ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ವಿಷ ಪ್ರಾಶನ– 7ಸೀಳುನಾಯಿ ಸಾವು

ಕುಣಗಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಕೆನ್ನಾಯಿಗಳ ಕಳೇಬರ ಪತ್ತೆ, ಆರೋಪಿ ಸೆರೆ
Published 1 ಜೂನ್ 2024, 7:33 IST
Last Updated 1 ಜೂನ್ 2024, 7:33 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಕಬಿನಿ ನಾಲೆ ರಸ್ತೆಯಿಂದ ಹಿತ್ತಲದೊಡ್ಡಿಗೆ ಸಂಪರ್ಕ ಬೆಸೆಯುವ ಕಚ್ಚಾ ರಸ್ತೆಯ ಸಮೀಪವಿರುವ ಸರ್ಕಾರಿ ಜಾಗದಲ್ಲಿ 7 ಸೀಳು ನಾಯಿಗಳ (ಕೆನ್ನಾಯಿ) ಮೃತದೇಹಗಳು ಪತ್ತೆಯಾಗಿವೆ. ವಿಷ ಪ್ರಾಶನದಿಂದ ಅವುಗಳು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.  

ಪ್ರಕರಣ ಸ‌ಬಂಧ ತನಿಖೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಿತ್ತಲದೊಡ್ಡಿ ಅರೆಪಾಳ್ಯ ಗ್ರಾಮದ ರಾಜಣ್ಣ (39) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಮಲೆ ಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ ಬಫರ್ ವಲಯ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂಬ್ರ– 492 ಸರ್ಕಾರಿ ಜಾಗದಲ್ಲಿ ಸೋಮವಾರ 6 ಸೀಳುನಾಯಿಗಳ ಮತ್ತು ಮಂಗಳವಾರ 1 ಕೆನ್ನಾಯಿಯ ಮೃತ ದೇಹ ಕಂಡು ಬಂದಿವೆ. ಕಳೇಬರಗಳು ಪತ್ತೆಯಾಗಿದ್ದ ಜಾಗದಲ್ಲಿ ವಾಂತಿ ಗುರುತು ಇದ್ದವು. ಹಾಗಾಗಿ, ವಿಷ ಸೇವನೆಯಿಂದ ಅವುಗಳು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಗಾಗಿ ಅವರು ಕಾಯುತ್ತಿದ್ದರು.  ಕೆನ್ನಾಯಿಗಳು ಸರ್ಕಾರಿ ಜಾಗದಲ್ಲಿ ಸತ್ತ ಸ್ಥಿತಿಯಲ್ಲಿರುವ ಬಗ್ಗೆ ಸೋಮವಾರ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಬಂದಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿದಾಗ ಆರು ಕಳೇಬರಗಳು ಪತ್ತೆಯಾಗಿದ್ದವು. ಮಂಗಳವಾರ ಬೆಳಿಗ್ಗೆ ತನಿಖೆಗಾಗಿ ಮತ್ತೆ ಸ್ಥಳಕ್ಕೆ ಭೇಟಿ ನೀಡಿದಾಗ ಸ್ವಲ್ಪ ದೂರದಲ್ಲಿ ಮತ್ತೊಂದು ಕೆನ್ನಾಯಿಯ ಮೃತದೇಹ ಪತ್ತೆಯಾಗಿತ್ತು. 

ಬೇಟೆ ಅವ್ಯಾಹತ: ಈ ಪ್ರದೇಶದಲ್ಲಿ ಪ್ರಾಣಿಗಳ ಬೇಟೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಬೇಟೆಗಾರರು ಸಕ್ರಿಯರಾಗಿದ್ದು, ಮಾಂಸಕ್ಕಾಗಿ ಜಿಂಕೆಯಂತಹ ಪ್ರಾಣಿಗಳನ್ನು ಕೊಲ್ಲುತ್ತಿರುತ್ತಾರೆ ಎಂದು ಹೇಳುತ್ತಾರೆ ವನ್ಯಪ್ರೇಮಿಗಳು. ‘ಕಾಡಿನೊಳಗೆ ಯಾರೂ ಹೋಗದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ ಈ ಭಾಗದಲ್ಲಿ ಕೆಲವರು ಅರಣ್ಯದೊಳಗೆ ಪ್ರವೇಶ ಮಾಡಿ ಪ್ರಾಣಿಗಳನ್ನು ನಿರಂತರವಾಗಿ ಬೇಟೆಯಾಡುತ್ತಿದ್ದಾರೆ. ಈ ಮಾಹಿತಿ ಇಲಾಖೆಗೆ ತಿಳಿದಿದ್ದರೂ ಸುಮ್ಮನಿದ್ದಾರೆ’ ಎಂಬುದು ಅವರ ದೂರು. ‘ಸುಮಾರು ವರ್ಷಗಳಿಂದಲೂ ಈ ಭಾಗದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೀಳುನಾಯಿಗಳ ಸಾವಿಗೆ ನಿಖರ ಕಾರಣ ಪತ್ತೆ ಮಾಡಬೇಕು’ ಎಂದು ಪರಿಸರ ಪ್ರೇಮಿಗಳಾದ ಮನೋಜ್‌ ಕುಮಾರ್‌, ಜೀವನ್‌ಸನ್‌ ಒತ್ತಾಯಿಸಿದರು. 

ಪ್ರಾಣಿಗಳ ಹಾವಳಿ: ಅರಣ್ಯದ ಅಂಚಿನ ಪ್ರದೇಶವಾಗಿರುವುದರಿಂದ ಹಂದಿ, ಚಿರತೆ, ಆನೆಗಳಂತಹ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಿದೆ. ರೈತರು ಬೆಳೆ ನಷ್ಟವನ್ನು ಅನುಭವಿಸುತ್ತಿರುತ್ತಾರೆ. ಬೆಳೆ ನಷ್ಟ, ಜಾನುವಾರುಗಳ ಹಾನಿಯಿಂದ ಬೇಸತ್ತ ಜನರು ಉಪಟಳ ನೀಡುವ ಪ್ರಾಣಿಗಳನ್ನು ಕೊಲ್ಲಲು ವಿಷ ಇಡುವ ಪ್ರಕರಣಗಳೂ ನಡೆಯುತ್ತಿರುತ್ತವೆ. 

ಚಿರತೆಗೆ ವಿಷ; ಕೆನ್ನಾಯಿ ಮೃತ

‘ವಾರದ ಹಿಂದೆ ಬಂಧಿತ ಆರೋಪಿ ರಾಜಣ್ಣ ಅವರಿಗೆ ಸೇರಿದ ಎರಡು ಮೇಕೆಯನ್ನು ಚಿರತೆ ತಿಂದು ಹಾಕಿತ್ತು. ಇದರಿಂದ ಕೋಪಗೊಂಡಿದ್ದ ಆತ ಅವುಗಳ ಮಾಂಸಕ್ಕೆ ವಿಷ ಹಾಕಿದ್ದರು. ಆ ಭಾಗದಲ್ಲಿ ಸುತ್ತಾಡುತ್ತಿದ್ದ ಸೀಳುನಾಯಿಗಳು ವಿಷಪೂರಿತ ಮೇಕೆ ಮಾಂಸ ತಿಂದು ಮೃತಪಟ್ಟಿವೆ ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿವೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಸಂತೋಷ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ತನಿಖೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಇನ್ನಷ್ಟು ತನಿಖೆ ನಡೆಸಲಿದ್ದೇವೆ ಎಂದು ಹೇಳಿದರು. 

ಅಳಿವಿನಂಚಿನ ಪ್ರಾಣಿ

ಪ್ರತಿ ವರ್ಷ ಮೇ 28ರಂದು ‘ವಿಶ್ವ ಕೆನ್ನಾಯಿಗಳ ದಿನ’ ಆಚರಿಸಲಾಗುತ್ತಿದೆ. ಕಾಕತಾಳೀಯ ಎಂಬಂತೆ ಅದೇ ಸಮಯದಲ್ಲಿ ಏಳು ಸೀಳುನಾಯಿಗಳು ಪ್ರಾಣಕಳೆದುಕೊಂಡಿವೆ. ಕಾಡು ನಾಯಿ ಎಂದೂ ಕರೆಸಿಕೊಳ್ಳುವ ಇವು ಹುಲಿ ಚಿರತೆ ಆನೆಗಳಿಗಳಿಗಿಂತಲೂ ಹೆಚ್ಚು ಅಳವಿನಂಚಿನಲ್ಲಿರುವ ಜೀವಿಗಳು. ಅಂದಾಜಿನ ಪ್ರಕಾರ ಇಡೀ ಪ್ರಪಂಚದಲ್ಲಿ 2000ದಷ್ಟು ಕೆನ್ನಾಯಿಗಳಿವೆ. 350ರಷ್ಟು ಕೆನ್ನಾಯಿಗಳು ಮೃಗಾಲಯಗಳಲ್ಲಿವೆ. ನಮ್ಮ ದೇಶದಲ್ಲಿ ಇವು ಹೆಚ್ಚಿವೆ. ಗುಂಪಿನಲ್ಲಿ ವಾಸಿಸುವ ಅತ್ಯಂತ ಸೂಕ್ಷ್ಮ ಜೀವಿಯಾಗಿರುವ ಸೀಳುನಾಯಿಗಳು ಪ‍ಶ್ಚಿಮಘಟ್ಟ ಪೂರ್ವಘಟ್ಟ ಮಧ್ಯ ಭಾಗ ಈಶಾನ್ಯ ಭಾಗದ ಅರಣ್ಯಗಳಲ್ಲಿ ಕಂಡು ಬರುತ್ತವೆ. ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳಲ್ಲೂ ಕೆನ್ನಾಯಿಗಳು ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT