ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಕರುಗಳಿಗೆ ಕುಸಿದ ಬೇಡಿಕೆ, ಬೆಲೆ

ಗೋ ಹತ್ಯೆ ನಿಷೇಧ ಮಸೂದೆ ಪರಿಣಾಮ: ಸಂತೆಯಲ್ಲಿ ಕಾಣದ ವ್ಯಾಪಾರಿಗಳು
Last Updated 1 ಜನವರಿ 2021, 2:32 IST
ಅಕ್ಷರ ಗಾತ್ರ

ಚಾಮರಾಜನಗರ: ಗೋ ಹತ್ಯೆ ನಿಷೇಧಕ್ಕಾಗಿ ಕಾನೂನು ಜಾರಿಗೆ ತರಲುರಾಜ್ಯ ಸರ್ಕಾರವು ನಿರ್ಧರಿಸಿರು ವುದು, ದನಕರುಗಳ ವ್ಯಾಪಾರಕ್ಕೆ ಹೊಡೆತ ನೀಡಿದೆ. ಅವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು ಬೆಲೆಯೂ ಕುಸಿದಿದೆ. ವಯಸ್ಸಾದ ಹಸು ಹಾಗೂ ಎತ್ತುಗಳನ್ನು ಕೇಳುವವರಿಲ್ಲದಂತಾಗಿದ್ದು, ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಾಣಂಬಿಯಲ್ಲಿ ಪ್ರತಿ ಗುರುವಾರ ನಡೆಯುವ ದನಗಳ ಸಂತೆಯಲ್ಲಿ ಎರಡು ಮೂರು ವಾರಗಳಿಂದ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ನೆರೆಯ ತಮಿಳುನಾಡು, ಕೇರಳದ ವ್ಯಾಪಾರಿಗಳು ಸಂತೆಗೆ ಬರುವುದನ್ನು ನಿಲ್ಲಿಸಿದ್ದಾರೆ. ಸ್ಥಳೀಯ ರೈತರು ಹಾಗೂ ಬೆರಳೆಣಿಕೆಯ ವ್ಯಾಪಾರಿಗಳು ತಮಗೆ ಬೇಕಾದ ರಾಸುಗಳನ್ನು ಮಾತ್ರ ಖರೀದಿ ಸುತ್ತಿದ್ದಾರೆ. ಹಾಲು ಕೊಡುವುದನ್ನು ನಿಲ್ಲಿಸಿರುವ ಹಸುಗಳು, ವಯಸ್ಸಾದ ಎತ್ತುಗಳನ್ನು ಖರೀದಿಸುವವರು ಇಲ್ಲ. ಕೆಲ ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. 2–3 ವಾರಗಳಿಂದ ಮಾಲೀಕರು ಸರಿಯಾದ ಬೆಲೆ ಸಿಗದೇ ಹಸು, ಎತ್ತು ಗಳನ್ನು ವಾಪಸ್‌ ತೆಗೆದುಕೊಂಡು ಹೋಗುತ್ತಿದ್ದಾರೆ.

‘ಸಂತೆಯ ದಿನ ಕನಿಷ್ಠವೆಂದರೂ 20 ಜೋಡಿ ಹಸು/ಎತ್ತುಗಳು ಮಾರಾಟವಾಗುತ್ತಿದ್ದವು. ಎರಡು ವಾರಗಳಿಂದ ಸಂತೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯ ವ್ಯಾಪಾರಿಗಳಷ್ಟೇ ಇದ್ದಾರೆ. ಗೋ ಹತ್ಯೆ ನಿಷೇಧದ ಬಗ್ಗೆ ಚರ್ಚೆ ಆರಂಭವಾದ ನಂತರ ಜಾನುವಾರುಗಳ ಬೆಲೆಯೂ ಕಡಿಮೆಯಾಗಿದೆ’ ಎಂದು ದನದ ವ್ಯಾ‍ಪಾರಿ ಸಿದ್ದರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತೊಂದರೆ ಕೊಡಬೇಡಿ:‘ನಮ್ಮ ತಂದೆ ನನಗೆ ಮನೆ, ಆಸ್ತಿ ಎಲ್ಲ ಮಾಡಿದ್ದಾರೆ. ಹಾಗಂತ ಅವರು ಮೃತಪಟ್ಟ ನಂತರ ದೇಹವನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆಯೇ? ಮಣ್ಣು ಮಾಡಲೇಬೇಕು. ಅದೇ ರೀತಿ, ಕೃಷಿ ಚಟುವಟಿ ಕೆಗಳಿಗೆ ಬಳಸುವ ಹಸು, ಎತ್ತುಗಳಿಗೆ ಪ್ರಾಯ ಆದ ನಂತರ, ಅವುಗಳನ್ನು ರೈತರು ಇಟ್ಟುಕೊಳ್ಳಲು ಆಗುತ್ತ ದೆಯೇ? ಮಾರಾಟ ಮಾಡಲೇಬೇಕು’ ಎಂದು ಕೊತ್ತಲವಾಡಿಯ ರೈತ ಮಹದೇವಪ್ಪ ಹೇಳಿದರು.

‘ಯಾವ ಕಾನೂನು ಬೇಕಾದರೂ ಮಾಡಲಿ. ರೈತರಿಗೆ ತೊಂದರೆ ಕೊಡ ಬಾರದು. ಆದರೆ, ಪೊಲೀಸರು ಈಗಲೇ ಹಸುಗಳ ಮಾರಾಟ ಹಾಗೂ ಖರೀದಿಗೆ ಅಡ್ಡಿಪಡಿಸುತ್ತಿದ್ದಾರೆ. ನಾನು ಹೊಲ ಉಳುವುದಕ್ಕಾಗಿ ಜೋಡಿ ಎತ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋದರೆ, ಪೋಲಿಸರು ವಶಪಡಿಸಿಕೊಂಡರು. ಕೋರ್ಟ್‌ ಮೂಲಕ ಬಿಡಿಸಬೇಕಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಷ್ಟದಲ್ಲೇ ಮಾರಾಟ

‘₹76 ಸಾವಿರ ನೀಡಿ ಜೋಡಿ ಎತ್ತು ಖರೀದಿಸಿದ್ದೆ. ಈಗ ಹೆಂಡ್ತಿಗೆ ಆರೋಗ್ಯ ಸರಿ ಇಲ್ಲ. ಚಿಕಿತ್ಸೆಗಾಗಿ ಹಣ ಬೇಕಾಗಿದೆ. ಅದಕ್ಕೆ ಸಂತೆಗೆ ತೆಗೆದುಕೊಂಡು ಬಂದೆ. ನನಗೆ ತುರ್ತಾಗಿ ಹಣ ಬೇಕಿತ್ತು. ಅದಕ್ಕಾಗಿ ₹60 ಸಾವಿರಕ್ಕೆ ಮಾರಾಟ ಮಾಡಿದೆ. ₹16 ಸಾವಿರ ನಷ್ಟವಾಯಿತು’ ಎಂದು ರಾಮಸಮುದ್ರದ ಚೌಡಯ್ಯ ಹೇಳಿದರು.

ಸರ್ಕಾರವೇ ಖರೀ‌ದಿಸಲಿ: ‘ಎತ್ತುಗಳು ಸದೃಢವಾಗಿರುವವರೆಗೂ ಬೆಲೆ. ಆಮೇಲೆ ಕೇಳುವವರಿಲ್ಲ. ಹಸುಗಳೂ ಅಷ್ಟೇ. ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಅದು ಯಾರಿಗೂ ಬೇಡ. ಅಂತಹ ದನಗಳನ್ನು ಮಾಂಸಕ್ಕಾಗಿ ಖರೀದಿಸುವವರಿದ್ದರು. ಬೆಲೆಯೂ ಸಿಗುತ್ತಿತ್ತು. ಸರ್ಕಾರ ಗೋ ಹತ್ಯೆ ನಿಷೇಧ ಮಾಡಲಿ. ಆದರೆ, ವಯಸ್ಸಾದ ಹಸು, ಎತ್ತುಗಳನ್ನು ರೈತರಿಂದ ಖರೀದಿಸಿ ಗೋ ಶಾಲೆಯಲ್ಲಿ ಇರಿಸಲಿ. ಆಗ ರೈತರಿಗೆ ಅನುಕೂಲ’ ಎಂದು ಸಿದ್ದರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT