ಮಂಗಳವಾರ, ಅಕ್ಟೋಬರ್ 27, 2020
24 °C
ಗಡಿ ಗ್ರಾಮದ ಗೋಪಿನಾಥಂನಲ್ಲಿ  ಪಾಳು ಬಂಗಲೆಯಂತಾದ ಪ್ರಾಥಮಿಕ ಆರೋಗ್ಯ ಕೇಂದ್ರ

ಹನೂರು: ನಾಲ್ಕು ವರ್ಷಗಳಿಂದ ಇಲ್ಲಿ ಸಿಬ್ಬಂದಿಯೇ ಇಲ್ಲ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಗೋಪಿನಾಥಂ ಗ್ರಾಮದಲ್ಲಿ ಜನರಿಗೆ ಆರೋಗ್ಯ ಸೌಲಭ್ಯ ಎಂಬುದು ಮರಿಚಿಕೆಯಾಗಿದ್ದು, ಆರೋಗ್ಯ ಕೆಟ್ಟರೆ ತಮಿಳುನಾಡನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.

ತಾಲ್ಲೂಕು ಕೇಂದ್ರದಿಂದ 85 ಕಿ.ಮೀ ದೂರದಲ್ಲಿ ಪಾಲಾರ್, ಗೋಪಿನಾಥಂ, ಮಾರಿಕೋಟೈ, ಕೋಟೆಯೂರು, ಜಂಬುದಪಟ್ಟಿ, ಮರೂರು, ಆಲಂಬಾಡಿ ಗ್ರಾಮಗಳಿವೆ. 8000 ಜನರು ಇಲ್ಲಿ ವಾಸವಾಗಿದ್ದಾರೆ. ಆದರೆ, ಇಷ್ಟು ಜನರಿಗೆ ಈ ಭಾಗದಲ್ಲಿ ಆರೋಗ್ಯ ಸೌಲಭ್ಯವೇ ಇಲ್ಲದೇ ಪರದಾಡುವಂತಾಗಿದೆ. ಗೋಪಿನಾಥಂನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ನಾಲ್ಕು ವರ್ಷಗಳಿಂದ ಸಿಬ್ಬಂದಿ ಇಲ್ಲದೇ ಬಾಗಿಲು ಮುಚ್ಚಿದೆ.

ದಟ್ಟಾರಣ್ಯದೊಳಗಿರುವ ಈ ಭಾಗ ವೀರಪ್ಪನ್ ಉಪಟಳದಿಂದಾಗಿ ಅಭಿವೃದ್ಧಿಯಿಂದ ವಂಚಿತಗೊಂಡಿತ್ತು. ಆತ ಮೃತಪಟ್ಟ ಬಳಿಕ ಆಮೆಗತಿಯಲ್ಲಿ ಚೇತರಿಕೆ ಕಂಡರೂ ಇಂದಿಗೂ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳು ಇಲ್ಲಿನ ಗ್ರಾಮಗಳ ಜನತೆಗೆ ಕನಸಾಗಿಯೇ ಉಳಿದಿದೆ.

ಗಡಿ ಗ್ರಾಮಗಳ ಜನರಿಗೆ  ಗುಣಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಒಂದೂವರೆ ದಶಕದ ಹಿಂದೆ ಮರೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿತ್ತು. ಪ್ರಾರಂಭದಲ್ಲಿ ವೈದ್ಯರು ಹಾಗೂ ನರ್ಸ್ ಗಳು ಇಲ್ಲಿ ಕರ್ತವ್ಯ ನಿರ್ಹಿಸುತ್ತಿದ್ದರು. ಆದರೆ ದಿನಗಳೆದಂತೆ ಇಲ್ಲಿದ್ದವರನ್ನು ಸರ್ಕಾರ ವರ್ಗಾಯಿಸಿದರೆ ಇನ್ನು ಕೆಲವರು ಬೇರೆಡೆ ವರ್ಗಾವಣೆ ಮಾಡಿಕೊಂಡು ಹೋದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಐದು ವರ್ಷದ ಹಿಂದೆ ಒಬ್ಬ ನರ್ಸ್ ಅನ್ನು ನಿಯೋಜಿಸಲಾಗಿತ್ತು. ಒಂದು ವರ್ಷದ ಬಳಿಕ ಅವರು ಹೋದರು. ಈಗ ಆಸ್ಪತ್ರೆ ಅಕ್ಷರಶಃ ಪಾಳು ಬಂಗಲೆಯಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ತಮಿಳುನಾಡೇ ಗತಿ: ‘ಇಲ್ಲಿನ ಬಹುತೇಕ ಗ್ರಾಮಗಳು ಅರಣ್ಯದೊಳಗಿರುವುದರಿಂದ ಮೇಲಿಂದ ಮೇಲೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಇಲ್ಲಿಂದ ಮಹದೇಶ್ವರ ಬೆಟ್ಟ 35 ಕಿ.ಮೀ ದೂರವಿದೆ. ಮಧ್ಯರಾತ್ರಿ ವೇಳೆ ಅಲ್ಲಿಗೆ ಹೋದರೆ ಅಲ್ಲಿಯೂ ಒಮ್ಮೊಮ್ಮೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಹೀಗಾಗಿ ನಾವು ತಮಿಳುನಾಡನ್ನೇ ಆಶ್ರಯಿಸಬೇಕಿದೆ ’ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಜನರು.

‘ಕೊರೊನಾದಿಂದಾಗಿ ಅಂತರರಾಜ್ಯ ಗಡಿಗಳು ಮುಚ್ಚಿದ್ದ ಸಂದರ್ಭದಲ್ಲಿ ಜನರು ಆರೋಗ್ಯ ಸೌಲಭ್ಯಕ್ಕಾಗಿ ಪಟ್ಟ ಪಾಡು ಹೇಳತೀರದು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಕೆಲವರು ಮೃತಪಟ್ಟಿದ್ದೂ ಉಂಟು. ಈಚೆಗೆ ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಮಕ್ಕಳಿಗೂ ಈ ಸಮಸ್ಯೆ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮದ ಕುಮಾರ್.

ಮನವಿ ಸಲ್ಲಿಸದರೂ ಉಪಯೋಗವಿಲ್ಲ: ಗ್ರಾಮದಲ್ಲಿರುವ ಆರೋಗ್ಯ ಕೇಂದ್ರಕ್ಕೆಸಿಬ್ಬಂದಿ ನಿಯೋಜಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿಹೋಗಿದೆ. ಈಚೆಗೆ ಗ್ರಾಮದಲ್ಲಿ ಶಾಲಾ ವಾಸ್ತವ್ಯ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೂ ಮೌಖಿಕವಾಗಿ ಮನವಿ ಸಲ್ಲಿಸಿದ್ದೆವು. ಸಿಬ್ಬಂದಿ ನಿಯೋಜಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಆಸ್ಪತ್ರೆ ಬಾಗಿಲೇ ತೆರೆದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. 

ಈಗಾಗಲೇ ಚಿಕಿತ್ಸೆ ಕೆಲವರು ಮೃತಪಟ್ಟರೆ ಇನ್ನು ಕೆಲವರು ಚಿಂತಾಜನಕ ಸ್ಥಿತಿಯಲ್ಲಿಯೇ ಚಿಕಿತ್ಸೆಗಾಗಿ ತಮಿಳುನಾಡಿನ ಕೊಳತ್ತೂರು, ಮೆಟ್ಟೂರು ಮುಂತಾದ ಕಡೆಗಳಿಗೆ ತೆರಳುತ್ತಿದ್ದಾರೆ. ಇನ್ನಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆಗೆ ಸಿಬ್ಬಂದಿ ನಿಯೋಜಿಸಿ ಗಡಿಭಾಗದ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹನೂರು ಶಾಸಕ ಆರ್‌.ನರೇಂದ್ರ ಅವರು, ‘ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆಯು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳುತ್ತಿದೆ. ಗೋಪಿನಾಥಂ ಗ್ರಾಮದ ಆಸ್ಪತ್ರೆಗೂ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗುವುದು’ ಎಂದು ಹೇಳಿದರು. 

‘ಗೋಪಿನಾಥಂನಲ್ಲಿ ಆರೋಗ್ಯ ಉಪ ಕೇಂದ್ರ ಇದೆ. ಅಲ್ಲಿ ಕಿರಿಯ ಮಹಿಳಾ ಸಹಾಯಕಿಯ ಹುದ್ದೆ ಖಾಲಿ ಇದೆ. ಗುತ್ತಿಗೆ ಆಧಾರದಲ್ಲಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದು, ಅಲ್ಲಿಗೂ ಶೀಘ್ರದಲ್ಲಿ ನೇಮಕವಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು