ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬೀದಿನಾಯಿ ಹಾವಳಿಗೆ ಸಿಗದ ಮದ್ದು

ನಗರ, ಪಟ್ಟಣ ಪ್ರದೇಶಗಳಲ್ಲಿ ಶ್ವಾನಗಳ ಕಾಟಕ್ಕೆ ಸಾರ್ವಜನಿಕರು ಹೈರಾಣ, ಕ್ರಮ ಕೈಗೊಳ್ಳದ ಆಡಳಿತ
Last Updated 23 ಜನವರಿ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ನಗರ ಸ್ಥಳೀಯ ಸಂಸ್ಥೆಗಳು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪ.

ಮಕ್ಕಳು, ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿರುವ ಪ್ರಕರಣ ಪದೇ ಪದೇ ನಡೆಯುತ್ತಿದೆ. ಅದೃಷ್ಟವಶಾತ್‌ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಗಳು ವರದಿಯಾಗುತ್ತಿಲ್ಲ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಚಾಮರಾಜನಗರದ ಕೆ.ಪಿ.ಮೊಹಲ್ಲಾದಲ್ಲಿ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳು ಗಾಯಗೊಂಡಿದ್ದರು. ಒಂದು ಮಗುವಿಗೆ ತೀವ್ರವಾಗಿ ಏಟಾಗಿದ್ದರಿಂದ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಬೇಕಾಗಿ ಬಂದಿತ್ತು.

ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಯಳಂದೂರು ಸೇರಿದಂತೆ ನಗರ, ಪಟ್ಟಣ ‍ಪ್ರದೇಶಗಳು ಹಾಗೂ ಹೋಬಳಿ ಕೇಂದ್ರಗಳ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ಬೀದಿ ನಾಯಿಗಳು ಕಾಟ ಕೊಡುತ್ತವೆ. ಗ್ರಾಮೀಣ ಭಾಗದಲ್ಲೂ ಇವುಗಳ ಸಮಸ್ಯೆ ಕಡಿಮೆ ಏನಲ್ಲ.

ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳು, ಫಾಸ್ಟ್‌ಫುಡ್‌, ಮಾಂಸದ ಅಂಗಡಿಗಳ ಮುಂಭಾಗ ತ್ಯಾಜ್ಯ ರಾಶಿಗಳ ನಡುವೆ ಬೀದಿ ನಾಯಿಗಳು ಹೆಚ್ಚಾಗಿ ಕಂಡು ಬರುತ್ತವೆ.

ಮಾಹಿತಿ ಇಲ್ಲ: ತನ್ನ ವ್ಯಾಪ್ತಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಮಾಹಿತಿ ಯಾವ ನಗರ ಸ್ಥಳೀಯ ಸಂಸ್ಥೆಗಳ ಬಳಿಯೂ ಇಲ್ಲ. ಅಧಿಕಾರಿಗಳು ಅಂದಾಜು ಲೆಕ್ಕೆ ಹೇಳುತ್ತಾರೆ. 2019ರಲ್ಲಿ ಚಾಮರಾಜನಗರದಲ್ಲಿ ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವ ಪ್ರಯತ್ನ ಕೆಲ ಕಾಲ ನಡೆಯಿತು. ಆ ಬಳಿಕ ನಡೆದಿಲ್ಲ. ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಡುವ ಯತ್ನವನ್ನು ಕೆಲವು ನಗರ ಸಂಸ್ಥೆಗಳು ಮಾಡಿವೆ. ಆದರೆ, ಇದು ತಾತ್ಕಾಲಿಕ ಪರಿಹಾರವಷ್ಟೆ.

’ನಾಯಿಗಳು, ಹಸುಗಳು ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಹೊರಗಡೆ ಬಿಡಬಾರದು ಎಂದು ಸ್ಥಳೀಯ ಸಂಸ್ಥೆಗಳು ಮಾಧ್ಯಮಗಳಲ್ಲಿ ಪ್ರಕಟಣೆ ಕೊಟ್ಟು ಸುಮ್ಮನಾಗುತ್ತಿವೆ. ಜಾನುವಾರುಗಳನ್ನು ಹಿಡಿಯುವುದಾಗಲಿ, ಮಾಲೀಕರಿಗೆ ನೋಟಿಸ್‌ ನೀಡುವುದಾಗಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಲಿ ಮಾಡುವುದಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಹಾಗೂ ದಿನ ನಿತ್ಯದ ವ್ಯವಹಾರಕ್ಕೆ ಬರುವ ಜನರು ದಿನನಿತ್ಯ ತೊಂದರೆ ಅನುಭವಿಸಬೇಕಾಗಿದೆ‘ ಎಂಬುದು ಜನಸಾಮಾನ್ಯರ ದೂರು.

ರಾತ್ರಿಯೂ ತೊಂದರೆ: ಬೀದಿ ನಾಯಿಗಳು ಹಗಲು ಮಾತ್ರ ಅಲ್ಲ; ರಾತ್ರಿಯೂ ಕಾಟ ಕೊಡುತ್ತವೆ. ಬಡಾವಣೆಗಳ ರಸ್ತೆಗಳಲ್ಲಿ ಗುಂಪು ಕೂಡುವ ಇವುಗಳು ರಾತ್ರಿ ಬೊಗಳುತ್ತಾ ಜಗಳವಾಡುತ್ತಾ ನಿವಾಸಿಗಳ ನಿದ್ರಾ ಭಂಗ ಮಾಡುತ್ತವೆ.

ಆರ್ಥಿಕ ಹೊರೆ: ಬೀದಿ ನಾಯಿಗಳ ಹಾವಳಿಯ ಅರಿವಿದ್ದರೂ ಸ್ಥಳೀಯ ಸಂಸ್ಥೆಗಳು ಈ ವಿಚಾರವನ್ನು ನಿರ್ಲಕ್ಷಿಸಲು ಪ್ರಮುಖ ಕಾರಣ, ಅವುಗಳ ನಿಯಂತ್ರಣಕ್ಕಾಗಿ ಹೆಚ್ಚು ಖರ್ಚುಮಾಡಬೇಕಾಗುತ್ತದೆ ಎಂಬುದು ಎಂದು ಹೇಳುತ್ತಾರೆ ಅಧಿಕಾರಿಗಳು.

ನಾಯಿಗಳನ್ನು ಕೊಲ್ಲುವಂತೆ ಇಲ್ಲ. ಹಿಡಿದು ಬೇರೆ ಕಡೆಗೆ ಬಿಡಬಹುದಾದರೂ ಅದು ಶಾಶ್ವತವಾದ ಪರಿಹಾರವಲ್ಲ. ಒಂದರೆಡು ತಿಂಗಳುಗಳಲ್ಲಿ ಅವು ವಾಪಸ್‌ ಬರುತ್ತವೆ. ಹೆಣ್ಣು ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ನಂತರ ಬಿಡುವ ವಿಧಾನ ಬಹುತೇಕ ಎಲ್ಲ ಕಡೆಗಳಲ್ಲೂ ಅನುಸರಿಸಲಾಗುತ್ತದೆ. ಆದರೆ, ಇದು ದುಬಾರಿ ಪ್ರಕ್ರಿಯೆ ಎಂದು ವಿವರಿಸುತ್ತಾರೆ ಅಧಿಕಾರಿಗಳು.

’ಒಂದು ನಾಯಿಯನ್ನು ಹಿಡಿದು, ಅದಕ್ಕೆ ಶಸ್ತ್ರಕ್ರಿಯೆ ನಡೆಸಿ ಮೂರು ದಿನ ಅದಕ್ಕೆ ಆರೈಕೆ ಮಾಡಿ ನಂತರ ಹಿಡಿದ ಜಾಗದಲ್ಲೇ ಬಿಡಬೇಕು ಎಂಬುದು ನಿಯಮ. ಇಷ್ಟಕ್ಕೆ ಕನಿಷ್ಠ ₹850 ಖರ್ಚಾಗುತ್ತದೆ. ನಗರ, ಪ‍ಟ್ಟಣ ಪ್ರದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾಯಿಗಳಿರುತ್ತವೆ. ಎಲ್ಲದಕ್ಕೂ ಶಸ್ತ್ರಕ್ರಿಯೆ ಮಾಡಬೇಕಾದರೆ ಹೆಚ್ಚು ಹಣ ಬೇಕಾಗುತ್ತದೆ‘ ಎಂದು ಹಿರಿಯ ಪಶು ವೈದ್ಯಾಧಿಕಾರಿಯೊಬ್ಬರು ’ಪ್ರಜಾವಾಣಿ‘ಗೆ ತಿಳಿಸಿದರು.

ಜನರು ಏನು ಹೇಳುತ್ತಾರೆ?

ತಕ್ಷಣ ಚಿಕಿತ್ಸೆ ದೊರಕಬೇಕು

ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ. ಶಾಲಾ ಮಕ್ಕಳು ಬೀದಿನಾಯಿಗಳ ಕಾಟದಿಂದ ಭಯ ಬೀತರಾಗಿದ್ದಾರೆ. ನಾಯಿ ಕಚ್ಚಿದರೆ ತಕ್ಷಣದಲ್ಲಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಾರೆ. ಬೀದಿನಾಯಿಗಳ ಹತೋಟಿ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ದೊರೆಯುವಂತಾಗಬೇಕು.

–ಬಸವಣ್ಣ. ಕಾವುದವಾಡಿ, ಚಾಮರಾಜನಗರ

ಹುಚ್ಚುನಾಯಿಗಳ ಹಾವಳಿ

ಕೆಲವು ಗ್ರಾಮಗಳಲ್ಲಿ ಹುಚ್ಚುನಾಯಿಗಳ ಹಾವಳಿ ಇದೆ. ಈ ಸಂದರ್ಭದಲ್ಲಿ ಬಹಳಷ್ಟು ಗ್ರಾಮಸ್ಥರು ನಾಯಿಯನ್ನು ಕೊಂದುಬಿಡುತ್ತಾರೆ. ನಂತರ ಚಿಕಿತ್ಸೆ ಪಡೆಯುವುದಿಲ್ಲ. ಇಂತಹ ಘಟನೆಗಳು ಆಗಾಗ ಸಂಭವಿಸುತ್ತಿರುತ್ತವೆ. ಹಾಗಾಗಿ ಕಡ್ಡಾಯವಾಗಿ ನಾಯಿಗಳಿಗೆ ರೇಬಿಸ್ ಸೋಂಕು ನಿರೋಧಕ ಚುಚ್ಚುಮದ್ದನ್ನು ಹಾಕಬೇಕು.

–ಬಿ.ಮಹೇಶ್,ಗುಂಬಳ್ಳಿ, ಯಳಂದೂರು ತಾಲ್ಲೂಕು

ಭಯ ಪಡುವ ಸ್ಥಿತಿ

ನಗರದಲ್ಲಿ ಹಾಗೂ ಬಡಾವಣೆಗಳ ರಸ್ತೆಗಳಲ್ಲಿ ಬೀದಿ ನಾಯಿಗಳು ಅನೇಕ ಬಾರಿ ದಾಳಿ ಮಾಡಿದೆ. ಇದರಿಂದ ನಮ್ಮ ಸಂಬಂಧಿಕರು ಮನೆಗೆ ಬರಲು ಭಯಪಡುವಂತಾಗಿದೆ. ಮಕ್ಕಳು, ಮಹಿಳೆಯರಿಗೆ ರಸ್ತೆಯಲ್ಲಿ ಓಡಾಡುವುದಕ್ಕೆ ತೊಂದರೆಯಾಗುತ್ತಿದೆ.

– ಶೀಲಾ,ಶಿವಕುಮಾರಸ್ವಾಮಿ ಬಡಾವಣೆ, ಕೊಳ್ಳೇಗಾಲ

ಪಂಚಾಯತಿವಾರು ಗಣತಿ ಮಾಡಿ

ರಾತ್ರಿ ಸಮಯದಲ್ಲಿ ನಾಯಿಗಳ ಉಪಟಳ ಹೆಚ್ಚು. ಕೆಲವೊಮ್ಮೆ ನಾಯಿ ಕಡಿತಕ್ಕೆ ಒಳಗಾದರೂ ಚಿಕಿತ್ಸೆ ಸಿಗುವ ಬಗ್ಗೆ ತಿಳಿದಿರುವುದಿಲ್ಲ. ಕಡಿತಕ್ಕೆ ಚುಚ್ಚುಮದ್ದು ಪಡೆಯುವ ಸೌಕರ್ಯವನ್ನು ಆಯಾ ಪಂಚಾಯಿತಿಯಲ್ಲಿ ಕಲ್ಪಿಸಲು ಅಧಿಕಾರಿಗಳು ಆಸ್ಥೆ ವಹಿಸಬೇಕು. ಪಂಚಾಯಿತಿವಾರು ಶ್ವಾನ ಗಣತಿ ಮಾಡಬೇಕು.

– ಸೋಮಶೇಖರ್.ಕೆ.ಸಿ,ಕೆಸ್ತೂರು,ಯಳಂದೂರು ತಾಲ್ಲೂಕು

ಸಂಚಾರ ಕಷ್ಟ

ಹನೂರಿನಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಇದರಿಂದ ಜನರು ದಾರಿಯಲ್ಲಿ ಹೋಗುವುದೇ ಕಷ್ಟವಾಗಿದೆ. ಕೂಡಲೇ ಅವುಗಳನ್ನು ಹಿಡಿದು ಬೇರೆಡೆ ಬಿಡಬೇಕು.

–ಮಹೇಶ್, ಹನೂರು.

ಕಡಿವಾಣ ಹಾಕಿಲ್ಲ

ಪಟ್ಟಣದ ಹಲವು ಬಡಾವಣೆಗಳ ನಿವಾಸಿಗಳು ಏಳೆಂಟು ತಿಂಗಳುಗಳಿಂದ ಬೀದಿನಾಯಿಗಳ ಹಾವಳಿಗೆ ತುತ್ತಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಇದುವರೆಗೆ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ.

– ಕೃಷ್ಣ, ಹನೂರು

ಮಿತಿ ಮೀರಿದ ಕಾಟ

ಕೊಳ್ಳೇಗಾಲದಲ್ಲಿಬೀದಿ ನಾಯಿ ಕಾಟ ಮೀತಿ ಮೀರಿದೆ. ಆ ಕಾರಣ ನಗರಸಭೆಯವರು ಮತ್ತು ಪಶು ಇಲಾಖೆಯವರು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.

– ಸಾಗರ್,ಈದ್ಗಾ ಮೊಹಲ್ಲಾ, ಕೊಳ್ಳೇಗಾಲ

ಅಧಿಕಾರಿಗಳು ಹೇಳುವುದೇನು?

ಪಶುಪಾಲನಾ ಇಲಾಖೆಗೆ ಪತ್ರ

ಚಾಮರಾಜನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಸಮೀಕ್ಷೆ ಮಾಡಿಲ್ಲ. ಹಾಗಾಗಿ, ಎಷ್ಟು ಬೀದಿನಾಯಿಗಳಿವೆ ಎಂಬ ಮಾಹಿತಿ ಇಲ್ಲ. ಕೆಲವು ಕಡೆಗಳಲ್ಲಿ ಅವುಗಳ ಹಾವಳಿ ಇರುವುದು ನಿಜ. ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ಮಾಡುವುದಕ್ಕೆ ಈ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಮತ್ತೆ ಕಾರ್ಯಾಚರಣೆ ನಡೆಸುವ ಸಂಬಂಧ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಪತ್ರ ಬರೆಯಲಾಗಿದೆ.

–ಕರಿಬಸವಯ್ಯ,ನಗರಸಭೆ ಆಯುಕ್ತ, ಚಾಮರಾಜನಗರ

ಎಬಿಸಿ ಚಿಕಿತ್ಸೆ ನಡೆದಿಲ್ಲ

ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ವರ್ಷ ನಾಯಿಗಳನ್ನು ಹಿಡಿದು ಹೊರ ಭಾಗಕ್ಕೆ ಸಾಗಿಸಲಾಗಿದೆ. ಆದರೆ, ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಿಲ್ಲ. ನಾಯಿ ಕಡಿತದ ಪ್ರಕರಣಗಳು ಪಟ್ಟಣದ ವ್ಯಾಪ್ತಿಯಲ್ಲಿ ದಾಖಲಾಗಿಲ್ಲ.

– ಮಹೇಶ್ ಕುಮಾರ್.ಆರೋಗ್ಯ ನಿರೀಕ್ಷಕ,ಪಟ್ಟಣ ಪಂಚಾಯಿತಿ ಯಳಂದೂರು.

ಹಿಡಿಯಲು ಕ್ರಮ

ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಅವುಗಳನ್ನು ಹಿಡಿಸಲು ಅಥವಾ ಸಂತಾನಹರಣ ಚಿಕಿತ್ಸೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.

– ಬಿ.ಪರಶಿವಯ್ಯ,ಮುಖ್ಯಾಧಿಕಾರಿಕಾರಿ, ಹನೂರು ಪಟ್ಟಣ ಪಂಚಾಯಿತಿ

ಚುಚ್ಚುಮದ್ದು ಲಭ್ಯ ಇದೆ

ತಾಲೂಕು ಆಸ್ಪತ್ರೆಯಲ್ಲಿ ನಾಯಿಗಳ ಕಡಿತಕ್ಕೆ ಅಗತ್ಯವಾದ ಔಷಧಿ ಮತ್ತು ಚುಚ್ಚುಮದ್ದು ಲಭ್ಯವಿದೆ.
ಎಸ್ಆರ್‌ವಿ ಮತ್ತು ಇತರೆ ಚುಚ್ಚುಮದ್ದುಗಳನ್ನು ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದೆ. ಕಡಿತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿಗಳು ಇದ್ದಾರೆ. ಹಾಗಾಗಿ, ಅಗತ್ಯ ಇದ್ದವರು ಚುಚ್ಚುಮದ್ದುಗಳನ್ನು ಪಡೆಯಲು ಅಡ್ಡಿಯಿಲ್ಲ.

– ಡಾ. ಶ್ರೀಧರ್,ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ, ಯಳಂದೂರು

–––

ಬೀದಿ ನಾಯಿಗಳೇ ಹೆಚ್ಚು

2020ರ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 12,571 ನಾಯಿಗಳಿವೆ. ನಮ್ಮಲ್ಲಿ ಸಾಕು ನಾಯಿಗಳ ಸಂಖ್ಯೆ ತುಂಬಾ ಕಡಿಮೆ ಒಂದೂವರೆ ಸಾವಿರಕ್ಕಿಂತ ಹೆಚ್ಚಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚಾಮರಾಜನಗರದಲ್ಲಿ 2000ದಿಂದ 3000 ನಾಯಿಗಳು ಇರಬಹುದು.

ಹೊಸ ಜಾನುವಾರು ಗಣತಿ ಇನ್ನಷ್ಟೇ ನಡೆಯಬೇಕಿದೆ. ಎರಡು ವರ್ಷಗಳಲ್ಲಿ ನಾಯಿಗಳ ಪ್ರಮಾಣ ಶೇ 10ರಷ್ಟು ಹೆಚ್ಚಿರಬಹುದು. ಈ ಲೆಕ್ಕಾಚಾರದಲ್ಲಿ ನೋಡಿದರೆ 15 ಸಾವಿರದಿಂದ 16 ಸಾವಿರದವರೆಗೆ ಶ್ವಾನಗಳು ಇರಬಹುದು.

ಸ್ಥಳೀಯ ಸಂಸ್ಥೆಗಳು ನಮಗೆ ಅನುದಾನ ಹಾಗೂ ನಾಯಿಗಳನ್ನು ಮೂರು ದಿನಗಳ ಕಾಲ ಇರಿಸಿಕೊಳ್ಳಲು ಜಾಗ ಕೊಟ್ಟರೆ ನಾವು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧ.

–ಡಾ.ಎಸ್‌.ಸಿ.ಸುರೇಶ, ಪಶುಪಾಲನೆ ಹಾಗೂ ಪಶು‌ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ

––––

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT