ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ | ಬಂದ್‌ ಆಗದ ಕಳ್ಳದಾರಿ, ತಮಿಳುನಾಡಿನಿಂದ ವಲಸಿಗರ ಆಗಮನ

Last Updated 22 ಮೇ 2020, 20:00 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಚೆಕ್‌ಪೋಸ್ಟ್‌ ಮೂಲಕ ಬಂದರೆ ಪೊಲೀಸರು ಹಾಗೂ ಅಧಿಕಾರಿಗಳು ಹಿಡಿಯುತ್ತಾರೆ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ನೆಲೆಸಿರುವ ಜಿಲ್ಲೆಯ ಕೆಲವು ವಲಸಿಗರು ‌ಅರಣ್ಯ ಪ್ರದೇಶದಲ್ಲಿರುವ ಕಳ್ಳದಾರಿಯ ಮೂಲಕ ಬರುವುದನ್ನು ನಿಂತಿಲ್ಲ. ಇದನ್ನು ತಡೆಯಲು ಜಿಲ್ಲಾಡಳಿತದ ಕೈಗೊಂಡಿರುವ ಪ್ರಯತ್ನದ ನಡುವೆಯೂ ಕಳ್ಳದಾರಿಗಳು ಬಂದ್‌ ಆಗಿಲ್ಲ.

‘ಊರು ಸೇರಲು ಕಾಡಿನ ದಾರಿ ಹಿಡಿದ ಗ್ರಾಮಸ್ಥರು’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ಯ ಮಾರ್ಚ್‌ 31ರ ಸಂಚಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿತ್ತು.

ಅರಣ್ಯದಲ್ಲಿ ನಿಯಮ ಬಾಹಿರ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಆದೇಶವನ್ನೂ ಹೊರಡಿಸಿದ್ದರು. ನುಸುಳಿ ಬರಲು ಬಳಸುವ ದಾರಿಗಳನ್ನು ಮುಚ್ಚಬೇಕು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದರು. ಹಾಗಿದ್ದರೂ, ಕಳ್ಳದಾರಿಗಳಲ್ಲಿ ಜನರ ಸಂಚಾರ ಕಡಿಮೆ ಆದಂತೆ ಕಾಣುತ್ತಿಲ್ಲ. ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಊರುಗಳಿಗೆ ಹಿಂದಿರುಗುತ್ತಿರುವ ವಲಸಿಗರ ಸಂಖ್ಯೆ ಹೆಚ್ಚಾಗಿದೆ.

ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌ ಮತ್ತು ದೆಹಲಿ ರಾಜ್ಯಗಳಿಂದ ಇದೇ 31ರವರೆಗೆ ರಾಜ್ಯಕ್ಕೆ ಬರುವಂತಿಲ್ಲ ಎಂದು ಸರ್ಕಾರ ಹೇಳಿದೆ.

ತಮಿಳುನಾಡಿನಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಅಲ್ಲಿಂದ ಬಂದವರು ಸೋಂಕು ಹೊತ್ತು ತಂದರೆ ಏನು ಮಾಡುವುದು ಎಂಬ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಮಹದೇಶ್ವರ ಬೆಟ್ಟ, ಗೋಪಿನಾಥಂ, ಮಾರ್ಟಳ್ಳಿ, ಹೂಗ್ಯಂ ಗ್ರಾಮಗಳ ಜನರಿಗೆ ಹತ್ತಿರದಲ್ಲೇ ಇರುವ ತಮಿಳುನಾಡಿನ ಒಡನಾಟ ಹೆಚ್ಚು ಈ ಊರುಗಳ ಜನರು ಅಲ್ಲಿಂದ ಹೆಣ್ಣನ್ನು ತಂದಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ವ್ಯಾಪಾರಕ್ಕಾಗಿ ನೆರೆ ರಾಜ್ಯದವರನ್ನು ಅವಲಂಬಿಸಿರುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲ ಈಗ ಕಳ್ಳದಾರಿಯನ್ನು ಬಳಸಿಕೊಂಡು ಓಡಾಟ ನಡೆಸುತ್ತಿದ್ದಾರೆ ಎಂಬುದು ಸ್ಥಳೀಯರ ಮಾತು.

ಹನೂರು ತಾಲ್ಲೂಕಿನ ಹಲವು ಮಂದಿ ತಮಿಳುನಾಡಿನ ಬಟ್ಟೆ ಕಾರ್ಖಾನೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಅಲ್ಲಿ ಸಿಕ್ಕಿಹಾಕಿಕೊಂಡವರೆಲ್ಲ ಈಗ ನಿಯಮ ಸಡಿಲ ಮಾಡುತ್ತಿದ್ದಂತೆಯೇ ತಮ್ಮ ಊರುಗಳತ್ತ ಬರುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಾಲಾರ್ ನಿವಾಸಿ ನಾಗರಾಜು ಅವರು, ‘ಪೊಲೀಸರು ಎಷ್ಟು ಬಿಗಿ ಕ್ರಮ ಕೈಗೊಂಡಿದ್ದರೂ ಅವರ ಕಣ್ತಪ್ಪಿಸಿ ಅರಣ್ಯದ ಕಾಡುದಾರಿಯಲ್ಲಿ ಬೆಳಿಗ್ಗೆ 6‌ರ ಒಳಗೆ ಹಾಗೂ ಸಂಜೆ 6 ಗಂಟೆಯ ನಂತರ ತಮಿಳುನಾಡಿನಿಂದ ಗೋಪಿನಾಥಂ ಹಾಗೂ ಮಹದೇಶ್ವರ ಬೆಟ್ಟ ಮಾರ್ಗವಾಗಿ ವಲಸಿಗರು ಬರುತಿದ್ದಾರೆ. ಇನ್ನು ಕೆಲವರು ಊರಿನಲ್ಲಿ ಅನಗತ್ಯವಾಗಿ ತಿರುಗಾಡುತಿದ್ದಾರೆ. ಹತ್ತಿರ ಹೋಗಿ ವಿಚಾರಿಸಿದರೆ ಕಾಯಿಲೆ ಹರಡಬಹುದು ಎಂಬ ಭಯದಿಂದ ನಾವು ಯಾರನ್ನೂ ವಿಚಾರಿಸುವುದಿಲ್ಲ. ಎಲ್ಲಿ ಸೋಂಕು ಹರಡುವುದೋ ಎಂಬ ಆತಂಕ ಗ್ರಾಮದ ಜನರಲ್ಲಿ ಮನೆ ಮಾಡಿದೆ’ ಎಂದು ಹೇಳಿದರು.

ಗಸ್ತು ತಿರುವುದಕ್ಕೆ ಕ್ರಮ: ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೊ ಸಂದೇಶ ಪ್ರಕಟಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಚೆಕ್‌ಪೋಸ್ಟ್‌ನಲ್ಲಿ ಬಿಗಿ ಕ್ರಮ ಕೈಗೊಂಡಿರುವುದರಿಂದ ಜನರು ಕಳ್ಳದಾರಿಯಿಂದ ಬರುತ್ತಿದ್ದಾರೆ. ಈ ದಾರಿಗಳನ್ನು ಮುಚ್ಚಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಿದ್ದೇನೆ. ಗಸ್ತು ತಿರುಗಲೂ ನಿರ್ದೇಶನ ನೀಡಲಾಗಿದೆ. ಪಾಲಾರ್‌ ಗಡಿ ಭಾಗದಲ್ಲಿ ಪೊಲೀಸ್‌ ಚೌಕಿಯನ್ನು ಸ್ಥಾಪಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ಯಾವುದೀ ಕಳ್ಳ ದಾರಿಗಳು?
ಮೆಟ್ಟೂರಿನಿಂದ ಸಂಪರ್ಕ ಕಲ್ಪಿಸುವ ಪಾಲಾರ್ ಹಾಗೂ ತಮಿಳುನಾಡಿನ ಕಾರೇಕಾಡುವಿನ ಬಳಿ ಚೆಕ್‌ಪೋಸ್ಟ್‌ಗಳು‌ ಇರುವುದರಿಂದ ಗೋವಿಂದಪಡಿಯಿಂದ ಜಮೀನಿನ ಮೂಲಕ ಪಾಲಾರ್ ಬಳಿ ಕಾಲುದಾರಿಯಲ್ಲಿ ನದಿ ದಾಟಿ ಪಾಲಾರ್ ಗ್ರಾಮ ಪ್ರವೇಶಿಸಿ ಮಹದೇಶ್ವರಬೆಟ್ಟ ತಲುಪುತ್ತಿದ್ದಾರೆ.

ಇದರ ಜೊತೆಗೆ ಕಾರೇಕಾಡಿನಿಂದ ದೋಣಿ ಸಹಾಯದಿಂದ ಮಹದೇಶ್ವರ ಬೆಟ್ಟಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯಂತ್ರಗಾರದ ಬಳಿ ತಲುಪಿ ಗೋಪಿನಾಥಂ ಪ್ರವೇಶಿಸುತ್ತಿದ್ದಾರೆ.

ಅಲ್ಲದೇ, ಅಂದಿಯೂರು ಮಾರ್ಗವಾಗಿ ಮಾಕಂಪಾಳ್ಯ ತಲುಪಿ ಗಡಿಭಾಗವಾದ ಜಲ್ಲಿಪಾಳ್ಯದ ಮುಖಾಂತರ ಹೂಗ್ಯಂ, ಮಾರ್ಟಳ್ಳಿ ಹಾಗೂ ರಾಮಾಪುರಕ್ಕೆ ನುಸುಳಿ ಹನೂರುಗೆ ಬರುತ್ತಿದ್ದಾರೆ.

ಒಬ್ಬ ಸಾವು: ಚೆಕ್‌ಪೋಸ್ಟ್‌ನಲ್ಲಿ ಹೋಗುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕಾರಣಕ್ಕೆ ಮೆಟ್ಟೂರು ಆಸ್ಪತ್ರೆಗೆ ದಾಖಲಾಗಿರುವ ಗರ್ಣಿಣಿ ಮಗಳನ್ನು ನೋಡುವ ಹಂಬಲದಿಂದ ಕಾವೇರಿ ನದಿದಾಟಿ ತಮಿಳುನಾಡಿನತ್ತ ಹೋಗಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT