ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಗ್ರಾಮ ಪಂಚಾಯಿತಿ ಚುನಾವಣೆ: 1,046 ಮತಗಟ್ಟೆಗಳು, 7 ಲಕ್ಷ ಮತದಾರರು

ಡಿ.22,.27ರಂದು ಗ್ರಾಮ ಪಂಚಾಯಿತಿ ಚುನಾವಣೆ; ಸಕಲ ಸಿದ್ಧತೆ–ಜಿಲ್ಲಾಧಿಕಾರಿ ಮಾಹಿತಿ
Last Updated 1 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ 129 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಏಳು ಲಕ್ಷ ಮಂದಿ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

823 ಕ್ಷೇತ್ರಗಳ 1,241 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1,046 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆರಂಭದಲ್ಲಿ 839 ಮತಗಟ್ಟೆಗಳನ್ನು ಗುರುತಿಸಲಾಗಿತ್ತು, ಕೋವಿಡ್‌ ಕಾರಣದಿಂದ ಹೆಚ್ಚುವರಿಯಾಗಿ 207 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

‘ಜಿಲ್ಲೆಯ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಬಿಟ್ಟು ಉಳಿದ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.ಮೊದಲ ಹಂತದಲ್ಲಿ (ಡಿ.22) ಚಾಮರಾಜನಗರ ತಾಲ್ಲೂಕಿನ 43 ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ 1,241 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಎರಡನೇ ಹಂತದಲ್ಲಿ (ಡಿ.27) ಯಳಂದೂರು ತಾಲ್ಲೂಕಿನ 12, ಕೊಳ್ಳೇಗಾಲ ತಾಲ್ಲೂಕಿನ 16, ಹನೂರು ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ 916 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ’ ಎಂದರು.

ಮತದಾನಗಳ ದಿನಗಳಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಡಿ.7 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು 11ರಂದು ಕಡೆಯ ದಿನ. 12ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು 14 ಕೊನೆಯ ದಿನ.

ಎರಡನೇ ಹಂತದ ಚುನಾವಣೆಗೆ ಡಿ.11ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು 16 ಕಡೆಯ ದಿನ. 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ಗೆ 19 ಕಡೇ ದಿನ. ಮತದಾನಕ್ಕೆ ಮತಪತ್ರ ಬಳಸಲಾಗುತ್ತದೆ. ನೋಟಾ ಇರುವುದಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ರವಿ ಅವರು ಹೇಳಿದರು.

‘ಡಿ.30ರಂದು ಮತ ಎಣಿಕೆ ನಡೆಯಲಿದೆ. ಕೋವಿಡ್‌ ಕಾರಣದಿಂದ ಈ ಬಾರಿ ವಿಕೇಂದ್ರೀಕರಣ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಎಣಿಕೆ ನಡೆಯಲಿದೆ. 14 ಕೇಂದ್ರಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.

‘ಸೋಮವಾರದಿಂದಲೇ (ನ.30) ನೀತಿ ಸಂಹಿತೆ ಜಾರಿಗೆ ಬಂದಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಕೋವಿಡ್‌ ಕಾರಣದಿಂದ ಅಭ್ಯರ್ಥಿಯು ಪ್ರಚಾರ ನಡೆಸುವಾಗ ಗರಿಷ್ಠ ಐವರು ಬೆಂಬಲಿಗರನ್ನು ಕರೆದುಕೊಂಡು ಹೋಗಬಹುದು’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಕಾರಣದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್‌ ರೋಗಿಗಳಿಗೂ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಕೊನೆಯ ಒಂದು ಗಂಟೆ ಅಂದರೆ 4 ರಿಂದ 5ಗಂಟೆಯವರೆಗೆ ಸೋಂಕಿತರು ಮತದಾನ ಮಾಡಬಹುದು. ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕಿತರನ್ನು ಸುರಕ್ಷತಾ ಸಾಧನಗಳೊಂದಿಗೆ ಕರೆತರಲಿದ್ದಾರೆ. ಮತಗಟ್ಟೆ ಅಧಿಕಾರಿ ಸಿಬ್ಬಂದಿಗೂ ಸುರಕ್ಷತಾ ಕಿಟ್‌ಗಳನ್ನು ಒದಗಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಮಾತನಾಡಿ, ‘ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಪೀಠೋಪಕರಣದ ವ್ಯವಸ್ಥೆ ಕೈಗೊಳ್ಳಲಾಗಿದೆ’ ಎಂದರು.

120 ಅತಿ ಸೂಕ್ಷ್ಮ ಮತಗಟ್ಟೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಮಾತನಾಡಿ, ‘ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ 120 ಅತಿ ಸೂಕ್ಷ್ಮ ಹಾಗೂ 254 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಬಂದೋಬಸ್ತ್‌ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇದ್ದರು.

3,48,897 ಪುರುಷರು, 3,51,171ಮಹಿಳೆಯರು

ಜಿಲ್ಲೆಯಲ್ಲಿ 7,00,116 ಮತದಾರರಿದ್ದಾರೆ. ಈ ಪೈಕಿ3,48,897 ಪುರುಷರು ಮತ್ತು 351171ಮಹಿಳೆಯರು. 48 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಮತದಾನದ ಹಕ್ಕು ಪಡೆದಿದ್ದಾರೆ.

ಚಾಮರಾಜನಗರ ತಾಲ್ಲೂಕಿನಲ್ಲಿ 2,41,101ಮತದಾರರಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 1,02,520, ಹನೂರಿನಲ್ಲಿ 1,34,501, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 1,60,242 ಮತದಾರರಿದ್ದಾರೆ. ಯಳಂದೂರು ತಾಲ್ಲೂಕಿನಲ್ಲಿ 61,752 ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT