ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 15 ಪ್ರೌಢಶಾಲೆಗಳಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌

ವಿದ್ಯಾರ್ಥಿಗಳನ್ನು ಕಾನೂನು ಪಾಲಿಸುವ, ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸುವ ಉದ್ದೇಶ
Last Updated 27 ನವೆಂಬರ್ 2022, 3:07 IST
ಅಕ್ಷರ ಗಾತ್ರ

ಚಾಮರಾಜನಗರ: ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನಾಯಕತ್ವ, ನಾಗರಿಕ ಜ್ಞಾನ, ಸ್ವಯಂ ಶಿಸ್ತು, ಧೈರ್ಯ, ನೈತಿಕತೆ, ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆರಂಭಿಸಲಾಗಿರುವ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ (ಎಸ್‌ಎನ್‌ಪಿ) ಯೋಜನೆಗೆ ಜಿಲ್ಲೆಯ 15 ಪ್ರೌಢಶಾಲೆಗಳಲ್ಲಿ ಶನಿವಾರ ಚಾಲನೆ ನೀಡಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಪೊಲೀಸರು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಿದ್ದಾರೆ.

ಉದ್ದೇಶಗಳು:ವಿದ್ಯಾರ್ಥಿಗಳಲ್ಲಿಕಾನೂನನ್ನು ಪಾಲಿಸುವ ನಡವಳಿಕೆ ವೃದ್ಧಿಸುವುದು,ಭಾವನಾತ್ಮಕ, ದೈಹಿಕ, ಸಾಮಾಜಿಕ ಕೌಶಲವುಳ್ಳ ಮತ್ತು ಪರಿಸರ ರಕ್ಷಿಸುವ ಅಂಶಗಳನ್ನು ಬಲಪಡಿಸುವುದು,ಜೀವನೋತ್ಸಾಹ, ಆತ್ಮವಿಶ್ವಾಸ, ಸುಧಾರಿತ ನಾಗರಿಕ ಜವಾಬ್ದಾರಿಯನ್ನು ವೃದ್ಧಿಸುವುದು, ಮದ್ಯಪಾನ, ಧೂಮಪಾನ ಹಾಗೂ ಮಾದಕ ವ್ಯಸನಗಳ ಮುಕ್ತ ನಾಗರಿಕ ಸಮಾಜದ ನಿರ್ಮಾಣಕ್ಕೆ ಪ್ರೇರೇಪಿಸುವುದು,ಸಂಚಾರಿ ನಿಯಮಗಳ ಅರಿವು ಹಾಗೂ ಪಾಲನೆ ಬಗ್ಗೆ ತಿಳಿಸುವುದು,ಭಾರತ ಸಂವಿಧಾನ ಹಾಗೂ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರಿಯುವುದು, ಜಾತ್ಯತೀತ ದೃಷ್ಟಿಕೋನವನ್ನು ನಿರ್ಮಿಸುವುದು, ಒಳ್ಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಯಂ ನಿಯಂತ್ರಣ ಸಾಮರ್ಥ್ಯವನ್ನು ವೃದ್ಧಿಸುವುದು,ಬಲಿಷ್ಠ ರಾಷ್ಟ್ರ ನಿರ್ಮಾಣದ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ವೃದ್ಧಿಸುವುದು, ಶಿಸ್ತು, ನಾಯಕತ್ವ ಗುಣ ಬೆಳೆಸುವುದು ಮತ್ತು ಸ್ವಯಂ ರಕ್ಷಣೆ ಕಲಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳು.

2010ರ ಆಗಸ್ಟ್‌ 2ರಂದು ಕೇರಳ ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಗೊಳಿಸಲಾಗಿತ್ತು. 2011ರಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ಅಖಿಲ ಭಾರತ ಪೊಲೀಸ್ ವಿಜ್ಞಾನ ಕಾಂಗ್ರೆಸ್‌, ಎಸ್‌ಎನ್‌ಪಿಯನ್ನು ಕಾರ್ಯಕ್ರಮವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ಶಿಫಾರಸು ಮಾಡಿತ್ತು. ಮಾಡಲಾಯಿತು.

ರಾಷ್ಟ್ರದ ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಲ್ಲಿ ಇದೊಂದು ಪ್ರಮುಖ ಯೋಜನೆ ಎಂದು ಗುರುತಿಸಿದ ಕೇಂದ್ರ ಸರ್ಕಾರ 2018ರ ಜುಲೈ 21ರಂದು ರಾಷ್ಟ್ರವ್ಯಾಪಿ ವಿಸ್ತರಿಸಲು ನಿರ್ಧರಿಸಿತ್ತು.

ಈ ಯೋಜನೆಯು 8ನೇ, 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನಡತೆ ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗಿದೆ. ಜವಾಬ್ದಾರಿಯುತ, ಪ್ರಜಾಸತ್ತಾತ್ಮಕ ಸಮಾಜದ ಸಮರ್ಥ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಇದು ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳುತ್ತಾರೆ ಪೊಲೀಸ್‌ ಅಧಿಕಾರಿಗಳು.

ಅನುಷ್ಠಾನಕ್ಕೆ ಸಮಿತಿ: ಜಿಲ್ಲಾಮಟ್ಟದಲ್ಲಿ ಎಸ್‌ಪಿಸಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ಇದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಅವರು ನೋಡೆಲ್‌ ಅಧಿಕಾರಿಯಾಗಿರುತ್ತಾರೆ.

ಯೋಜನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ‘ಈ ಸಾಲಿಗೆ ಜಿಲ್ಲೆಯ 15 ಪ್ರೌಢ ಶಾಲೆಗಳು ಆಯ್ಕೆಯಾಗಿವೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಪ್ರತಿಯೊಂದು ಶಾಲೆಗೂ ಸರ್ಕಾರ ತಲಾ ₹50 ನೀಡಿದೆ. ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ವಿವಿಧ ಕಾನೂನುಗಳ ಅರಿವು ಮೂಡಿಸಲು, ಅವರ ವ್ಯಕ್ತಿತ್ವ ವಿಕಸನಕ್ಕಾಗಿ, ಸ್ವಯಂ ರಕ್ಷಣೆಯ ತಿಳಿ ಹೇಳಲು ಈ ಯೋಜನೆ ನೆರವಾಗಲಿದೆ’ ಎಂದರು.

ಆಯ್ಕೆಯಾದ ಪ್ರೌಢಶಾಲೆಗಳು

ಚಾಮರಾಜನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಚಂದಕವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸಂತೇಮರಹಳ್ಳಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಚಾಮರಾಜನಗರದ ಆದರ್ಶ ವಿದ್ಯಾಲಯ, ಬಾಗಳಿಯ ಸರ್ಕಾರಿ ಪ್ರೌಢಶಾಲೆ, ಗುಂಡ್ಲುಪೇಟೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ತೆರಕಣಾಂಬಿಯ ಬ.ಪ. ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಬೇಗೂರಿನಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಕೊಳ್ಳೇಗಾಲದ ಸರ್ಕಾರಿ ಎಸ್.ವಿ.ಕೆ. ಬಾಲಿಕಾ ಪದವಿ ಪೂರ್ವ ಕಾಲೇಜು, ಗುಂಬಳ್ಳಿಯಸರ್ಕಾರಿ ಪ್ರೌಢಶಾಲೆ, ರಾಮಾಪುರಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಶಾಗ್ಯ ಸರ್ಕಾರಿ ಪ್ರೌಢಶಾಲೆ, ಹೊಸ ಮಾಲಂಗಿಯಸರ್ಕಾರಿ ಪ್ರೌಢಶಾಲೆ ಮತ್ತು ಮಹದೇಶ್ವರ ಬೆಟ್ಟದ ಮಹದೇಶ್ವರ ಪ್ರೌಢ ಶಾಲೆ.

ಎಲ್ಲ 15 ಶಾಲೆಗಳಲ್ಲಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲೆಯ ಬೋಧಕ ಉಪಸ್ಥಿತಿಯಲ್ಲಿ ಯೋಜನೆಯನ್ನು ಉದ್ಘಾಟಿಸಲಾಯಿತು.

--

ಆಯ್ಕೆಯಾದ ಶಾಲೆಗಳಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮೀಸಲು ಪೊಲೀಸ್‌ ಪಡೆಯ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ
ಟಿ.ಪಿ.ಶಿವಕುಮಾರ್‌, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT