ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ವಿಳಂಬ, ಫೆಲೋಶಿಪ್ ಕಡಿತಕ್ಕೆ ಖಂಡನೆ

ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದಿಂದ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ
Last Updated 28 ನವೆಂಬರ್ 2020, 13:57 IST
ಅಕ್ಷರ ಗಾತ್ರ

ಚಾಮರಾಜನಗರ: ವಿದ್ಯಾರ್ಥಿವೇತನಮಂಜೂರಾತಿಯಲ್ಲಿ ವಿಳಂಬ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುವ ಪಿಎಚ್.ಡಿ, ಎಂ‌ಫಿಲ್ ಫೆಲೋಶಿಪ್ ಕಡಿತಗೊಳಿಸಿರುವುದನ್ನು‌ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸುಲ್ತಾನ್ ಷರೀಫ್ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ‌ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿ ಅಲ್ಲಿ ಪ್ರತಿಭಟನೆ‌ ನಡೆಸಿದರು. ನಂತರ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡ್‌ನಿಂದಾಗಿ ಜನರು ಸಂಕಷ್ಟಕ್ಕೆ ಗುರಿಯಾಗಿದ್ದು, ಪೋಷಕರಿಗೆ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಒಂದೇ ಸಲ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅವಲಂಬಿಸಿದ್ದಾರೆ. ಆದರೆ, ವಿದ್ಯಾರ್ಥಿವೇತನ ನೀಡಿಕೆಯಲ್ಲಿನ ಅವ್ಯವಸ್ಥೆಯಿಂದಾಗಿ ಹಲವು ವಿದ್ಯಾರ್ಥಿಗಳು ಆತಂಕಕ್ಕೆ‌ ಒಳಗಾಗಿದ್ದಾರೆ’ ಎಂದು ಪ್ರತಿಭಟನನಿರತರು ಆರೋಪಿಸಿದರು.

‘ಅಲ್ಪಸಂಖ್ಯಾತ ವಿದ್ಯಾರ್ಥಿಗಳವಿದ್ಯಾರ್ಥಿವೇತನ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ. ಕಳೆದ ವರ್ಷ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಹಣ ಬಂದಿಲ್ಲ. ಕುಂಟು‌‌ ನೆಪಗಳನ್ನು ಹೇಳಿ ಅರ್ಜಿ ವಿಲೇವಾರಿಯನ್ನು ಮುಂದೂಡಲಾಗುತ್ತಿದೆ. ಕೆಲವರಿಗೆ ವಿದ್ಯಾರ್ಥಿ ವೇತನ ಮಂಜೂರಾಗಿದ್ದರೂ ಖಾತೆಗೆ ಹಣ ಜಮೆ ಆಗಿಲ್ಲ’ ಎಂದು ದೂರಿದರು.

‘ಅಲ್ಪಸಂಖ್ಯಾತ ಇಲಾಖೆಯು ಪಿಎಚ್ ಡಿ ಹಾಗೂ ಎಂಫಿಲ್ ಮಾಡುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹25 ಸಾವಿರ ಪ್ರೋತ್ಸಾಹ ಧನ ಹಾಗೂ ₹10 ಸಾವಿರ ವಾರ್ಷಿಕ ನಿರ್ವಹಣಾ ವೆಚ್ಚ ನೀಡುತ್ತಿತ್ತು. ಆದರೆ, ಈಗ ಸರ್ಕಾರ ದಿಢೀರ್ ಆಗಿ ಮಾಸಿಕವಾಗಿ‌ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ₹10 ಸಾವಿರಕ್ಕೆ ಇಳಿಸಿದೆ. ವಾರ್ಷಿಕ ನಿರ್ವಹಣಾ ವೆಚ್ಚವನ್ನು ರದ್ದುಗೊಳಿಸಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ದುರುದ್ದೇಶವಿದೆ’ ಎಂದು ಆರೋಪಿಸಿದರು.

'ವಿದ್ಯಾರ್ಥಿವೇತನ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮಂಜೂರಾಗಿರುವ ಎಲ್ಲ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ‌ ಬಿಡುಗಡೆ ಮಾಡಬೇಕು. ಪಿಎಚ್. ಡಿ, ಎಂ.ಫಿಲ್ ಫೆಲೋಶಿಪ್ ಕಡಿತಗೊಳಿಸಿರುವ ಆದೇಶ ವಾಪಸ್ ಪಡೆಯಬೇಕು' ಎಂದು ಅವರು ಆಗ್ರಹಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ಲಾ, ಕಾರ್ಯದರ್ಶಿಗಳಾದ ಕಲೀಮ್ ಉಲ್ಲಾ, ಸುಹೇಲ್‌ ಪಾಷ, ಸದಸ್ಯರಾದ ಸರ್ದಾರ್ ಫರೀದ್, ಸೈಯದ್ ಮುಜಾಮಿಲ್, ಜುನೇದ್ ಖಾನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT