ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿಬೆಟ್ಟ:16ಕ್ಕೆ ರಂಗನಾಥಸ್ವಾಮಿ ರಥೋತ್ಸವ, ಚಿಕ್ಕತೇರು ಕಟ್ಟುವ ಕಾರ್ಯ ಆರಂಭ

Published 3 ಜನವರಿ 2024, 7:09 IST
Last Updated 3 ಜನವರಿ 2024, 7:09 IST
ಅಕ್ಷರ ಗಾತ್ರ

ಯಳಂದೂರು: ಇದೇ 16ರಂದು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಚಿಕ್ಕಜಾತ್ರೆಗೆ ಸಿದ್ಧತೆ ಆರಂಭವಾಗಿದೆ. ತೇರು ಕಟ್ಟುವ ಕೆಲಸಕ್ಕೆ ಸ್ಥಳೀಯರು ಚಾಲನೆ ನೀಡಿದ್ದಾರೆ. 

ಈ ಜಾತ್ರೆಯಲ್ಲಿ ದೇವಾಲಯದ ಚಿಕ್ಕತೇರನ್ನು ಬೆಟ್ಟದಲ್ಲಿರುವ ದೇವಾಲಯದ ಆವರಣದಲ್ಲಿ ಎಳೆಯಲಾಗುತ್ತದೆ. 

ಸುಗ್ಗಿ ಮುಗಿದು, ಮನೆ-ಮನದಲ್ಲಿ ಸಂಭ್ರಮ ತುಂಬುವ ಬೆಟ್ಟದ ಸಂಕ್ರಾಂತಿ ಜಾತ್ರೆ ಮುಂಬರುವ ಹಬ್ಬಗಳ ಆಚರಣೆಗೆ ಮುನ್ನುಡಿ ಬರೆಯುತ್ತದೆ. ಈ ಬಾರಿ ಬರ ಪರಿಸ್ಥಿತಿ ರೈತರನ್ನು ಕಾಡಿದೆ. ಅದರ ನಡುವೆಯೇ ಜಾತ್ರೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ರೈತರು ಸಜ್ಜುಗೊಂಡಿದ್ದಾರೆ. ಜಾತ್ರೆಗೆ ಬರುವ ರೈತರು, ದವಸ ಧಾನ್ಯಗಳನ್ನು ರಂಗನಾಥನಿಗೆ ಅರ್ಪಿಸುತ್ತಾರೆ. 

‘ಈ ಸಲ ಅನ್ನದಾತರಿಗೆ ಹೆಚ್ಚಿನ ಫಸಲು ಕೈಸೇರಿಲ್ಲ. ಹೊಲ-ಗದ್ದೆಗಳ ನಡುವೆ ಹೆಚ್ಚಿನ ನೀರು ಹರಿದಿಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಸುರಿದು, ಸಮೃದ್ಧ ಬೆಳೆ ಕೈಸೇರಲಿ. ಜನ-ಜಾನುವಾರುಗಳ ಸ್ವಾಸ್ಥ್ಯದಲ್ಲಿ ಪ್ರಗತಿಯಾಗಲಿ ಎಂದು ರಂಗನಾಥನಿಗೆ ಭಕ್ತರು ಹರಕೆ ಹೊತ್ತು ಗುಡಿ ಮುಂದೆ ಹಣ್ಣುಕಾಯಿ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ.  ಗ್ರಾಮೀಣ ಭಾಗದ ಕೃಷಿಕರು ಭತ್ತದ ತೋರಣ, ಧಾನ್ಯಗಳನ್ನು ದೇವರಿಗೆ ಸಮರ್ಪಿಸಿ ಭಕ್ತಿ ಮರೆಯುತ್ತಾರೆ’ ಎಂದು ಮಾಂಬಳ್ಳಿಯ ಭಕ್ತ ನಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೋವಿಡ್‌ ಭೀತಿ: ಈ ಬಾರಿ ಜಾತ್ರೆಗೆ ಕೋವಿಡ್‌ ಭೀತಿಯೂ ಎದುರಾಗಿದೆ. ಆದರೆ, ಜಿಲ್ಲಾಡಳಿತ ಈ ವರೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. 

ಇತ್ತೀಚೆಗೆ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರತಿ ವರ್ಷದಂತೆ ಅದ್ದೂರಿಯಾಗಿ ರಥೋತ್ಸವ ನಡೆಸಲು ತೀರ್ಮಾನಿಸಲಾಗಿದೆ. 

ಮೂಲಸೌಕರ್ಯ, ಸ್ವಚ್ಛತೆ, ಬಸ್‌ ವ್ಯವಸ್ಥೆ ಸೇರಿದಂತೆ ಭಕ್ತರ ಅನುಕೂಲಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಶಾಸಕರು ಮತ್ತು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಹೆಚ್ಚಿನ ಭಕ್ತರ ನಿರೀಕ್ಷೆ

ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಮೊದಲಿಗೆ ಜಿಲ್ಲೆಯಲ್ಲಿ ನಡೆಯುವ ಮೊದಲ ಜಾತ್ರೆ ಎಂದರೆ ಚಾಮರಾಜನಗರ ತಾಲ್ಲೂಕಿನ ಕಸ್ತೂರು ಬಂಡಿ ಜಾತ್ರೆ. ಆದರೆ ಈ ಬಾರಿ ಅದು 21ಕ್ಕೆ ನಡೆಯಲಿದೆ. ಹಾಗಾಗಿ ಈ ವರ್ಷ ಬಿಳಿಗಿರಿರಂಗನಬೆಟ್ಟದ ಚಿಕ್ಕ ತೇರು ಮೊದಲ ಜಾತ್ರೆಯಾಗಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯೂ ಇದೆ.   ‘16ರಂದು ಮಧ್ಯಾಹ್ನ 11.54 ರಿಂದ 12.05 ರೊಳಗೆ ಸಲ್ಲುವ ಶುಭ ಮೀನ ಗುರು ನವಾಂಶ ಶುಭ ಮುಹೂರ್ತದಲ್ಲಿ ರಥೋತ್ಸವ ಜರುಗಲಿದೆ.  18ರಂದು ಜಾತ್ರೋತ್ಸವ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿದೆ’ ಎಂದು ದೇವಾಲಯದ ಅರ್ಚಕ ರವಿಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT