ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜಾ ಮಾಡುವುದಕ್ಕಾಗಿ ಮತ್ತೆ ಸಿ.ಎಂ: ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿ

Published 7 ಮೇ 2023, 12:47 IST
Last Updated 7 ಮೇ 2023, 12:47 IST
ಅಕ್ಷರ ಗಾತ್ರ

ಚಾಮರಾಜನಗರ: ‘ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ‌ ಸಿದ್ದರಾಮಯ್ಯ. ಮಜಾ ಮಾಡುವುದಕ್ಕಾಗಿ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ವ್ಯಂಗ್ಯವಾಡಿದರು.

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಅವರನ್ನು ಮಜಾರಾಮಯ್ಯ ಎಂದು ಟೀಕಿಸಿದರು.

'ಈ ಬಾರಿಯೂ ಮುಖ್ಯಮಂತ್ರಿಯಾಗುವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದುಕೊಂಡು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಮುಖ್ಯಮಂತ್ರಿಯಾದವರು ಎರಡು ಕಡೆಗಳಲ್ಲಿ ಸ್ಪರ್ಧಿಸುತ್ತಾರಾ? ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಬಾದಾಮಿಯಲ್ಲಿ 1,700 ಮತಗಳಿಂದ ಗೆದ್ದರು. ಅವರ ಸಂಪುಟದಲ್ಲಿದ್ದ 13-14 ಸಚಿವರು ಸೋತರು. ಅವರ ಮಾವುತ ಎಚ್. ಸಿ.ಮಹದೇವಪ್ಪ ತಿ.ನರಸೀಪುರದಲ್ಲಿ 36 ಸಾವಿರ ‌ಮತಗಳಿಂದ ಸೋತರು' ಎಂದು ವ್ಯಂಗ್ಯವಾಡಿದರು.

'ಸಿದ್ದರಾಮಯ್ಯಗೆ ಆರಂಭದಿಂದ ಸಹಾಯ ಮಾಡುತ್ತಾ ಬಂದಿದ್ದೆ. ಆದರೆ, ನನ್ನನ್ನು ಒಂದು ಮಾತು ಕೇಳದೆ ಸಚಿವ ಸಂಪುಟದಿಂದ ತೆಗೆದು ಹಾಕಿ, ಮನಸ್ಸಿಗೆ ಗಾಯ ಮಾಡಿದ. ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ. ವರುಣ ಕ್ಷೇತ್ರದಲ್ಲಿ ಸೋಮಣ್ಣ ಅಭ್ಯರ್ಥಿಯಾದ ತಕ್ಷಣ ಸಿದ್ದರಾಮಯ್ಯ ಗಲಿಬಿಲಿಗೊಂಡಿದ್ದಾನೆ' ಎಂದರು.

'ರಾಹುಲ್ ಗಾಂಧಿ ಚಾಮರಾಜನಗರಕ್ಕೆ ಬಂದು‌ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳಿ‌ ಮೋದಿ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರದ ಕಾರಣಕ್ಕೆ 2014ರಲ್ಲಿ ಮೋದಿ ಪ್ರಧಾನಿಯಾದರು. ಹತ್ತು ವರ್ಷಗಳ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣಗಳಿಂದಾಗಿ, ಜನರು ಮೋದಿಯನ್ನು ಗೆಲ್ಲಿಸಿದರು' ಎಂದು ಹೇಳಿದರು.

'ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಎಐಸಿಸಿ ಕಚೇರಿಯಲ್ಲಿ ‌ಕುಳಿತು ಇವರು‌ ನಿಯಂತ್ರಣ ಮಾಡಿದರು. ರಾಷ್ಟ್ರೀಯ ಪಕ್ಷ ವೊಂದನ್ನು ಸರ್ವನಾಶ ಮಾಡಿದ ರಾಹುಲ್ ಗಾಂಧಿ‌ ಇಲ್ಲಿ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ' ಎಂದು ಶ್ರೀನಿವಾಸ ಪ್ರಸಾದ್ ಟೀಕಿಸಿದರು.

ಪಂಚರತ್ನ ಅಲ್ಲ ನವರತ್ನ: ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.

'ಜೆಡಿಎಸ್‌ನವರು ಪಂಚರತ್ನ ಯಾತ್ರೆ ಮಾಡಿದ್ದಾರೆ. ಅದು ಪಂಚರತ್ನ ಅಲ್ಲ ನವರತ್ನ ಆಗಬೇಕು. ಅವರ ಪ್ರಚಾರ ಸಮಿತಿಯನ್ನು ಗಮನಿಸಿದರೆ ಎಂಟು ಮಂದಿ ದೇವೇಗೌಡ ಕುಟುಂಬದವರೇ ಇದ್ದಾರೆ. ಈ ಅಷ್ಟರತ್ನಗಳೊಂದಿಗೆ ಒಂಬತ್ತನೆಯವರು ಅದರ ರಾಜ್ಯ ಅಧ್ಯಕ್ಷ ಇಬ್ರಾಹಿಂ ಇದ್ದಾರೆ.‌ ಹಾಗಾಗಿ ಅದು ನವರತ್ನ' ಎಂದು ಕುಟುಕಿದರು.

'ಜೆಡಿಎಸ್ ಬಗ್ಗೆ ನಾನು ಮಾತನಾಡುವುದಿಲ್ಲ. ಜನರೇ ತೀರ್ಮಾನ ಮಾಡುತ್ತಾರೆ' ಎಂದರು.

ಕೊನೆಯ ಚುನಾವಣಾ ಭಾಷಣ: '49 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮುಂದಿನ ವರ್ಷಕ್ಕೆ 50 ವರ್ಷಗಳಾಗುತ್ತವೆ. ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಇದೇ ನನ್ನ ಕೊನೆಯ ಚುನಾವಣಾ ಭಾಷಣ' ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.

'ಸೋಮಣ್ಣ ಅವರು ಹಿರಿಯ ನಾಯಕರು. ಬಡವರ ಬಗ್ಗೆ ಕಾಳಜಿ ಉಳ್ಳವರು. ವಸತಿ ಸಚಿವರಾಗಿ‌ ಉತ್ತಮ‌‌ ಕೆಲಸ ಮಾಡಿದ್ದಾರೆ. ಪಕ್ಷದ ವರಿಷ್ಠರು ಅವರನ್ನು ವರುಣ ಮತ್ತು ಚಾಮರಾಜನಗರದಲ್ಲಿ ಟಿಕೆಟ್ ನೀಡಿದ್ದಾರೆ. ಎಲ್ಲರೂ ಅವರನ್ನು ಬೆಂಬಲಿಸಬೇಕು. ಕ್ಷೇತ್ರದ ಜನರು ಅವರಿಗೆ ಮತ ಹಾಕಿ ಹೆಚ್ಚು ಅಂತರದಿಂದ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಬಿಜೆಪಿ‌ ಹೆಚ್ಚು ಸ್ಥಾನಗಳನ್ನು‌ ಗೆಲ್ಲಲಿದ್ದು, ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT