ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ದಾರಿದೀಪ ಗುರುಗಳ ಸ್ಮರಣೆ

ಶಿಕ್ಷಕರ ದಿನಾಚರಣೆ; 15 ಮಂದಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ‍ಪ್ರದಾನ
Last Updated 5 ಸೆಪ್ಟೆಂಬರ್ 2020, 13:32 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಶನಿವಾರ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ 15 ಮಂದಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಹಾಗೂ ಜೀವನದಲ್ಲಿ ಮಕ್ಕಳಿಗೆ ದಾರಿದೀಪವಾಗುವ ಶಿಕ್ಷಕರನ್ನು ಸ್ಮರಿಸಲಾಯಿತು.

ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು ಗುರು ತನ್ನ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತಾರೆ, ಎಲ್ಲ ಮಕ್ಕಳನ್ನೂ ತಮ್ಮ ಸ್ವಂತ ಮಕ್ಕಳೆಂದು ಭಾವಿಸಿ, ಪ್ರೀತಿ ವಿಶ್ವಾಸ ತೋರಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವುಳ್ಳ ಪ್ರಜೆಯನ್ನಾಗಿ ರೂಪಿಸುತ್ತಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು ಮಾತನಾಡಿ, ‘ಶಿಕ್ಷಕರು, ರಾಷ್ಟ್ರಪತಿಗಳಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ವರಿಗೂ ವಿದ್ಯೆ ಕಲಿಸುವುದೇ ಶ್ರೇಷ್ಠ ವೃತ್ತಿ ಎಂದು ಅರಿತಿದ್ದ ರಾಧಾಕೃಷ್ಣನ್‌ ಅವರು ತಮ್ಮ ಜೀವಿತಾವಧಿಯಲ್ಲಿ ಅಸಂಖ್ಯ ವಿದ್ಯಾರ್ಥಿಗಳಿಗೆ ಬೋಧಿಸಿ ಎಲ್ಲ ಶಿಕ್ಷಕರಿಗೂ ಆದರ್ಶರಾಗಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ ಪ್ರತಿಯೊಬ್ಬ ಗುರು ಕೂಡ ವಿದ್ಯಾರ್ಥಿಗಳನ್ನು ತನ್ನ ಮಕ್ಕಳೆಂದೇ ಭಾವಿಸಿ ಜಾತಿ, ಧರ್ಮದ ಭೇದವಿಲ್ಲದೇ ನಿಸ್ವಾರ್ಥಿಯಾಗಿ ಬೋಧನೆ ಮಾಡುತ್ತಾರೆ. ಮಗುವನ್ನು ಶಿಲೆ ಎಂದು ಭಾವಿಸಿದರೆ, ಶಿಕ್ಷಕ ಶಿಕ್ಷಣ ಹಾಗೂ ಜೀವನ ಮೌಲ್ಯವನ್ನು ಧಾರೆ ಎರೆದು ಅದಕ್ಕೆ ಸುಂದರ ರೂಪ ನೀಡುತ್ತಾನೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ ರಾವ್ ಅವರು ಮಾತನಾಡಿ, ‘ಭವಿಷ್ಯದ ಪ್ರಜೆಗಳನ್ನು ರೂಪಿಸುವಂತಹ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಶಿಕ್ಷಕರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಬದಲಾವಣೆ ತರಲು ಸಾಧ್ಯ. ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್ ಕಾರಣದಿಂದಾಗಿ ಮಕ್ಕಳಿಗೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಸ್ವಲ್ಪ ತೊಂದರೆಯಾಗುತ್ತಿದ್ದು, ಶಿಕ್ಷಕರು ಅಂತಹ ಭಾಗಗಳಲ್ಲಿ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಹಿಂದುಳಿದ ಪ್ರದೇಶಗಳಲ್ಲಿರುವ ಮಕ್ಕಳ ಸಬಲೀಕರಣಕ್ಕೆ ಶಿಕ್ಷಕರು ಹೆಚ್ಚು ಆದ್ಯತೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ನಿವೃತ್ತರಿಗೆ ಸನ್ಮಾನ:ಇದೇ ಸಂದರ್ಭದಲ್ಲಿ 2019–20ನೇ ಸಾಲಿನಲ್ಲಿ ನಿವೃತ್ತಿ ಹೊಂದಿರುವ ಎಂಟು ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಬಿ.ಶಾಂತಮೂರ್ತಿ, ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಕೆರೆಹಳ್ಳಿ ನವೀನ್, ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ. ರವೀಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ. ಜವರೇಗೌಡ ಇದ್ದರು.

ತಿಳಿವಳಿಕೆ, ಜೀವನ ಮೌಲ್ಯ‌ ತಿಳಿಸುವವರೆಲ್ಲ ಗುರುಗಳು:ಡಿ.ಸಿ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ರಾಧಾಕೃಷ್ಣನ್ ಅವರು ದಾರ್ಶನಿಕ ಶಿಕ್ಷಕರಾಗಿದ್ದವರು. ಶಿಕ್ಷಣ ಎಂದರೆ, ಕೇವಲ ಮಾಹಿತಿ ನೀಡುವುದಲ್ಲ. ವ್ಯಕ್ತಿಯ ವ್ಯಕ್ತಿತ್ವ ನಿಮಾರ್ಣದ ಜೊತೆ ಭವಿಷ್ಯವನ್ನು ರೂಪಿಸುವುದು. ಶಿಕ್ಷಣ ಜ್ಞಾನಕ್ಕಾಗಿಯೇ ವಿನಾ ಉದ್ಯೋಗಕ್ಕಾಗಿ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

‘ಮಕ್ಕಳ ಮನಸ್ಸು ಫಲವತ್ತಾದ ಭೂಮಿಯ ಹಾಗೆ. ಹಾಗಾಗಿ ಶಿಕ್ಷಕರು ಜವಾಬ್ದಾರಿಯುತವಾಗಿ ಸಾಮಾಜಿಕ ಪರಿವರ್ತನೆಗೆ ಮಕ್ಕಳನ್ನು ಪ್ರೇರೆಪಿಸುವಂತಹ ಕಾರ್ಯವನ್ನು ನಿರ್ವಹಿಸಬೇಕಿದೆ. ತರಗತಿಯ ಕೊಠಡಿಗಳಲ್ಲಿ ಪಾಠ ಮಾಡುವವರಷ್ಟೇ ಗುರುವಲ್ಲ. ವಿದ್ಯಾರ್ಥಿಯ ಏಳಿಗೆಗೆ ಜ್ಞಾನ, ತಿಳಿವಳಿಕೆ, ಜೀವನದ ಮೌಲ್ಯಗಳನ್ನು ಕಲಿಸುವಂತಹ ಪ್ರತಿಯೊಬ್ಬರೂ ಗುರುವಿನ ಸ್ಥಾನವನ್ನೇ ತುಂಬುತ್ತಾರೆ’ ಎಂದು ಅವರು ಪ್ರತಿಪಾದಿಸಿದರು.

‘ಶಿಕ್ಷಕರು ಮಕ್ಕಳಲ್ಲಿ ಕನಸುಗಳನ್ನು ಬಿತ್ತಬೇಕು. ಒಳ್ಳೆಯ ವಿಚಾರಗಳನ್ನು ತಿಳಿಸಬೇಕು. ಹೆಚ್ಚಿನ ಸಮಯವನ್ನು ಮಕ್ಕಳ ಜೊತೆ ಕಳೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶಕರಾಗಿರಬೇಕು. ವಿದ್ಯಾರ್ಥಿಗಳನ್ನು ಸಮಾಜದೊಡನೆ ಬೆರೆಯುವಂತೆ ಮಾಡಬೇಕು. ಸಮಾಜದ ಆಗು ಹೋಗುಗಳ ಬಗ್ಗೆ ತಿಳಿಸಬೇಕು. ಶಿಕ್ಷಕರು ಹೆಚ್ಚು ಹೆಚ್ಚು ಅಧ್ಯಯನಶೀಲರಾಗುವ ಮೂಲಕ ಹೊಸ ವಿಚಾರಗಳನ್ನು ಅರಿತು ನಿರಂತರ ಕಲಿಕೆಯಲ್ಲಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT