ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲೂ ತಲೆ ಎತ್ತಲಿದೆ ವಿಜ್ಞಾನ ಕೇಂದ್ರ

Published 8 ಜೂನ್ 2023, 4:44 IST
Last Updated 8 ಜೂನ್ 2023, 4:44 IST
ಅಕ್ಷರ ಗಾತ್ರ

ಸೂರ್ಯನಾರಾಯಣ ವಿ.

ಚಾಮರಾಜನಗರ: ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ ಯೋಜನೆಗೆ ಮತ್ತೆ ಜೀವ ಬಂದಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ವಿಜ್ಞಾನ ಕೇಂದ್ರವೊಂದು ಸ್ಥಾಪನೆಯಾಗಲಿದೆ. 

ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸೊಸೈಟಿಯ ಮೂಲಕ, ₹4 ಕೋಟಿ ವೆಚ್ಚದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಲಿದೆ. 

ನಾಲ್ಕು ಎಕರೆ ಜಮೀನಿನ ಅಗತ್ಯವಿದ್ದು, ನಗರದ ಹೊರವಲಯದ ಯಡಬೆಟ್ಟ, ಮಸಗಾಪುರದಲ್ಲಿ ಜಾಗ ಪರಿಶೀಲನೆ ನಡೆಸಲಾಗಿದ್ದು, ಸ್ಥಳ ಅಂತಿಮಗೊಳ್ಳಬೇಕಿದೆ. ಕೇಂದ್ರ ಸ್ಥಾಪನೆಗೆ ಬೇಕಾದ ಸಿದ್ಧತೆಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ಪರಿಚಯಿಸಲು, ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದವರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಅವರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕತೆಗಳನ್ನು ಬೆಳೆಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. 

ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗೂ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎರಡೂ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. 

ವಿಜ್ಞಾನ ಕೇಂದ್ರ ಸಂಬಂಧ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದೇವೆ. ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ. ಜಮೀನು ನೋಂದಣಿಯಾಗಬೇಕಿದೆ .
ಎಚ್‌.ಕೆ.ಪಾಂಡು, ಡಿಡಿಪಿಐ (ಕೇಂದ್ರದ ಸ್ಥಾಪನೆ ಸಮಿತಿಯ ಸದಸ್ಯ ಕಾರ್ಯದರ್ಶಿ)

ಇದೇ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಣ್ಣ ಪ್ರಮಾಣದ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವುದು ರಾಜ್ಯ ಸರ್ಕಾರದ ನಿಲುವು. 24 ಜಿಲ್ಲೆಗಳಿಗೆ ಉಪ ವಿಜ್ಞಾನ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿಯೂ ದೊರಕಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. 

ನನೆಗುದಿಗೆ ಬಿದ್ದ ಯೋಜನೆ: ಶೈಕ್ಷಣಿಕವಾಗಿ ಹಿಂದುಳಿದಿರುವ, ಮೌಢ್ಯಾಚರಣೆಗಳು ಇನ್ನೂ ಚಾಲ್ತಿಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಸ್ಥಾಪನೆಯ ಘೋಷಣೆಯನ್ನು 2014–15ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕೆ ₹3 ಕೋಟಿ ಹಣವನ್ನೂ ಮೀಸಲಿಡಲಾಗಿತ್ತು.

ಈ ಪೈಕಿ ₹52 ಲಕ್ಷ ಹಣ ಬಿಡುಗಡೆಯೂ ಆಗಿತ್ತು. ಯಡಬೆಟ್ಟದಲ್ಲಿ ಯೋಜನೆಗಾಗಿ ಐದು ಎಕರೆ ಜಾಗ ಗುರುತಿಸಲಾಗಿತ್ತು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜನ ಸೊಸೈಟಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿತ್ತು. ಕೇಂದ್ರ ಸ್ಥಾಪನೆಗೆ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ, ನಂತರ ಕೋವಿಡ್‌ ಕಾರಣದಿಂದ ಮತ್ತು ಜಿಲ್ಲಾಡಳಿತ ಮುತುವರ್ಜಿ ತೋರದೇ ಇದ್ದುದರಿಂದ ಅನುದಾನ ವಾಪಸ್‌ ಹೋಗಿತ್ತು. 

‘ಈಗ ಮತ್ತೆ ₹4 ಕೋಟಿ ಅನುದಾನ ಲಭ್ಯವಿದ್ದು, ಜಿಲ್ಲಾಡಳಿತವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಾಗಾಗಿ, ಕೇಂದ್ರ ಸ್ಥಾಪನೆಯಾಗುವುದು ಖಚಿತ. ಸ್ಥಾಪನೆಗೆ ಒಂದು ಸ್ಥಳವನ್ನು ಪರಿಶೀಲಿಸಿದ್ದೇವೆ’ ಎಂದು ಕೇಂದ್ರದ ನೋಡೆಲ್‌ ಅಧಿಕಾರಿ ಮತ್ತು ವಿಜ್ಞಾನಿ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

ಕೇಂದ್ರದಲ್ಲಿ ಏನೇನು ಇರಲಿದೆ?

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಾರ್ವಜನಿಕರು ವಿದ್ಯಾರ್ಥಿಗಳು ಸಂಶೋಧಕರು ಸೇರಿದಂತೆ ಎಲ್ಲರಿಗೂ ಮುಕ್ತವಾಗಲಿರಲಿದೆ.  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳು ಆವಿಷ್ಕಾರಗಳ ವಿವರಗಳು ವಿಜ್ಞಾನ ಕ್ಷೇತ್ರದ ಬೆಳವಣಿಗೆಗಳ ಮಾಹಿತಿಗಳು ಅಧ್ಯಯನ ಪರಿಕರಗಳು ಲಭ್ಯವಿರಲಿವೆ. ವಿಜ್ಞಾನ ಗ್ಯಾಲರಿ ವೈಜ್ಞಾನಿಕ ಮಾದರಿಗಳು ತಾರಾಲಯ ಸೇರಿದಂತೆ ಜನರಿಗೆ ವಿಜ್ಞಾನದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುವ ಎಲ್ಲ ಸೌಲಭ್ಯಗಳೂ ಇರಲಿವೆ ಎಂದು ಹೇಳುತ್ತಾರೆ ಅಧಿಕಾರಿಗಳು. ‘ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಕೇಂದ್ರ ಸಹಕಾರಿಯಾಗಲಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕಲಿಕೆಗೆ ಸಂಶೋಧನೆಗಳಿಗೂ ಅವಕಾಶ ಸಿಗಲಿದೆ’ ಎಂದು ರವಿಕುಮಾರ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT