ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವಾಲ್ಮೀಕಿ ಆಶ್ರಮ ಶಾಲೆ ಹೆಸರಿಗೆ ಗಿರಿಜನರ ವಿರೋಧ

Last Updated 3 ಆಗಸ್ಟ್ 2021, 13:15 IST
ಅಕ್ಷರ ಗಾತ್ರ

ಚಾಮರಾಜನಗರ: ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು ‘ವಾಲ್ಮೀಕಿ ಆಶ್ರಮ ಶಾಲೆ' ಎಂದು ಮರು ನಾಮಕರಣ ಮಾಡುವ ಆದೇಶವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಗಿರಿಜನರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಯನ್ನೂ ಸಲ್ಲಿಸಿದರು.

‘ರಾಜ್ಯದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ರಾಮನಗರ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸೋಲಿಗರು, ಜೇನು ಕುರುಬ, ಕೊರಗ, ಯರವ, ಬೆಟ್ಟ ಕುರುಬ/ಕಾಡು ಕುರುಬ, ಹಸಲರು, ಗೌಡಲು, ಇರುಳೀಗ, ಸಿದ್ದಿ ಕುಡಿಯ, ಮಲೆ ಕುಡಿಯ ಮತ್ತು ಪಣಿಯನ್‌ ಆದಿವಾಸಿ ಸಮುದಾಯಗಳು ಶತ ಶತಮಾನಗಳಿಂದ ವಾಸುತ್ತಿದ್ದಾರೆ. ಕೇಂದ್ರ ಸರ್ಕಾರ 1960–61ರಿಂದ ಗಿರಿಜನ ಆಶ್ರಮ ಶಾಲೆಗಳನ್ನು ಪ್ರಾರಂಭಿಸಿಅರಣ್ಯದಲ್ಲಿ ವಾಸವಾಗಿರುವ ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಈ ಶಾಲೆಗಳನ್ನು ಇತ್ತೀಚೆಗೆ ಬುಡಕಟ್ಟು ಆಶ್ರಮ ಶಾಲೆ ಎಂದು ನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರವು ಮಂಡಿಸಿರುವ ಈಸಾಲಿನ ಬಜೆಟ್‌ನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಘೋಷಿಸಿತ್ತು. ಸಮಾಜ ಕಲ್ಯಾಣ ಇಲಾಖೆಯು ಜುಲೈ 5ರಂದು ಆಶ್ರಮ ಶಾಲೆಗಳನ್ನು ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ ಮಾಡಲು ಆದೇಶ ಹೊರಡಿಸಿದೆ’ ಎಂದು ಅವರು ಆರೋಪಿಸಿದರು.

‘ಬುಡಕಟ್ಟು ಆಶ್ರಮ ಶಾಲೆಗಳಿಗೆ ಹೊಸ ಹೆಸರುಗಳಿಂದ ನಾಮಕರಣ ಮಾಡಿದರೆ ಅರಣ್ಯ ಆದಿವಾಸಿಗಳ ಗುರುತಿಸುವಿಕೆ, ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ಭಾಷೆ, ಕಲೆ, ಸಾಹಿತ್ಯ, ಕಾಡಿನ ಜ್ಞಾನ... ಎಲ್ಲವೂ ನಾಶವಾಗಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಅರಣ್ಯ ವಾಸಿಗಳು ಹಿಂದಿನಿಂದಲೂ ಪ್ರತ್ಯೇಕವಾಗಿಯೇ ಇದ್ದು, ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯನ್ನು ಹೊಂದಿದ್ದಾರೆ. ಒಂದೇ ಸಮುದಾಯಕ್ಕೆ ಸೇರಿದ ಹೆಸರನ್ನು ಎಲ್ಲ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಹೆಸರಿಡುವುದು ಎಷ್ಟು ಸರಿ? ರಾಜ್ಯದಲ್ಲಿರುವ ಆದಿವಾಸಿಗಳು ವಿಭಿನ್ನವಾಗಿರುವುದನ್ನು ಸರ್ಕಾರ ಗಮನಿಸಬೇಕು ಮತ್ತು ಬುಡಕಟ್ಟು ಆಶ್ರಮ ಶಾಲೆಗಳನ್ನು ವಾಲ್ಮೀಕಿ ಹೆಸರಿನಿಂದ ಮರುನಾಮಕರಣ ಮಾಡುವುದನ್ನು ಕೈ ಬಿಟ್ಟು, ಹಿಂದಿನ ಬುಡಕಟ್ಟು ಆಶ್ರಮ ಶಾಲೆ ಹೆಸರನ್ನೇ ಮುಂದುವರಿಸಬೇಕು ಇಲ್ಲವೇ ಆದಿವಾಸಿಗಳ ನಾಯಕ ‘ಬಿರ್ಸಾಮುಂಡ’ ಹೆಸರಿನಲ್ಲಿ ನಾಮಕರಣ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಸಿ.ಮಹದೇವ, ಕಾರ್ಯದರ್ಶಿ ಡಾ.ಸಿ.ಮಾದೇಗೌಡ, ಪದಾಧಿಕಾರಿಗಳಾದ, ಕೊಣೂರೇಗೌಡ, ಜಡೇಸ್ವಾಮಿ, ರಾಮೇಗೌಡ, ಮಾದೇಶ, ಮಹದೇವಯ್ಯ, ನಂಜೇಗೌಡ, ನಾಗಮ್ಮ, ಮಾದಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT