ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ; ತೋಟ, ಹೊಲಗಳ ರಸ್ತೆ ಹೊಲಕ್ಕಿಂತ ಕಡೆ!

ನಮ್ಮ ಹೊಲ, ನಮ್ಮ ರಸ್ತೆ ಯೋಜನೆಗೆ ಗ್ರಹಣ, ಸಂಚರಿಸಲು ರೈತರ ಸರ್ಕಸ್‌
Last Updated 27 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ರೈತರ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರೈತರು ದಿನನಿತ್ಯ ಕೆಸರು, ಹೊಂಡ ಗುಂಡಿಗಳ ರಸ್ತೆಯಲ್ಲೇ ಹೊಲಗಳಿಗೆ ತೆರಳಬೇಕಾಗಿದೆ.

ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದೆ ‘ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆಗೆ ಗ್ರಹಣ ಹಿಡಿದಿರುವುದು ಇದಕ್ಕೆ ಪ್ರಮುಖ ಕಾರಣ.

‘ಗ್ರಾಮೀಣ ಪ್ರದೇಶದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ಕಲ್ಲು ಮಣ್ಣಿನಿಂದ ಕೂಡಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗಿ ಜಮೀನಿಗೆ ಮತ್ತು ಮನೆಗೆ ಓಡಾಡುವುದು ದುಸ್ತರವಾಗಿದೆ.

‘ನಮ್ಮ ಭೂಮಿ, ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆಗೆ ಸರ್ಕಾರದಿಂದ ಬರಬೇಕಿದ್ದ ಅನುದಾನ ಕೋವಿಡ್ ಕಾರಣದಿಂದ ನಿಂತುಹೋಗಿದೆ. ಹಾಗಾಗಿ, ಈ ಯೋಜನೆ ಅಡಿ ಎರಡು ವರ್ಷಗಳಿಂದ ರಸ್ತೆ ಕಾಮಗಾರಿಗಳು ನಡೆದಿಲ್ಲ. ಜಮೀನುಗಳಿಗೆ ರಸ್ತೆ ಮಾಡಿಸಿಕೊಳ್ಳಲು ರೈತರು ಗ್ರಾಮ ಪಂಚಾಯಿತಿ ವತಿಯಿಂದ ನರೇಗಾದಲ್ಲಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಜಮೀನುಗಳಿಗೆ ಸಂಪರ್ಕ ರಸ್ತೆಗಳು ಇಂದಿಗೂ ಕೆಸರುಗದ್ದೆಯಂತೆಯೇ ಇವೆ’ ಎಂದು ತಿಮ್ಮರಾಜೀಪುರ ಗ್ರಾಮದ ರೈತ ಪುಟ್ಟಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಊರುಗಳಲ್ಲಿ ಜಮೀನುಗಳಿಗೆ ತೆರಳಲು ಸಾರ್ವಜನಿಕ ರಸ್ತೆಗಳಿಲ್ಲ. ಹಾಗಾಗಿ, ತಮ್ಮ ಜಮೀನುಗಳಿಗೆ ಹೋಗಬೇಕಾದರೆ ಬೇರೆಯವರ ಜಮೀನು ಅವಲಂಬಿಸಬೇಕು.ಅಕ್ಕ ಪಕ್ಕದ ಜಮೀನಿನ ರೈತರ ನಡುವೆ ಹೊಂದಾಣಿಕೆ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕೆಲವು ಕಡೆ ಜಮೀನಿಗೆ ತೆರಳುವ ರಸ್ತೆ ವಿಚಾರವಾಗಿಯೇ ಹೊಡೆದಾಟಗಳು ನಡೆದಿವೆ. ಮಾರಾಣಾಂತಿಕ ಹಲ್ಲೆಗಳಾಗಿ ಠಾಣೆಗಳಲ್ಲಿ ಪ್ರಕರಣ ದಾಖಲಾದ ನಿದರ್ಶನಗಳಿವೆ.

‘ನರೇಗಾ ಯೋಜನೆಯ ಮುಖ್ಯ ಉದ್ದೇಶ ಜನರಿಗೆ ಕೂಲಿ ಕೊಟ್ಟು ಸಣ್ಣ ಕೆಲಸ ಮಾಡಿಸುವುದಾಗಿದೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಾಗ ಸಾಮಗ್ರಿಗಳ ವೆಚ್ಚವೇ ಹೆಚ್ಚಾಗುತ್ತದೆ. ಕೂಲಿ ಕಡಿಮೆ ಆಗುತ್ತದೆ. ಈ ಕಾರಣದಿಂದಲೂ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಅನುದಾನ ಸಿಗುತ್ತಿಲ್ಲ’ ಎನ್ನುತ್ತಾರೆ ರೈತರು.

ಕೆಲವೆಡೆ ಮಾತ್ರ ಯೋಜನೆ ಅನುಷ್ಠಾನ

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ ಎಂಬ ದೂರುಗಳಿವೆ.

‘ಕೆಲವು ಕಡೆಗಳಲ್ಲಿ ಮೂಲ ದಾರಿ ಎಲ್ಲಿದೆ ಎಂದು ಸರ್ವೆ ನಡೆಸಿ ಅಭಿವೃದ್ಧಿಪಡಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತದೆ. ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹೊಲಗಳಿಗೆ ತೆರಳುವ ರಸ್ತೆ ಕನಸು ಈಗಲೂ ಕನಸಾಗಿಯೇ ಉಳಿದಿದೆ. ತಕರಾರು ಇರುವ ರಸ್ತೆಗಳ ಸಮಸ್ಯೆಯೂ ಬಗೆಹರಿದಿಲ್ಲ. ಕೆಲವು ಭಾಗದಲ್ಲಿ ಉತ್ತಮ ರಸ್ತೆ ಇಲ್ಲದಿರುವುದರಿಂದ ರೈತರು ಕೃಷಿ ಚಟುವಟುವಟಿಕೆಗಳನ್ನೇ ನಡೆಸುತ್ತಿಲ್ಲ. ಇಂತಹ ಕಡೆಗಳಲ್ಲಿ ಅಧಿಕಾರಿಗಳು ಸರ್ವೆ ಮಾಡಿ ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು’ ಎಂದು ರೈತ ನಾಗರಾಜು ಅವರು ಒತ್ತಾಯಿಸಿದರು.

--

‘ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆ ಪ್ರಯೋಜನಕ್ಕೆ ಬಾರದಾಗಿದೆ. ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು

- ರಾಮಸ್ವಾಮಿ, ರೈತ

--

ನಮ್ಮ ಹೊಲ ನಮ್ಮ ರಸ್ತೆ ಯೋಜನೆಯ ಅನುದಾನ ಬಿಡುಗಡೆ ಆಗದ ಕಾರಣ, ಕೆಲಸಗಳು ಸ್ಥಗಿತಗೊಂಡಿವೆ. ಸದ್ಯ ಈ ಯೋಜನೆ ಜಾರಿಯಲಿಲ್ಲ.

- ಮಹೇಶ್, ತಾಲ್ಲೂಕು ಪಂಚಾಯಿತಿ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT