ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಸಹಜ ಸಮೃದ್ಧ ಕೃಷಿಯಲ್ಲಿ ‘ಹಣ್ಣು ವೈವಿಧ್ಯ’

Published 22 ಜುಲೈ 2023, 5:09 IST
Last Updated 22 ಜುಲೈ 2023, 5:09 IST
ಅಕ್ಷರ ಗಾತ್ರ

ನಾ.ಮಂಜುನಾಥಸ್ವಾಮಿ

ಯಳಂದೂರು: ಕಿತ್ತಳೆ, ಮೂಸಂಬಿ ಗೊಂಚಲು, ಬೆಣ್ಣೆ, ಸೀಬೆ ಹಣ್ಣಿನ ಘಮಲು, ಗಿಡ ಅಪ್ಪಿದ ಪಪ್ಪಾಯ, ಗಜನಿಂಬೆ, ಸೀಡ್‌ಲೆಸ್‌ ಲಿಂಬೆಯ ಆಕರ್ಷಣೆ, ಬಣ್ಣದಿಂದಲೇ ಆಕರ್ಷಿಸುವ ವಾಟರ್ ಆ್ಯಪಲ್, ಸೀತಾಫಲದ ಸುವಾಸನೆ... ನೋಡಲು ನಯನ ಮನೋಹರ, ಸವಿಯೂ ರುಚಿಕರ!

ಇದು ಯಳಂದೂರಿನ ಕೃಷಿಕ ರಮೇಶ್‌ ಬಾಬು ಅವರ ತೋಟದ ದೃಶ್ಯ.  ನೂರಾರು ವೈವಿಧ್ಯಮಯ ಹಣ್ಣುಗಳ ಗಿಡಗಳನ್ನು ಪೋಷಿಸುತ್ತಿದ್ದಾರೆ ರಮೇಶ್‌ ಬಾಬು. 

ರಮೇಶ್‌ ಓದಿದ್ದು ಏಳನೇ ತರಗತಿವರೆಗೆ ಮಾತ್ರ. ವೃತ್ತಿಯಲ್ಲಿ ವಿದ್ಯುತ್‌ ಗುತ್ತಿಗೆದಾರ.  ಕಾಂಟ್ರ್ಯಾಕ್ಟರ್‌. ಸಾಗುವಳಿ ಇವರ ಮೆಚ್ಚಿನ ಪ್ರವೃತಿ. ತಮ್ಮ ಎರಡೂವರೆ ಎಕರೆ ಭೂಮಿಯಲ್ಲಿ ನೂರಾರು ಮರ, ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಕಡಿಮೆ ನೀರಿನಲ್ಲೂ ನಳನಳಿಸುವ  ಬೇಸಾಯ ಮಾಡಬಹುದು ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದಾರೆ.

ತೋಟದ ನಿರ್ವಹಣೆಗೆ ಸಾವಯವ ಪದಾರ್ಥಗಳನ್ನು ನೆಚ್ಚಿಕೊಂಡಿದ್ದಾರೆ. ಭೂಮಿಯ ಮಣ್ಣು ಕೆಂಪು. ನೀರನ್ನು ಹೆಚ್ಚು ಹಿಡಿದಿರದು. ಹಾಗಾಗಿ, ಮಣ್ಣಿನ ಆರೋಗ್ಯ, ತೇವದ ಸಮೃದ್ಧತೆಗೆ ಬೇಕಾದ ಹಸಿರೆಲೆ ಗೊಬ್ಬರ, ಜೀವಸಾರ, ಎರೆಹುಳು, ಕಾಂಪೋಸ್ಟ್, ಜೀವಾಮೃತ ಬಳಸಿಕೊಂಡು ಮಣ್ಣಿನ ಪದರವನ್ನು ಸದಾ ತಂಪಾಗಿ ಇಡಬಹುದು. ಕೀಟಬಾಧೆ ನಿಯಂತ್ರಣಕ್ಕೂ ಹುಳಿಮಜ್ಜಿಗೆ, ಹಸುವಿನ ಗಂಜಲ, ಬೆಳ್ಳುಳ್ಳಿ, ಬೇವಿನ ಕಷಾಯ ಬಳಸಿ ಉಳಿಸುವ ಹಂಬಲ ಇವರದು.

‘ಹವ್ಯಾಸಕ್ಕಾಗಿ ಆರಂಭಿಸಿದ ಬೇಸಾಯ ಈಗ ಬದುಕಿನ ಭಾಗವಾಗಿದೆ. ಕಡಿಮೆ ನೀರು ಬಳಸಿಕೊಂಡು ಹಸಿರು ಸ್ವರ್ಗವೇ ತೋಟದಲ್ಲಿ ಸೃಷ್ಟಿಯಾಗಿದೆ. ಕೃಷಿ ಎಂದರೆ ಮೂಗು ಮುರಿಯುವ ಮಂದಿಗೆ ಮಾದರಿ ರೈತನಾಗಿ ಸಾವಯವ ಪಾಠ ಹೇಳುವ ಉಮೇದಿನಲ್ಲಿ ಒಂದೂವರೆ ದಶಕ ಕಳೆದಿದ್ದೇನೆ’ ಎಂದು ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

400 ಗಿಡಗಳಿಗೆ ಆಶ್ರಯ 

ತೋಟದಲ್ಲಿ ಸಮಗ್ರ ಬೇಸಾಯಕ್ಕೆ ಒತ್ತು ನೀಡಲಾಗಿದೆ. ಪ್ರತಿ ಋತುವಿನಲ್ಲೂ ಕಾಯಿ, ಹಣ್ಣು ಬಿಡುವ ಸಸ್ಯ ವೈವಿಧ್ಯ ಇದೆ. ಮನುಷ್ಯನಿಗೆ ಅಗತ್ಯ ಇರುವ ಎಲ್ಲ ಬಗೆಯ ಫಲಗಳನ್ನು ಇಲ್ಲಿ ಪಡೆಯಬಹುದು. ನೇರಳೆ, ಕರಿಬೇವು, ತೆಂಗು, ಮಾವು, ತೇಗ, ಹಲಸು, ಸಿಲ್ವರ್ ಓಕ್ ಮೊದಲಾದ ಬಹು ವಾರ್ಷಿಕ ಗಿಡ ಮರಗಳೂ ಇಲ್ಲಿ ತಲೆ ಎತ್ತಿವೆ.

‘ಕೊಳವೆ ಬಾವಿಯಲ್ಲಿ ಸಿಗುವ ಒಂದು ಇಂಚು ನೀರನ್ನು ಹನಿ ನೀರಾವರಿ ಮೂಲಕ ಸಸಿಗಳಿಗೆ ಪೂರೈಸಲಾಗುತ್ತದೆ. 400ಕ್ಕೂ ಹೆಚ್ಚು ಗಿಡಗಳು ತೋಟದ ತುಂಬ ಹರಡಿಕೊಂಡಿದ್ದು, ಮಳೆ ನೀರು ಹೊರಗೆ ಹರಿದು ಹೋಗದಂತೆ ಎಚ್ಚರ ವಹಿಸಿದ್ದೇನೆ’ ಎಂದು ರಮೇಶ್‌ ಹೇಳಿದರು.

ಬೆಳೆ ಹಣ್ಣು ವೈವಿಧ್ಯತೆ

ಬಿಸಿಲನ್ನು ಹೆಚ್ಚು ಬೇಡುವ ನಿಂಬೆ ವಾರ್ಷಿಕ ಎರಡು ಬಾರಿ ಇಳುವರಿ ನೀಡುತ್ತದೆ. ಮೂಸಂಬಿ ಮತ್ತು ಕಿತ್ತಳೆ ಹೆಚ್ಚಿನ ನೀರು ಬೇಡದು. ವಾಟರ್ ಆ್ಯಪಲ್‌ ಥೈವಾನ್ ಪೇರಲೆ ಮತ್ತು ಪರಂಗಿ ಹಣ್ಣು 6 ತಿಂಗಳ ಕಾಲ ಕುಟುಂಬವನ್ನು ಪೋಷಿಸುತ್ತದೆ. ಪುಟ್ಟಬಾಳೆ ಏಲಕ್ಕಿಬಾಳೆ ಮನೆ ಬಳಕೆಗಲ್ಲದೆ ಮಾರಾಟಕ್ಕೂ ಆಗುತ್ತಿದೆ.   ‘ನೆಲ್ಲಿ ಮತ್ತು ನೇರಳೆ ಗಿಡಗಳನ್ನು ನೈಸರ್ಗಿಕ ಬೇಲಿಯಾಗಿ ಜಮೀನಿನ ಸುತ್ತ ನೆಟ್ಟಿದ್ದೇನೆ. 100 ತೆಂಗಿನ ಸಸಿಗಳು ಇವೆ. ಹತ್ತಾರು ಬೆಳೆಗಳು ಪ್ರತಿ ದಿನವೂ ಸಿಗುವುದರಿಂದ ಕೃಷಿ ಕುಟಂಬಗಳು ಆರ್ಥಿಕವಾಗಿ ಸಬಲರಾಗಬಹುದು’ ಎಂದು ರಮೇಶ್‌ ವಿವರಿಸಿದರು. 

ಸಾವಯವ ಬೇಸಾಯ

ಭೂಮಿಗೆ ಸ್ವಲ್ಪವೂ ರಾಸಾಯನಿಕ ಬಳಸುವುದಿಲ್ಲ. ನೂರಾರು ಪಕ್ಷಿಗಳು ಜಮೀನಲ್ಲಿ ಹಣ್ಣು ಅರಸಿ ಬರುತ್ತವೆ. ಭೂಮಿಗೆ ಬೇಕಾದ ಹಿಕ್ಕೆ ಪೂರೈಸುತ್ತವೆ. ಹಾನಿಕಾರಕ ಇಲಿ ಕೀಟಗಳನ್ನು ಭಕ್ಷಿಸುತ್ತದೆ. ಇಲ್ಲಿ ಬೆಳೆಯುವ ಹಣ್ಣು-ಹಂಪಲನ್ನು ಬಹಳಷ್ಟು ಗ್ರಾಹಕರು ಇಷ್ಟಪಟ್ಟು ಕೊಳ್ಳುತ್ತಾರೆ. ಇದರಿಂದ  ಮಾರಾಟ  ಸಮಸ್ಯೆಯೂ ತಪ್ಪಿದೆ. ಪ್ರತಿ ವಾರ ಆದಾಯವೂ ಕೈಸೇರುತ್ತದೆ’ ಎಂದು ಬಾಬು ಹೇಳಿದರು. 

ಗಿಡದಲ್ಲಿ ಕಂಗೊಳಿಸುತ್ತಿರುವ ವಾಟರ್‌ ಆ್ಯಪಲ್‌
ಗಿಡದಲ್ಲಿ ಕಂಗೊಳಿಸುತ್ತಿರುವ ವಾಟರ್‌ ಆ್ಯಪಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT