ಶನಿವಾರ, ಜುಲೈ 31, 2021
24 °C
ಸಾವಯವ ಪದ್ಧತಿಯಲ್ಲಿ ವಿವಿಧ ಬೆಳೆ, ಜೀವಾಮೃತವೇ ಪ್ರಧಾನ ಗೊಬ್ಬರ

ಸರ್ಕಾರಿ ನೌಕರಿ ಬಿಟ್ಟು ಕೃಷಿಯಲ್ಲಿ ಗೆದ್ದ ಯುವಕ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಸಾವಯವ ಕೃಷಿಯಲ್ಲಿ ಬಹುಬೆಳೆ ಪದ್ಧತಿ ಅನುಸರಿಸುತ್ತಾ ಬಂದಿರುವ ಕುದೇರು ಗ್ರಾಮದ ಫಣಿರಾಜ್‌ಮೂರ್ತಿ‌ ಅವರು ಈಗ ‌ಕೃಷಿಯಲ್ಲಿ ಯಶಸ್ಸು ಗಳಿಸುತ್ತಿದ್ದಾರೆ. 

ಆರೂವರೆ ಎಕರೆ ಜಮೀನಿನಲ್ಲಿ ಬಾಳೆ, ಟೊಮೆಟೊ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ಫಣಿರಾಜ್‌ ಅವರು ಈಗ ಅಡಿಕೆ ಕೃಷಿಗೂ ಮುನ್ನುಡಿ ಬರೆದಿದ್ದಾರೆ. 

ಕೈಬೀಸಿ ಕರೆದ ಕೃಷಿ: ಫಣಿರಾಜ್‌ ಎಂಸಿಎ ಪದವೀಧರ. ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಆ ಕೆಲಸವನ್ನೂ ಬಿಟ್ಟು ಕುದೇರು ಚಾಮುಲ್‍ನಲ್ಲಿ ವಿಸ್ತರಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಮೊದಲಿನಿಂದಲೂ ವ್ಯವಸಾಯದ ಬಗ್ಗೆ ವಿಶೇಷ ಒಲವು ಹೊಂದಿದ್ದ ಅವರು, ನಂತರ ಆ ಕೆಲಸವನ್ನೂ ಬಿಟ್ಟು ವ್ಯವಸಾಯ ಮಾಡಲು ಮುಂದಾದರು. ಈಗ ಅವರು ಪೂರ್ಣ ಪ್ರಮಾಣದ ಕೃಷಿಕ.

ಐದು ಎಕರೆ ಜಾಗದಲ್ಲಿ ಬಾಳೆ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆದಿದ್ದಾರೆ. 5 ಎಕರೆ ಬಾಳೆಯ ಜೊತೆಗೆ 30 ಅಡಿ ಅಂತರದಲ್ಲಿ ತೆಂಗು ಬೆಳೆಯುತ್ತಿದ್ದಾರೆ. 10 ಅಡಿ ಅಂತರದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ.

ಸಾವಯವ: ಕೃಷಿಯಲ್ಲಿ ಅವರು ರಾಸಾಯನಿಕ ಬಳಸುತ್ತಿಲ್ಲ. ಜೀವಾಮೃತವನ್ನು ತಾವೇ ತಯಾರಿಸಿ ಬೆಳೆಗಳಿಗೆ ಗೊಬ್ಬರವಾಗಿ ನೀಡುತ್ತಿದ್ದಾರೆ. 

200 ಲೀಟರ್ ನೀರಿಗೆ 1 ಕೆ.ಜಿ ದೇಸಿ ಹಸುವಿನ ತುಪ್ಪ, 10 ಲೀಟರ್ ಗಂಜಲ, 4 ಲೀಟರ್ ಹಾಲು, 4 ಲೀಟರ್ ಮೊಸರು, 4 ಎಳನೀರು, 30 ಕೆ.ಜಿ ಸೆಗಣಿ, 10 ಅಚ್ಚು ಬೆಲ್ಲ ಇವುಗಳನ್ನು ಮಿಶ್ರಣ ಮಾಡಿ 10 ದಿನಗಳವರೆಗೆ ನೆನೆಯಲು ಇಡುತ್ತಾರೆ. ನಂತರ ಬೆಳೆಗಳಿಗೆ ಹಾಕುತ್ತಾರೆ.

‘ರಾಸಾಯನಿಕ ಗೊಬ್ಬರದ ಬದಲಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೀವಾಮೃತ ಬಳಸುತ್ತಿದ್ದೇನೆ. ಇದರಿಂದಾಗಿ ಕೀಟಬಾಧೆ ಇರುವುದಿಲ್ಲ. ರೋಗ ರುಜಿನಗಳು ಬೆಳೆಗಳಿಗೆ ತಗಲುವುದಿಲ್ಲ’ ಎಂದು ಎಂದು ಫಣಿರಾಜ್‍ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಮೀನಿನ ಒಂದು ಭಾಗದಲ್ಲಿ 40x40 ಅಂತರದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಪಂಪ್‍ಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸುವ ಜತೆಗೆ ಕೃಷಿಹೊಂಡಕ್ಕೆ ತುಂಬಿಸಿ ಅಲ್ಲಿಂದಲೂ ಬೆಳೆಗಳಿಗೆ ಹಾಯಿಸುತ್ತಾರೆ.

‘5 ಎಕರೆ ಏಲಕ್ಕಿ ಬಾಳೆ ವ್ಯವಸಾಯಕ್ಕೆ ಪ್ರತಿ ಎಕರೆಗೆ ₹ 40 ಸಾವಿರದಂತೆ ಎರಡೂವರೆ ಲಕ್ಷದವರೆಗೆ ಖರ್ಚು ಮಾಡಿದ್ದಾರೆ. ಕಟಾವು ಹಂತಕ್ಕೆ ಬಂದಾಗ ಒಂದು ಬಾಳೆ ಗಿಡದಲ್ಲಿ ಬಾಳೆಗೊನೆ 10 ಕೆ.ಜಿವರೆಗೂ ತೂಕ ಬರುತ್ತದೆ. ಪ್ರತಿ ಕೆ.ಜಿಗೆ ಕನಿಷ್ಠ  ₹ 30ರಂತೆ ಒಂದು ಎಕರೆಯಲ್ಲಿ ₹ 3 ಲಕ್ಷದಂತೆ 5 ಎಕರೆಗೆ ₹ 15 ಲಕ್ಷದವರೆಗೂ ಬಾಳೆಗೊನೆ ಮಾರಾಟವಾಗುತ್ತದೆ’ ಎಂದು ಫಣಿರಾಜ್ ಮೂರ್ತಿ ಹೇಳಿದರು.

ದೇಸಿ ಹಸು ಸಾಕಣೆ

ಫಣಿರಾಜ್‌ ಅವರು ಒಂದು ಎಕರೆಯಲ್ಲಿ ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಮೂರು ದೇಸಿ ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ ಡೇರಿಗೆ ಹಾಲು ಸರಬರಾಜು ಮಾಡಿ, ವಾರಕೊಮ್ಮೆ ಹಣ ಗಳಿಸುತ್ತಿದ್ದಾರೆ. ಜಮೀನಿನಲ್ಲಿ ಪ್ರತ್ಯೇಕವಾಗಿ ಹಸುಗಳಿಗೆ ಮೇವು ಬೆಳೆಸುತ್ತಿದ್ದಾರೆ.

‘ನಮ್ಮಲ್ಲಿಯೇ ಜಮೀನು ಇರುವುದರಿಂದ ಸಂಪಾದನೆ ಮಾಡುವುದಕ್ಕೆ ಅವಕಾಶ ಇದೆ. ಹಾಗಾಗಿ ಬೇರೆ ಕಡೆ ದುಡಿಯುವುದು ಬೇಡ ಎನಿಸಿತು. ವ್ಯವಸಾಯದಲ್ಲಿ ತೊಡಗಿಸಿಕೊಂಡು ತೃಪ್ತಿ ಕಾಣುತ್ತಿದ್ದೇನೆ. ರಾಸಾಯನಿಕವಾಗಿದ್ದ ಭೂಮಿಯನ್ನು ಅದರಿಂದ ಮುಕ್ತಗೊಳಿಸುತ್ತಿದ್ದೇನೆ. ಹಂತ ಹಂತವಾಗಿ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ಇದರಿಂದ ಮಣ್ಣಿನ ಗುಣಮಟ್ಟ ಹೆಚ್ಚಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು