ಬುಧವಾರ, ಜನವರಿ 22, 2020
27 °C
ವಿವಿಧ ಕಡೆಗಳಿಂದ ಓದುಗರ ಕರೆ, ಸಮಸ್ಯೆಗಳ ಪ್ರಸ್ತಾವ– ಪರಿಹರಿಸುವ ಭರವಸೆ ನೀಡಿದ ಆಹಾರ ಇಲಾಖೆ ಅಧಿಕಾರಿಗಳು

ಸಿಲಿಂಡರ್‌ಗೆ ಸುಲಿಗೆ, ಸಮಯಕ್ಕೆ ತೆರೆಯದ ರೇಷನ್ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗ್ಯಾಸ್‌ ಏಜೆನ್ಸಿಗಳ ಸಿಬ್ಬಂದಿ ಅನಿಲ ಸಿಲಿಂಡರ್‌ ಮನೆಗೆ ತರುವಾಗ ನಿಗದಿತ ದರಕ್ಕಿಂತ ₹ 40ರಿಂದ ₹ 60ರ ವರೆಗೆ ಹೆಚ್ಚು ಹಣ ವಸೂಲು ಮಾಡುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ನ್ಯಾಯ ಬೆಲೆ ಅಂಗಡಿಗಳು ಎಲ್ಲ ದಿನ  ತೆರೆದಿರುವುದಿಲ್ಲ, ಪಡಿತರ ಅಕ್ಕಿಯನ್ನು ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಕಾರ್ಡ್‌ ದಾರರು ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರುತ್ತಾರೆ...

‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿದ್ದ ಓದುಗರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್‌.ರಾಚ‍ಪ್ಪ ಹಾಗೂ ಅಧಿಕಾರಿಗಳಿಗೆ ನೀಡಿದ ದೂರುಗಳಿವು.

ಸಿಲಿಂಡರ್‌ಗೆ ಹೆಚ್ಚಿನ ಹಣ ಪಡೆಯುತ್ತಿರುವುದು, ನ್ಯಾಯಬೆಲೆ ಅಂಗಡಿಗಳು ಸರಿಯಾಗಿ ತೆರೆಯದಿ ರುವುದರ ಬಗ್ಗೆ ಹೆಚ್ಚು ಕರೆಗಳು ಬಂದವು. 

ಗುಂಡ್ಲುಪೇಟೆ ತಾಲ್ಲೂಕಿನ ಸಿಂಡನ ಪುರದಿಂದ ಕರೆ ಮಾಡಿದ್ದ ಸಿದ್ದಲಿಂಗಪ್ಪ ಅವರು, ‘ಸಿಲಿಂಡರ್‌ ಮನೆಗೆ ತರುವ ಸಿಬ್ಬಂದಿ ಎಂಆರ್‌ಪಿ ದರಕ್ಕಿಂತ ₹ 50–₹ 60 ಹೆಚ್ಚು ಕೇಳುತ್ತಾರೆ. ಯಾಕೆ ಎಂದು ಕೇಳಿದರೆ ಸೇವಾ ಶುಲ್ಕ ಎಂದು ಹೇಳುತ್ತಾರೆ. ಆದರೆ, ಅದಕ್ಕೆ ರಸೀದಿ ಕೊಡುವುದಿಲ್ಲ. ಅವರು ಹಣ ತೆಗೆದುಕೊಳ್ಳಲಿ, ಅದಕ್ಕೆ ರಸೀದಿ ಕೊಡಬೇಕು. ಇಲ್ಲದಿದ್ದರೆ ಅದು ಸುಲಿಗೆಯಲ್ಲವೇ? ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಚಾಮರಾಜನಗರದ ರಾಮಸಮುದ್ರದಿಂದ ಕರೆ ಮಾಡಿದ್ದ ಮಹದೇವಸ್ವಾಮಿ, ಕೊಳ್ಳೇಗಾಲದ ತೇಜ್‌ ಬಹದ್ದೂರ್‌ ಶರ್ಮಾ ಅವರು ಕೂಡ ಇದೇ ವಿಚಾರದ ಬಗ್ಗೆ ಅಧಿಕಾರಿಗಳ ಗಮನಸೆಳೆದರು. 

ಕ್ರಮದ ಭರವಸೆ: ಇದಕ್ಕೆ ಪ್ರತಿಕ್ರಿಯಿಸಿದ ಆರ್‌.ರಾಚಪ್ಪ ಅವರು, ‘ಸೇವಾ ಶುಲ್ಕ ಎಂದು ಅವರು ಹೆಚ್ಚುವರಿ ಹಣ ಪಡೆಯಲು ಅವಕಾಶ ಇಲ್ಲ. ಗ್ರಾಹಕರ ಮನೆಗಳು ದೂರ ಇದ್ದರೆ, ಕಿ.ಮೀಗೆ ತಕ್ಕಂತೆ ನಿರ್ದಿಷ್ಟ ಶುಲ್ಕ ವಿಧಿಸುತ್ತಾರೆ. ಅದಕ್ಕೆ ಅವರು ರಸೀದಿ ಕೊಡಬೇಕು. ಅದು ಬಿಟ್ಟು, ಯಾವುದೇ ಕಾರಣ ಇಲ್ಲದೆ ಹಣ ಪಡೆಯುವಂತಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ. ಸಂಬಂಧಿಸಿದ ಏಜೆನ್ಸಿಗಳಿಗೆ ನೋಟಿಸ್‌ ನೀಡುತ್ತೇವೆ. ಆ ಬಳಿಕವೂ ಇದೇ ಪ್ರವೃತ್ತಿ ಮುಂದುವರಿದರೆ ಕ್ರಮ ಕೈಗೊಳ್ಳುತ್ತೇವೆ’ ಎಂದರು. 

ಐದಕ್ಕೂ ಹೆಚ್ಚು ಮಂದಿ ಈ ಬಗ್ಗೆ ದೂರು ನೀಡಿದ್ದರಿಂದ ತಕ್ಷಣವೇ ಈ ಬಗ್ಗೆ ಪರಿಶೀಲಿಸುವಂತೆ ಹಾಗೂ ದಿಢೀರ್‌ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕುವಂತೆ ಜೊತೆಗಿದ್ದ ಅಧಿಕಾರಿಗಳಿಗೆ ರಾಚಪ್ಪ ಅವರು ಸೂಚಿಸಿದರು. 

ನಿಗದಿತ ಸಮಯಕ್ಕೆ ತೆರೆಯಿರಿ: ‘ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ನಿಗದಿತ ಅವಧಿಯಲ್ಲಿ ಅಂಗಡಿ ತೆರೆಯುವುದಿಲ್ಲ. ವಾರಕ್ಕೆ ಮೂರ್ನಾಲ್ಕು ದಿನ ತೆರೆಯುತ್ತಾರೆ. ಆ ದಿನ ಹೋಗುವುದಕ್ಕೆ ಸಾಧ್ಯವಿಲ್ಲದಿದ್ದರೆ ಪಡಿತರವೇ ಸಿಗುವು ದಿಲ್ಲ’ ಎಂದು ಹಲವು ಓದುಗರು ದೂರಿದರು. 

ಹನೂರು ತಾಲ್ಲೂಕಿನ ಮೀಣ್ಯಂ ನಿಂದ ಕರೆ ಮಾಡಿದ್ದ ನಾಗರಾಜು, ರಮೇಶ್‌, ಬಿಳಿಗಿರಿ ರಂಗನಬೆಟ್ಟದ ಜಡೇಸ್ವಾಮಿ, ಮಹದೇಶ್ವರ ಬೆಟ್ಟದ ನಾಗರಾಜು, ಕೊಳ್ಳೇಗಾಲದ ದಿನಕನಹಳ್ಳಿ ಗ್ರಾಮದ ರವಿ ಅವರು ಈ ಸಮಸ್ಯೆಯನ್ನು ಮುಂದಿಟ್ಟರು. 

‘ನ್ಯಾಯಬೆಲೆ ಅಂಗಡಿಗಳು ಮಂಗಳವಾರ ಮಾತ್ರ ಮುಚ್ಚಿರುತ್ತವೆ. ಉಳಿದ ದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ  ತೆರೆದಿರಬೇಕು. ಪ್ರತಿ ತಿಂಗಳು 15ರಿಂದ 30ರ ವರೆಗೂ ಪಡಿತರ ವಿತರಣೆ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ಅಂತಹ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.  

‘ನಮ್ಮ ಭಾಗದಲ್ಲಿ ಮೀಣ್ಯಂನಲ್ಲಿ ಮಾತ್ರ ನ್ಯಾಯಬೆಲೆ ಅಂಗಡಿ ಇದೆ. ಲಕ್ಕುಂದಿ, ಕೆ.ಎಸ್‌.ದೊಡ್ಡಿ, ಸೂಳೆಕ್ಕೊಬ್ಬೆಗಳಲ್ಲಿ ನೂರಾರು ಕುಟುಂಬಗಳು ವಾಸವಿದ್ದು, ನ್ಯಾಯ ಬೆಲೆ ಅಂಗಡಿ ಇಲ್ಲದೇ ಇರುವುದರಿಂದ ತೊಂದರೆಯಾಗುತ್ತಿದೆ. ಹಾಗಾಗಿ ಇನ್ನೊಂದು ಅಂಗಡಿ ತೆರೆಯಬೇಕು’ ಎಂದು ಮೀಣ್ಯಂ ರಮೇಶ್‌ ಅವರು ಮನವಿ ಮಾಡಿದರು. 

‘ನ್ಯಾಯಬೆಲೆ ಅಂಗಡಿ ತೆರೆಯಲು ಇಂತಿಷ್ಟೇ ಕುಟುಂಬಗಳು ಇರಬೇಕು ಎಂಬ ನಿಯಮ ಇದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪನಿರ್ದೇಶಕರು ಹೇಳಿದರು. 

‘ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ನಡೆಯುತ್ತದೆ. ವಿದ್ಯುನ್ಮಾನ ತೂಕಯಂತ್ರ ಅಳವಡಿಸುವುದರಿಂದ ಇದನ್ನು ತಡೆಯಬಹುದು’ ಎಂದು ಕೊಳ್ಳೇಗಾಲದ ಜಯಶಂಕರ್‌ ಅವರು ಸಲಹೆ ನೀಡಿದರು. 

‘ಈ ವಿಚಾರ ಗಮನದಲ್ಲಿದ್ದು, ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ರಾಚಪ್ಪ ಉತ್ತರಿಸಿದರು. 

ಸೀಮೆಎಣ್ಣೆ ಕೊಡುತ್ತಿಲ್ಲ: ಕೊಳ್ಳೇಗಾಲದಿಂದ ಲಕ್ಷ್ಮಮ್ಮ ಎಂಬುವವರು ಕರೆ ಮಾಡಿ, ‘ನಮ್ಮಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಮೂರ್ನಾಲ್ಕು ತಿಂಗಳುಗಳಿಂದ ಸೀಮೆಎಣ್ಣೆ ಕೊಡುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಕರೆ ಮಾಡಿದವರಿಂದ ಕುಟುಂಬದ ವಿವರಗಳನ್ನು ಪಡೆದ ರಾಚಪ್ಪ ಅವರು, ‘ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ನೋಟಿಸ್‌ ಜಾರಿ ಮಾಡಿ, ಸೀಮೆಎಣ್ಣೆ ವಿತರಿಸಲು ತಕ್ಷಣ ಕ್ರಮ ವಹಿಸಲಾಗುವುದು’ ಎಂದರು.

ಒಬ್ಬರ ಪ್ರಮಾಣಪತ್ರ ಸಾಕು: ಚಾಮರಾಜನಗರದ ಪ್ರಸಾದ್‌ ಎಂಬುವವರು, ‘ಹೊಸ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಾರ್ಡ್‌ ಕಡ್ಡಾಯವೇ? ಎಲ್ಲಿಂದಾದರೂ ಸಲ್ಲಿಸಬಹುದೇ? ಕುಟುಂಬದ ಎಲ್ಲರ ಆದಾಯ ಪ್ರಮಾಣಪತ್ರ ಬೇಕೇ’ ಎಂದು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ರಾಚಪ್ಪ ಅವರು, ‘ಆನ್‌ಲೈನ್‌ನಲ್ಲಿ ಎಲ್ಲಿಂದ ಬೇಕಾದರೂ ಅರ್ಜಿ ಸಲ್ಲಿಸಬಹುದು. ನೀವು ಸಲ್ಲಿಸುವ ದಾಖಲೆಗಳ ಅನುಸಾರ, ಆಯಾ ತಾಲ್ಲೂಕಿಗೆ ಅರ್ಜಿ ರವಾನೆಯಾಗುತ್ತದೆ. ಅರ್ಜಿ ಸಲ್ಲಿಸುವಾಗ ಆಧಾರ್‌ ಕಾರ್ಡ್‌  ನೀಡುವುದು ಕಡ್ಡಾಯ. ಕುಟುಂಬದ ಮುಖ್ಯಸ್ಥರ ಆದಾಯದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು’ ಎಂದರು. 

ಮಹಿಳೆಯರ ಹೆಸರಲ್ಲಿ ಯಾಕೆ?: ‘ಹಿಂದೆ ಪಡಿತರ ಕಾರ್ಡ್‌ ನೀಡುವಾಗ ಗಂಡಸರನ್ನು ಕುಟುಂಬದ ಮುಖ್ಯಸ್ಥರು ಎಂದು ಪರಿಗಣಿಸಲಾಗುತ್ತಿತ್ತು. ಈಗ ಮಹಿಳೆಯರನ್ನು ಪರಿಗಣಿಸಲಾಗುತ್ತಿದೆ. ಇದು ಯಾಕೆ’ ಎಂದು ಲಿಂಗನಪುರದ ಧರ್ಮೇಶ್‌ ಅವರು ಪ್ರಶ್ನಿಸಿದರು. 

‘ಇದು ಸರ್ಕಾರದ ನಿರ್ಧಾರ. ಹಿಂದೆ ಪುರುಷರು ಪಡಿತರ ಕಾರ್ಡ್‌ ಅನ್ನು ಇತರರಿಗೆ ಅಡಮಾನ ಇಟ್ಟ ಪ್ರಕರಣಗಳೆಲ್ಲವೂ ನಡೆದಿತ್ತು. ಪುರುಷರು ಪಡಿತರವನ್ನು ದುರ್ಬಳಕೆ ಮಾಡಿದ ನಿದರ್ಶನಗಳೂ ಇವೆ’ ಎಂದು ರಾಚಪ್ಪ ವಿವರಿಸಿದರು.  ಇಲಾಖೆಯ ಸಹಾಯಕ ನಿರ್ದೇಶಕ ಎಂ.ಕುಬೇರಪ್ಪ, ಶಿರಸ್ತೇದಾರರಾದ ಸಿ.ಎಸ್‌.ಶ್ರೀಲಕ್ಷ್ಮಿ ಮತ್ತು ಸಿಬ್ಬಂದಿ ಚಿಕ್ಕಣ್ಣ ಇದ್ದರು.

ಕಾಳಸಂತೆಯಲ್ಲಿ ದಿನಸಿ ಅಂಗಡಿ, ಅಕ್ಕಿ ಮಾರಾಟ
ಚಾಮರಾಜನಗರದಿಂದ ಕರೆ ಮಾಡಿದ ವಿರಾಟ್ ಎಂಬುವವರು, ‘ಜಿಲ್ಲಾ ಕೇಂದ್ರದ ಪ್ರಮುಖ ಸ್ಥಳಗಳಲ್ಲಿರುವ ದಿನಸಿ ಅಂಗಡಿಗಳಲ್ಲಿ ಪಡಿತರ ಅಕ್ಕಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲಿಗೆ ದಾಳಿ ಮಾಡಿ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.  ಮೀಣ್ಯಂನಿಂದ ಕರೆ ಮಾಡಿದ ಬಸವಣ್ಣ ಹಾಗೂ ಯಳಂದೂರಿನ ಮಲ್ಲಿಗೆಹಳ್ಳಿಯ ರಾಜು ಅವರು, ಕಾರ್ಡ್‌ದಾರರು ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. 

‘ನಮ್ಮ ದಾಸ್ತಾನು ಕೇಂದ್ರಗಳಿಂದ ಪಡಿತರ ಅಕ್ಕಿ ಸೋರಿಕೆಯಾಗುತ್ತಿಲ್ಲ, ಅಕ್ರಮವಾಗಿ ಮಾರಾಟವೂ ಆಗುತ್ತಿಲ್ಲ. ಕಾರ್ಡ್‌ದಾರರೇ ಉಚಿತ ಅಕ್ಕಿಯನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ, ಅಕ್ಕಿಯನ್ನು ವಶಪಡಿಸಿಕೊಂಡು ಅಕ್ರಮವಾಗಿ ಸಾಗಣೆ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ’ ಎಂದು ರಾಚಪ್ಪ ಹೇಳಿದರು. 

‘ಯಾರಾದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಇಲಾಖೆಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ. ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಅಂತಹ ಕಾರ್ಡ್‌ದಾರರ ಕಾರ್ಡ್‌ಗಳನ್ನು ರದ್ದುಪಡಿಸುತ್ತೇವೆ. ದಿನಸಿ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಅಕ್ಕಿ ಮಾರಾಟದ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂಬ ಭರವಸೆಯನ್ನೂ ನೀಡಿದರು. 

ಇ–ಕೆವೈಸಿ: ಖಾಸಗಿಯವರಿಗೂ ಅವಕಾಶ ನೀಡಲು ಮನವಿ
ಇ–ಕೆವೈಸಿ ಪ್ರಕ್ರಿಯೆ ಬಗ್ಗೆ ಸ್ಪಷ್ಟನೆ ಕೇಳಿ ಕರೆ ಮಾಡಿದ್ದ ಚಾಮರಾಜನಗರ ತಾಲ್ಲೂಕಿನ ಹರವೆಯ ಶಿವಕುಮಾರ್‌ ಹಾಗೂ ಸಂತೇಮರಹಳ್ಳಿಯ ಸುಭಾಷ್‌ ಅವರು, ‘ಇ–ಕೆವೈಸಿ ಮಾಡಲು ಖಾಸಗಿಯವರಿಗೆ ಅವಕಾಶ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ಉಪ ನಿರ್ದೇಶಕರು, ‘ನ್ಯಾಯಬೆಲೆ ಅಂಗಡಿಗಳಲ್ಲೇ ದೃಢೀಕರಣ ಮಾಡಬೇಕು ಎಂದು ಸರ್ಕಾರ ಕಟ್ಟು ನಿಟ್ಟಾಗಿ ಸೂಚಿಸಿದೆ. ಈ ಉದ್ದೇಶಕ್ಕೆ ಅವರಿಗೆ ಪ್ರತ್ಯೇಕ ಲಾಗಿನ್‌ ಐಡಿಯನ್ನೂ ಕೊಡುತ್ತೇವೆ. ಖಾಸಗಿಯವರಿಗೆ ಅದನ್ನು ನೀಡಲು ಸಾಧ್ಯವಿಲ್ಲ’ ಎಂದರು. 

ಬೇಳೆ, ಎಣ್ಣೆ, ಗೋಧಿ ಸಿಗುತ್ತಿಲ್ಲ
ಹಲವು ಓದುಗರು, ‘ಈಗ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ಮಾತ್ರ ಸಿಗುತ್ತಿದೆ. ಬೇಳೆ, ಎಣ್ಣೆ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ನೀಡಲು ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದರು. 

ಕೊಳ್ಳೇಗಾಲದ ಜಯಶಂಕರ್‌ ಅವರು, ‘ಪಡಿತರದಾರರಿಗೆ ಅಕ್ಕಿ ಮಾತ್ರ ನೀಡಲಾಗುತ್ತಿದೆ. ಉಳಿದ ಆಹಾರ ಧಾನ್ಯಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದರು. ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿಯಿಂದ ಕರೆ ಮಾಡಿದ್ದ ರಾಜು ಅವರು ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಹನೂರಿನ ಓದುಗ ಶಿವರಾಜು ಕೂಡ ಇದೇ ಸಮಸ್ಯೆಯನ್ನು ಹೇಳಿಕೊಂಡರು. 

ಮೂವರಿಗೂ ಪ್ರತಿಕ್ರಿಯೆ ನೀಡಿದ ರಾಚಪ್ಪ ಅವರು, ‘ಹಿಂದೆ ಎಣ್ಣೆ, ಬೇಳೆ, ರಾಗಿ, ಗೋಧಿಯಂತಹ ಧಾನ್ಯಗಳನ್ನು ವಿತರಿಸಲಾಗುತ್ತಿದ್ದುದು ನಿಜ. ಆದರೆ, ಈಗ ಸರ್ಕಾರವು ಅಕ್ಕಿಯನ್ನು ಮಾತ್ರ ಪೂರೈಸುತ್ತಿದೆ. ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಈ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದೇಶ ಬಂದ ತಕ್ಷಣ ಜಿಲ್ಲೆಯಲ್ಲಿ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು. 

ಅನರ್ಹ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿ
ಆರ್ಥಿಕವಾಗಿ ಸಬಲರಾಗಿದ್ದರೂ, ಆದಾಯದ ಬಗ್ಗೆ ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್‌ / ಅಂತ್ಯೋದಯ ಕಾರ್ಡ್‌ ಮಾಡಿಸಿಕೊಂಡಿರುವವರು ತಕ್ಷಣವೇ ತಮ್ಮ ಕಾರ್ಡ್‌ಗಳನ್ನು ಇಲಾಖೆಗೆ ವಾಪಸ್‌ ಸಲ್ಲಿಸುವಂತೆ ರಾಚಪ್ಪ ಮನವಿ ಮಾಡಿದರು. 

‘ಡಿಸೆಂಬರ್‌ 31ರವರೆಗೆ ಅವಕಾಶ ಇದೆ. ಈ ಅವಧಿಯ ಒಳಗೆ ಸ್ವಯಂ ಪ್ರೇರಿತರಾಗಿ ಬಂದು ಕಾರ್ಡ್‌ ಹಿಂದಿರುಗಿಸಬೇಕು. ಆ ಬಳಿಕ ನಾವು ನಡೆಸುವ ಪರಿಶೀಲನೆ ವೇಳೆ ಸಿಕ್ಕಿ ಬಿದ್ದರೆ, ದಂಡ ವಿಧಿಸುತ್ತೇವೆ. ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸುತ್ತೇವೆ’ ಎಂದು ಅವರು ಎಚ್ಚರಿಸಿದರು. 

‘ಇದುವರೆಗೂ 933 ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ್ದೇವೆ’ ಎಂದು ಮಾಹಿತಿ ನೀಡಿದರು. 

ಇ–ಕೆವೈಸಿ ಮಾಡಿಸಿ
ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವವರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್‌ ದೃಢೀಕರಣ (ಇ–ಕೆವೈಸಿ) ಮಾಡಿಸಬೇಕು ಎಂದು ಆರ್‌.ರಾಚಪ್ಪ ಹೇಳಿದರು. 

‘ಈ ಹಿಂದೆ ದೃಢೀಕರಣ ಪ್ರಕ್ರಿಯೆ ಆರಂಭಿಸಲಾಗಿತ್ತು. ಸರ್ಕಾರದ ಆದೇಶದ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಡಿಸೆಂಬರ್‌ 1ರಿಂದ ಮತ್ತೆ ದೃಢೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ. ಈ ತಿಂಗಳು 10ರವರೆಗೆ ನಡೆಯಲಿದೆ. ಮುಂದಿನ ತಿಂಗಳು ಮೊದಲ 10 ದಿನ ನಡೆಯಲಿದೆ’ ಎಂದರು. 

‘ಪಡಿತರ ಚೀಟಿಯಲ್ಲಿ ಹೆಸರು ಇರುವವರೆಲ್ಲ ನ್ಯಾಯ ಬೆಲೆ ಅಂಗಡಿಗಳಿಗೆ ಬಂದು ಬಯೋಮೆಟ್ರಿಕ್‌ ಸಾಧನದಲ್ಲಿ ಬೆರಳಚ್ಚು ನೀಡಿ ದೃಢೀಕರಣ ಮಾಡಬೇಕು. ಉದಾಹರಣೆಗೆ, ಪಡಿತರ ಚೀಟಿಯಲ್ಲಿ ಕುಟುಂಬದ ಐವರು ಸದಸ್ಯರ ಹೆಸರಿದ್ದರೆ ಅಷ್ಟೂ ಜನರು ಇ–ಕೆವೈಸಿ ಮಾಡಿಸಿಕೊಳ್ಳಬೇಕು. ಯಾರು ಮಾಡಿಸಿಲ್ಲವೋ ಅವರಿಗೆ ಪಡಿತರ ನೀಡುವುದಿಲ್ಲ’ ಎಂದು ಹೇಳಿದರು. 

ಈಗಾಗಲೇ ದೃಢೀಕರಣ ಮಾಡಿಸಿಕೊಂಡಿದ್ದರೆ, ಮತ್ತೆ ದೃಢೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು