ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹೆದ್ದಾರಿ ಅಕ್ಕಪಕ್ಕ ಜನರನ್ನು ಸೆಳೆಯುತ್ತಿರುವ ಸೂರ್ಯಕಾಂತಿ ಕೃಷಿ

Last Updated 4 ಆಗಸ್ಟ್ 2021, 16:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ತಾಲ್ಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರ ಇಕ್ಕೆಲಗಳಲ್ಲಿರುವ ಜಮೀನುಗಳಲ್ಲಿಪೂರ್ವ ಮುಂಗಾರಿನ ಸಮಯದಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಈಗ ಅರಳಿ ನಿಂತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರಸ್ತೆಯ ಬದಿಯಲ್ಲಿ ಸೊಂಪಾಗಿ ಬೆಳೆದ ಹೂವನ್ನು ನೋಡಿ ಆಕರ್ಷಿತರಾಗುವ ಪ್ರವಾಸಿಗರು, ವಾಹನ ಸವಾರರು ಫೋಟೊ ತೆಗೆದುಕೊಳ್ಳಲು ಸೂರ್ಯಕಾಂತಿ ಇರುವ ಜಮೀನುಗಳಿಗೆ ನುಗ್ಗುತ್ತಿದ್ದರು. ಫೋಟೊ ತೆಗೆಯುವ ಪ್ರವಾಸಿಗರ ಕ್ರೇಜ್‌ ಅನ್ನು ವರಮಾನದ ದಾರಿಯನ್ನಾಗಿ ಮಾಡಿಕೊಂಡಿರುವ ರೈತರು, ಪ್ರವಾಸಿಗರಿಂದ ದುಡ್ಡನ್ನೂ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಹೆಚ್ಚಿನವರು ಅಂತರರಾಜ್ಯ ಪ್ರವಾಸಿಗರು. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ವಿರುತ್ತದೆ.

ರಾಷ್ಟ್ರೀಯ ಹೆದ್ದಾರಿ 67ರಲ್ಲಿ ತಾಲ್ಲೂಕಿನ ಹಿರಿಕಾಟಿಯಿಂದ ಮೇಲುಕಾಮಹಳ್ಳಿವರೆಗೆ ಮತ್ತು ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಮದ್ದೂರು ಗಡಿಭಾಗದವರೆಗೆ ರೈತರು ಸೂರ್ಯಕಾಂತಿ ಮತ್ತು ಚೆಂಡು ಹೂ ಬೆಳೆದಿದ್ದಾರೆ. ರಸ್ತೆಯಲ್ಲಿ ಸಾಗುವಾಗ ಅರಳಿ ನಿಂತ ಹೂಗಳು ಮನಮೋಹಕವಾಗಿ ಕಾಣಿಸಿಕೊಳ್ಳುತ್ತಿವೆ.

ಕೋವಿಡ್‌ನಿಂದಾಗಿ ಹೊರ ರಾಜ್ಯದ ಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಇಲ್ಲಿನ ಬಂಡೀಪುರ ಸಫಾರಿ ಮತ್ತು ಗೋಪಾಲ ಸ್ವಾಮಿ ಬೆಟ್ಟಕ್ಕೆ ಬರುವ ಸ್ಥಳೀಯ ಪ್ರವಾಸಿಗರು, ಕೇರಳ ಮತ್ತು ತಮಿಳುನಾಡಿನ ಭಾಗದಿಂದ ಬರುವವರು ಸೂರ್ಯಕಾಂತಿ ತೋಟಗಳ ಸುಂದರ ದೃಶ್ಯಾವಳಿಗೆ ಮನಸೋತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ.

ಕೆಲ ರೈತರು ಯಾವುದೇ ಹಣ ಪಡೆಯದೆ ಪೋಟೋ ತೆಗೆದುಕೊಂಡು ಹೋಗಲು ಅನುಮತಿ ನೀಡಿ, ಬೆಳೆ ಹಾಳಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರೆ, ಇನ್ನೂ ಕೆಲವರು ಪೋಟೋ ತೆಗೆದುಕೊಳ್ಳಲು ಒಬ್ಬರಿಗೆ ₹20ರಿಂದ ₹50ವರೆಗೂ ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಜಮೀನಿನಲ್ಲಿ ದರದ ಫಲಕವನ್ನೂ ತೂಗು ಹಾಕಿದ್ದಾರೆ.

‘ಕೆಲ ಪ್ರವಾಸಿಗರಿಗೆ ಬೆಳೆಯ ಬಗ್ಗೆ ಅರಿವಿರುವುದಿಲ್ಲ. ಪೋಟೊ ತೆಗೆದುಕೊಳ್ಳುವ ಖುಷಿಯಲ್ಲಿ ಗಿಡಗಳನ್ನು ತುಳಿಯುವುದು, ಹೂ ಕಿಳುವುದು ಮಾಡುತ್ತಾರೆ. ಇದರಿಂದಾಗಿ ನಮಗೆ ನಷ್ಟವಾಗುತ್ತದೆ’ ಎಂದು ಕಲ್ಲಿಗೌಡನಹಳ್ಳಿ ಗ್ರಾಮದ ಕುಮಾರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT