಕಿದೆ. ಬಡಾವಣೆಗಳ ಕಸ ತೆಗೆದು, ವಾರ್ಡ್‌ಗಳಲ್ಲಿ ಸ್ಯಾನಿಟೈಸ್
ಮಾಡಬೇಕು. ಮಳೆ, ಬಿಸಿಲು, ಕರ್ಫ್ಯೂ ಏನೇ ಇರಲಿ. ಕೆಲಸ ಕಾಯಂ. ಈ ನಡುವೆ ಲಾಕ್‌ಡೌನ್‌
ಅವಧಿಯಲ್ಲಿ ಜನ ಸಂಚಾರ ಕಡಿಮೆ ಇರುವುದರಿಂದ ಕೆಲಸ ನಿರಾಳ ಎನಿಸಿದೆ.

–ಮಂಗಮ್ಮ, ಯಳಂದೂರು

ಕುಡಿಯಲು ನೀರೂ ಕೊಡುವುದಿಲ್ಲ

ನಮ್ಮನ್ನು ಕೆಲ ಬಡಾವಣೆಯ ಜನರು ಏಕವಚನದಲ್ಲಿ ಮಾತನಾಡಿಸುತ್ತಾರೆ. ಕುಡಿಯಲು ನೀರು ಕೇಳಿದರೂ ಕೆಲವರು ಕೊಡುವುದಿಲ್ಲ. ನಮ್ಮನ್ನು ನೋಡಿದರೆ ಸಾಕು ಕೋಪದಿಂದ ವರ್ತಿಸುತ್ತಾರೆ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳದೆ ಕೆಲಸವನ್ನು ಮಾಡುತ್ತೇವೆ

–ರಾಜು, ಕೊಳ್ಳೇಗಾಲ

ಕೆಲಸ ಕಡಿಮಯಾಗಿಲ್ಲ

ಕೊರೊನಾ ನಡುವೆ ಪರಿಸರ ಶುದ್ಧತೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ನಮಗೆ ರಜೆ
ಸಿಗುವುದು ಕಷ್ಟ. ಮುಖ್ಯಸ್ಥರು ಇಲ್ಲವೇ ಗುತ್ತಿಗೆದಾರರು ಸೂಚಿಸಿದ ಸ್ಥಳಕ್ಕೆ
ಹೋಗಲೇಬೇಕು. ವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ಅಂಗಡಿಗಳ ಕಸ, ತ್ಯಾಜ್ಯ
ಸಂಗ್ರಹಿಸಬೇಕು. ಅದನ್ನು ವಾಹನಗಳಿಗೆ ತುಂಬಿ ನಂತರ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ
ಇಳಿಸಬೇಕು. ಒಟ್ಟಾರೆ ಇಡೀ ದಿನ ನಿರಂತರ ಕೆಲಸ ಇರುತ್ತದೆ

–ಮಂಜು, ಯಳಂದೂರು.

ಎರಡು ತಿಂಗಳಿನಿಂದ ವೇತನ ಇಲ್ಲ

ಒಂದು ವರ್ಷದಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಗೂಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇನೆ. ಟೆಂಡರ್ ಪ್ರಕ್ರಿಯೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಇದುವರೆಗೆ ಟೆಂಡರ್ ಕರೆದಿಲ್ಲ. ಅಲ್ಲದೇ ಎರಡು ತಿಂಗಳಿನಿಂದ ವೇತನವೂ ಆಗಿಲ್ಲ.

–ಚಂದ್ರು, ಹನೂರು

ಪಿಂಚಣಿ ಸೌಲಭ್ಯ ಇಲ್ಲ

ಕಾಯಂ ನೌಕರರಾಗಿ ದುಡಿಯುತ್ತಿದ್ದೇವೆ. ಹತ್ತು ವರ್ಷಗಳಿಂದಲೂ ಪಿಂಚಣಿ ಸೌಲಭ್ಯಕ್ಕಾಗಿ ಅಧಿಕಾರಿಗಳ ಬಳಿ‌ ಮನವಿ ಸಲ್ಲಿಸುತ್ತಲೇ ಇದ್ದೇವೆ. ಇದುವರೆಗೆ ಆಗಿಲ್ಲ. ಈಗ ಕೇಳಿದರೆ ಕೋವಿಡ್ ಮುಗಿದ ಮೇಲೆ ಮಾಡಿಕೊಡುವುದಾಗಿ ಹೇಳಿದ್ದಾರೆ.

–ಮುರಳಿ, ಹನೂರು

ಸೌಲಭ್ಯ ಸಿಕ್ಕಿದೆ

ಕೋವಿಡ್‌ ಸಮಯದಲ್ಲಿ ಅಧಿಕಾರಿಗಳು ಮಾಸ್ಕ್‌, ಸ್ಯಾನಿಟೈಸರ್‌ ಫೇಸ್‌ ಶೀಲ್ಡ್‌ ಎಲ್ಲ ಕೊಟ್ಟಿದ್ದಾರೆ. ಲಸಿಕೆ ಕೊಡಿಸುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ. ನಾವು ಅಷ್ಟೇ ಕೋವಿಡ್‌ ಎಂದು ಸುಮ್ಮನೆ ಕುಳಿತಿಲ್ಲ. ಕೆಲಸ ಮಾಡುತ್ತಲೇ ಇದ್ದೇವೆ. ಎರಡು ತಿಂಗಳ ವೇತನ ನೀಡುವುದು ವಿಳಂಬವಾಗಿತ್ತು. ಈಗ ಅದನ್ನು ಪಾವತಿಸಿದ್ದಾರೆ.

– ಕುಮಾರ್‌, ಚಾಮರಾಜನಗರ

ನಿವೇಶನ, ಮನೆ ಕೊಡಿ

ಕೆಲಸ ಕಾಯಂ ಆಗಿರುವ ಪೌರಕಾರ್ಮಿಕರಿಗೆ ನಿವೇಶನ ಮನೆ ನೀಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮನ್ನು ಕಾಯಂ ಗೊಳಿಸುವಂತೆ, ನಿವೇಶನ, ಮನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಸ್ಪಂದಿಸುವ ವಿಶ್ವಾಸವಿದೆ

– ಬಾಬು, ಚಾಮರಾಜನಗರ

ಅಧಿಕಾರಿಗಳು ಏನಂತಾರೆ?

ಶೀಘ್ರ ವೇತನ

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಪೌರಕಾರ್ಮಿಕರ ಹುದ್ದೆಗಳಿವೆ. ಈಗ 11 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಕೊರತೆಯನ್ನು ನೀಗಿಸುವ ಸಲುವಾಗಿ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ದಿನಗೂಲಿಯಾಗಿ ಜನರನ್ನು ನಿಯೋಜಿಸಿಕೊಳ್ಳಲಾಗಿದೆ. ಕಂದಾಯ ವಸೂಲಾತಿ ಸಮಸ್ಯೆಯಿಂದಾಗಿ ಅವರಿಗೆ ಎರಡು ತಿಂಗಳ ವೇತನ ವಿಳಂಬವಾಗಿದೆ. ಶೀಘ್ರದಲ್ಲಿ ವೇತನ ನೀಡಲಾಗುವುದು.ಪೌರಕಾರ್ಮಿಕರ ವಸತಿ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಅವರಿಗೆ ಗುಂಪು ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.

ಮೂರ್ತಿ,ಮುಖ್ಯಾಧಿಕಾರಿ, ಹನೂರು ಪಟ್ಟಣ ಪಂಚಾಯಿತಿ

ಆರೋಗ್ಯದ ಮೇಲೆ ನಿಗಾ

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಪೌರಕಾರ್ಮಿಕರಿಗೆ ಪ್ರತಿದಿನ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಕೆಲಸ ಮಾಡುವುದಕ್ಕೆ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್‌ಗಳನ್ನು ನೀಡಲಾಗಿದೆ, ಅವರ ಆರೋಗ್ಯ ಮೇಲೂ ನಿಗಾ ಇಡಲಾಗಿದೆ

ರಮೇಶ್,ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ

ಶೇ 100ರಷ್ಟು ಲಸಿಕೆ

ಪೌರಕಾರ್ಮಿಕರನ್ನು ಕೋವಿಡ್ ಮುಂಚೂಣಿಯ ಸೇಸಾನಿಗಳಾಗಿಗುರುತಿಸಲಾಗಿದೆ. ಹಾಗಾಗಿ, ಆರಂಭದಲ್ಲೇ ಲಸಿಕೆ ಕೊಡಿಸಲಾಗಿದೆ. ಅನಾರೋಗ್ಯ ಪೀಡಿತರನ್ನು ಬಿಟ್ಟು ಉಳಿದವರು ಎರಡು ಡೋಸ್‌ ಪಡೆದಿದ್ದಾರೆ.ವರ್ಷದಲ್ಲಿ ಎರಡು ಬಾರಿ ಆರೋಗ್ಯ ಸುರಕ್ಷಾ ಸಾಧನಗಳನ್ನು ವಿತರಿಸಿ,
ಹೆಪಟೈಟಿಸ್ ಲಸಿಕೆ ಒದಗಿಸಲಾಗಿದೆ. ಬೆಳಗಿನ ಅವಧಿಯಲ್ಲಿ ಪರಿಸರ ಸ್ವಚ್ಛತೆಗೆ ಒತ್ತು
ನೀಡಲಾಗಿದೆ. ಕೆಲಸದ ಸಮಯ ಮಾಸ್ಕ್, ಗ್ಲೌಸ್ ಬಳಕೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ ಆತ್ಮ ವಿಶ್ವಾಸ ತುಂಬಲಾಗುತ್ತಿದೆ.

ಎಂ.ಸಿ.ನಾಗರತ್ನ,ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ

ಪ್ರಜಾವಾಣಿ ತಂಡ: ಸೂರ್ಯನಾರಾಯಣ ವಿ., ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT