ಸೋಮವಾರ, ಸೆಪ್ಟೆಂಬರ್ 20, 2021
24 °C

ಕೋವಿಡ್ ಕಾಲದ ಬೋಧನೆ; ಧನ್ಯತೆಯ ಕ್ಷಣ ಎಂದ ಶಿಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಷ್ಟದ ನಡುವೆ ಕರ್ತವ್ಯ ನಿರ್ವಹಿಸಿದ ಹೆಮ್ಮೆ
ಕೋವಿಡ್‌ ಕಾಲದಲ್ಲಿ ಶಿಕ್ಷಕರು ತಮ್ಮ ವೃತ್ತಿಯಿಂದ ವಿಮುಖರಾಗಿರಲ್ಲ. ಲಭ್ಯವಿರುವ ಮಾಧ್ಯಮದ ಮೂಲಕ ವಿದ್ಯಾರ್ಥಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇದ್ದುಕೊಂಡು ಪಾಠ ಪ್ರವಚನ ಮಾಡುತ್ತಿದ್ದೆವು. 

ಕೋವಿಡ್ ಎಂದರೆ ಯಾರಿಗೆ ತಾನೆ ಭಯವಿಲ್ಲ? ನನಗೂ ಇತ್ತು. ಆದರೆ, ಬೋಧನೆ ಮಾಡಲು ಅದು ಅಡ್ಡಿಯಾಗಲಿಲ್ಲ. ಪ್ರತಿ ನಿತ್ಯ ಮಕ್ಕಳ ಮನೆಗಳಿಗೆ ಹೋಗಿ ಪಾಠ ಮಾಡಿದ್ದೇನೆ. ಪಠ್ಯದ ಪಾಠದ ಜೊತೆಗೆ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಕೋವಿಡ್‌ ಬಗ್ಗೆಯೂ ಜಾಗೃತಿಯ ಪಾಠ ಮಾಡುತ್ತಿದ್ದೆ. ಬಿಸಿಯೂಟದ ಪಡಿತರವನ್ನು ಮಕ್ಕಳ ಮನೆಗೇ ಹೋಗಿ ಕೊಟ್ಟು ಬಂದಿದ್ದೇನೆ. 

ಸರ್ಕಾರಿ ಶಾಲೆಗೆ ಸೇರುವವರು ಬಡ ಮಕ್ಕಳು ಆಗಿರುವುದರಿಂದ ಶೇ 30ರಷ್ಟು ಮಂದಿ ಮಾತ್ರ ಆನ್‌ಲೈನ್‌ ಪಾಠ ಕೇಳುತ್ತಿದ್ದರು. ಉಳಿದವರಿಗೆ ಭೌತಿಕ ಪಾಠ ಮಾಡುವ ಸವಾಲು ನಮ್ಮ ಮುಂದೆ ಇತ್ತು. ಅದಕ್ಕಾಗಿ ಮಕ್ಕಳ ಮನೆಗೇ ಹೋದೆ. ನಿತ್ಯವೂ ಏಳು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆ. ಶಿಕ್ಷಕನಾಗಿ ಸಂಕಷ್ಟದ ಸಂದರ್ಭದಲ್ಲಿ ಕರ್ತವ್ಯದಿಂದ ವಿಮುಖನಾಗದೆ ವಿದ್ಯೆ, ಜ್ಞಾನ ದಾನ ಮಾಡಿದ ಹೆಮ್ಮೆ ನನಗೆ ಇದೆ.
-ಲೋಕೇಶ್, ಸೂರಾಪುರ ಸರ್ಕಾರಿ ಪ್ರೌಢ ಶಾಲೆ, ಕೊಳ್ಳೇಗಾಲ ತಾಲ್ಲೂಕು

***

ಕೊರೊನಾ ನಿಯಮ ಅರಿತ ಮಕ್ಕಳು
2019ರ ಜೂನ್ ಜುಲೈ ತಿಂಗಳಲ್ಲಿ ಶಾಲೆ ಆರಂಭವಾಗದ ಸೂಚನೆ ಕಂಡುಬಂದಾಗ ಬಹಳಷ್ಟು ಶಿಕ್ಷಕರು ಪರಿತಪಿಸಿದರು. ವಿದ್ಯಾರ್ಥಿ ತರಗತಿ ಕಲಿಕಾ ವಾತಾವರಣ ಸೃಷ್ಟಿಸಲು ಗ್ರಾಮಗಳತ್ತ ಮುಖ ಮಾಡಬೇಕಾಯಿತು. ಇದು ಮಕ್ಕಳಲ್ಲಿ ಸಂಭ್ರಮವನ್ನು ತಂದರೆ ಪೋಷಕರಿಗೆ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಎಲ್ಲಿ ಕೂರಿಸಿಕೊಳ್ಳುತ್ತಾರೆ. ಬಹಳಷ್ಟು ಶಿಕ್ಷಕರು ಹೊಲ, ಗದ್ದೆ ದಾಟಿ ರಸ್ತೆ ಬೀದಿ ಬದಿ ತೆರಳಿ ಮಕ್ಕಳನ್ನು ಹುಡುಕಬೇಕಾಯಿತು.

ಶಾಲೆಯ ಪ್ರಾರ್ಥನೆ, ಸಂವಹನ, ಚರ್ಚೆ ಪರಸ್ಪರ ಸ್ನೇಹ ಭ್ರಾತೃತ್ವಗಳ ನಡುವೆ ಕಲಿಯುತ್ತಿದ್ದ ಮಕ್ಕಳು ಮಾಸ್ಕ್‌, ಸ್ಯಾನಿಟೈಸರ್, ಸುರಕ್ಷಿತ  ಅಂತರ ಮೊದಲಾದ ಹೊಸ ಪರಿಕಲ್ಪನೆಗಳನ್ನು ರೂಢಿಸಿಕೊಳ್ಳುವಂತೆ ಅಯಿತು. ವಿದ್ಯಾರ್ಥಿಗಳ ಮೂಲಕ ವೈಯಕ್ತಿಕ ಸ್ವಚ್ಛತೆ ಮತ್ತು ಕುಟುಂಬದ ಸದಸ್ಯರಲ್ಲೂ ಎಚ್ಚರ ಮೂಡಲು ಕಾರಣವಾಯಿತು. 

ದೂರದ ಊರುಗಳಿಂದ ಕಡಿಮೆ ಅವಧಿಯ ಗ್ರಾಮಗಳನ್ನು ನಡಿಗೆಯ ಮೂಲಕ ತಲುಪಿ ಜೆರಾಕ್ಸ್ ಪ್ರತಿಗಳನ್ನು ಮಕ್ಕಳಿಗೆ ನೀಡಿ ಪಠ್ಯ ಚಟುವಟಿಕೆಗಳು ಪ್ರಶ್ನೋತ್ತರಗಳು ಮತ್ತು ಹಲವು ಅಭ್ಯಾಸಗಳ ಹಾಳೆಗಳನ್ನು ಒದಗಿಸಲಾಗಿತ್ತು. ಮಕ್ಕಳು ವಾಸಿಸುವ ಪರಿಸರದಲ್ಲಿಯೇ ಕಲಿಸುವ ಮೂಲಕ ಮನೆಯ ವಾತಾವರಣ ಊರಿನ ವಿಶೇಷತೆ ಮತ್ತು ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಶಿಕ್ಷಕರಿಗೂ ಕೊರೊನ ಕಾಲಘಟ್ಟ ಅವಕಾಶ ಕಲ್ಪಿಸಿತ್ತು. ಶಿಕ್ಷಣ ಇಲಾಖೆ ಜಾರಿಗೆ ತಂದ ಹತ್ತು ಹಲವು ಕಾರ್ಯಕ್ರಮಗಳು ಶಾಲೆಗೆ ಹೋಗಿ ಕಲಿಯುವ ಅವಕಾಶವನ್ನು ಕಲ್ಪಿಸದಿದ್ದರೂ ಮುಂದಿನ ಕಲಿಕೆಗೆ ಬೇಕಾದ, ಶಾಲೆ ತೆರೆಯಲು ಇರುವ ಹತ್ತಾರು ಅವಕಾಶಗಳನ್ನು ಶಿಕ್ಷಣ ತಜ್ಞರಿಗೆ ಶಿಕ್ಷಕರಿಗೆ ವಿದ್ಯಾರ್ಥಿ ಪೋಷಕರಿಗೆ ನೂರೆಂಟು ಗ್ರಹಿಕೆಗಳನ್ನು ಒದಗಿಸಿತು.
-ಬೇಬಿ ರಾಣಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಯಳಂದೂರು

***

ಪೋಷಕರ ಸಹಕಾರದಿಂದ ಸಾಧ್ಯವಾದ ಕಾರ್ಯ
ಕೋವಿಡ್‌ ಕಾಲದಲ್ಲಿ ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ ಉಂಟಾಗಿರುವುದು ನಿಜ. ಆದರೆ, ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ಸಂಪೂರ್ಣವಾಗಿ ವಿಮುಖರಾಗಿಲ್ಲ. ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು ಸ್ಥಳೀಯವಾಗಿರುವ ಮಕ್ಕಳ ಮನೆಗೆ ಭೇಟಿ ನೀಡಿ ಕಲಿಕೆಗೆ ಮಾಗದರ್ಶನ ನೀಡಿದ್ದೇವೆ.

ಕಲಿಕಾ ತಂಡಗಳಾಗಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಿಕೊಳ್ಳಲಾಗಿತ್ತು. ಆನ್‌ಲೈನ್‌ಗೆ ಸಿಗುವ ಮಕ್ಕಳ ಗುಂಪು, ಆನ್‌ಲೈನ್‌ಗೆ ಸಿಗದ ಮಕ್ಕಳ ಗುಂಪು ಹಾಗೂ ಇತರ ವಿದ್ಯಾರ್ಥಿಗಳ ಗುಂಪು ರಚಿಸಿಕೊಂಡು ಆಯಾ ತಿಂಗಳು ನಿಗದಿ ಪಡಿಸಿರುವ ಕಲಿಕೆಗೆ ಪೂರಕವಾಗುವಂತೆ ಮಾರ್ಗದರ್ಶನ ನೀಡುತ್ತಿದ್ದೆವು. ಮಕ್ಕಳ ಪ್ರತಿಕ್ರಿಯೆ ಉತ್ತಮವಾಗಿತ್ತು. ಪೋಷಕರಿಂದಲೂ ಉತ್ತಮ ಸಹಕಾರ ಸಿಕ್ಕಿತು. 

ಆದರೆ, ಸಮಯ ಸದುಪಯೋಗ ಪಡಿಸಿಕೊಳ್ಳಲು ಆದಷ್ಟು ಬೇಗ ಶಾಲೆ ಆರಂಬಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದರು. ಪರಿಸ್ಥಿತಿ ಈಗ ತಿಳಿಯಾಗಿದೆ. ಶಾಲೆಗಳು ಆರಂಭವಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಕೂಡ ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ ಸಮಾಧಾನ ಇದೆ.
-ಪುಟ್ಟರಾಜು, ಸರ್ಕಾರಿ ಪ್ರೌಢಶಾಲೆ ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

***

ಕಾಲ್ನಡಿಗೆಯಲ್ಲೇ ಮಕ್ಕಳ ಮನೆಗೆ ಹೋಗಿ ಪಾಠ
ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳನ್ನು ಹುಡುಕಿ ಪಾಠ ಹೇಳಬೇಕಾಯಿತು. ಅಂತಹ ಸಂಧರ್ಭದಲ್ಲಿ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸಬೇಕಾಯಿತು. ಆದರೂ ಮಕ್ಕಳ ಹಿತದೃಷ್ಟಿಯಿಂದ ಕಾಲ್ನಡಿಗೆಯಲ್ಲಿ ಅವರ ಊರುಗಳಿಗೆ ತೆರಳಿ ಮಕ್ಕಳನ್ನು ಭೇಟಿ ಮಾಡಲಾಯಿತು. ಆನ್‌ಲೈನ್‌ನಲ್ಲಿ ಪಾಠ ಕೇಳುವ ಮಕ್ಕಳಿಂದ ಯಾವುದೇ ತೊಂದರೆ ಆಗಲಿಲ್ಲ. ಆನ್‌ಲೈನ್‌ಗೆ ಸಿಗದ ಕೆಲವು ಮಕ್ಕಳನ್ನು ಹುಡುಕಿ ಅವರಿಗೆ ಮಾಗದರ್ಶನ ನೀಡುವುದಕ್ಕೆ ಸ್ವಲ್ಪ ತೊಂದರೆಯಾಯಿತು. ತರಗತಿವಾರು ವಾಟ್ಸ್‌ ಆ್ಯಪ್‌ ಗ್ರೂಪ್ ಮಾಡಿ ಹೋಂ ವರ್ಕ್ ನೀಡಲಾಯಿತು. ಯಾವುದೇ ಸಂಪರ್ಕಕ್ಕೆ ಸಿಗದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಅವರಿಗೆ ಅಭ್ಯಾಸ ಹಾಳೆಗಳನ್ನು ನೀಡಿ ಚಟುವಟಿಕೆ ಆರಂಭಿಸುವಂತೆ ತಿಳಿಸಿದ್ದೇವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಮನೆಗೆ ತೆರಳಿ ಚಟುವಟಿಕೆ ಆಧರಿತವಾಗಿ ಕಲಿಯುವಂತೆ ತಿಳಿ ಹೇಳುವ ಪ್ರಯತ್ನವನ್ನೂ ಮಾಡಿದೆವು.
-ಬಿ.ಎಂ.ಶೈಲಜಾ, ಜೆಎಸ್‌ಎಸ್ ಪ್ರೌಢಶಾಲೆ, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

***

ಶಿಕ್ಷಕ ವೃತ್ತಿಗೆ ಸವಾಲಿನ ದಿನಗಳು...
ಒಂದೂವರೆ ವರ್ಷದಿಂದ ಶಾಲೆ ಮತ್ತು ಮಕ್ಕಳ ನಡುವೆ ಸಂಪರ್ಕ ತಪ್ಪಿದಾಗ ಪರಿಸ್ಥಿತಿ ಸುಧಾರಿಸಲು ಶಿಕ್ಷಕರು ಹತ್ತು ಹಲವು ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಾಯಿತು. ಈ ಸಂದರ್ಭದಲ್ಲಿ ನೆರವಾದದ್ದೇ ಆನ್‌ಲೈನ್‌ ಶಿಕ್ಷಣ. ಶಿಕ್ಷಕ ವಿದ್ಯಾರ್ಥಿಗಳನ್ನು ಅಂಕ ಗಳಿಕೆಗೆ ಸಜ್ಜುಗೊಳಿಸುವುದು ಮಾಡದೆ ಸಮಾಜದ ನಡುವೆ ಬೆರೆತು ಆತನ ಮನೋವಿಕಾಸವನ್ನು ಉಜ್ವಲಗೊಳಿಸುವ ಕೆಲಸವನ್ನು ಮಾಡಬೇಕಿತ್ತು‌.

ಶಿಕ್ಷಕನಿಗೆ ವಿದ್ಯಾರ್ಥಿಯ ಜೊತೆ ಸಂಪರ್ಕ ಸಾಧಿಸಲು ಇದ್ದ ಅವಕಾಶವೆಂದರೆ ದೂರವಾಣಿ ಸಂಪರ್ಕ ಮಾತ್ರ . ಈ ಅವಧಿಯಲ್ಲಿ ಸ್ಮಾರ್ಟ್ ಮೊಬೈಲ್ ಹೊಂದಿರುವವರ ಸಂಖ್ಯೆ ಇಲ್ಲದವರ ಸಂಖ್ಯೆ ಇಬ್ಬರನ್ನು ಗುಂಪುಗಳಲ್ಲಿ ವಿಂಗಡಿಸಿ ಪೋಷಕರ ಸಹಾಯ ಪಡೆದು ಅವರಿಗೆ ಕಲಿಕೆಯ ಅವಧಿಯಲ್ಲಿ ಮೊಬೈಲ್ ನೀಡುವಂತೆ ಮನದಟ್ಟು ಮಾಡಿಕೊಡಬೇಕಾದ ಕರ್ತವ್ಯವು ಶಿಕ್ಷಕರ ಪಾಲಿಗೆ ಹೆಗಲಿಗೇರಿತ್ತು. ವಿದ್ಯಾರ್ಥಿಗಳಿಗೆ ಪಾಠದ ಅನುಭವವನ್ನು ಕಲ್ಪಿಸಲು ಶಿಕ್ಷಕರು ರೆಕಾರ್ಡ್ ಮಾಡಿ ಆಡಿಯೊ ವಿಡಿಯೊ ಪಠ್ಯವನ್ನು ಮಕ್ಕಳ ಸ್ಮಾರ್ಟ್ ಫೋನ್‌ಗಳಿಗೆ ಕಳುಹಿಸಿ ಕೊಡಲಾಯಿತು.

ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಶಾಲೆ ಕಲಿಕೆಯ ಕೇಂದ್ರ ಆಗಿದ್ದು ಮಕ್ಕಳ ಬೌದ್ಧಿಕ, ಶಾರೀರಿಕ, ಸೃಜನಾತ್ಮಕ ಬೆಳವಣಿಗೆ ರೂಪಿಸಿ ಮಕ್ಕಳ ಯಶದಲ್ಲಿ ತಮ್ಮ ಜಯ ಕಾಣುವ ಶಿಕ್ಷಕರಿಗೆ ಈ ಕೊರೊನ ಕಾಲದ ಕಾಲಘಟ್ಟ ಸವಾಲು ಎಂಬುದನ್ನು ಮರೆಯುವಂತಿಲ್ಲ. ಎಲ್ಲ ಅಡೆತಡೆಗಳ ನಡುವೆ ಕಲಿಕೆಗೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಅಕ್ಷರ ಕಲಿಸಿದ ಧನ್ಯತೆ ಇದೆ.
-ಜಿ.ಸುರೇಶ್, ಸರ್ಕಾರಿ ಪ್ರೌಢಶಾಲೆ ಮಾಂಬಳ್ಳಿ, ಯಳಂದೂರು ತಾಲ್ಲೂಕು 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು