ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಡಗಲಪುರ ನಾಗೇಂದ್ರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published 7 ಡಿಸೆಂಬರ್ 2023, 15:43 IST
Last Updated 7 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಮಂಡ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಇತರರ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವ ಕೃಷ್ಣೇಗೌಡ ಹಾಗೂ ಸಹಚರರನ್ನು ರಾಜ್ಯದಿ೦ದ ಗಡಿಪಾರು ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ನಗರದ ಭುವನೇಶ್ವರಿ ವೃತ್ತದ ಬಳಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಜಿಲ್ಲಾಡಳಿತ ಭವನದ ವರೆಗೆ ಮೆರವಣಿಗೆ ನಡೆಸಿ, ಭವನದ ಪ್ರವೇಶ ದ್ವಾರದ ಮುಂದೆ ಧರಣಿ ಕುಳಿತರು. ಕೃಷ್ಣೇಗೌಡ ಮತ್ತು ಸಹಚರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದರೋಡೆ, ಅಪಹರಣ, ವಂಚನೆ ಇತ್ಯಾದಿ 3 ಕ್ಕೂ ಹೆಚ್ಚು ಆರೋಪಗಳನ್ನು ಹೊಂದಿರುವ ರೌಡಿಶೀಟ‌ರ್ ಇಂಗಲಗುಪ್ಪೆ ಗ್ರಾಮದ ಕೃಷ್ಣಗೌಡ ಮತ್ತು ಆತನ ಸಹಚರರು 4ರಂದು ಮಂಡ್ಯದ ಪ್ರವಾಸಿಮಂದಿರದಲ್ಲಿ ಚಾಮರಾಜನಗರ ಜಿಲ್ಲೆಯ ರೈತ ಮುಖಂಡರಾದ ಶೈಲೇಶ್, ಗೌಡೇಗೌಡ, ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷರ ಮೇಲೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಭ್ರಷ್ಟಾಚಾರದ ಆರೋಪ ಮಾಡಿ ಅಪಪ್ರಚಾರ ಮಾಡಿದ್ದಾರೆ’ ಎಂದು ದೂರಿದರು.

'ಡಿ.5 ರಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರನ್ನು ನಿಂದಿಸಿ ದೈಹಿಕ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಈಗಾಗಲೇ ಮಂಡ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ಇತರೆ ಜಿಲ್ಲೆಗಳ ರೈತ ಹೋರಾಟಗಾರರ ಮೇಲೂ ಸುಳ್ಳು ಆರೋಪಗಳನ್ನು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿ ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ’ ಎಂದು ದೂರಿದರು. 

‘ಕೃಷ್ಣೇಗೌಡ ಹಾಗೂ ಸಹಚರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ನಮ್ಮ ಜಿಲ್ಲೆಯ ರೈತ ಮುಖಂಡರ ಮೇಲೆ ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರುಇ ಆಗ್ರಹಿಸಿದರು. 

ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್‌ ಪ್ರಭು, ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಪದಾಧಿಕಾರಿಗಳಾದ ಗೌಡೇಗೌಡ, ಮಹದೇವಸ್ವಾಮಿ, ಶೈಲೇಂದ್ರ, ಭಾಸ್ಕ‌ರ್, ಮಾದಮ್ಮ, ಜಾನ್‌ ಕೆನಡಿ, ಶಿವಮ್ಮ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT