ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಪುಟ್‌ಪಾತ್‌ನಲ್ಲಿ ನಿಲ್ಲುವ ಆಟೊ, ಟೆಂಪೊ: ಭಯದಲ್ಲಿ ಪ್ರಯಾಣಿಕರ ಸಂಚಾರ

Published 18 ಮೇ 2024, 4:47 IST
Last Updated 18 ಮೇ 2024, 4:47 IST
ಅಕ್ಷರ ಗಾತ್ರ

ಯಳಂದೂರು: ಎಲ್ಲೆಡೆಯಿಂದಲೂ ವೇಗವಾಗಿ ನುಗ್ಗುವ ವಾಹನಗಳು, ಆಟೊ, ಬೈಕ್‌ಗಳ ಅಡ್ಡಾದಿಡ್ಡಿ ಸಂಚಾರ, ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಬಸ್‌ಗಳು, ಮಹಿಳೆಯರು ಮತ್ತು ಮಕ್ಕಳು ಜೀವಭಯದಲ್ಲಿ ರಸ್ತೆ ದಾಟುವ ಅನಿವಾರ್ಯತೆ...

ಪಟ್ಟಣದ ಬಸ್ ನಿಲ್ದಾಣದ ಸುತ್ತಮುತ್ತ ಕಂಡುಬರುವ ದೈನಂದಿನ ಸ್ಥಿತಿ ಇದು. ವಿವಿಧೆಡೆ ತೆರಳಲು ಇಲ್ಲಿಗೆ ಬರುವ ಸಾರ್ವಜನಿಕರು ಪ್ರತಿ ಕ್ಷಣವೂ ಇಲ್ಲಿ ಅಪಾಯಕ್ಕೆ ಒಡ್ಡಿಕೊಂಡು ಗಮ್ಯ ಮುಟ್ಟಬೇಕಿದೆ.

ಪ್ರತಿದಿನ ನೂರಕ್ಕೂ ಹೆಚ್ಚಿನ ಬಸ್ ಮತ್ತಿತರ ವಾಹನಗಳು ಇಲ್ಲಿ ಸಂಚರಿಸುತ್ತವೆ. ನಿಲ್ದಾಣವೂ ರಸ್ತೆಗೆ ಅಂಟಿಕೊಂಡಿದ್ದು, ಮೈಸೂರು, ತಾಲ್ಲೂಕು ಕೇಂದ್ರಗಳು ಮತ್ತು ನಗರಗಳತ್ತ ತೆರಳುವ ವಾಹನಗಳು ಈ ಸ್ಥಳದಲ್ಲಿ ‘ರಿವರ್ಸ್’ ಗೇರ್‌ನಲ್ಲಿ ಆಗಾಗ ಹಿಂದಿರುಗಿ ಸಾಗಬೇಕು. ಈ ವೇಳೆ ಆಟೊ ಮತ್ತು ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ನಿಂತ ಪರಿಣಾಮ ಬಸ್ ನಿಲ್ಲಿಸಲು ಸ್ಥಳ ಹುಡುಕಬೇಕಾದ ದ್ವಂದ್ವದಲ್ಲಿ ಚಾಲಕರು ಸಿಲುಕುತ್ತಾರೆ. ಇದರಿಂದ ಶಾಲೆ, ಕಾಲೇಜು ಸಮಯದಲ್ಲಿ ತೆರಳುವ ಮಕ್ಕಳು ಮತ್ತಷ್ಟು ತೊಂದರೆ ಎದುರಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

‘ವಾರಾಂತ್ಯದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಬಿಳಿಗಿರಿಬೆಟ್ಟಕ್ಕೆ ತೆರಳುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಈ ಸಮಯದಲ್ಲಿ ಮೈಸೂರು, ಮಂಡ್ಯ, ಬೆಂಗಳೂರು ಮತ್ತಿತರ ಕಡೆಗಳಿಂದ ಬರುವ ಭಕ್ತರು ವಾಪಸ್ ತೆರಳಲು, ಬಸ್ ಏರಲು ಏದುಸಿರು ಬಿಡಬೇಕಾಗುತ್ತದೆ. ಬಸ್ ಎಲ್ಲಿ ನಿಲ್ಲುತ್ತದೆ ಎಂಬುದು ತಿಳಿಯದೆ ಬಸ್ ನಿಲ್ದಾಣದ ಸುತ್ತಮುತ್ತ ಅಲೆಯಬೇಕಾಗುತ್ತದೆ. ಮಹಿಳೆಯರು, ಚಿಣ್ಣರು, ವೃದ್ಧರು ಬಸ್ ಏರಲು ಇನ್ನಿಲ್ಲದ ಸಾಹಸ ಮಾಡಬೇಕು’ ಎಂದು ಮದ್ದೂರು ನಂಜಮ್ಮ ಅಳಲು ತೋಡಿಕೊಂಡರು.

ಪುಟ್‌ಪಾತ್‌ನಲ್ಲಿ ನಿಲ್ಲುವ ಆಟೊಗಳು: ‘ಗೂಡ್ಸ್ ಮತ್ತು ಸಾರ್ವಜನಿಕರ ಆಟೊ ನಿಲ್ದಾಣ ಹುಡುಕಬೇಕಾದ ಸ್ಥಿತಿ ಇದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬರದಲ್ಲಿ ಎಲ್ಲೆಂದರಲ್ಲಿ ಆಟೊಗಳು ನಿಲ್ಲುತ್ತವೆ. ಕೆಲವೊಮ್ಮೆ ಪುಟ್‌ಪಾತ್‌ ಮೇಲೆ ಏರಿ ನಿಲ್ಲುತ್ತವೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಮತ್ತು ವಿದ್ಯಾರ್ಥಿಗಳು ಬಸ್ ನಿಲ್ದಾಣ ತಲುಪಲು ಹರ ಸಾಹಸ ಮಾಡಬೇಕಿದೆ. ಈ ಬಗ್ಗೆ ಯಾರು ಕ್ರಮ ವಹಿಸುತ್ತಿಲ್ಲ’ ಎಂದು ರಾಘು ಆರೋಪಿಸಿದರು.

‘ಪೊಲೀಸ್ ಚೌಕಿಗೆ ಬೀಗ’

‘ಬಸ್ ನಿಲ್ದಾಣ ಬಳಿ ಪೊಲೀಸ್ ಚೌಕಿ ಇದೆ. ಇದು ಹೆಸರಿಗಷ್ಟೇ ಇದೆ. ಇಲ್ಲಿ ಯಾರು ಇರುವುದಿಲ್ಲ. ಸಮೀಪದಲ್ಲಿ ನೂರಾರು ಆಟೊ ಮತ್ತು ದ್ವಿಚಕ್ರ ವಾಹನ ಅಡ್ಡಾದಿಡ್ಡಿ ನಿಲ್ಲುತ್ತವೆ. ಜನ ಸಂಚಾರಕ್ಕೆ ಇರುವ ಹಾದಿಗಳು ಒತ್ತುವರಿಯಾಗಿವೆ. ಹೋಟೆಲ್, ಅಂಗಡಿ, ಸಿಹಿತಿಂಡಿ ಮಾರಾಟ ಕೇಂದ್ರಗಳಾಗಿವೆ. ಇದರಿಂದ ಜನರು ಸಂಚರಿಸಲು ನಿತ್ಯ ನರಕ ಅನುಭವಿಸಬೇಕಿದೆ’ ಎಂದು ಮುಖಂಡ ಮಹೇಶ್ ದೂರಿದರು.

‘ಪಟ್ಟಣ ಪಂಚಾಯಿತಿ ಕ್ರಮವಹಿಸುತ್ತಿಲ್ಲ. ಸಣ್ಣಪುಟ್ಟ ಅಪಘಾತ ಸಾಮಾನ್ಯ ಎಂಬಂತೆ ಆಗಿದೆ. ಈ ಬಗ್ಗೆ ದೂರು ನೀಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಕರೆ ಮಾಡಿದರೂ ಮಾತನಾಡುವುದಿಲ್ಲ’ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT