ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಯಾವಾಗ ಆರಂಭಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ: ಸುರೇಶ್‌ ಕುಮಾರ್‌

Last Updated 19 ಜೂನ್ 2020, 11:31 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂದಿನ ಶೈಕ್ಷಣಿಕ ವರ್ಷ‌ವನ್ನು ಯಾವಾಗ ಆರಂಭ ಮಾಡಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಶಾಲೆ ಪುನರಾರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸುವ ಪ‍್ರಕ್ರಿಯೆ ನಡೆಯುತ್ತಿದೆ. ಶನಿವಾರದವರೆಗೂ ಇದು ಮುಂದುವರಿಯಲಿದೆ. ಎಲ್ಲ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಈ ವರ್ಷ ಶೂನ್ಯ ತರಗತಿ ಇರಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, ‘ಆ ರೀತಿ ಯಾರು ಹೇಳಿದ್ದಾರೆ ಎಂಬುದನ್ನು ತಿಳಿಸಿ, ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳಿಗೆ ಕೋವಿಡ್‌–19 ದೃಢಪಟ್ಟಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಕುಮಾರ್‌ ಅವರು, ‘ರೋಗ ಲಕ್ಷಣ ಇದ್ದ ವಿದ್ಯಾರ್ಥಿಗಳಿಗೆಲ್ಲ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ರೋಗ ಲಕ್ಷಣ ಇಲ್ಲದಿದ್ದರೂ ಸೋಂಕು ತಗುಲಿರುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲ.ಈ ಬಗ್ಗೆ ಪರಿಶೀಲಿಸುತ್ತೇನೆ. ಒಂದು ವೇಳೆ ದೃಢಪಟ್ಟಿದ್ದೇ ಆದರೆ, ಅಗತ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಪ್ಲಾಸ್ಮಾ ಚಿಕಿತ್ಸೆ ವಿಸ್ತರಣೆ: ‘ಬೆಂಗಳೂರಿನ ವಿಕ್ಟೋರಿಯಾ ಹಾಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕೋವಿಡ್‌–19 ರೋಗಿಗೆ ನೀಡಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ಸು ಕಂಡಿದೆ. ರಾಜ್ಯದ ಬೇರೆ ಭಾಗಗಳಿಗೂ ಇದನ್ನು ವಿಸ್ತರಿಸಲು ಚಿಂತನೆ ನಡೆದಿದೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು’ ಎಂದರು.

ಸಾವಿನ ಪ್ರಮಾಣ: ‘ಕೋವಿಡ್‌ನಿಂದಾಗಿ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಸದ್ಯ ಶೇ 1.4 ಇದೆ. ಈ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT