ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಹಳ್ಳಿ ರಾಜಕಾರಣಕ್ಕೆ ರೈತ ಸಂಘ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರ ಸ್ಪರ್ಧೆ, ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರದ ಆಶಯ
Last Updated 10 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಇದೇ 22 ಮತ್ತು 27ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ರೈತ ಸಂಘಗಳ ಕಾರ್ಯಕರ್ತರು ಕೂಡ ಒಲವು ತೋ‌ರುತ್ತಿದ್ದು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ಹಲವರು ನಾಮಪತ್ರ ಸಲ್ಲಿಸಿದ್ದಾರೆ.

ರೈತ ಪರ ಹೋರಾಟದ ಮೂಲಕ ಗ್ರಾಮೀಣ ಮಟ್ಟದಲ್ಲಿ ಗುರುತಿಸಿಕೊಂಡಿರುವ ರೈತ ಸಂಘಗಳ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ತಮ್ಮ ಸಮಾಜಮುಖಿ ಕಾರ್ಯವನ್ನೇ ಮುಂದಿಟ್ಟುಕೊಂಡು ಹಳ್ಳಿ ರಾಜಕಾರಣಕ್ಕೆ ಧುಮುಕಲು ಅಣಿಯಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ರೈತ ಸಂಘಟನೆಗಳು ಪ್ರಬಲವಾಗಿದ್ದು, ರೈತ ಸಂಘ ಹಾಗೂ ಹಸಿರು ಸೇನೆಯ ಎರಡು ಬಣಗಳಿವೆ. ಎರಡೂ ಬಣಗಳ ಕಾರ್ಯಕರ್ತರು ಸ್ಪರ್ಧಿಸುತ್ತಿದ್ದಾರೆ. ಸಂಘಟನೆಗಳ ಮುಖಂಡರೇ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಸಂಘದ ಕಾರ್ಯಕರ್ತರು ಚುನಾವಣೆಯಲ್ಲಿ ಗೆದ್ದರೆ, ಪಂಚಾಯಿತಿ ಹಾಗೂ ರೈತರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲು ಅನುಕೂಲವಾಗಲಿದೆ ಎಂಬುದು ಅವರ ಲೆಕ್ಕಾಚಾರ.

ರೈತ ಪರ ವ್ಯಕ್ತಿಗಳೇ ಆರಿಸಿ ಬಂದು ಆಡಳಿತ ನಡೆಸಿದರೆ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಬಹುದು ಎಂಬ ಆಶಯವನ್ನೂ ಮುಖಂಡರು ವ್ಯಕ್ತಪಡಿಸುತ್ತಾರೆ.

‘ಇದುವರೆಗೂ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಬದಲಾವಣೆ ತರಬೇಕಾದರೆ ನಾವೇ ಅಧಿಕಾರ ಹಿಡಿಯಬೇಕು. ಹೊರಗಡೆ ಇದ್ದು ಹೋರಾಟ ಮಾಡಿ ಬದಲಾವಣೆ ತರುವುದು ಕಷ್ಟ. ವ್ಯವಸ್ಥೆಯ ಒಳಗಡೆಯೇ ಇದ್ದು, ರೈತರಿಗೆ ಅನುಕೂಲಮಾಡಿಕೊಡುವ ಕೆಲಸ ಆಗಬೇಕಿದೆ. ನಮ್ಮ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಥವಾ ವಿಧಾನಸಭೆ.. ಹೀಗೆ ವಿವಿಧ ಜನಪ್ರತಿನಿಧಿ ಸಭೆಗಳಿಗೆ ಆಯ್ಕೆಯಾದರೆ ಆಗುತ್ತಿರುವ ತಪ್ಪುಗಳನ್ನು ತಿದ್ದುವುದಕ್ಕೆ ಅವಕಾಶ ಸಿಗುತ್ತದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಒಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯು ನಮ್ಮ ಉದ್ದೇಶಕ್ಕೆ ಪ್ರಾಥಮಿಕ ಮೆಟ್ಟಿಲಾಗಲಿದೆ. ಒಂದು ಪಂಚಾಯಿತಿಯಲ್ಲಿ ಒಬ್ಬರು, ಇಬ್ಬರು ಗೆದ್ದರೂ ಗ್ರಾಮದ ಅಭಿವೃದ್ಧಿಗೆ ದುಡಿಯಬಹುದು ಹಾಗೂ ರೈತರ ಪರವಾಗಿ ಧ್ವನಿ ಎತ್ತಬಹುದು. ಈ ನಿಟ್ಟಿನಲ್ಲಿ ಸ್ಪರ್ಧಿಸಲು ಬಯಸುವವರು ನಾಮಪತ್ರ ಸಲ್ಲಿಸಬಹುದು ಎಂದು ಹೇಳಿದ್ದೇವೆ. ಹಲವು ಕಡೆಗಳಲ್ಲಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟರಿಂದ 10 ಜನರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಸಲ್ಲಿಸುವವರು ಇದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಗ್ರಾಮಗಳು ಅಭಿವೃದ್ಧಿಯಾದರೆ, ರೈತ ಸಮುದಾಯ ಹಾಗೂ ಇತರರು ಏಳಿಗೆ ಹೊಂದುತ್ತಾರೆ. ಇದುವರೆಗೆ ಆಡಳಿತ ನಡೆಸಿದವರೆಲ್ಲ ಗ್ರಾಮದ ಬಗ್ಗೆ ಹೆಚ್ಚು ಕಾಳಜಿ ತೋರಿಲ್ಲ. ರೈತ ಹೋರಾಟದಲ್ಲಿ ತೊಡಗಿರುವವರಿಗೆ ರೈತರ ಸಂಕಷ್ಟಗಳು ಗೊತ್ತಿರುತ್ತವೆ. ಅಂತಹವರು ಸದಸ್ಯರಾದರೆ, ಗ್ರಾಮಕ್ಕೆ, ರೈತರಿಗೆ ಒಳ್ಳೆಯದಾಗುತ್ತದೆ. ವ್ಯವಸ್ಥೆಯ ದೋಷಗಳನ್ನು ಎತ್ತಿ ಹಿಡಿಯುವುದಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಮ್ಮ ಸಂಘದ ಕಾರ್ಯಕರ್ತರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗುತ್ತಿದ್ದಾರೆ’ ರೈತ ಸಂಘದ ಮತ್ತೊಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಮಪತ್ರ ಸಲ್ಲಿಸುವಂತೆ ಈಗಾಗಲೇ ಕಾರ್ಯಕರ್ತರಿಗೆ ಹೇಳಿದ್ದೇವೆ. ಈ ಭಾನುವಾರ ಸಭೆ ಸೇರಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸುತ್ತೇವೆ. ಗ್ರಾಮ ಪಂಚಾಯಿತಿಗಳು ಹಾಗೂ ರೈತರ ಅಭಿವೃದ್ಧಿಗಾಗಿ ನಮ್ಮದೇ ಆದ ಯೋಚನೆಗಳಿವೆ. ಅದನ್ನು ಅನುಷ್ಠಾನಕ್ಕೆ ತರಬೇಕಾದರೆ ರೈತರೇ ಪಂಚಾಯಿತಿ ಸದಸ್ಯರಾಗಬೇಕು’ ಎಂದು ಹೇಳಿದರು.

‘ಇದು ಪಕ್ಷದ ಚುನಾವಣೆ ಅಲ್ಲ. ವ್ಯಕ್ತಿಗತವಾಗಿ ನಡೆಯುತ್ತದೆ. ಪಕ್ಷಗಳು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದರೂ, ಗ್ರಾಮೀಣ ಜನರು ಆಯ್ಕೆ ಮಾಡುವುದು ಮುಖ್ಯ. ನಾನು ರೈತ ಪರ ಹೋರಾಟದಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದಿದ್ದೇನೆ. ನಮ್ಮ ಊರಿನಲ್ಲಿ ಯುವಕರು ಸ್ಪರ್ಧಿಸಲು ಉತ್ಸಾಹ ತೋರಿದ್ದು, ಮಾರ್ಗದರ್ಶನ ಮಾಡಲು ಹೋರಾಟದ ಹಿನ್ನೆಲೆಯುಳ್ಳವರು, ತಿಳಿವಳಿಕೆ ಇರುವವರೂ ಇರಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಊರಿನವರ ಆಶಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ’ ಎಂದು ರೈತ ಸಂಘದ ಮುಖಂಡ ಜ್ಯೋತಿಗೌಡನಪುರ ಸಿದ್ದರಾಜು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT