ಬುಧವಾರ, ಜನವರಿ 27, 2021
22 °C
ಮೆರವಣಿಗೆಗೆ ಮೆರುಗು ತಂದ ಜಾನಪ‍ದ ಕಲಾತಂಡಗಳು, ಎತ್ತಿನ ಬಂಡಿಗಳು

ಸುಗ್ಗಿ ಹುಗ್ಗಿ: ಉಮ್ಮತ್ತೂರಿನಲ್ಲಿ ಗ್ರಾಮೀಣ ಸಂಸ್ಕೃತಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಸಂಕ್ರಾಂತಿ ಹಬ್ಬದ ದಿನವಾದ ಗುರುವಾರ ಉಮ್ಮತ್ತೂರು ಗ್ರಾಮದಲ್ಲಿ ಜಿಲ್ಲೆಯ ಗ್ರಾಮೀಣ ಜಾನಪದ ಕಲೆ ಹಾಗೂ ಸಂಸ್ಕೃತಿ ಅನಾವರಣಗೊಂಡಿತು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಸುಗ್ಗಿ ಹುಗ್ಗಿ’ ಕಾರ್ಯಕ್ರಮವು ಜಿಲ್ಲೆಯ ಗ್ರಾಮೀಣ ಜನಜೀವನ, ಸಂಸ್ಕೃತಿಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.

ಎರಡೂವರೆ ತಾಸಿಗೂ ಹೆಚ್ಚು ಕಾಲ ನಡೆದ ಸುಗ್ಗಿ ಹುಗ್ಗಿ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ವಿವಿಧ ಜಾನಪದ ಕಲಾ ತಂಡಗಳು, ಎತ್ತಿನ ಬಂಡಿಗಳು, ನೃತ್ಯಗಳು ಮನಸೂರೆಗೊಂಡವು.

ಮಧ್ಯಾಹ್ನ ಜೆಎಸ್‌ಎಸ್‌ ಪ್ರೌಢಶಾಲೆ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶಾಸಕ ಎನ್‌.ಮಹೇಶ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮಟೆ ಬಾರಿಸಿ, ನೃತ್ಯ ಮಾಡಿ ಗಮನ ಸೆಳೆದರು. 

ಗೊರವರ ಕುಣಿತದ ನೇತೃತ್ವವನ್ನು ರಾಮಸಮುದ್ರದ ಮಲ್ಲೇಗೌಡ ಮತ್ತು ತಂಡ ವಹಿಸಿತ್ತು. ತಮಟೆ, ಡೋಲು ಕಲಾವಿದರ ಅಬ್ಬರಕ್ಕೆ ಮೈ ಬೆವರುವಂತೆ ಕುಣಿಯುತ್ತಿದ್ದರು. ಸುಗ್ಗಿಕುಣಿತ, ಪೂಜಾಕುಣಿತ, ವೀರಗಾಸೆ ತಂಡದ ಕಲಾವಿದರು ಕೂಡ ತಂಪಾದ ಮೋಡದ ವಾತಾವರಣದಲ್ಲಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಮೈಸೂರಿನ ನಿವೇದಾ ಮತ್ತು ತಂಡದವರು ನಗಾರಿ ಬಾರಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದರು. ಮಂಡ್ಯದ ಹೊನ್ನೇಗೌಡ ತಂಡದವರು ಚಿಲಿಪಿಲಿ ಗೊಂಬೆ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಿದರು. ಮಾರ್ಗ ಮಧ್ಯದಲ್ಲಿ ಕೊಂಬು ಕಹಳೆ ಕಿವಿಗೆ ಇಂಪು ನೀಡುತ್ತಿತ್ತು. ಡೊಳ್ಳು ನಗಾರಿಯ ಸದ್ದು ಅಕ್ಕಪಕ್ಕದಲ್ಲಿದ್ದ ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಮತ್ತೊಂದೆಡೆ ಹೂ ಬಣ್ಣದ ವಸ್ತುಗಳಿಂದ ಅಲಂಕೃತ ಎತ್ತಿನ ಬಂಡಿಗಳು, ರಾಸುಗಳು ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಸುಗ್ಗಿ ಹುಗ್ಗಿ ಕಾರ್ಯಕ್ರಮಕ್ಕಾಗಿ ಇಡೀ ಊರು ತಳಿರು ತೋರಣ ಬಾಳೆಕಂದುಗಳಿಂದ ಸಿಂಗಾರಗೊಂಡಿತ್ತು. ಜನರು ತಮ್ಮ ಮನೆಯ ಎದುರು ಬಣ್ಣ ಬಣ್ಣದ ರಂಗೋಲಿ ಇಟ್ಟು ಜನ ಸಂಭ್ರಮಿಸಿದರು.

ರಾಗಿ ಬೀಸಿದರು, ಭತ್ತ ತೂರಿದರು: ಮೆರವಣಿಗೆ ಮುಗಿಯುತ್ತಿದ್ದಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ವೇದಿಕೆಯ ಮುಂಭಾಗ ಭತ್ತ, ರಾಗಿ, ಜೋಳ, ತೆಂಗಿನಕಾಯಿ, ಕುಂಬಳ ಸೇರಿದಂತೆ ದವಸ ಧಾನ್ಯ ಹಾಗೂ ಇತರ ಫಲಗಳನ್ನು ರಾಶಿ ಮಾಡಿ ಅಲಂಕರಿಸಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಕಲಾವಿದರು ಅವುಗಳಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. 

ಗ್ರಾಮೀಣ ಜನರು ದಿನ ನಿತ್ಯ ಬಳಸುವ ಪರಿಕರಗಳಾದ ಸೇರು, ಕೊಳಗ, ಕೊಂಗ, ನೇಗಿಲು, ಒನಕೆ, ಬೀಸುವ ಕಲ್ಲು ಸೇರಿದಂತೆ ಅಪರೂಪದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಧಾ ಅವರು ಬೀಸುವ ಕಲ್ಲಿನಿಂದ ರಾಗಿ ಬೀಸಿ ಗಮನ ಸೆಳೆದರು. ಶಾಸಕ ಎನ್.ಮಹೇಶ್ ಹಾಗೂ ಇತರರು ಭತ್ತವನ್ನು ತೂರಿದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ರವೀಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಮಲ್ಲರಾಜು, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸುರೇಶ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ಪಿಡಿಒ ಭಾಗ್ಯಲಕ್ಷ್ಮಿ, ಕಲಾವಿದರಾದ ಮಹೇಶ್, ಸಿ.ಎಂ.ನರಸಿಂಹಮೂರ್ತಿ, ಉಮ್ಮತ್ತೂರು ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್‌ ಇದ್ದರು.

ರೈತರಿಂದ ಗ್ರಾಮೀಣ ಸಂಸ್ಕೃತಿ ಉಳಿದಿದೆ: ಶಾಸಕ
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್‌.ಮಹೇಶ್‌ ಅವರು, ‘ರೈತರ ಪರಿಶ್ರಮದಿಂದ ಇಂದು ಗ್ರಾಮೀಣ ಸಂಸ್ಕೃತಿ ಉಳಿದಿದೆ. ವರ್ಷಪೂರ್ತಿ ಕಷ್ಟಪಟ್ಟು ದುಡಿಮೆ ಮೂಲಕ ದೇಶದ ಜನತೆಗೆ ಅನ್ನ ನೀಡುವ ರೈತನೇ ದೇಶದ ನಿಜವಾದ ದೇವರು’ ಎಂದು ಬಣ್ಣಿಸಿದರು.

‘ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸುವ ಸಂಸ್ಕೃತಿ ಇರುವುದು ನಮ್ಮ ದೇಶದಲ್ಲಿ ಮಾತ್ರ. ಹಿಂದೆ ನಮ್ಮನ್ನಾಳಿದ ವಿದೇಶಿಯರಿಗೆ ನಮ್ಮ ಸಂಸ್ಕೃತಿ ಕಸಿಯಲು ಆಗಲಿಲ್ಲ. ನಮ್ಮ ಮೌಲ್ಯಯುತ ಸಂಸ್ಕೃತಿಯನ್ನೂ ನಾವೆಲ್ಲರೂ ಗೌರವಿಸಬೇಕಾಗಿದೆ’ ಎಂದರು. 

‌ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ‘ಹದಗೆಡುತ್ತಿರುವ ಇಂದಿನ ಜೀವನಶೈಲಿಯಲ್ಲಿ ರೈತರು ಪಾಲಿಸಿಕೊಂಡು ಬರುತ್ತಿರುವ ಹಳೆಯ ಆಹಾರ ಪದ್ಧತಿಯನ್ನು ಬಳಸಿಕೊಂಡಾಗ ಮಾತ್ರ ನಾವು ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯ’ ಎಂದರು. 

ಒಂದೂವರೆ ತಿಂಗಳಲ್ಲಿ ಕೆರೆಗೆ ನೀರು
‘ಉಮ್ಮತ್ತೂರು ಕೆರೆಗೆ ನೀರು ತುಂಬಿಸುವ ಯೋಜನೆಯ ಕೆಲಸಗಳು ಕೋವಿಡ್‍ನಿಂದಾಗಿ 10 ತಿಂಗಳು ನಡೆದಿಲ್ಲ. ಚುಂಚನಹಳ್ಳಿ ಬಳಿ ಒಂದೂವರೆ ಕಿ.ಮೀ ಉದ್ದದಷ್ಟು ಪೈಪ್‍ಲೈನ್‍ಗೆ ಅಲ್ಲಿನ ರೈತರು, ಪರಿಹಾರಕ್ಕಾಗಿ ಆಗ್ರಹಿಸಿ ತಡೆಯೊಡ್ಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಶಾಸಕರೊಂದಿಗೆ ಚರ್ಚಿಸಿ ಒಂದೂವರೆ ತಿಂಗಳಲ್ಲಿ ಕೆರೆಗೆ ನದಿಮೂಲದಿಂದ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಎನ್‌.ಮಹೇಶ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು