ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಜಾತ್ರೆ: ವಿಜೃಂಭಣೆಯಿಂದ ನಡೆದ ಮಾದಪ್ಪನ ರಥೋತ್ಸವ

ಸ್ಥಳೀಯ, ಸೀಮಿತ ಭಕ್ತರು ಭಾಗಿ, ಮಾರ್ದನಿಸಿದ ಉಘೇ ಉಘೇ ಮಾದಪ್ಪ ಘೋಷಣೆ
Last Updated 14 ಮಾರ್ಚ್ 2021, 11:38 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯ ಮಹಾಶಿವರಾತ್ರಿ ರಥೋತ್ಸವವು ಸ್ಥಳೀಯ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಭಾನುವಾರ ನೆರವೇರಿತು.

ಬೆಳಿಗ್ಗೆ 9.45ರಿಂದ 11 ಗಂಟೆಯ ನಡುವೆ ರಥೋತ್ಸವ ನಡೆಯಿತು. ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧವಿದ್ದುದರಿಂದ ಬೆಟ್ಟ ಹಾಗೂ ಸುತ್ತಮುತ್ತಲಿನ ಭಕ್ತರು ಮಾತ್ರ ರಥೋತ್ಸವದಲ್ಲಿ ಪಾಲ್ಗೊಂಡರು. ಪ್ರತಿ ವರ್ಷಕ್ಕಿಂತ ಕಡಿಮೆ ಭಕ್ತರಿದ್ದರೂ, ರಥೋತ್ಸವದ ವಿಜೃಂಭಣೆಗೆ ಕೊರತೆಯಾಗಲಿಲ್ಲ. ಉಘೇ ಉಘೇ ಮಾದಪ್ಪ ಎಂಬ ಘೋಷಣೆ ಬೆಟ್ಟದಲ್ಲೆಲ್ಲ ಮಾರ್ದನಿಸಿತು.

ಸಾಲೂರು ಮಠದ ಪಟ್ಟದ ಗುರುಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ರಥೋತ್ಸವ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ರಥೋತ್ಸವಕ್ಕೂ ಮುನ್ನ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬಿಳಿ ಆನೆ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಒಳಾಂಗಣದಲ್ಲಿ ಬಿಳಿ ಆನೆ ಉತ್ಸವ ನೆರವೇರಿಸಲಾಯಿತು. ಆ ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ದೇವರಿಗೆ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆಯಲಾಯಿತು. ಹಸಿರು ಸೀರೆ ಉಟ್ಟಿದ್ದ ಬೇಡಗಂಪಣ್ಣ ಸಮುದಾಯದ ಪುಟ್ಟ ಹೆಣ್ಣು ಮಕ್ಕಳು ಮಹದೇಶ್ವರ ಸ್ವಾಮಿಗೆ ಬೆಲ್ಲದ ಆರತಿ ಎತ್ತುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸ್ಥಳೀಯರ ಭಕ್ತರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರು ಹಾಗೂ ಆಹ್ವಾನಿತರು ಮಹದೇಶ್ವರ ಸ್ವಾಮಿಯ ತೇರನ್ನು ಎಳೆದರು. ಹುಲಿ ವಾಹನ, ಬಸವವಾಹನ ಹಾಗೂ ರುದ್ರಾಕ್ಷಿ ಮಂಟಪಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ಮಂಗಳವಾದ್ಯಗಳು, ಸಮೀತ ಸಂಖ್ಯೆಯಲ್ಲಿದ್ದ ಭಕ್ತರ ಹರ್ಷೋದ್ಘಾರಗಳೊಂದಿಗೆ ರಥವನ್ನು ದೇವಾಲಯಕ್ಕೆ ಸುತ್ತು ತರಲಾಯಿತು. ಯಾವುದೇ ಅಡೆ ತಡೆ ಇಲ್ಲದೇ ರಥೋತ್ಸವ ಸಾಂಗವಾಗಿ ನೆರವೇರಿತು. ಭಕ್ತರು ತೇರಿಗೆ ಹಣ್ಣು, ಧವನ ಎಸೆದು ಕಾಣಿಕೆ ಸಮರ್ಪಿಸಿದರು.

ಐದು ದಿನಗಳ ಜಾತ್ರೆಗೆ ತೆರೆ

ಪ್ರತಿ ವರ್ಷ ಮಹಾ ಶಿವರಾತ್ರಿ ಸಮಯದಲ್ಲಿ ಬೆಟ್ಟದಲ್ಲಿ ಐದು ದಿನಗಳ ಜಾತ್ರೆ ನಡೆಯುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಸಾಮಾನ್ಯವಾಗಿ ಹೊರಗಿನಿಂದ ಹೆಚ್ಚು ಬರುವುದರಿಂದ ಸ್ಥಳೀಯರು ವ್ಯಾಪಾರ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ಬೆಟ್ಟದ ಸುತ್ತಮುತ್ತದ ಜನರಿಗೆ ಬಿಟ್ಟು ಹೊರಗಡೆಯವರಿಗೆ ನಿರ್ಬಂಧ ವಿಧಿಸಿದ್ದರಿಂದ ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡರು.

ಹೊರಗಿನಿಂದ ಬರುವ ಭಕ್ತರನ್ನು ತಡೆಯುವುದಕ್ಕಾಗಿ ಪೊಲೀಸರು ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದರು. ಆಹ್ವಾನಿತ ದಾನಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಬಿಟ್ಟು ಬೇರೆ ಯಾರಿಗೂ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕೂ ಅವಕಾಶ ಇರಲಿಲ್ಲ.

ಈ ಬಾರಿಯ ಶಿವರಾತ್ರಿ ಜಾತ್ರೆ ಮಾರ್ಚ್‌ 10 ರಂದು ಆರಂಭವಾಗಿತ್ತು. ಭಾನುವಾರ ನಡೆದ ರಥೋತ್ಸವ ನಡೆಯುವ ಮೂಲಕ ಜಾತ್ರೆಗೆ ತೆರೆ ಬಿದ್ದಿದೆ. ಜಾತ್ರೆಯ ಕೊನೆಯ ಭಾಗವಾಗಿ ಭಾನುವಾರ ರಾತ್ರಿ ಕೊಂಡೋತ್ಸವ ನಡೆಯಲಿದೆ.

ಸೋಮವಾರದಿಂದ ಎಂದಿನಂತೆ ದರ್ಶನ

ಸೋಮವಾರದಿಂದ ಎಲ್ಲ ಭಕ್ತರ ಪ್ರವೇಶಕ್ಕೆ ಮುಕ್ತ ಅವಕಾಶ ಇದೆ. ಜಾತ್ರೆಯ ಸಮಯದಲ್ಲಿ ನಿರ್ಬಂಧ ಇದ್ದುದರಿಂದ, ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT