ಬುಧವಾರ, ಏಪ್ರಿಲ್ 8, 2020
19 °C
ಮಹದೇಶ್ವರ ಬೆಟ್ಟ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಅಭಿವೃದ್ಧಿ ಕಾಮಗಾರಿ: ಶೀಘ್ರ ಮುಕ್ತಾಯಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ವ್ಯಾಪ್ತಿಯಲ್ಲಿ ಭಕ್ತರಿಗೆ ಅನುಕೂಲವಾಗುವಂತಹ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಬೆಟ್ಟದ ನಾಗಮಲೆ ಭವನದಲ್ಲಿ ಗುರುವಾರ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ತ್ವರಿತವಾಗಿ ಪೂರ್ಣಗೊಳಿಸಿದರೆ ‌ಉದ್ಘಾಟನೆಗೆ ಮುಖ್ಯಮಂತ್ರಿಯವರ ದಿನಾಂಕವನ್ನು ನಿಗದಿ ಮಾಡಲಾಗುವುದು’ ಎಂದರು. 

‘ಮುಂಬರುವ ಶಿವರಾತ್ರಿ, ಮಹದೇಶ್ವರ ಜಾತ್ರೆ, ಯುಗಾದಿಗೆ ಭಕ್ತಾದಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ತುರ್ತಾಗಿ ಆಗಬೇಕಾದ ‌ಅಭಿವೃದ್ಧಿ ಕೆಲಸಗಳು ಬೇಗ ಪೂರ್ಣಗೊಳಿಸಬೇಕು. ಕೈಗೆತ್ತಿಕೊಳ್ಳಲಾಗಿರುವ ವಸತಿ ಗೃಹ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಡಾರ್ಮಿಟರಿ ಹಾಗೂ ಇತರೆ ವಸತಿ ಗೃಹಗಳಿಗೆ ಅಗತ್ಯವಿರುವ ಪರಿಕರಗಳನ್ನು ಪೂರೈಸಬೇಕು’ ಎಂದರು

ಸ್ಥಳೀಯ ವ್ಯಾಪಾರಿಗಳನ್ನು ಪಟ್ಟಿಮಾಡಿ: ‘ಜಾತ್ರಾ ಸಂದರ್ಭದಲ್ಲಿ ಮಾತ್ರ ಇಲ್ಲಿಗೆ ಹೊರಗಿನಿಂದ ಬೀದಿಬದಿ ವ್ಯಾಪಾರಿಗಳು ಬರುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ, ಗ್ರಾಮ ಪಂಚಾಯಿತಿ, ಸಂಘದ ಸಹಾಯ ಪಡೆದು ಸ್ಥಳೀಯ ವ್ಯಾಪಾರಿಗಳನ್ನು ಪಟ್ಟಿಮಾಡಿ’ ಎಂದು ಶಾಸಕ ಆರ್. ನರೇಂದ್ರ ಸೂಚಿಸಿದರು. 

ಮೆಟ್ಟಿಲಿಗೆ ಸಾಮಾನ್ಯ ಕಲ್ಲು: ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ನಿರ್ಮಿಸಲು ಉದ್ದೇಶಿಸಿರುವ ಮೆಟ್ಟಿಲುಗಳಿಗೆ ಗ್ರಾನೈಟ್‌ ಬಳಸುವುದು ಬೇಡ. ನೈಸರ್ಗಿಕ ಕಲ್ಲನ್ನೇ ಬಳಸಬೇಕು ಎಂದು ನರೇಂದ್ರ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಏಡುಕುಂಡಲು ಸಲಹೆ ನೀಡಿದರು. 

20 ದಿನಗಳಲ್ಲಿ ಟವರ್‌: ‘ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದ‌ವರೆಗಿನ 17 ಕಿ.ಮೀ ರಸ್ತೆ ಹಾಗೂ ಬೆಟ್ಟದಿಂದ ಪಾಲಾರ್‌ವರೆಗೆ ತುರ್ತಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಮೊಬೈಲ್ ಸಂಪರ್ಕ ಸಿಗದಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಪತ್ರ ನೀಡಿ 20 ದಿನಗಳಲ್ಲಿ ಮೊಬೈಲ್‌ ಟವರ್‌ ಹಾಕಲು ಸೂಚಿಸಿದೆ. ಜೊತೆಗೆ ಖಾಸಗಿ ಸಂಸ್ಥೆಗಳು ಕೂಡ ಪ್ರಮುಖ ದಿನದಲ್ಲಿ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ದೀಪದ ಒಡ್ಡುವಿನಲ್ಲಿ ನಿರ್ಮಾಣ ಮಾಡಲಿರುವ ಮಹದೇಶ್ವರರ 100 ಅಡಿ ಪ್ರತಿಮೆ ಕೆಲಸದ ಸಂಪೂರ್ಣ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ವೀಕ್ಷಿಸಿದ ಸಚಿವರು, ಪ್ರತಿಮೆ ನಿರ್ಮಾಣಕ್ಕಾಗಿ ಅಗತ್ಯ ಸ್ಥಳ ಹಸ್ತಾಂತರ ಪ್ರಕ್ರಿಯೆ ಸೇರಿದಂತೆ ಇತರೆ ಕೆಲಸಗಳನ್ನು ಶೀಘ್ರ ನಿರ್ವಹಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.

ಒಳ ಚರಂಡಿ ಕಾಮಗಾರಿ, ವೈದ್ಯಕೀಯ ವ್ಯವಸ್ಥೆ, ಬಂದೋಬಸ್ತ್, ವಾಹನ ನಿಲುಗಡೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ದಳ ನಿಯೋಜನೆ ಸೇರಿದಂತೆ ಜಾತ್ರಾ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣರಾವ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಂದ್ರ ಇದ್ದರು.

ಕಾಮಗಾರಿಗಳ ಪರಿಶೀಲನೆ

ಇದಕ್ಕೂ ಮುನ್ನ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜಾತ್ರಾ ಸಿದ್ಧತಾ ಕಾರ್ಯಗಳನ್ನು ಸಚಿವರು ವೀಕ್ಷಿಸಿದರು.  

90 ಲಕ್ಷ ಲೀಟರ್ ಸಾಮರ್ಥ್ಯದ ನೆಲ ಮಟ್ಟದ ಜಲ ಸಂಗ್ರಹಾಗಾರದಲ್ಲಿ ನೀರು ಪೂರೈಕೆ, ಸಂಗ್ರಹ, ಎಷ್ಟು ಜನರಿಗೆ ನೀರು ತಲುಪಿಸಬಹುದು ಎಂಬ ಮಾಹಿತಿ ಪಡೆದರು. ಬಳಿಕ ನೀರು ಶುದ್ಧೀಕರಣ ಘಟಕ, ದೀಪದ ಗಿರಿ ಓಡ್ಡುವಿನಲ್ಲಿ ಮಹದೇಶ್ವರರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಗುರುತಿಸಿರುವ ಸ್ಥಳಕ್ಕೆ ಭೇಟಿ ನೀಡಿದರು.

ಬಳಿಕ ದೇವರ ದರ್ಶನ ಪಡೆದು, ಲಾಡು ತಯಾರಿಕಾ ಕೇಂದ್ರ, ದಾಸೋಹ ಭವನ, ಅಂತರಗಂಗೆ ಬಳಿ ನಿರ್ಮಾಣ ಮಾಡಲಾಗಿರುವ ಕಲ್ಯಾಣಿ ಕಾಮಗಾರಿ ಪರಿಶೀಲಿಸಿದರು.

ಭಕ್ತಾದಿಗಳ ವಾಸ್ತವ್ಯಕ್ಕೆ ನಿರ್ಮಿಸಿರುವ ಡಾರ್ಮಿಟರಿ ಕಟ್ಟಡ. ಜೇನುಮಲೆ ವಸತಿ ಗೃಹ ಹಾಗೂ ನಿರ್ಮಾಣ ಹಂತದಲ್ಲಿರುವ 512 ಕೊಠಡಿಗಳ ಅತಿಥಿ ಗೃಹ ಕಾಮಗಾರಿಯನ್ನು ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು