ಶುಕ್ರವಾರ, ಜನವರಿ 24, 2020
21 °C
ಈರುಳ್ಳಿ ಬೆಲೆ ದಿಢೀರ್‌ ಕುಸಿತ, ವರ್ತಕರಿಗೆ ಆತಂಕ

ಟರ್ಕಿ ಈರುಳ್ಳಿ ಕೆ.ಜಿ.ಗೆ ₹30

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಈರುಳ್ಳಿ ಬೆಲೆ ದಿಢೀರ್‌ ಕುಸಿದ ಪರಿಣಾಮ ವರ್ತಕರಿಗೆ ಆತಂಕ ಎದುರಾಗಿದೆ. ಧಾರಣೆ ಏರಿಕೆಯಿಂದ ಬಳಲಿದ್ದ ಗ್ರಾಹಕರು ಹೊಸ ಈರುಳ್ಳಿಯನ್ನು ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ.

ಕಳೆದ ವಾರ ಹೆಚ್ಚಿನ ಪ್ರಮಾಣದಲ್ಲಿ ಟರ್ಕಿ ಈರುಳ್ಳಿ ಆವಕ ಮಾಡಿಕೊಂಡಿದ್ದ ಅಂಗಡಿ ಮತ್ತು ಸಂತೆ ವ್ಯಾಪಾರಿಗಳಿಗೆ ಹೊಸ ಈರುಳ್ಳಿ ಆಗಮನ ನಷ್ಟದ ಭೀತಿಯನ್ನು ಹೆಚ್ಚಿಸಿದೆ.

ಟರ್ಕಿ ಮತ್ತು ಈಜಿಪ್ಟ್‌ ಈರುಳ್ಳಿಗೆ ಈಗ ಕೆ.ಜಿ.ಗೆ ₹30 ದರವಿದೆ. ಗುಣಮಟ್ಟದ ಸ್ಥಳೀಯ ಈರುಳ್ಳಿ ಸಹ ಮಾರುಕಟ್ಟೆಗೆ ಬಂದಿದೆ. ಹಾಗಾಗಿ, ವಿದೇಶಗಳಿಂದ ಆಮದು ಮಾಡಿಕೊಂಡ ಈರುಳ್ಳಿಯನ್ನು ಕೇಳುವವರು ಇಲ್ಲ.

ಕಳೆದೆರಡು ತಿಂಗಳಿಂದ ಈರುಳ್ಳಿ ದರ ಕೆ.ಜಿ.ಗೆ ₹100ರಿಂದ ₹200ರ ತನಕ ಏರಿಕೆ ಕಂಡಿತ್ತು. ಇದನ್ನು ಮನಗಂಡ ವ್ಯಾಪಾರಿಗಳು ಈಜಿಪ್ಟ್‌, ಟರ್ಕಿಯಿಂದ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದರು. ಧಾರಣೆ ಮತ್ತಷ್ಟು ಏರಬಹುದೆಂಬ ನಂಬಿಕೆ ಯಿಂದ ಹೆಚ್ಚು ಸಂಗ್ರಹಿಸಿದ್ದರು ಎನ್ನಲಾಗಿದೆ.

ನೆರೆ ಪೀಡಿತ ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಕರ್ನಾಟಕದ ವಿವಿಧೆಡೆ ಹೊಸ ಬೆಳೆ ಬಂದಿದೆ. ಹೀಗಾಗಿ ಈರುಳ್ಳಿ ದರ ಕುಸಿಯುತ್ತಿದೆ. ಇನ್ನುಮುಂದೆ ಮಾಮೂಲಿ ಬೆಲೆಯಲ್ಲಿ ಗ್ರಾಹಕರಿಗೆ ಈರುಳ್ಳಿ ಸಿಗಲಿದೆ ಎಂದು ಹೋಟೆಲ್‌ ವ್ಯಾಪಾರಿ ಬಾಲು ಹೇಳಿದರು.

ಟರ್ಕಿ ಈರುಳ್ಳಿ ರುಚಿಕರವಾಗಿಲ್ಲ. ಬಿಳಿ ಬಣ್ಣದಿಂದ ಕೂಡಿದ್ದು, ಗ್ರಾಹಕರು ಖರೀದಿಗೆ ಒಲವು ತೋರುತ್ತಿಲ್ಲ. ಹೋಟೆಲ್‌ಗಳವರು ಕೂಡ ಈಜಿಪ್ಟ್‌ ಈರುಳ್ಳಿಯನ್ನು ಖರೀದಿಸುತ್ತಿಲ್ಲ. ಜನರು ಹೆಚ್ಚೆಂದರೆ ಅರ್ಧ ಕೆ.ಜಿ ಈರುಳಿ ಮಾತ್ರ ಕೊಳ್ಳುತ್ತಾರೆ ಎನ್ನುತ್ತಾರೆ ವ್ಯಾಪಾರಿ ರಮೇಶ್.

ಈಗಲೂ ಪಟ್ಟಣದಲ್ಲಿ ಬೆಲೆ ₹100ರ ಆಸುಪಾಸಿನಲ್ಲಿ ಇದೆ. ಸ್ಥಳೀಯ ಈರುಳ್ಳಿ ಆವಕ ಭಾನುವಾರ ಸಂತೆಯಲ್ಲಿ ಹೆಚ್ಚಾದರೆ ದರ ಕಡಿಮೆ ಆಗಬಹುದು. ಇದರಿಂದ ಉತ್ತಮ ದರ್ಜೆಯ ಸ್ಥಳೀಯ ಈರುಳ್ಳಿ ಸಿಗಲಿದೆ ಎನ್ನುತ್ತಾರೆ ಗ್ರಾಹಕ ಯರಿಯೂರು ರಾಜಣ್ಣ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು