ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಹಾನ್‌ ಪುರಷರ ಆದರ್ಶ ಪಾಲಿಸೋಣ- ಎಂ.ರಾಮಚಂದ್ರ

ಸಿದ್ದರಾಮೇಶ್ವರ, ವೇಮನ, ಅಂಬಿಗರ ಚೌಡಯ್ಯ ಜಯಂತಿ; ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
Last Updated 21 ಜನವರಿ 2022, 16:51 IST
ಅಕ್ಷರ ಗಾತ್ರ

ಚಾಮರಾಜನಗರ: ‘ವಚನಕಾರರು, ಮಹಾನ್ ಪುರುಷರು ತಮ್ಮ ವಚನ ಹಾಗೂ ಸಾಹಿತ್ಯದ ಮೂಲಕ ಸಮಾಜದ ಉನ್ನತಿಗೆ ತಮ್ಮದೇಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಶುಕ್ರವಾರ ಇಲ್ಲಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಜಯಂತಿ ಹಾಗೂ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಲಾಗಿದ್ದ ದಾಸೋಹ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.

‘ಶಿವಯೋಗಿ ಸಿದ್ದರಾಮೇಶ್ವರರು ಕಾಯಕದ ಶ್ರೇಷ್ಠತೆಯನ್ನು ಸಾರಿದವರು. ಬಸವಣ್ಣ ಅವರ ಅನುಭವ ಮಂಟಪದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ತಿಳಿ ಹೇಳುವಲ್ಲಿ ಮುಂದಾದರು. ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಕೂಡ ಸಮಾಜದ ಒಳಿತಿಗೆ ಶ್ರಮಿಸಿದವರು. ಡಾ.ಶಿವಕುಮಾರ ಸ್ವಾಮೀಜಿ ವಿದ್ಯೆ, ಆಶ್ರಯ, ಅನ್ನ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ಬೆಳಕು ನೀಡಿದವರು’ ಎಂದು ಬಣ್ಣಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಮಾತನಾಡಿ ‘ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಚನಕಾರರು, ಮಹಾನ್ ವ್ಯಕ್ತಿಗಳ ಜಯಂತಿ, ಪುಣ್ಯಸ್ಮರಣೆಯನ್ನು ಸರಳವಾಗಿ ನಡೆಸಲಾಗುತ್ತಿದೆ. ಕೋವಿಡ್ ಪರಿಸ್ಥಿತಿ ಬೇಗನೆ ದೂರವಾಗಲಿ ಎಂಬುದು ಎಲ್ಲರ ಆಶಯವಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ ಮಾತನಾಡಿ ‘ಶಿವಯೋಗಿ ಸಿದ್ದರಾಮೇಶ್ವರರು ವಚನಗಳಿಗೆ ಮಾತ್ರ ಸೀಮಿತವಾಗದೆ ಸಿದ್ದಿಪುರುಷರಾಗಿಯೂ ಮೆರೆದರು. ಜನರಿಗೆ ತತ್ವ ಬೋಧನೆ ಜೊತೆಗೆ ಕರ್ತವ್ಯ ಪಾಲನೆ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ವೇಮನ ಸರಳತೆ ಹಾಗೂ ವಾಸ್ತವತೆ ಬಗ್ಗೆ ಪ್ರತಿಪಾದಿಸಿದ್ದಾರೆ. ಅಂಬಿಗರ ಚೌಡಯ್ಯ ಡಾಂಬಿಕತೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದವರಾಗಿದ್ದಾರೆ. ನಡೆದಾಡುವ ದೇವರು ಎನಿಸಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ವಿದ್ಯೆ, ಅನ್ನದಾನದ ಮೂಲಕ ಚಿರಸ್ಮರಣೀಯರಾಗಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಗು.ಪುರುಷೋತ್ತಮ್ ಮಾತನಾಡಿದರು. ಜಾನಪದ ಅಕಾಡೆಮಿ ಸದಸ್ಯರಾದ ಸಿ.ಎಂ.ನರಸಿಂಹಮೂರ್ತಿ ವಚನ ಗಾಯನ ನಡೆಸಿಕೊಟ್ಟರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ನಿಜಧ್ವನಿ ಗೋವಿಂದರಾಜು, ಜಿ.ಬಂಗಾರು, ಮಲ್ಲಿಕಾರ್ಜುನ ಸ್ವಾಮಿ, ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಪ್ರಮೋದ್ ಉಪಸ್ಥಿತರಿದ್ದರು.

ಪುಣ್ಯಸ್ಮರಣೆ; ರಕ್ತದಾನ ಶಿಬಿರ

ಸಂತೇಮರಹಳ್ಳಿ: ಇಲ್ಲಿಗೆ ಸಮೀಪದ ಹೆಗ್ಗವಾಡಿ ಗ್ರಾಮದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಾರಾಧನೆ ಹಾಗೂ ದಾಸೋಹ ದಿನದ ಅಂಗವಾಗಿ ಡಾ.ಶಿವಕುಮಾರ ಸ್ವಾಮೀಜಿ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.

ಸಿಪಿಐ ಪುಟ್ಟಸ್ವಾಮಿ ಮಾತನಾಡಿ ‘ರಕ್ತದಾನ ಮಹಾಪುಣ್ಯದ ಕೆಲಸ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ಡಾ.ಎನ್.ಎಸ್.ದಿವ್ಯಾ ಮಾತನಾಡಿದರು. ರಾಜಶೇಖರಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು.

ಮುಖಂಡರಾದ ಜಗದೀಶ್, ಪರಶಿವಮೂರ್ತಿ, ಪುಟ್ಟಣ್ಣ, ಮಹೇಶ್, ಶಿವಮಲ್ಲಪ್ಪ, ವೀರಭದ್ರಪ್ಪ, ದೊಡ್ಡರಾಜು, ರಾಜಶೇಖರ್, ನಾಗಣ್ಣ, ಸುಂದ್ರ, ಗುರುಪಾದಸ್ವಾಮಿ, ಸಿದ್ದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT