ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆ 4ರ ನಂತರ ವಹಿವಾಟು ಸ್ಥಬ್ಧ

ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ, ಸೋಮವಾರದಿಂದಲೇ ಜಾರಿ
Last Updated 30 ಜೂನ್ 2020, 9:38 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕಾರಣ ಅದನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದ ತೀರ್ಮಾನದಂತೆ ಸಂಜೆ 4 ಗಂಟೆಯ ನಂತರ ವಹಿವಾಟಿಗೆ ನಿರ್ಬಂಧ ವಿಧಿಸುವ ಆದೇಶ ಸೋಮವಾರದಿಂದಲೇ ಜಾರಿಯಾಗಿದೆ.

ಜಿಲ್ಲೆಯಾದ್ಯಂತ ಸಂಜೆ 4 ಗಂಟೆ ನಂತರ ಎಲ್ಲ ರೀತಿಯ ವಹಿವಾಟು ನಿಷೇಧಿಸಿ ಹಾಗೂ ಸಂಜೆ 4 ಗಂಟೆಯಿಂದ ಮರು ದಿನ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸೋಮವಾರ ಬೆಳಿಗ್ಗೆ ಆದೇಶ ಹೊರಡಿಸಿದ್ದಾರೆ.

ದೈನಂದಿನ ಜೀವನ ಅವಶ್ಯಕ ವಸ್ತುಗಳ ಮಾರಾಟ ಅಂಗಡಿಗಳು (ಔಷಧಿ, ಹಣ್ಣು, ತರಕಾರಿ, ಹಾಲು, ದಿನಸಿ, ಪೆಟ್ರೋಲ್ ಹಾಗೂ ಡೀಸೆಲ್) ಈ ಅವಧಿಯಲ್ಲಿ ತೆರೆದಿರಲಿವೆ.

‌ಅದರಂತೆ, ಚಾಮರಾಜನಗರದಲ್ಲಿ ಸೋಮವಾರ ಸಂಜೆ ನಾಲ್ಕು ಗಂಟೆಗೆ ಕೆಲವು ಮಾಲೀಕರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿದರು. ಇನ್ನೂ ಕೆಲವು ಕಡೆಗಳಲ್ಲಿ ಪೊಲೀಸರು ಮಳಿಗೆಗಳಿಗೆ ಭೇಟಿ ಕೊಟ್ಟು, ಮಾಲೀಕರಿಗೆ ಆದೇಶದ ಬಗ್ಗೆ ತಿಳಿಸಿ ಅಂಗಡಿಗಳನ್ನು ಮುಚ್ಚಿಸಿದರು.ಹೋಟೆಲ್‌ ಮಾಲೀಕರು ಕೂಡ ವಹಿವಾಟನ್ನು ಬಂದ್‌ ಮಾಡಿದರು.

ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ. ಅನ್‌ಲಾಕ್‌ನ ಮೊದಲ ಹಂತ ಆರಂಭವಾಗಿ ಜನರ ಓಡಾಟ ಹೆಚ್ಚಾದ ಬಳಿಕ ಒಂದೊಂದಾಗಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿದ್ದು, ಸದ್ಯ 32 ಮಂದಿ ಕೋವಿಡ್‌ನಿಂದ ಬಳಲುತ್ತಿದ್ದಾರೆ.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರೂ ಜನರು ಪೂರ್ಣ ಪ್ರಮಾಣದಲ್ಲಿ ಪಾಲಿಸುತ್ತಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗಿರುವುದರಿಂದ ಕೋವಿಡ್‌–19 ಹರಡುವ ಆತಂಕ ಹೆಚ್ಚಾಗಿದೆ. ಹೀಗಾಗಿ, ಜನರ ಓಡಾಟವನ್ನು ಮತ್ತೆ ನಿಯಂತ್ರಿಸುವುದಕ್ಕಾಗಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಬೇಕು ಎಂಬ ಕೂಗು ಕೂಡ ಅಲ್ಲಲ್ಲಿ ಕೇಳಿಬರುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ಭಾನುವಾರ ಜನಪ್ರತಿನಿಧಿಗಳು, ಅಧಿಕಾರಿಗಳು, ವರ್ತಕರು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಭಿಪ್ರಾಯ ಕೇಳಿದ್ದರು. ಸಂಜೆ ಸ್ವಲ್ಪ ಬೇಗ ವಹಿವಾಟನ್ನು ಸ್ಥಗಿತಗೊಳಿಸಬೇಕು ಎಂಬ ಸಲಹೆಯನ್ನು ಬಹುತೇಕರು ನೀಡಿದ್ದರು. ಅಂತಿಮವಾಗಿ ನಾಲ್ಕು ಗಂಟೆಯ ನಂತರ ವ್ಯಾಪಾರವನ್ನು ನಿರ್ಬಂಧಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಪಾರ್ಸೆಲ್‌ಗೆ ಮಾತ್ರ ಅವಕಾಶ

ವಹಿವಾಟು ನಿರ್ಬಂಧದ ಅವಧಿಯಲ್ಲಿ,ಜುಲೈ 15ರವರೆಗೆ ಸಂಜೆ 4ರಂದು ರಾತ್ರಿ 8 ಗಂಟೆಯವರೆಗೆಎಲ್ಲ ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಂಟೀನ್‌ಗಳಲ್ಲಿ ನಿಷೇಧಾಜ್ಞೆ ಅವಧಿಯಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT