ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್‌ ಫುಡ್‌: ಗುಣಮಟ್ಟಕ್ಕೆ ಇಲ್ಲ ಖಾತ್ರಿ

Published 15 ಜನವರಿ 2024, 8:35 IST
Last Updated 15 ಜನವರಿ 2024, 8:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಹೋಬಳಿ ಕೇಂದ್ರಗಳಲ್ಲಿರುವ ಫಾಸ್ಟ್‌ಫುಡ್‌ ಮಳಿಗೆಗಳಲ್ಲಿ ಸ್ವಚ್ಛತೆ, ಆಹಾರದ ಗುಣಮಟ್ಟದ ಖಾತ್ರಿ ಇಲ್ಲದಾಗಿದ್ದು, ಇವುಗಳ ಮೇಲೆ ನಿಯಂತ್ರಣ ಹೇರುವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. 

ಜೊತೆಗೆ, ವ್ಯಾಪಾರಿಗಳು ರಸ್ತೆ ಬದಿ, ಸ್ವಚ್ಛತೆ ಇಲ್ಲದ ಜಾಗಗಳಲ್ಲಿ ಫಾಸ್ಟ್‌ ಫುಡ್‌ ಮಳಿಗೆ ತೆರೆಯುವುದನ್ನು ತಪ್ಪಿಸಲು, ನಗರ, ಪಟ್ಟಣಗಳಲ್ಲಿ ನಿರ್ದಿಷ್ಟ ಸ್ಥಳಗುರುತಿಸಿ ಫುಡ್‌ ಝೋನ್‌ ನಿರ್ಮಿಸುವ ಪ್ರಸ್ತಾವ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.  

ದೊಡ್ಡ ನಗರ, ಪಟ್ಟಣಗಳಿಗೆ ಹೋಲಿಸಿದರೆ, ಜಿಲ್ಲೆಯಲ್ಲಿರುವ ಫಾಸ್ಟ್‌ ಫುಡ್‌ ಮಳಿಗೆಗಳ ಸಂಖ್ಯೆ ಕಡಿಮೆ. ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ 140ರಷ್ಟು ಫಾಸ್ಟ್‌ಫುಡ್‌, ಚಾಟ್ಸ್‌, ಪುಟ್ಟ ಹೋಟೆಲ್‌, ಹಣ್ಣಿನ ಮಳಿಗೆಗಳಿವೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 150ರಷ್ಟು ಮಳಿಗೆಗಳಿವೆ.  ಗುಂಡ್ಲುಪೇಟೆ ಪುರಸಭೆಯಲ್ಲಿ 100 ರಷ್ಟು ಮಳಿಗೆಗಳಿಗೆ, ಯಳಂದೂರು ಪಟ್ಟಣದಲ್ಲಿ 50ರಷ್ಟು ಫಾಸ್ಟ್‌ಫುಡ್‌ಗಳಿವೆ. ಹನೂರಿನಲ್ಲಿ ಈ ಸಂಖ್ಯೆ ತುಂಬಾ ಕಡಿಮೆ. 

‘ಬಹುತೇಕ ಫಾಸ್ಟ್‌ಫುಡ್‌ ಮಳಿಗೆಗಳು ಸಂಜೆ 4 ಗಂಟೆಯ ನಂತರ ತೆರೆಯುತ್ತವೆ. ಈ ಹೊತ್ತಿಗೆ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳು ಮುಚ್ಚುತ್ತವೆ. ಮನೆಗೆ ತೆರಳುವ ಧಾವಂತದಲ್ಲಿರುವ ಅಧಿಕಾರಿಗಳಿಗೆ ಫಾಸ್ಟ್‌ಫುಡ್‌ಗಳು ಹೇಗೆ ನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸುವ ವ್ಯವಧಾನ ಇರುವುದಿಲ್ಲ’ ಎಂಬುದು ಸಾರ್ವಜನಿಕರ ದೂರು. 

ಪರಿಶೀಲನೆ ಇಲ್ಲ: ಬೆರಳೆಣಿಕೆಯಷ್ಟು ಮಳಿಗೆಗಳಲ್ಲಿ ಮಾತ್ರ ಸ್ವಚ್ಛತೆ, ಗುಣಮಟ್ಟದ ಆಹಾರ ನಿರೀಕ್ಷಿಸಬಹುದು. ಬಹುತೇಕ ಮಳಿಗೆಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತದೆ ಎಂದು ಹೇಳಲಾಗದು. ಇದನ್ನು ಪರೀಕ್ಷಿಸುವ ವ್ಯವಸ್ಥೆ ಇಲ್ಲ. ರುಚಿ ಬರಿಸುವ ಪುಡಿ, ಇನ್ನಿತರ ರಾಸಾಯನಿಕಗಳ ಬಳಕೆ ಜೋರಾಗಿದೆ. ಪ್ಲಾಸ್ಟಿಕ್‌ ಬಳಕೆಯೂ ಹೆಚ್ಚಿದೆ. ಸ್ವಚ್ಛತೆ ವ್ಯವಸ್ಥೆಯೂ ಇರುವುದಿಲ್ಲ. ಹೆಚ್ಚಿನ ಮಳಿಗೆಗಳಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರೂ ಸಿಗುವುದಿಲ್ಲ. 

ಅಧಿಕಾರಿಗಳು ಅಪರೂಪಕ್ಕೊಮ್ಮೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಬೇಕು ಎಂದು ಹೇಳುವುದು ಬಿಟ್ಟರೆ, ಬೇರೆನೂ ಆಗುತ್ತಿಲ್ಲ. 

ಅನಾರೋಗ್ಯ ಖಾತ್ರಿ: ‘ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನನಿಬಿಡ ರಸ್ತೆಗಳಲ್ಲಿಯೇ ಫಾಸ್ಟ್‌ ಫುಡ್‌ ಮಳಿಗೆಗಳು ಹೆಚ್ಚಿವೆ. ಇಲ್ಲಿ ವಾಹನಗಳ, ಜನರ ಓಡಾಟ ಹೆಚ್ಚು. ವಾಹನಗಳ ಓಡಾಟದಿಂದ ಎದ್ದೇಳುವ ದೂಳು ಮಳಿಗೆಗಳನ್ನು ಆವರಿಸುತ್ತವೆ. ಆಹಾರಗಳ ಮೇಲೂ ಕೂರುತ್ತವೆ.  ಅಲ್ಲಿ ನೀಡುವ ಆಹಾರ ಸೇವಿಸಿದರೆ ಅನಾರೋಗ್ಯ ಕಾಡದೆ ಇರುತ್ತದೆಯೇ’ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು. 

ಜನರಿಗೆ ಕಿರಿಕಿರಿ: ಬಹುತೇಕ ಫಾಸ್ಟ್‌ಫುಡ್‌ ಮಳಿಗೆಗಳು ರಸ್ತೆಯ ಬದಿ, ಫುಟ್‌ಪಾತ್‌ಗಳಲ್ಲಿ ಇರುತ್ತವೆ. ಇವುಗಳು ಸಂಜೆಯ ಹೊತ್ತಿನಲ್ಲೇ ತೆರೆಯುತ್ತವೆ. ಆ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿ ಜನರ ಸಂಚಾರ ಜಾಸ್ತಿ. ಮಳಿಗೆಗಳು ಫುಟ್‌ಪಾತ್‌ ಆವರಿಸಿರುವುದರಿಂದ ಪಾದಚಾರಿಗಳಿಗೆ ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ.

ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿರುವ ಅಂಗಡಿಗಳ ಮುಂದೆ ಬೀದಿ ನಾಯಿಗಳ ಹಾವಳಿಯೂ ಹೆಚ್ಚು. ನಾಯಿಗಳ ಕಾಟದಿಂದ ಜನರು ಓಡಾಡುವುದಕ್ಕೆ ತೊಂದರೆಯಾಗುತ್ತದೆ. ಅಪಘಾತಗಳೂ ಸಂಭವಿಸುವ ಅಪಾಯವೂ ಇರುತ್ತದೆ.

ಫುಡ್‌ ಝೋನ್‌ ಪರಿಹಾರ: ಫಾಸ್‌ಫುಡ್‌ ಮಳಿಗೆಗಳು ಎಲ್ಲೆಂದರಲ್ಲಿ ತಲೆ ಎತ್ತುವುದಕ್ಕೆ ಬಿಡದೆ, ನಗರ, ಪಟ್ಟಣ ಪ್ರದೇಶಗಳ ನಿರ್ದಿಷ್ಟ ಜಾಗ ಗುರುತಿಸಿ, ಅಲ್ಲಿ ವ್ಯಾ‍ಪಾರ ಮಾಡಲು ಅವಕಾಶ ನೀಡಿದರೆ, ಅವುಗಳ ಮೇಲೆ ನಿಗಾ ಇಡಲು ಸ್ಥಳೀಯ ಆಡಳಿತಕ್ಕೆ ಸುಲಭವಾಗುತ್ತದೆ. ಅಲ್ಲಿ ಕುಡಿಯುವ ನೀರು, ಸ್ವಚ್ಛತೆ, ಗ್ರಾಹಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರೆ ನೈರ್ಮಲ್ಯವನ್ನೂ ಕಾಪಾಡಿದಂತೆ ಆಗುತ್ತದೆ.

ಜಿಲ್ಲೆಯ ಎಲ್ಲ ಐದು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಫುಡ್‌ ಝೋನ್‌ ಅಭಿವೃದ್ಧಿ ಪಡಿಸುವ ಪ್ರಸ್ತಾವ 2021ರಲ್ಲೇ ಜಿಲ್ಲಾಡಳಿತದ ಮುಂದಿತ್ತು.  ಚಾಮರಾಜನಗರ, ಗುಂಡ್ಲುಪೇಟೆಗಳಲ್ಲಿ ಮೂರು ಕಡೆ, ಉಳಿದ ನಗರ, ಪಟ್ಟಣಗಳಲ್ಲಿ ಒಂದು ಕಡೆ ಫುಡ್‌ ಝೋನ್‌ ಆರಂಭಿಸಲು ಯೋಜಿಸಲಾಗಿತ್ತು.  ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ಒಂದಷ್ಟು ಮಳಿಗೆಗಳು ಕಾರ್ಯಾಚರಿಸುತ್ತಿವೆ. ಅಲ್ಲಿ ನಗರಸಭೆ ಸೌಲಭ್ಯಗಳನ್ನು ಕಲ್ಪಿಸಿಲ್ಲ. ವ್ಯಾಪಾರಿಗಳೇ ಚಪ್ಪರ ಹಾಕಿಕೊಂಡು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. 

ಕೊಳ್ಳೇಗಾಲದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿ ನೂತನವಾಗಿ ಫುಡ್ ಪಾಯಿಂಟ್ ಝೋನ್‌ ಆರಂಭಿಸಲಾಗಿದೆ. ಅಲ್ಲಿ ಸುಮಾರು 15ಕ್ಕೂ ಹೆಚ್ಚು ಅಂಗಡಿಗಳಿದ್ದು, ಸೌಲಭ್ಯ ತಕ್ಕ ಮಟ್ಟಿಗೆ ಚೆನ್ನಾಗಿದೆ. 

‘ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ನಮಗೂ ಇಷ್ಟ ಇಲ್ಲ. ಅಂಗಡಿಗಳಿಗೆ ಬಾಡಿಗೆ ಕೊಡುವಷ್ಟು ಶಕ್ತಿ ನಮಗಿಲ್ಲ. ಸ್ಥಳೀಯ ಸಂಸ್ಥೆಗಳು ನಗರ ಅಥವಾ ಪಟ್ಟಣಗಳಲ್ಲಿ ಗ್ರಾಹಕರು ಹೆಚ್ಚು ಇರುವ ಕಡೆಗಳಲ್ಲಿ ಜಾಗ ತೋರಿಸಿದರೆ, ನಾವು ಅಲ್ಲಿಯೇ ವ್ಯಾಪಾರ ಮಾಡುತ್ತೇವೆ. ನಗರದಿಂದ ದೂರ ಜಾಗ ಗುರುತಿಸಿದರೆ ವ್ಯಾಪಾರ ಕಷ್ಟ. ಫುಡ್‌ ಝೋನ್‌ ಅಭಿವೃದ್ಧಿ ಪಡಿಸುವಾಗ ಅಧಿಕಾರಿಗಳು ಈ ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕು’ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ನಿರ್ವಹಣೆ: ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ಮಹದೇವ್‌ ಹೆಗ್ಗವಾಡಿಪುರ, ಅವಿನ್ ಪ್ರಕಾಶ್‌, ಬಿ.ಬಸವರಾಜು, ನಾ.ಮಂಜುನಾಥಸ್ವಾಮಿ

ಚಾಮರಾಜನಗರದ ರಥದ ಬೀದಿಯಲ್ಲಿರುವ ಚಾಟ್ಸ್‌ ಮಳಿಗೆಗಳು
ಚಾಮರಾಜನಗರದ ರಥದ ಬೀದಿಯಲ್ಲಿರುವ ಚಾಟ್ಸ್‌ ಮಳಿಗೆಗಳು
ಕೊಳ್ಳೇಗಾಲದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಆಹಾರ ಮಳಿಗೆಗಳಲ್ಲಿ ಗ್ರಾಹಕರು ಆಹಾರವನ್ನು ಸೇವಿಸುತ್ತಿರು‌ವುದು
ಕೊಳ್ಳೇಗಾಲದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಆಹಾರ ಮಳಿಗೆಗಳಲ್ಲಿ ಗ್ರಾಹಕರು ಆಹಾರವನ್ನು ಸೇವಿಸುತ್ತಿರು‌ವುದು
ಕೊಳ್ಳೇಗಾಲದ ಕೆಎಸ್‌ಆರ್‌ಟಸಿ ಬಸ್‌ ನಿಲ್ದಾಣದ ಬಳಿ ಇರುವ ಫುಡ್‌ ಝೋನಿನ ನೋಟ
ಕೊಳ್ಳೇಗಾಲದ ಕೆಎಸ್‌ಆರ್‌ಟಸಿ ಬಸ್‌ ನಿಲ್ದಾಣದ ಬಳಿ ಇರುವ ಫುಡ್‌ ಝೋನಿನ ನೋಟ
ಕೊಳ್ಳೇಗಾಲದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಆಹಾರ ಮಳಿಗೆಗಳಲ್ಲಿ ಗ್ರಾಹಕರು ಆಹಾರವನ್ನು ಸೇವಿಸುತ್ತಿರು‌ವುದು
ಕೊಳ್ಳೇಗಾಲದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಆಹಾರ ಮಳಿಗೆಗಳಲ್ಲಿ ಗ್ರಾಹಕರು ಆಹಾರವನ್ನು ಸೇವಿಸುತ್ತಿರು‌ವುದು
ಜನರು ವ್ಯಾಪಾರಿಗಳು ಏನಂತಾರೆ?
ನಿಯಂತ್ರಣ ವ್ಯವಸ್ಥೆಯೇ ಇಲ್ಲ ಜಿಲ್ಲಾ ಕೇಂದ್ರದಲ್ಲಿ ಫಾಸ್ಟ್‌ಫುಡ್‌ಗಳು ಹೋಟೆಲ್‌ಗಳಲ್ಲಿ ಸ್ವಚ್ಛತೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬಳಸುತ್ತಿದ್ದಾರೆಯೇ? ಪ್ಲಾಸ್ಟಿಕ್‌ ಬಳಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಯೇ ಇಲ್ಲ. ರಸ್ತೆ ಬದಿ ಫಾಸ್ಟ್‌ಫುಡ್‌ಗಳು ಮಾತ್ರವಲ್ಲ; ಈಗ ಬಡಾವಣೆಗಳಲ್ಲೂ ಹೋಟೆಲ್‌ಗಳಾಗಿದ್ದು ಅಲ್ಲಿ ಉತ್ಪತ್ತಿಯಾಗುವ ಕಲ್ಮಶ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ನಿವಾಸಿಗಳಿಗೆ ಸಾರ್ವಜನಿಕರಿಕೆ ಕಿರಿ ಕಿರಿಯಾಗುತ್ತಿದೆ. ಪ್ರಮುಖ ರಸ್ತೆಗಳಲ್ಲೇ ಅಂಗಡಿಗಳು ಹೆಚ್ಚಿವೆ. ಇಲ್ಲಿ ವಾಹನಗಳ ಓಡಾಟವೂ ಜಾಸ್ತಿ ಹಾಗಾಗಿ ಆರೋಗ್ಯಯುತ ಆಹಾರ ಅಲ್ಲಿ ಸಿಗುವುದು ಸಾಧ್ಯವೇ ಇಲ್ಲ
–ಬ್ರಿಜೇಶ್ ಒಲಿವೇರಾ ಚಾಮರಾಜನಗರ
ಆಹಾರದ ಗುಣಮಟ್ಟ ಕಡಿಮೆ ಫಾಸ್ಟ್‌ ಫುಡ್‌ ಮಳಿಗೆಗಳಲ್ಲಿ ವಿತರಿಸಲಾಗುತ್ತಿರುವ ಆಹಾರವು ಗುಣಮಟ್ಟದಿಂದ ಕೂಡಿರುವುದಿಲ್ಲ. ರಾಸಾಯನಿಕಗಳ ಮಿಶ್ರಣದಿಂದ ದಿಢೀರ್ ಆಹಾರ ತಯಾರಿಸಲಾಗುತ್ತಿದೆ. ಗೋಬಿ ಮಂಚೂರಿ ಸಮೋಸ ಮೀನು ಚಿಕನ್ ಮೊದಲಾದ ಪದಾರ್ಥಗಳಿಗೆ ರುಚಿ ಹೆಚ್ಚಿಸಲು ರಾಸಾಯನಿಕಗಳನ್ನು ಮಿಶ್ರಣ ಮಾಡುವುದರಿಂದ ರೋಗ ಬರುವ ಸಾಧ್ಯತೆ ಹೆಚ್ಚಿದೆ. ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ ಆಹಾರ ಗುಣಮಟ್ಟವನ್ನು ತಪಾಸಣೆ ನಡೆಸಬೇಕು.
–ನಾಗರಾಜು
ಗಣಿಗನೂರು ಯಳಂದೂರು ತಾಲ್ಲೂಕು ಸೌಕರ್ಯಗಳಿವೆ ಕೊಳ್ಳೇಗಾಲದಲ್ಲಿರುವ ಫುಡ್ ಝೋನ್‌ನಲ್ಲಿ 15 ಅಂಗಡಿಗಳಿವೆ. ಇಲ್ಲಿ ಆಹಾರ ತಿಂಡಿ ತಿನಿಸುಗಳನ್ನು ಉತ್ತಮವಾಗಿ ಮಾಡಿಕೊಡಲಾಗುತ್ತದೆ. ಗ್ರಾಹಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. 
–ರಾಚಪ್ಪಾಜಿ ಫಾಸ್ಟ್ ಫುಡ್ ವ್ಯಾಪಾರಿ
ಕೊಳ್ಳೇಗಾಲ ನಿರ್ದಿಷ್ಟ ಸ್ಥಳ ಗುರುತಿಸಿ ಪಟ್ಟಣದಲ್ಲಿ ರಾತ್ರಿ ಕ್ಯಾಂಟೀನ್‌ಗಳಿಗೆ ನಿರ್ದಿಷ್ಟ ಜಾಗ ಎಂಬುದಿಲ್ಲ. ರಸ್ತೆ ಬದಿಗಳಲ್ಲಿ ನಡೆಸಬೇಕಾಗುತ್ತದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಅಲ್ಲಿ ಮಳಿಗೆ ಹಾಕಲು ವ್ಯವಸ್ಥೆ ಮಾಡಬೇಕು
-ಮಾಯೇಗೌಡ ಹನೂರು
ಅಧಿಕಾರಿಗಳು ಏನಂತಾರೆ?
ಸ್ಥಳ ಗುರುತಿಸಲು ಸೂಚನೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಫುಡ್‌ ಝೋನ್‌ ಸ್ಥಾಪಿಸುವ ಪ್ರಸ್ತಾವ ಇರುವುದು ನಿಜ. ಆಯಾ ನಗರ ಸ್ಥಳೀಯ ಸಂಸ್ಥೆಗಳು ಇದಕ್ಕೆ ಜಾಗ ಗುರುತಿಸಬೇಕು. ಬಳಿಕ ಅಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು. ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ಈಗಾಗಲೇ ಈ ಸಂಬಂಧ ಪತ್ರವನ್ನೂ ಬರೆಯಲಾಗಿದೆ.  –ಎಂ.ವಿ.ಸುಧಾ ಜಿಲ್ಲಾ ಯೋಜನಾ ನಿರ್ದೇಶಕಿ ನಗರಾಭಿವೃದ್ಧಿ ಕೋಶ ಫಾಸ್ಟ್‌ ಫುಡ್‌ ಮಳಿಗೆಗಳ ಮೇಲೆ ನಿಗಾ ಅಧಿಕಾರವಹಿಸಿಕೊಂಡು ಒಂದು ವಾರ ವಾಗಿದೆಯಷ್ಟೆ. ಕೂಡಲೇ ಫಾಸ್ಟ್ ಫುಡ್ ವ್ಯಾಪಾರಿಗಳ ಸಭೆ ಕರೆದು ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ಸೂಚನೆ ನೀಡಲಾಗುವುದು. ನಮ್ಮ ಆರೋಗ್ಯ ನಿರೀಕ್ಷಕರ ತಂಡ ಆಗಾಗ ಫಾಸ್ಟ್ ಫುಡ್ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.  ಗುಣಮಟ್ಟದ ಆಹಾರ ನೀಡದ ಸ್ವಚ್ಛತೆ ಕಾಪಾಡದ ಅಂಗಡಿಗಳನ್ನು ಬಂದ್ ಮಾಡಿಸಲು ಕ್ರಮ ವಹಿಸಲಾಗುವುದು.  –ಎ.ರಮೇಶ್ ಕೊಳ್ಳೇಗಾಲ ನಗರಸಭೆ ಆಯುಕ್ತ ಶುಚಿತ್ವಕ್ಕೆ ಸೂಚನೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಫುಡ್ ಝೋನ್ ನಿಗದಿಪಡಿಸಲು ಈಗಾಗಲೇ ಸಭೆ ನಡೆಸಿ ಅನುಮೋದನೆ ಪಡೆಯಲಾಗಿದೆ. ಆಹಾರದ ಅಂಗಡಿ ಮಾಲೀಕರು ಶುಚಿತ್ವಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ. ತ್ಯಾಜ್ಯವನ್ನು ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡಿಸಬೇಕು. ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. –ಮಹೇಶ್ ಕುಮಾರ್ ಮುಖ್ಯಾಧಿಕಾರಿ ಹನೂರು ಪಟ್ಟಣ ಪಂಚಾಯಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT