ಶನಿವಾರ, ಸೆಪ್ಟೆಂಬರ್ 25, 2021
29 °C
ಕೈಮಗ್ಗ ದಿನಾಚರಣೆ: ರಾಷ್ಟ್ರೀಯ ಧ್ವಜದೊಂದಿಗೆ, ಚರಕ ಸುತ್ತುವ ಗಾಂಧೀಜಿಯ ಚಿತ್ರ ನೇಯ್ದೆ

ಕೊಳ್ಳೇಗಾಲದ ನೇಕಾರನಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಷ್ಟ್ರೀಯ ಕೈಮಗ್ಗ ದಿನಾಚರಣೆ (ಆ.7) ಅಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನೇಯ್ಗೆ ಪ್ರಶಸ್ತಿಯ ರೇಷ್ಮೆ ವಿಭಾಗದಲ್ಲಿ ಕೊಳ್ಳೇಗಾಲದ ನೇಕಾರರೊಬ್ಬರು ಎರಡನೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  

ಕೈಮಗ್ಗದ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ಇಲಾಖೆಯು ಏಳು ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸುತ್ತಿದೆ. ಜಿಲ್ಲೆಯ ನೇಕಾರರು ಇದೇ ಮೊದಲ ಬಾರಿ ಇದರಲ್ಲಿ ಸ್ಪರ್ಧಿಸಿದ್ದು, ಮೊದಲ ಪ್ರಯತ್ನದಲ್ಲೇ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ. 

ಕೊಳ್ಳೇಗಾಲದ ಕೆಂಪನಪಾಳ್ಯ ರಸ್ತೆಯ ನಿವಾಸಿ, 25 ವರ್ಷಗಳಿಂದ ನೇಕಾರಿಕೆಯಲ್ಲಿ ತೊಡಗಿಕೊಂಡಿರುವ ಕೃಷ್ಣಮೂರ್ತಿ (45) ಅವರು ಪ್ರಶಸ್ತಿಗೆ ಆಯ್ಕೆಯಾದವರು. ಮೊದಲ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ನೇಕಾರ ವೆಂಕಟರಮಣ ಅವರು ಆಯ್ಕೆಯಾಗಿದ್ದಾರೆ.

ನೇಯ್ಗೆ ಕಲಾಕೃತಿ ಹೇಗಿದೆ?: ಕೃಷ್ಣಮೂರ್ತಿ ಅವರು ಮಹಾತ್ಮ ಗಾಂಧೀಜಿ ಅವರ 150ನೇ ದಿನಾಚರಣೆ ಅಂಗವಾಗಿ, ರೇಷ್ಮೆ ನೂಲಿನಲ್ಲಿ ರಾಷ್ಟ್ರ ಧ್ವಜವನ್ನು ನೇಯ್ದು ಮಧ್ಯದಲ್ಲಿರುವ ಅಶೋಕ ಚಕ್ರದ ಜೊತೆಗೆ, ಗಾಂಧೀಜಿಯವರು ಚರಕದಲ್ಲಿ ನೂಲು ಸುತ್ತುತ್ತಿರುವ ಚಿತ್ರವನ್ನು ನೇಯ್ದಿದ್ದಾರೆ. ಅಷ್ಟೇ ಅಲ್ಲದೇ ಕೆಳಭಾಗದಲ್ಲಿ ಗಾಂಧೀಜಿಯವರ ಸಹಿಯನ್ನು ಕೂಡ ನೇಯ್ದಿದ್ದಾರೆ. ಗೋಡೆಯಲ್ಲಿ ತೂಗು ಹಾಕಬಹುದಾದ ಈ ಕಲಾಕೃತಿಯು ತೀರ್ಪುಗಾರರಿಗೆ ಇಷ್ಟವಾಗಿದ್ದು, ಎರಡನೇ ಪ್ರಶಸ್ತಿಗೆ ಇದನ್ನು ಆಯ್ಕೆ ಮಾಡಿದ್ದಾರೆ. 

ಮೊದಲ ಪ್ರಶಸ್ತಿಯು ₹25 ಸಾವಿರ ನಗದು, ಸ್ಮರಣಿಕೆಯನ್ನು ಹೊಂದಿದ್ದರೆ, ಎರಡನೇ ಪ್ರಶಸ್ತಿಯು ₹20 ಸಾವಿರ ನಗದು ಹಾಗೂ ಸ್ಮರಣಿಕೆ ಹೊಂದಿದೆ. ಶನಿವಾರ (ಆ.7) ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯಲಿರುವ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 

ಮೂವರು ಸ್ಪರ್ಧೆ: ಈ ಬಾರಿಯ ರಾಜ್ಯಮಟ್ಟದ ಪ್ರಶಸ್ತಿಗಾಗಿ ಕೃಷ್ಣಮೂರ್ತಿ ಸೇರಿದಂತೆ ಮೂವರು ನೇಕಾರರು ಸ್ಪರ್ಧಿಸಿದ್ದರು. ಕೃಷ್ಣಮೂರ್ತಿ ಅವರು ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನಾಚರಣೆಯನ್ನು ಇಟ್ಟುಕೊಂಡು ರೇಷ್ಮೆ ಬಟ್ಟೆಯನ್ನು ನೇಯ್ಗೆ ಮಾಡಿದ್ದರೆ, ಷಣ್ಮುಖ ಹಾಗೂ ಪ್ರಕಾಶ್‌ ಅವರು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸಹಾಯವಾಣಿ , ವಿವಿಪ್ಯಾಟ್‌ ಚಿತ್ರಗಳನ್ನು ರೇಷ್ಮೆ ಸೀರೆಯಲ್ಲಿ ಮೂಡಿಸಿ ಸ್ಪರ್ಧೆಗೆ ಕಳುಹಿಸಿದ್ದರು.

‘ಈ ಮೂವರೂ ಕೊಳ್ಳೇಗಾಲದ ಮಂಜುನಾಥ ಕೈಮಗ್ಗ ನೇಕಾರರ ಮತ್ತು ಹುಲಿಕಾರರ ಸಹಕಾರ ಸಂಘದ ಸದಸ್ಯರು. ಕೃಷ್ಣಮೂರ್ತಿ ಅವರ ನೇಯ್ಗೆ ಕೌಶಲವನ್ನು ನಾನು ಅರಿತಿದ್ದೆ. ಹೀಗಾಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಯಾಕೆ ಭಾಗವಹಿಸಬಾರದು ಎಂದು ಸಲಹೆ ನೀಡಿದ್ದೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಜ್ಯದಲ್ಲಿ ಕೈಮಗ್ಗದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಈ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಜಿಲ್ಲೆಯಿಂದ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲಾಗಿತ್ತು. ಪ್ರಶಸ್ತಿ ಬಂದಿರುವುದು ಸಂತಸವಾಗಿದೆ. ಜಿಲ್ಲೆಯಲ್ಲಿ ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿರುವವರು ಹಲವರಿದ್ದು, ನೇಕಾರಿಕೆಯನ್ನು ಮುಂದುವರಿಸಲು ಇಂತಹ ಸ್ಪರ್ಧೆ ಉತ್ತೇಜನ ನೀಡಲಿದೆ’ ಎಂದು ಹೇಳಿದರು. 

ಸಂತಸ: ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಕೃಷ್ಣಮೂರ್ತಿ ಅವರು, ‘ನಮ್ಮದು ನೇಕಾರಿಕೆ ಕುಟುಂಬ. ನಾನು 25 ವರ್ಷಗಳಿಂದ ಈ ಕಸುಬು ಮಾಡಿಕೊಂಡು ಬಂದಿದ್ದೇನೆ. ಮಂಜುನಾಥ್‌ ಸರ್‌ ಅವರು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದ್ದರು. ಅದರಂತೆ ಒಂದು ವಾರದಲ್ಲಿ ಗಾಂಧೀಜಿ ಅವರ ಚಿತ್ರಣವುಳ್ಳ ರೇಷ್ಮೆ ಬಟ್ಟೆಯನ್ನು ನೇಯ್ದು ಕಳುಹಿಸಿದ್ದೆ. ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ನೇಕಾರಿಕೆಯಲ್ಲಿ ಮುಂದುವರಿಯಲು ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದರು. 

ಕೈಮಗ್ಗ ಸಪ್ತಾಹ ನಾಳೆಯಿಂದ

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕೊಳ್ಳೇಗಾಲದ ಮಂಜುನಾಥ ಕೈಮಗ್ಗ ನೇಕಾರರ ಮತ್ತು ಹುರಿಕಾರರ ಸಹಕಾರ ಸಂಘದ ಆಶ್ರಯದಲ್ಲಿ ಶನಿವಾರ (ಆ.7) ಕೈಮಗ್ಗ ಸಪ್ತಾಹ ಆಯೋಜಿಸಲಾಗಿದೆ. 

ಜಿಲ್ಲಾ ಪಂಚಾಯಿತಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದಲ್ಲಿ ‘ನನ್ನ ಕೈಮಗ್ಗ ನನ್ನ ಹೆಮ್ಮೆ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸಪ್ತಾಹ ನಡೆಯಲಿದೆ. 

‘ವಾರದ ಕಾಲ ಸಂಘದ ಕಚೇರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಮಾತ್ರವಲ್ಲದೇ ರೇಷ್ಮೆ ಸೀರೆ ನೇಯ್ಗೆ ಮಾಡುವ ವಿವಿಧ ಹಂತಗಳನ್ನು ಬಳಸುವ ಉಪಕರಣಗಳನ್ನು ಕೂಡ ಪ್ರದರ್ಶಿಸಲಾಗುವುದು’ ಎಂದು ಮಂಜುನಾಥ ಕೈಮಗ್ಗ ನೇಕಾರರ ಮತ್ತು ಹುರಿಕಾರರ ಸಹಕಾರ ಸಂಘದ ಕಾರ್ಯದರ್ಶಿ ವಿ.ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ನಮ್ಮ ಕಷ್ಟ, ಶ್ರಮವನ್ನು ಸರ್ಕಾರ ಗುರುತಿಸಿರುವುದು ಖುಷಿ ತಂದಿದೆ. ಕೈಮಗ್ಗವನ್ನು ಉಳಿಸಿ ಬೆಳೆಸಲು ಸರ್ಕಾರ ನೇಕಾರರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಬೇಕು.
- ಕೃಷ್ಣಮೂರ್ತಿ, ಪ್ರಶಸ್ತಿಗೆ ಆಯ್ಕೆಯಾದವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು