ಗುರುವಾರ , ಜುಲೈ 29, 2021
20 °C
ಅಪರೂಪದ ಕಟ್ಟು ತೋಳ ಹಾವು

ಯಳಂದೂರು | ಅತಿಥಿಗೃಹಕ್ಕೆ ಬಂದಿದ್ದ ಕಟ್ಟುತೋಳ ಹಾವಿನ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಪಟ್ಟಣದ ನ್ಯಾಯಾಲಯದ ಅತಿಥಿಗೃಹದ ಸಿಂಕ್‌ನಲ್ಲಿ ಈಚೆಗೆ ಬಂದು ಕೂತಿದ್ದ ಕಟ್ಟುತೋಳ ಹಾವನ್ನು ಈಚೆಗೆ ಸಂತೇಮರಹಳ್ಳಿ ಸ್ನೇಕ್‌ ಮಹೇಶ್ ರಕ್ಷಿಸಿದರು.

ಬಹುತೇಕ ನಿಶಾಚರಿಗಳಾದ ಕಟ್ಟುತೋಳ ಉರಗಗಳು ವಂಶಾಭಿವೃದ್ಧಿ ಸಮಯದಲ್ಲಿ ಹಲ್ಲಿ, ಓತಿಕ್ಯಾತ, ಕಪ್ಪೆಮರಿ, ಜಿರಳೆ ತಿನ್ನಲು ಹೊಲ, ಗದ್ದೆಗಳ ಬಳಿ ಸಾಗುತ್ತವೆ. ಈ ಸಂದರ್ಭದಲ್ಲಿ ನೀರಿನ ತೊಟ್ಟಿ, ಮನೆಗಳಲ್ಲಿ ಆಶ್ರಯ ಪಡೆಯುತ್ತವೆ.

‘ಇವು ವಿಷರಹಿತ ಮಧ್ಯಮ ಗಾತ್ರದ ಹಾವು. ಕುತ್ತಿಗೆಗಿಂತ ಅಗಲವಾದ ಚಪ್ಪಟೆ ತಲೆ, ಹೊರ ಚಾಚಿದಂತೆ ಕಾಣುವ ಕಣ್ಣುಗಳು, ಶರೀರ ಬೂದು ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದೆ. ಬೆನ್ನಿನಿಂದ ಬಾಲದ ತನಕ 12– 20 ಅಡ್ಡ ಕಟ್ಟುಗಳನ್ನು ಹೊಂದಿದ್ದು, ಹೆಣ್ಣಾವು ಗಂಡಿಗಿಂತ ದೊಡ್ಡದಾಗಿ ಇರುತ್ತದೆ’ ಎಂದು ಸ್ನೇಕ್‌ ಮಹೇಶ್ ಹೇಳಿದರು.

‘ಇವು ಒರಟಾದ ಮರ, ಗೋಡೆಗಳನ್ನು ಏರುತ್ತವೆ. ಗೆದ್ದಲು, ಜಿರಲೆ ಬಿಲದಲ್ಲಿ ನೆಲೆಸುತ್ತವೆ. ವಿಷಕಾರಿ ಕಡಂಬಳ ಹಾವುಗಳನ್ನು ಹೋಲುವುದರಿಂದ ಅಪಾಯಕ್ಕೆ ಸಿಲುಕಿವೆ. ಆದರೆ, ಇವು ಸುಂದರ ಮತ್ತು ನಿರುಪದ್ರವಿ ಉರಗಗಳು. ಇವುಗಳ ಸಂರಕ್ಷಣೆಯಿಂದ ಕೃಷಿಗೆ ಕಂಟಕವಾದ ಮಿಡತೆ, ಇಲಿ, ಹೆಗ್ಗಣಗಳ ಸಂತತಿ ನಾಶಪಡಿಸಬಹುದು’ ಎನ್ನುತ್ತಾರೆ ಇವರು.

ತುಳುವಿನಲ್ಲಿ ‘ಕಟ್ಟ ಬುಳುಕರಿ’, ಹಿಂದಿಯಲ್ಲಿ ‘ಕವುರಿಯಾಲ’, ಇಂಗ್ಲಿಷ್‌ನಲ್ಲಿ ಬ್ಯಾಂಡೇಡ್‌ ‘ವೂಲ್ಪ್‌ ಸ್ನೇಕ್‌’ ಎನ್ನುವ ಇದನ್ನು ವೈಜ್ಞಾನಿಕವಾಗಿ ‘ಲೈಕೊಡಾನ್ ಆಲಿಕಸ್’ ಎಂದು ಹೆಸರಿಸಲಾಗಿದೆ. ಬಾಯಿಯ ಮುಂಭಾಗ ಚೂಪಾದ ಉದ್ದನೆಯ ಹಲ್ಲು ತೋಳದ ಹಲ್ಲುಗಳನ್ನು ಹೋಲುವುದರಿಂದ ಇವುಗಳಿಗೆ ತೋಳದ ಹಾವು ಎಂತಲೂ, ಬೆನ್ನಿನ ಮೇಲೆ ಬಿಳಿ ಅಡ್ಡ ಕಟ್ಟು ಇರುವುದರಿಂದ ಕಟ್ಟುತೋಳ ಎಂತಲೂ ಹೆಸರಿದೆ. ಜೂನ್‌ ತನಕ ಮೊಟ್ಟೆ ಇಡುತ್ತವೆ. ಹಾಗಾಗಿ, ಸುರಕ್ಷಿತ ತಾಣಗಳನ್ನು ಆಶ್ರಯಿಸಿ ಬರುತ್ತವೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು